ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಪೊಲೀಸ್ ಇಲಾಖೆಯಲ್ಲಿ ಲಂಚ ತಡೆಗೆ ಸರ್ಕಾರ ಗಮನಹರಿಸಲಿ

Last Updated 11 ಮೇ 2020, 2:16 IST
ಅಕ್ಷರ ಗಾತ್ರ

ಲಾಕ್‍ಡೌನ್ ಅವಧಿಯಲ್ಲಿ ಕೋವಿಡ್ ಯೋಧರಾಗಿ ರಾಜ್ಯದ ಪೊಲೀಸರು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕಿತರ ಸಂಪರ್ಕಕ್ಕೆ ಒಳಗಾದವರನ್ನು ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸುವ ಕೆಲಸ ಅಪಾರ ತಾಳ್ಮೆ ಮತ್ತು ಶ್ರಮವನ್ನು ಬೇಡುತ್ತದೆ. ಜೊತೆಗೆ ಆತಂಕಕ್ಕೆ ಒಳಗಾಗಿರುವ ಸಾರ್ವಜನಿಕರನ್ನು ಸಂಭಾಳಿಸುವ ಕೆಲಸವೂ ಆಗಬೇಕಿದೆ. ತಮ್ಮೆಲ್ಲ ಇತಿಮಿತಿಗಳ ಮಧ್ಯೆಯೂ ಜೀವವನ್ನು ಪಣವಾಗಿಟ್ಟು ಈ ಕೆಲಸಗಳನ್ನು ಮಾಡುತ್ತಿರುವ ಪೊಲೀಸ್ ಸಿಬ್ಬಂದಿಯ ಬಗ್ಗೆ ಸಾರ್ವಜನಿಕರೂ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ‘ಎಲ್ಲ ಬಣ್ಣವನ್ನೂ ಮಸಿ ನುಂಗಿತು’ ಎನ್ನುವ ಹಾಗೆ ಇದೇ ಅವಧಿಯಲ್ಲಿ ಪೊಲೀಸರ ಲಂಚಾವತಾರದ ಪ್ರಕರಣಗಳು ಬಹಿರಂಗಗೊಂಡಿದ್ದು, ಪೊಲೀಸ್ ಇಲಾಖೆಯ ಬಗ್ಗೆ ಜನರಲ್ಲಿ ಬೇಸರ ಹುಟ್ಟಿಸುವಂತಿವೆ.

ಸೋಂಕು ಹರಡುವಿಕೆ ಇನ್ನೂ ನಿಯಂತ್ರಣಕ್ಕೆ ಬಾರದಿರುವ ಈ ಬಿಕ್ಕಟ್ಟಿನ ಸಂದರ್ಭವನ್ನು ಬಳಸಿಕೊಂಡ ಪೊಲೀಸರು, ಉದ್ಯಮಿಗಳಿಂದ, ಸಾರ್ವಜನಿಕರಿಂದ ಲಂಚ ವಸೂಲಿಗೆ ಇಳಿದಿರುವುದು ಅಮಾನವೀಯ, ಅಕ್ಷಮ್ಯ. ಲಾಕ್‍ಡೌನ್ ವೇಳೆ ಸಿಗರೇಟ್ ಮಾರಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಕೆಲವು ಕಂಪನಿಗಳಿಂದ ₹1.12 ಕೋಟಿ ಲಂಚ ಪಡೆದ ಆರೋಪದಲ್ಲಿ ಸಿಸಿಬಿಯ ಸಹಾಯಕ ಪೊಲೀಸ್‌ ಕಮಿಷನರ್‌ (ಎಸಿಪಿ) ಪ್ರಭುಶಂಕರ್, ಇನ್‌ಸ್ಪೆಕ್ಟರ್‌ಗಳಾದ ಅಜಯ್ ಮತ್ತು ನಿರಂಜನ ಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಿರುವ ಸುದ್ದಿಯು ಇಲಾಖೆಯಲ್ಲಿ ಲಂಚದ ಹಾವಳಿ ಎಷ್ಟು ವ್ಯಾಪಕವಾಗಿದೆ ಎನ್ನುವುದಕ್ಕೆ ಸಾಕ್ಷಿ. ಎಸಿಪಿ ಬಳಿಯಿಂದ ಮೇಲಧಿಕಾರಿಗಳು ಈಗಾಗಲೇ ₹30 ಲಕ್ಷ ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣಕ್ಕೆ ಇರುವ ಇನ್ನಷ್ಟು ಆಯಾಮಗಳ ತನಿಖೆಯ ಅಗತ್ಯವೂ ಇದೆ. ಸಿಗರೇಟ್ ಲಂಚದ ಪ್ರಕರಣ ಬಯಲಿಗೆ ಬಂದ ತಕ್ಷಣ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಈ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ಏಕೆ ದಾಖಲಿಸಲಿಲ್ಲ? ಇದು, ಸುಲಿಗೆಯ ಪ್ರಕರಣ ಮಾತ್ರವಲ್ಲ, ಇದರ ಹಿಂದಿರುವ ದೊಡ್ಡ ಜಾಲವನ್ನು ಬಯಲಿಗೆ ಎಳೆಯಬೇಕಾದ ಅಗತ್ಯವಿದೆ.

ಸಿಗರೇಟ್ ಮಾರಾಟಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಎಸಿಪಿ ಲಂಚ ಪಡೆದಿದ್ದಾರೆ ಎನ್ನಲಾದ ಪ್ರಕರಣವು ಒಂದು ಬಿಡಿ ಪ್ರಕರಣವಲ್ಲ. ಎರಡು ವಾರಗಳ ಹಿಂದೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮದ್ಯ ಸಾಗಿಸುತ್ತಿದ್ದ ವಾಹನವೊಂದರ ಜಪ್ತಿ ವಿಚಾರದಲ್ಲಿಯೂ ಲಂಚದ್ದೇ ದೊಡ್ಡ ಸುದ್ದಿಯಾಗಿತ್ತು. ಮದ್ಯ ಸಾಗಾಣಿಕೆಯ ಪ್ರಕರಣವೊಂದರಲ್ಲಿ ಆರೋಪಿಯನ್ನು ರಕ್ಷಿಸಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಎಸಿಪಿ ಒಬ್ಬರನ್ನು ಅಮಾನತು ಮಾಡಲಾಗಿದೆ. ಈ ಪ್ರಕರಣ ದಲ್ಲಿ ಮದ್ಯ ಸಾಗಾಟಕ್ಕೆ ಸರ್ಕಾರಿ ವಾಹನ ಬಳಕೆಯಾಗಿತ್ತು; ಹಿರಿಯ ಪೊಲೀಸ್ ಅಧಿಕಾರಿಗಳಿಗೇ ಈ ಮದ್ಯವನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಈ ಪ್ರಕರಣ ಕುರಿತು ಇಲಾಖಾ ಮಟ್ಟದಲ್ಲಿ ನಡೆಸಿದ ತನಿಖಾ ವರದಿಯ ಪ್ರಗತಿ ಎಲ್ಲಿಗೆ ಬಂದಿದೆ? ಭ್ರಷ್ಟಾಚಾರ ಪ್ರಕರಣದಡಿ ಯಾವ ಅಧಿಕಾರಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ? ಬೆಂಗಳೂರು ಮಾತ್ರವಲ್ಲ, ರಾಜ್ಯದ ಇತರ ಜಿಲ್ಲೆಗಳಿಂದಲೂ ಪೊಲೀಸರ ಲಂಚಾವತಾರದ ಕುರಿತು ಹಲವು ಪ್ರಕರಣಗಳು ವರದಿಯಾಗಿವೆ. ದೂರು ನೀಡಲು ಪೊಲೀಸ್‍ ಠಾಣೆಗೆ ಬಂದ ವ್ಯಕ್ತಿಯೊಬ್ಬರಿಂದಲೇ ಹೆಡ್‌ ಕಾನ್‌ಸ್ಟೆಬಲ್‌ವೊಬ್ಬರು ಲಂಚ ವಸೂಲಿ ಮಾಡಿದ ಪ್ರಕರಣ ಬಸವನಬಾಗೇವಾಡಿಯಲ್ಲಿಇತ್ತೀಚೆಗೆ ನಡೆದಿದೆ. ಬೆಂಗಳೂರು ಹೊರವಲಯದ ಅತ್ತಿಬೆಲೆ ಚೆಕ್‍ಪೋಸ್ಟ್‌ನಲ್ಲಿ ಹಣ್ಣು ಮತ್ತು ತರಕಾರಿಯನ್ನು ಮಾರುಕಟ್ಟೆಗೆ ಸಾಗಿಸುತ್ತಿದ್ದ ವಾಹನಗಳನ್ನು ತಡೆಗಟ್ಟಿ ಲಂಚ ವಸೂಲಿ ಮಾಡುತ್ತಿದ್ದ ಇಬ್ಬರು ಆರ್‌ಟಿಒ ಇನ್‌ಸ್ಪೆಕ್ಟರ್‌ಗಳನ್ನು ಬೆಂಗಳೂರು ಗ್ರಾಮಾಂತರ ಎಸ್‌.ಪಿರವಿ ಚನ್ನಣ್ಣನವರ್ ಅವರು ವೇಷ ಮರೆಸಿ ಬಂಧಿಸಿದ ಪ್ರಕರಣದ ತನಿಖೆ ಎಲ್ಲಿಯವರೆಗೆ ಬಂತು ಎನ್ನುವುದೂ ಬಹಿರಂಗವಾಗಿಲ್ಲ.

ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಆಳವಾಗಿ ಬೇರೂರಿದೆ ಎನ್ನುವುದನ್ನೇ ಈ ಎಲ್ಲ ಪ್ರಕರಣಗಳೂ ಸ್ಪಷ್ಟಪಡಿಸುತ್ತಿವೆ. ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರಕರಣ ಬಯಲಿಗೆ ಬಂದ ಬಳಿಕ ತನಿಖೆಯ ಹೆಸರಲ್ಲಿ ಕಣ್ಣೊರೆಸುವ ಪ್ರಯತ್ನಗಳಷ್ಟೇ ಆಗುವುದು ಸರಿಯಲ್ಲ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಬಂಧಿಸಿ, ಶಿಕ್ಷೆ ವಿಧಿಸುವ ಕೆಲಸವೂ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT