ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗರೇಟ್‌ ಲಂಚದ ಆರೋಪ: ಎಸಿಪಿ ಪ್ರಭುಶಂಕರ್ ಅಮಾನತು

₹ 1.12ಕೋಟಿ ಪಡೆದ ಆರೋಪ: ಇನ್ನೂ ₹ 5ಲಕ್ಷ ವಶ
Last Updated 9 ಮೇ 2020, 18:23 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ವೇಳೆ ಸಿಗರೇಟ್‌ ಮಾರಾಟಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಕೆಲ ಕಂಪನಿಗಳಿಂದ ₹ 1.12 ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪ ಹೊತ್ತಿರುವ ಸಿಸಿಬಿ ಎಸಿಪಿ ಪ್ರಭುಶಂಕರ್, ಇನ್‌ಸ್ಪೆಕ್ಟರ್‌ಗಳಾದ ಅಜಯ್‌ ಹಾಗೂ ನಿರಂಜನ ಕುಮಾರ್‌ ಅವರನ್ನು ಅಮಾನತು‌ ಮಾಡಲಾಗಿದೆ.

ಎಸಿಪಿ ಬಳಿಯಿಂದ ₹ 30 ಲಕ್ಷ ವಶಪಡಿಸಿಕೊಳ್ಳಲಾಗಿದೆ. ಪ್ರಭುಶಂಕರ್‌ ಜತೆ ಅಜಯ್‌, ನಿರಂಜನ ಕುಮಾರ್‌ ಪ್ರಕರಣದಲ್ಲಿ ಭಾಗಿ ಆಗಿರುವುದು ವಿಚಾರಣೆಯಿಂದ ದೃಢಪಟ್ಟಿದ್ದರಿಂದ ಮೂವರನ್ನೂ ಅಮಾನ‌ತು ಮಾಡಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ಪಿ. ಭಾಸ್ಕರ್‌ರಾವ್‌ ತಿಳಿಸಿದರು.

ಸಿಸಿಬಿ ಡಿಸಿಪಿ ರವಿಕುಮಾರ್‌ ಈ ಪ್ರಕರಣ ಕುರಿತು ವಿಚಾರಣೆ ನಡೆಸಿ ಜಂಟಿ ಪೊಲೀಸ್‌ ಕಮಿಷನರ್ ಸಂದೀಪ್‌ ಪಾಟೀಲ‌ ಅವರಿಗೆ ವರದಿ ನೀಡಿದ್ದರು. ಬಳಿಕ ಅದು ಪೊಲೀಸ್‌ ಕಮಿಷನರ್‌ ಹಾಗೂ ಡಿಜಿಪಿ ಅವರ ಕೈಸೇರಿತ್ತು.

ಪ್ರತಿಷ್ಠಿತ ಸಿಗರೇಟ್‌ ಕಂಪನಿಯೊಂದರಿಂದ ಎರಡು ಕಂತುಗಳಲ್ಲಿ ₹ 62.5 ಲಕ್ಷ ಪಡೆದಿರುವುದೂ ಸೇರಿದಂತೆ ವಿವಿಧ ಕಂಪನಿಗಳಿಂದ
₹ 1.12 ಕೋಟಿ ಲಂಚ ಪಡೆಯಲಾಗಿದೆ ಎಂದು ರವಿಕುಮಾರ್‌ ವರದಿಯಲ್ಲಿ ತಿಳಿಸಿದ್ದಾರೆ.

ಇದರ ನಡುವೆಯೇ, ಅಜಯ್, ನಿರಂಜನ್ ಕುಮಾರ್‌ ಅವರು ಎಂ.ಡಿ. ಸನ್ಸ್‌ ಸಂಸ್ಥೆಯ ಮೇಲೆ ದಾಳಿ ಮಾಡಿದ್ದರು. ಹಣ ಹಂಚಿಕೆ ವಿಷಯದಲ್ಲಿ ಮೂವರ ಮಧ್ಯೆ ತಕರಾರು ಉಂಟಾಗಿದ್ದರಿಂದಲೇ ಈ ಇನ್‌ಸ್ಪೆಕ್ಟರ್‌ ಗಳು ಈ ದಾಳಿ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಎಂ.ಡಿ. ಸನ್ಸ್‌ ವಿತರಕರಾದ ಆದಿಲ್‌ ಅಜೀಜ್‌ ಮತ್ತು ಭೂಷಣ್‌ ಅವರ ವಿಚಾರಣೆ ನಡೆಯುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪ್ರತಿಷ್ಠಿತ ಕಂಪನಿ ಅಸಿಸ್ಟೆಂಟ್‌ ಮ್ಯಾನೇಜರ್ ಗೋವಿಂದರಾಜ್‌ ಮತ್ತು ಯಲಹಂಕ ರೌಡಿಶೀಟರ್‌ ಬಾಬು ಎಂಬುವರನ್ನು ಪೊಲೀಸರು ಹುಡುಕುತ್ತಿದ್ದಾರೆ.

ಪಿ.ಸಿ. ಕಾಯ್ದೆಯಡಿ ಪ್ರಕರಣ ಏಕಿಲ್ಲ?

ಸಿಗರೇಟ್‌ ಲಂಚ ಪ್ರಕರಣ ಬಯಲಿಗೆ ಬಂದು ವಾರವಾದರೂ ಆರೋಪಿ ಎಸಿಪಿ ಮತ್ತು ಇನ್‌ಸ್ಪೆಕ್ಟರ್‌ಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ (ಪಿ.ಸಿ) ಕಾಯ್ದೆಯಡಿ ಇನ್ನೂ ಏಕೆ ಪ್ರಕರಣ ದಾಖಲಿಸಿಲ್ಲ ಎಂಬ ಚರ್ಚೆ ಇಲಾಖೆಯಲ್ಲಿ ಮುನ್ನೆಲೆಗೆ ಬಂದಿದೆ.

ಅಧಿಕಾರಿಗಳಿಗೆ ಲಂಚ ಕೊಟ್ಟವರೂ ಸಿಕ್ಕಿದ್ದಾರೆ. ಲಂಚದಲ್ಲಿ ಸ್ವಲ್ಪ ಭಾಗ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಏಕೆ ಪ್ರಕರಣ ದಾಖಲಿಸುತ್ತಿಲ್ಲ ಎಂಬ ಚರ್ಚೆಗಳೂ ನಡೆದಿವೆ. ಪ್ರಕರಣದ ವಿಚಾರಣೆ ಮುಗಿದ ಬಳಿಕ ಪಿ.ಸಿ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸುವ ಕುರಿತು ಪರಿಶೀಲಿಸಲಾಗುವುದು ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಅಧಿಕಾರಿಗಳ ವಿರುದ್ಧ ಸುಲಿಗೆ ಮತ್ತು ಎನ್‌ಡಿಎಂಎ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT