ಗುರುವಾರ , ಮೇ 13, 2021
16 °C

ಸಂಪಾದಕೀಯ: ಅಗತ್ಯ ವಸ್ತುಗಳ ಬೆಲೆ ಹೆಚ್ಚಳ; ಸರ್ಕಾರದ ನಿಗಾ ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜ್ಯದಲ್ಲಿ ಕೋವಿಡ್–19 ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್‌ ಮಾದರಿಯ ನಿರ್ಬಂಧಗಳನ್ನು ಜಾರಿಗೆ ತಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ವರ್ಷ ರಾಷ್ಟ್ರವ್ಯಾಪಿ ಜಾರಿಗೊಳಿಸಿದ್ದ ಮಾದರಿಯ ಕಠಿಣ ಲಾಕ್‌ಡೌನ್‌ ಇದಲ್ಲ. ಹೀಗಿದ್ದರೂ, ಜನರ ಸಂಚಾರದ ಮೇಲೆ ಹತ್ತು ಹಲವು ನಿರ್ಬಂಧಗಳು ಇವೆ. ಕಾರ್ಖಾನೆಗಳು ಕೆಲಸ ನಿರ್ವಹಿಸಲು ಅವಕಾಶ ಇದೆ. ಆದರೆ, ಕಾರ್ಖಾನೆಗಳಿಗೆ ಹೋಗಲು ಕಾರ್ಮಿಕರಿಗೆ ಸಾರಿಗೆ ಸೌಲಭ್ಯದ ಕೊರತೆ ಇದೆ. ಈ ಬಾರಿಯ ಲಾಕ್‌ಡೌನ್‌ನ ದ್ವಂದ್ವಗಳು ಇವು. ಹಿಂದಿನ ವರ್ಷ ಏಕಾಏಕಿ ಜಾರಿಗೆ ತಂದ ಲಾಕ್‌ಡೌನ್‌ ಕ್ರಮವು ಅಗತ್ಯ ವಸ್ತುಗಳ ಪೂರೈಕೆ ವ್ಯವಸ್ಥೆಯ ಪಾಲಿಗೆ ಪ್ರಹಾರದಂತೆ ಎರಗಿತ್ತು. ನಿರೀಕ್ಷಿಸಿರದಿದ್ದ ಲಾಕ್‌ಡೌನ್‌ನ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರಿ ಹೆಚ್ಚಳ ಆಗಿತ್ತು. ಈ ಬಾರಿ ಆ ರೀತಿ ಆಗದಂತೆ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಸರಕುಗಳ ಅಂತರರಾಜ್ಯ ಹಾಗೂ ಅಂತರಜಿಲ್ಲಾ ಸಾಗಾಟಕ್ಕೆ ಯಾವ ನಿರ್ಬಂಧವೂ ಈಗಿಲ್ಲ.

ಹೀಗಿದ್ದರೂ, ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಯಾವ ಮಟ್ಟದಲ್ಲಿ ಇದೆ ಎಂಬುದರ ಮೇಲೆ ಎಚ್ಚರಿಕೆಯ ಕಣ್ಣಿಡಬೇಕಾದ ಅಗತ್ಯ ಖಂಡಿತ ಇದೆ. ಸರಕು ಸಾಗಣೆ ವ್ಯವಸ್ಥೆಗೆ ತೊಡಕು ಉಂಟಾಗುವಂತೆ ನಿಯಮಗಳನ್ನು ರೂಪಿಸಿಲ್ಲ ಎಂದು ಅಧಿಕಾರಸ್ಥರು ಎಷ್ಟೇ ಗಟ್ಟಿಯಾಗಿ ಹೇಳಿದರೂ, ನಿರ್ಬಂಧಗಳು ಜಾರಿಗೆ ಬಂದ ನಂತರ ಕೆಲವು ಹಣ್ಣು–ತರಕಾರಿಗಳ ಬೆಲೆಯಲ್ಲಿ ಹೆಚ್ಚಳ ಆಗಿರುವುದನ್ನು, ಕೆಲವು ತರಕಾರಿಗಳ ಪೂರೈಕೆಯಲ್ಲಿ ತಕ್ಷಣಕ್ಕೆ ವ್ಯತ್ಯಯ ಆಗಿರುವುದನ್ನು ಸಾರ್ವಜನಿಕರು ಈಗಾಗಲೇ ಗಮನಿಸಿರಬಹುದು. ಕೆಲವು ಸಮಸ್ಯೆಗಳು ಒಂದೆರಡು ದಿನಗಳಲ್ಲಿ ಸರಿಹೋಗಬಹುದು. ಆದರೆ, ಈ ಬಾರಿಯ ನಿಯಮಗಳಲ್ಲಿ ಇರುವ ಕೆಲವು ಲೋಪಗಳು ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುವಂತೆ ಮಾಡಬಲ್ಲವು ಎಂಬುದನ್ನು ನಿರ್ಲಕ್ಷಿಸುವಂತೆ ಇಲ್ಲ.

ಕಿರಾಣಿ ಅಂಗಡಿಗಳನ್ನು ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ತೆರೆಯಲು ಅವಕಾಶವಿದೆ. ಕೃಷಿ ಉತ್ಪನ್ನಗಳ ಮಾರುಕಟ್ಟೆಗಳು ಕೂಡ ಈ ಅವಧಿಯಲ್ಲಿ ಮಾತ್ರ ತೆರೆದಿರುತ್ತವೆ. ಸಣ್ಣ ವ್ಯಾಪಾರಿಗಳಿಗೆ ಸಗಟು ವ್ಯಾಪಾರಿಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸಿ ತರಲು ಪ್ರತ್ಯೇಕ ಸಮಯವೇ ಇಲ್ಲವಾಗಿದೆ. ಸಮಯದ ಈ ಅಭಾವವು ಕಿರಾಣಿ ಅಂಗಡಿಗಳಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಾಸ ಉಂಟುಮಾಡಿ, ಚಿಲ್ಲರೆ ಮಾರಾಟ ದರವನ್ನು ಹೆಚ್ಚಿಸಬಹುದು. ನಗರಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಹಲವರು ಹಳ್ಳಿಗಳಿಗೆ ಮರಳಿದ್ದಾರೆ. ಕಾರ್ಮಿಕರ ಅಭಾವದಿಂದಾಗಿಯೂ ಅಗತ್ಯ ವಸ್ತುಗಳ ಪೂರೈಕೆ ಸರಪಳಿಯ ಮೇಲೆ ದುಷ್ಪರಿಣಾಮ ಆಗಬಹುದು. ತರಕಾರಿ, ಬೇಳೆ–ಕಾಳು, ಖಾದ್ಯತೈಲ, ಮೊಟ್ಟೆ–ಮಾಂಸ... ಇವೆಲ್ಲ ಪ್ರತಿನಿತ್ಯ ಬೇಕಾಗುವ ಅತ್ಯವಶ್ಯಕ ಆಹಾರ ವಸ್ತುಗಳು.

ಇವುಗಳ ಪೂರೈಕೆ ವ್ಯವಸ್ಥೆಯಲ್ಲಿ ವ್ಯತ್ಯಾಸ ಉಂಟಾದರೆ, ಬೆಲೆ ಏರಿಕೆ ಆಗುತ್ತದೆ. ಆಗ ಸಮಸ್ಯೆಗೆ ಸಿಲುಕುವುದು ಸಾರ್ವಜನಿಕರು. ಅಗತ್ಯ ವಸ್ತುಗಳ ಸಾಗಾಟ ಹಾಗೂ ಮಾರಾಟ ಸರಪಳಿಯಲ್ಲಿನ ಯಾವುದಾದರೂ ಒಂದು ಹಂತದಲ್ಲಿ ಈ ವಸ್ತುಗಳ ಕೃತಕ ಅಭಾವ ಸೃಷ್ಟಿಸುವವರು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸಬಹುದು. ಹಾಗಾಗದಂತೆ ನೋಡಿಕೊಳ್ಳಬೇಕಿರುವುದು ಸರ್ಕಾರದ ಹೊಣೆ. ಈಗ ಜಾರಿಗೆ ಬಂದಿರುವ ಲಾಕ್‌ಡೌನ್‌ ಮೇ 12ಕ್ಕೆ ಮುಕ್ತಾಯವಾಗಲಿದೆ. ಆ ತಾರೀಕಿನ ನಂತರವೂ ಕೋವಿಡ್–19 ಪ್ರಕರಣಗಳು ಸರ್ಕಾರದ ನಿಯಂತ್ರಣಕ್ಕೆ ಬಾರದಿದ್ದರೆ, ಲಾಕ್‌ಡೌನ್‌ ಕ್ರಮಗಳು ಮತ್ತಷ್ಟು ದಿನ ಮುಂದುವರಿಯುವ ಸಾಧ್ಯತೆ ಇದೆ. ಲಾಕ್‌ಡೌನ್‌ ಇನ್ನಷ್ಟು ದಿನ ಮುಂದುವರಿದಿದ್ದೇ ಆದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಚಿತ ಎಂದು ಅರ್ಥಶಾಸ್ತ್ರ ಪರಿಣತರು ಅಂದಾಜಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಉದ್ಯಮಗಳು, ವ್ಯಾಪಾರಸ್ಥರು, ಖಾಸಗಿ ವಲಯದ ನೌಕರರು ಬಸವಳಿದಿರುತ್ತಾರೆ. ಅಗತ್ಯ ವಸ್ತುಗಳ ಬೆಲೆ ಮತ್ತೆ ಜಾಸ್ತಿ ಆದರೆ ಆ ಸಂದರ್ಭವನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆ? ಆದಾಯವೇ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ವೆಚ್ಚಗಳು ಜಾಸ್ತಿ ಆಗುವುದರಿಂದ ಸಾರ್ವಜನಿಕರ ಬದುಕಿನ ಬವಣೆ ಎಷ್ಟರಮಟ್ಟಿಗೆ ಹೆಚ್ಚಾಗುತ್ತದೆ ಎಂಬುದು ಅಧಿಕಾರಸ್ಥರ ಅರಿವಿಗೆ ಬರಬಹುದೇ? ಸಾಂಕ್ರಾಮಿಕವನ್ನು ನಿಭಾಯಿಸುವ ವಿಚಾರದಲ್ಲಿ ಸ್ಪಷ್ಟ ರೂಪುರೇಷೆಗಳನ್ನೇ ಹೊಂದಿರದ ರಾಜ್ಯ ಸರ್ಕಾರ, ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲದೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು