ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಹೆಜ್ಜೆ ಉತ್ತಮ ಆರಂಭ, ಕಾಳಜಿ ಹೀಗೇ ಇರಲಿ

Published 14 ಜೂನ್ 2023, 19:24 IST
Last Updated 14 ಜೂನ್ 2023, 19:24 IST
ಅಕ್ಷರ ಗಾತ್ರ

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಯನ್ನು ಸರಿಪಡಿಸಲು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ತಿಂಗಳ ಗಡುವು ನೀಡಿದ್ದಾರೆ. ಈ ಅವಧಿಯಲ್ಲಿ ವ್ಯವಸ್ಥೆ ಸರಿಹೋಗದಿದ್ದರೆ ಅಧಿಕಾರಿಗಳನ್ನೇ ಹೊಣೆಯಾಗಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ. ನಗರ ಪ್ರದೇಶವೇ ಆಗಿರಲಿ, ಗ್ರಾಮಾಂತರ ಪ್ರದೇಶವೇ ಆಗಿರಲಿ ಬಡವರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ಬಹುವಾಗಿ ಅವಲಂಬಿಸಿದ್ದಾರೆ. ಕಾಯಿಲೆಪೀಡಿತರ ಚಿಕಿತ್ಸೆಗೆ, ಆರೈಕೆಗೆ ಬೇಕಾದಂತಹ ಸಾಮರ್ಥ್ಯವಿಲ್ಲದೆ ಆರೋಗ್ಯ ಕೇಂದ್ರಗಳೆಲ್ಲ ಸೋತು ಕೈಚೆಲ್ಲಿರುವುದು ಎದ್ದು ಕಾಣುವ ವಿದ್ಯಮಾನ. ಆರೋಗ್ಯ ಸೌಕರ್ಯವನ್ನು ಕಲ್ಪಿಸುವುದು ಎಂದರೆ ಕಟ್ಟಡವನ್ನು ನಿರ್ಮಿಸುವುದಷ್ಟೇ ಅಲ್ಲ. ಅಲ್ಲಿ ಚಿಕಿತ್ಸೆಗೆ ಸಾಧನ, ಸಲಕರಣೆಗಳು ಇರಬೇಕು. ರೋಗ ಪತ್ತೆಗೆ ಅಗತ್ಯ ಪರೀಕ್ಷಾ ಸೌಲಭ್ಯ ಇರಬೇಕು. ರೋಗಿಗಳ ಆರೈಕೆಗೆ ಒಂದಿಷ್ಟು ಹಾಸಿಗೆಗಳು, ನಾಜೂಕಿನ ಸ್ಥಿತಿ ನಿಭಾಯಿಸಲು ತೀವ್ರ ನಿಗಾ ಘಟಕ ಮತ್ತು ತುರ್ತು ಅಗತ್ಯಕ್ಕೊಂದು ಶಸ್ತ್ರಚಿಕಿತ್ಸಾ ಕೊಠಡಿ ಬೇಕು. ಔಷಧಿಯ ದಾಸ್ತಾನು ಸಹ ಅಗತ್ಯ ಪ್ರಮಾಣದಲ್ಲಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಚಿಕಿತ್ಸೆ ನೀಡಲು ವೈದ್ಯರು ಇರಬೇಕು. ಆದರೆ, ಆರೋಗ್ಯ ಇಲಾಖೆಯೇ ನೀಡಿರುವ ಅಂಕಿ ಅಂಶದ ಪ್ರಕಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಶೇ 52ರಷ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರಿಗಾಗಿ ಕಟ್ಟಿಸಿರುವ ವಸತಿಗೃಹಗಳು ಖಾಲಿಯಾಗಿಯೇ ಉಳಿದಿವೆ. ನರ್ಸ್‌ಗಳು, ವೈದ್ಯಕೀಯ ಸಹಾಯಕರ ಕೊರತೆಯೂ ತೀವ್ರವಾಗಿ ಕಾಡುತ್ತಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಲ್ಲದೆ ಜಿಲ್ಲಾಸ್ಪತ್ರೆಗಳಿಗೋ ಖಾಸಗಿ ಆಸ್ಪತ್ರೆಗಳಿಗೋ ಕಾಯಿಲೆಪೀಡಿತರನ್ನು ಸಾಗಹಾಕುವುದು ನಡೆದೇ ಇದೆ. ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ಎದುರಿಸುವ ರೋಗಿಯು ಹೀಗೆ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆದಾಡುವಷ್ಟರಲ್ಲೇ ಆತನ ಚಿಕಿತ್ಸೆಗಾಗಿ ಇದ್ದ ‘ಸುವರ್ಣ ಸಮಯ’ ಕಳೆದುಹೋಗಿರುತ್ತದೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೆಂದರೆ (ಪಿಎಚ್‌ಸಿ) ಹೀಗಿರಬೇಕು ಎಂದು ಸರ್ಕಾರವೇ ಮಾನದಂಡವೊಂದನ್ನು ರೂಪಿಸಿದೆ. ಆ ಮಾನದಂಡದ ಪ್ರಕಾರ, ನೂರಕ್ಕೆ ನೂರರಷ್ಟು ಸನ್ನದ್ಧವಾದ ಒಂದು ಪಿಎಚ್‌ಸಿಯೂ ರಾಜ್ಯದ ಗ್ರಾಮಾಂತರ ಭಾಗದಲ್ಲಿ ಸಿಗುವುದಿಲ್ಲ. ಇಂತಹ ಗಂಭೀರ ಸಮಸ್ಯೆಯ ‘ಬಲೆ’ಯಲ್ಲಿ ಆರೋಗ್ಯ ವ್ಯವಸ್ಥೆಯು ಸಿಲುಕಿರುವ ಹೊತ್ತಿನಲ್ಲಿ ಮುಖ್ಯಮಂತ್ರಿಯವರ ಈಗಿನ ಒಂದು ಸಕಾಲಿಕ ಹೆಜ್ಜೆ ಸಂಜೀವಿನಿಯ ರೂಪ ಪಡೆಯಬಲ್ಲದು.

ಸಂಸತ್ತಿನಲ್ಲಿ ಈ ಹಿಂದೆ ಸ್ಥಾಯಿ ಸಮಿತಿ ಮಂಡಿಸಿದ ವರದಿಯಲ್ಲಿ, ‘ಗ್ರಾಮಾಂತರ ಭಾಗದ ಆರೋಗ್ಯ ಸೇವಾ ವ್ಯವಸ್ಥೆ ಶೋಚನೀಯ ಸ್ಥಿತಿಯಲ್ಲಿದ್ದು, ಮೂಲಸೌಕರ್ಯ ಹೆಚ್ಚಿಸುವ ಕೆಲಸವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕು’ ಎಂದು ಶಿಫಾರಸು ಮಾಡಲಾಗಿತ್ತು. ಆದರೆ, ಈ ಶಿಫಾರಸಿನ ಮಹತ್ವವನ್ನು ಗ್ರಹಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಸೋತಿತ್ತು. ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ನೇತೃತ್ವದ ಸರ್ಕಾರ, ಕೋವಿಡ್‌ನಂತಹ ಆರೋಗ್ಯ ತುರ್ತು ಪರಿಸ್ಥಿತಿಯ ಕಾಲಘಟ್ಟದಲ್ಲೂ ಸರ್ಕಾರಿ ಆಸ್ಪತ್ರೆಗಳನ್ನೆಲ್ಲ ಮೇಲ್ದರ್ಜೆಗೆ ಏರಿಸುವ, ಸಿಬ್ಬಂದಿ ಕೊರತೆಯನ್ನು ನೀಗಿಸುವ ನೈಜ ಇಚ್ಛಾಶಕ್ತಿಯನ್ನು ಪ್ರದರ್ಶಿಸಿರಲಿಲ್ಲ. ಪ್ರತೀ ಹತ್ತು ಸಾವಿರ ಜನರಿಗೆ ಒಂಬತ್ತು ವೈದ್ಯರ ಸೇವೆ ಲಭ್ಯವಿರುವುದು ದೇಶದ ಸರಾಸರಿ. ಅದೇ ಕಲ್ಯಾಣ ಕರ್ನಾಟಕದ ಹಿಂದುಳಿದ ತಾಲ್ಲೂಕುಗಳಲ್ಲಿ ಪ್ರತೀ ಹತ್ತು ಸಾವಿರ ಜನಸಂಖ್ಯೆಗೆ ಕೇವಲ ಒಬ್ಬ ವೈದ್ಯ ಲಭ್ಯರಿರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿ. ರಾಜ್ಯದ ಪ್ರತಿ ಪ್ರಜೆಗೂ ಚಿಕಿತ್ಸೆ ಸಿಗುವುದನ್ನು ಖಚಿತಪಡಿಸುವ ತಮಿಳುನಾಡಿನ ಆರೋಗ್ಯ ವಿಮೆ ಯೋಜನೆಯ ಕುರಿತು ಅಧ್ಯಯನ ನಡೆಸಿ, ವರದಿ ಕೊಡುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ. ಇದು, ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಅವರಲ್ಲಿರುವ ತಹತಹವನ್ನು ಸೂಚಿಸುತ್ತದೆ. ಆದರೆ, ಈ ಕ್ರಮ ಕೇವಲ ಆರಂಭಶೂರತ್ವವಾಗಬಾರದು. ಮುಖ್ಯಮಂತ್ರಿಯವರೇ ಹೇಳಿರುವಂತೆ ಮೂರು ತಿಂಗಳ ಬಳಿಕ ಏನೇನು ಸುಧಾರಣೆ ಆಗಿದೆ ಎಂಬುದನ್ನು ಖುದ್ದು ಪರಿಶೀಲಿಸಿ, ಹೊಣೆಮರೆತ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಚಾಟಿ ಬೀಸಿದರೆ ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾವಣೆ ಆದೀತು.  

ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಿಗೆ ಆರೋಗ್ಯ ವ್ಯವಸ್ಥೆಯಲ್ಲಿ ಏನಾದರೂ ಬದಲಾವಣೆ ತರಬೇಕು ಎನ್ನುವ ತೀವ್ರ ಹಂಬಲವಿದ್ದರೆ ಏನೇನು ಕೆಲಸಗಳು ಆಗಬೇಕಿವೆ ಎಂಬುದರ ನೀಲನಕ್ಷೆಯೊಂದನ್ನು ಹಾಕಿಕೊಳ್ಳಬೇಕು. ಎಲ್ಲ ಗ್ರಾಮಗಳ ಆರೋಗ್ಯ ಸೌಲಭ್ಯದ ಸ್ಥಿತಿಗತಿ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ, ಎಲ್ಲೆಲ್ಲಿ, ಏನೇನು ಅಗತ್ಯವಿದೆ ಎನ್ನುವುದನ್ನು ಪಟ್ಟಿ ಮಾಡಬೇಕು. ಆ ಕೊರತೆಗಳನ್ನು ನೀಗಿಸಲು ಕಾಲಮಿತಿಯನ್ನು ನಿಗದಿಪಡಿಸಬೇಕು. ತಾಲ್ಲೂಕು ಆಸ್ಪತ್ರೆಗಳಲ್ಲಿ ಒಳರೋಗಿಗಳನ್ನಾಗಿ ಸೇರ್ಪಡೆ ಮಾಡಿಕೊಳ್ಳಲು ಹಿಂದೇಟು ಹಾಕಲಾಗುತ್ತದೆ ಎನ್ನುವ ದೂರುಗಳು ವ್ಯಾಪಕವಾಗಿವೆ. ಅಲ್ಲಿನ ಹಾಸಿಗೆಗಳ ಸಾಮರ್ಥ್ಯವನ್ನು ಉನ್ನತೀಕರಿಸಬೇಕು. ಪಿಎಚ್‌ಸಿಗಳ ಸಂಖ್ಯೆಯನ್ನು ಹೆಚ್ಚಿಸುವತ್ತ ಗಮನಹರಿಸಬೇಕು. ಔಷಧ ಖರೀದಿ ಪ್ರಕ್ರಿಯೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು, ಅಲ್ಲಿ ಭ್ರಷ್ಟಾಚಾರ ಸುಳಿಯದಂತೆ ಮಾಡಲು ಪಾರದರ್ಶಕ ವ್ಯವಸ್ಥೆಯೊಂದನ್ನು ರೂಪಿಸಬೇಕು. ಮುಖ್ಯವಾಗಿ ವೈದ್ಯರ ಕೊರತೆಯನ್ನು ನೀಗಿಸಬೇಕು ಮತ್ತು ಸರ್ಕಾರಿ ಆಸ್ಪತ್ರೆಗಳ ಕಡೆಗೆ ವೈದ್ಯರು, ವೈದ್ಯಕೀಯ ಸಹಾಯಕರು ಮುಖ ಮಾಡುವಂತೆ ಉತ್ತೇಜನಕಾರಿ ಕ್ರಮಗಳನ್ನೂ ಕೈಗೊಳ್ಳಬೇಕು. ಏಕೆಂದರೆ, ಆಸ್ಪತ್ರೆಗಳಿಗೆ ಅವರೇ ಜೀವತಂತುಗಳು. ಆರೋಗ್ಯ ಕ್ಷೇತ್ರದ ಸುಧಾರಣೆ ಸರ್ಕಾರದ ಹೊಣೆ. ಆ ಕೆಲಸವನ್ನು ಸಮರ್ಪಕವಾಗಿ ಮಾಡಿ, ಚುನಾಯಿಸಿದ ಮತದಾರನ ವಿಶ್ವಾಸ ಉಳಿಸಿಕೊಳ್ಳುವ ಕೆಲಸವನ್ನು ಸಿದ್ದರಾಮಯ್ಯ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT