ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಸರ್ಕಾರ–ನೌಕರರ ಹಗ್ಗಜಗ್ಗಾಟ ಸಾರ್ವಜನಿಕ ಹಿತಾಸಕ್ತಿಗೆ ಪೆಟ್ಟು

Last Updated 7 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಕಾರ್ಯಗಳಿಗೆ ಎಲ್ಲಕ್ಕಿಂತಲೂ ಹೆಚ್ಚಿನ ಆದ್ಯತೆ. ಜನಸಾಮಾನ್ಯರ ನಿತ್ಯದ ಅಗತ್ಯ ಎನಿಸಿದ ಸಾರಿಗೆ ಸೌಕರ್ಯವನ್ನು ಒದಗಿಸಲು ರಾಜ್ಯ ಸರ್ಕಾರವು ಸಾರಿಗೆ ನಿಗಮಗಳನ್ನು ರಚಿಸಿದ್ದು ಇದೇ ಕಾರಣದಿಂದ. ವೇತನ ಹೆಚ್ಚಳದ ಬೇಡಿಕೆಯೊಂದಿಗೆ ಈಗ ಮುಷ್ಕರಕ್ಕೆ ಇಳಿದಿರುವ ಸಾರಿಗೆ ನೌಕರರ ಕೂಟವಾಗಲೀ ಮುಷ್ಕರವನ್ನು ತಡೆಯುವಲ್ಲಿ ವಿಫಲವಾದ ಸರ್ಕಾರವಾಗಲೀ ಸಾರಿಗೆ ನಿಗಮಗಳ ಈ ಮೂಲ ಉದ್ದೇಶವನ್ನೇ ಮರೆತಿರುವಂತೆ ತೋರುತ್ತಿದೆ. ಇಲ್ಲದಿದ್ದರೆ ಹೀಗೆ ಹೊಣೆ ಮರೆತು ಮುಷ್ಕರಕ್ಕೆ ಕಾರಣವಾಗಿ ಜನರ ಓಡಾಟಕ್ಕೆ ಸಂಚಕಾರವನ್ನು ತರುತ್ತಿರಲಿಲ್ಲ. ಅವರ ಪರದಾಟಕ್ಕೆ ಕಾರಣವೂ ಆಗುತ್ತಿರಲಿಲ್ಲ. ಆರನೇ ವೇತನ ಆಯೋಗದ ಶಿಫಾರಸುಗಳನ್ನು ತಮಗೂ ಅನ್ವಯಿಸಬೇಕು ಎನ್ನುವುದೂ ಸೇರಿದಂತೆ ಒಂಬತ್ತು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಕಳೆದ ಡಿಸೆಂಬರ್‌ನಲ್ಲಿ ಸುದೀರ್ಘ ಮುಷ್ಕರ ನಡೆಸಿದ್ದರು. ಎಂಟು ಬೇಡಿಕೆಗಳನ್ನು ಈಡೇರಿಸಲು ಒಪ್ಪಿದ್ದ ರಾಜ್ಯ ಸರ್ಕಾರ, ವೇತನ ಹೆಚ್ಚಳಕ್ಕೆ ಸಂಬಂಧಿ ಸಿದ ಬೇಡಿಕೆ ಕುರಿತು ತೀರ್ಮಾನ ಕೈಗೊಳ್ಳಲು ಕಾಲಾ ವಕಾಶ ಕೇಳಿತ್ತು. ನಂತರದ ದಿನಗಳಲ್ಲಿ ಪರಿಹಾರ ಸೂತ್ರವೊಂದನ್ನು ರೂಪಿಸಲು ಎರಡೂ ಕಡೆಗಳಿಂದ ಪ್ರಾಮಾಣಿಕ ಪ್ರಯತ್ನಗಳು ನಡೆಯದೆ, ಒಣಪ್ರತಿಷ್ಠೆಯಲ್ಲಿಯೇ ಕಾಲ ಕಳೆದಿದ್ದರಿಂದ ಈಗಿನ ಸನ್ನಿವೇಶ ಸೃಷ್ಟಿಯಾಗಿದೆ. ಇಬ್ಬರ ಜಗಳದಲ್ಲಿ ಬಸವಳಿಯುತ್ತಿರುವುದು ಮಾತ್ರ ಪ್ರಯಾಣಿಕರು. ಆದರೆ, ಅವರಿಗೆ ಆಗುತ್ತಿರುವ ತೊಂದರೆಯನ್ನು ಯಾರೂ ಗಣನೆಗೆ ತೆಗೆದುಕೊಳ್ಳುತ್ತಿರುವಂತೆ ಕಾಣುತ್ತಿಲ್ಲ. ಕೋವಿಡ್‌ ಪ್ರಕರಣಗಳು ಮತ್ತೆ ಏರುಗತಿಯಲ್ಲಿರುವ ಈ ಸಂದರ್ಭದಲ್ಲಿ ಪರಸ್ಪರ ಅಂತರವನ್ನು ಕಾಯ್ದುಕೊಳ್ಳಬೇಕಾದ ಅಗತ್ಯ ಎಷ್ಟಿದೆ ಎಂಬುದನ್ನು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಮಾರ್ಗಸೂಚಿ ಸ್ಪಷ್ಟಪಡಿಸುತ್ತದೆ. ಅದೇ ಸರ್ಕಾರದ ಸಾರಿಗೆ ಇಲಾಖೆಯು ನಿಗಮಗಳ ಬಸ್‌ ಸೇವೆಯಿಲ್ಲದೆ ಖಾಸಗಿ ವಾಹನಗಳಲ್ಲಿ ಜನ ಕಿಕ್ಕಿರಿದು ತುಂಬಿಕೊಂಡು ಹೋಗುವುದನ್ನು ಅಸಹಾಯಕವಾಗಿ ನೋಡುತ್ತಾ ಕುಳಿತಿದೆ. ಇದರಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಏನಾದರೂ ಏರುಪೇರು ಉಂಟಾದರೆ ಯಾರು ಹೊಣೆ?

ಲಾಕ್‌ಡೌನ್‌ ಅವಧಿಯಲ್ಲಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದಲ್ಲದೆ ನಂತರದ ಅವಧಿಯಲ್ಲೂ ಪೂರ್ಣ ಪ್ರಮಾಣದಲ್ಲಿ ಬಸ್‌ಗಳ ಕಾರ್ಯಾಚರಣೆ ಪುನರಾರಂಭವಾಗದ ಕಾರಣ ಸಾರಿಗೆ ನಿಗಮಗಳು ನಷ್ಟದ ಸುಳಿಗೆ ಸಿಲುಕಿವೆ. ಪ್ರತಿದಿನ ₹ 4 ಕೋಟಿ ನಷ್ಟ ಆಗುತ್ತಿದೆ ಎನ್ನುವುದು ಸಾರಿಗೆ ಇಲಾಖೆ ನೀಡುವ ಮಾಹಿತಿ. ಕಳೆದ ವರ್ಷ ನಿಗಮಗಳ ನೌಕರರಿಗೆ ಸಂಬಳ ನೀಡಲು ರಾಜ್ಯ ಸರ್ಕಾರ ₹ 2,100 ಕೋಟಿ ಬಿಡುಗಡೆ ಮಾಡಿದೆಯಂತೆ. ಲಾಕ್‌ಡೌನ್‌ಗಿಂತ ಮೊದಲು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ನಿತ್ಯ 45 ಲಕ್ಷ ಜನ ಪ್ರಯಾಣ ಮಾಡುತ್ತಿದ್ದರು. ಸದ್ಯ ಆ ಸಂಖ್ಯೆ ಅರ್ಧಕ್ಕೆ ಇಳಿದಿದೆ ಎಂದೂ ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ತುಂಬಾ ಅಸಾಧಾರಣವಾದ ಸಂದರ್ಭ ಇದು. ಸ್ಥಗಿತಗೊಂಡಿದ್ದ ರೈಲುಗಳ ಓಡಾಟ ಕೂಡ ಇನ್ನೂ ಪೂರ್ಣಪ್ರಮಾಣದಲ್ಲಿ ಪುನರಾರಂಭವಾಗಿಲ್ಲ. ಜನಸಾಮಾನ್ಯರು ಪ್ರಯಾಣಕ್ಕೆ ಈಗ ಬಹುಪಾಲು ಸಾರಿಗೆ ನಿಗಮಗಳ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಮುಷ್ಕರದ ಕಾರಣದಿಂದ ಅವುಗಳು ರಸ್ತೆಗೆ ಇಳಿಯದ ಕಾರಣ ಖಾಸಗಿ ವಾಹನಗಳು ಪ್ರಯಾಣಿಕರನ್ನು ಸುಲಿಗೆ ಮಾಡುವಲ್ಲಿ ನಿರತವಾಗಿವೆ ಎನ್ನುವ ವರದಿಗಳು ಇವೆ. ಕೊರೊನಾ ಸಂಕಷ್ಟದಿಂದ ಬೆಂದು ಬಸವಳಿದ ಜನ ಸಾಮಾನ್ಯರು ಇನ್ನಷ್ಟು ಸಂಕಷ್ಟ ಅನುಭವಿಸದಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ. ಅದಕ್ಕೆ ಸಹಕರಿಸುವುದು ಸರ್ಕಾರಿ ಸ್ವಾಮ್ಯದಲ್ಲಿರುವ ಸಾರಿಗೆ ನಿಗಮಗಳ ನೌಕರರ ಕರ್ತವ್ಯ. ನೌಕರರ ಬೇಡಿಕೆಗಳನ್ನು ಸರ್ಕಾರ ಸಹಾನುಭೂತಿಯಿಂದ ಪರಿಶೀಲಿಸಬೇಕು. ಸರ್ಕಾರದ ಸಮಸ್ಯೆಗಳನ್ನು ನೌಕರರೂ ಅರ್ಥಮಾಡಿಕೊಳ್ಳಬೇಕು. ಸರ್ಕಾರ ಹಾಗೂ ನೌಕರರ ಕೂಟದ ಪ್ರತಿನಿಧಿಗಳು ಒಣಪ್ರತಿಷ್ಠೆಯನ್ನು ಬದಿಗಿಟ್ಟು, ಮಾತುಕತೆ ನಡೆಸಿ ಕಾರ್ಯಸಾಧುವಾದ ಪರಿಹಾರ ಸೂತ್ರವನ್ನು ಕಂಡು ಕೊಳ್ಳಬೇಕು. ಮೊದಲೇ ಹಣಕಾಸಿನ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ನಿಗಮಗಳು ಮುಷ್ಕರದಿಂದ ಇನ್ನಷ್ಟು ಸಂಕಷ್ಟ ಅನುಭವಿಸಲಿವೆ ಎಂಬುದನ್ನು ಇಬ್ಬರೂ ಗಮನದಲ್ಲಿ ಇಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರು ಪರದಾಡದಂತೆ ನೋಡಿಕೊಳ್ಳುವುದು ಸರ್ಕಾರ ಹಾಗೂ ನೌಕರರ
ಆದ್ಯತೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT