ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ನೀತಿಗಳಸಮಗ್ರ ಬದಲಾವಣೆ ಅಗತ್ಯ

Last Updated 15 ನವೆಂಬರ್ 2018, 4:10 IST
ಅಕ್ಷರ ಗಾತ್ರ

ಸರ್ಕಾರದ ಲೆಕ್ಕಾಚಾರದಲ್ಲಿ ಬಡವರಲ್ಲದೇ ಇರುವ ಅನೇಕ ಭಾರತೀಯ ಕುಟುಂಬಗಳಿಗೂ ಬಡತನಕ್ಕೂ ಇರುವ ಅಂತರ ಬಹಳ ಕಡಿಮೆ. ಒಂದು ಕಾಯಿಲೆ ಅವರನ್ನು ಬಡತನ ರೇಖೆಯಿಂದ ಕೆಳಗೆ ಬರುವಂತೆ ಮಾಡಿಬಿಡುತ್ತದೆ. ಮಧ್ಯಮ ವರ್ಗ ಕೂಡಾ ಒಂದು ಕಾಯಿಲೆಯನ್ನು ಧೈರ್ಯವಾಗಿ ಎದುರಿಸಿ ನಿಲ್ಲಲಾಗದಂಥ ದೇಶ ನಮ್ಮದು. ಇದನ್ನು ನಿವಾರಿಸುವುದಕ್ಕಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಉಚಿತ ಆರೋಗ್ಯ ಸೇವೆಯ ಹಲವು ಯೋಜನೆಗಳನ್ನು ರೂಪಿಸಿವೆ. ಆದರೆ ಇವುಗಳಲ್ಲೊಂದೂ ಅದರ ಅಗತ್ಯವಿರುವವರಿಗೆ ದೊರೆಯದಂಥ ವಾತಾವರಣವನ್ನು ಸೃಷ್ಟಿಸಲಾಗಿದೆ. ‘ಆರೋಗ್ಯ ಕರ್ನಾಟಕ’ದಲ್ಲಿ ನೋಂದಾಯಿಸಿಕೊಂಡವರಿಗೆ ಎಚ್1ಎನ್1 ಚಿಕಿತ್ಸೆ ಪಡೆಯಲು ಸರ್ಕಾರ ರೂಪಿಸಿರುವ ಪ್ರಕ್ರಿಯೆ ಇದಕ್ಕೆ ಅತ್ಯುತ್ತಮ ಉದಾಹರಣೆ. ರೋಗಬಾಧಿತರು ಮೊದಲು ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಅಲ್ಲಿನ ಪರೀಕ್ಷೆಗಳು ಮುಗಿದು ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲ ಎಂದು ಖಚಿತಪಡಿಸಿಕೊಂಡ ನಂತರ ಜಿಲ್ಲಾ ಆರೋಗ್ಯಾಧಿಕಾರಿಯಿಂದ ಪತ್ರ ಪಡೆದು ಖಾಸಗಿ ಆಸ್ಪತ್ರೆಗೆ ಹೋಗಬೇಕು. ಇಷ್ಟೆಲ್ಲಾ ಮಾಡಿಕೊಂಡು ಖಾಸಗಿ ಆಸ್ಪತ್ರೆಗೆ ಹೋದರೆ ಆ ಆಸ್ಪತ್ರೆಯವರು ದೊಡ್ಡ ಮನಸ್ಸು ಮಾಡಿದರಷ್ಟೇ ಚಿಕಿತ್ಸೆಯುಂಟು. ಏಕೆಂದರೆ ಆರೋಗ್ಯ ಕರ್ನಾಟಕ ಕಾರ್ಡ್ ಅನ್ನು ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಮಾನ್ಯ ಮಾಡುವುದಿಲ್ಲ. ನಮ್ಮ ಆಡಳಿತ ವ್ಯವಸ್ಥೆ ಸಕಲ ಸಂವೇದನೆಗಳನ್ನೂ ಕಳೆದುಕೊಂಡಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷ್ಯದ ಅಗತ್ಯವಿದೆಯೇ? ಇನ್ನೂ ದೊಡ್ಡ ದುರಂತವೆಂದರೆ ಸರ್ಕಾರ ರೂಪಿಸುವ ಆರೋಗ್ಯ ಯೋಜನೆಗಳ ವೈಫಲ್ಯದ ಬಗ್ಗೆ ವಿರೋಧ ಪಕ್ಷಗಳೂ ತುಟಿಬಿಚ್ಚದೆ ಕುಳಿತುಕೊಂಡಿರುವುದು. ಆರೋಗ್ಯ ಕ್ಷೇತ್ರಕ್ಕೆ ಮೂರು ಮುಖ್ಯರೋಗಗಳು ಬಾಧಿಸಿವೆ. ಮೊದಲನೆಯದು, ಆರೋಗ್ಯಕ್ಕೆ ಸಂಬಂಧಿಸಿದ ನೀತಿ ನಿರೂಪಣೆಯ ಅಸ್ಪಷ್ಟತೆ. ಎರಡನೆಯದು, ಖಾಸಗಿ ಕ್ಷೇತ್ರದ ಮೇಲಿನ ಅತಿಯಾದ ಅವಲಂಬನೆ. ಮೂರನೆಯದು, ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅಂಟಿಕೊಂಡಿರುವ ಕ್ಯಾಪಿಟೇಷನ್ ಬಾಧೆ. ಮೊದಲನೆಯ ಸಮಸ್ಯೆ ಉಳಿದೆರಡಕ್ಕೂ ಕಾರಣವಾಗಿದೆ. ಹಾಗೆಯೇ ಉಳಿದೆರಡರಲ್ಲಿಯೂ ಇರುವ ರಾಜಕೀಯ ಹಿತಾಸಕ್ತಿಗಳು ಮೊದಲನೆಯ ಸಮಸ್ಯೆಗೆ ಹೇತುವಾಗಿವೆ.

ಸರ್ಕಾರ ರೂಪಿಸುವ ಆರೋಗ್ಯ ಯೋಜನೆಗಳೆಲ್ಲವೂ ಸರ್ಕಾರಿ ಆಸ್ಪತ್ರೆಗಳನ್ನು ಕೇಂದ್ರವಾಗಿಟ್ಟುಕೊಂಡಿರುವುದು ಸಹಜ. ಆದರೆ ಈ ಆಸ್ಪತ್ರೆಗಳ ಮೂಲಸೌಕರ್ಯದಿಂದ ಹಿಡಿದು ವೈದ್ಯರ ನೇಮಕಾತಿಯ ತನಕದ ಯಾವ ವಿಚಾರದ ಬಗ್ಗೆಯೂ ಸರ್ಕಾರ ಗಮನಹರಿಸುವುದಿಲ್ಲ. ಅಷ್ಟೇಕೆ, ಆರೋಗ್ಯ ಕ್ಷೇತ್ರದ ಒಟ್ಟಾರೆ ಹೂಡಿಕೆಯಲ್ಲಿ ಕನಿಷ್ಠ ಹೆಚ್ಚಳಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗುವುದಿಲ್ಲ. ಇದರಾಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ಬಗೆಯ ಯೋಜನೆಗಳನ್ನು ವಿವಿಧ ಹೆಸರಿನಲ್ಲಿ ಘೋಷಿಸಿ ಹೆಚ್ಚು ಕಡಿಮೆ ಯಾವ ಯೋಜನೆಯೂ ಸರಿಯಾದ ರೂಪದಲ್ಲಿ ಕಾರ್ಯರೂಪಕ್ಕೆ ಬಾರದಂತಹ ಗೊಂದಲ ಸೃಷ್ಟಿಸುತ್ತವೆ. ಆಡಳಿತಾರೂಢರಿಗೆ ತಮ್ಮ ನಾಯಕರ ಹೆಸರನ್ನು ಯೋಜನೆಗಳಿಗೆ ಇಡುವುದು ಮುಖ್ಯವೇ ಹೊರತು ಅದು ಜನರನ್ನು ತಲುಪುತ್ತದೆಯೇ ಅಥವಾ ಯಶಸ್ವಿಯಾಗುತ್ತದೆಯೇ ಎಂಬುದು ಅಲ್ಲ. ಸರ್ಕಾರಿ ಯೋಜನೆಗಳ ಫಲಾನುಭವಿಗಳು ಮೊದಲು ಸರ್ಕಾರಿ ಆಸ್ಪತ್ರೆಗೆ ಹೋಗಬೇಕು ಎಂಬ ನಿಯಮ ರೂಪಿಸುವ ಮುನ್ನ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಬೇಕೆಂದು ಸರ್ಕಾರ ಭಾವಿಸುವುದಿಲ್ಲ. ಬದಲಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲದ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡುವ ಉಪಾಯವನ್ನು ಕಂಡುಕೊಳ್ಳಲಾಗುತ್ತದೆ. ಇದಕ್ಕಾಗಿ ಜಿಲ್ಲಾ ಆರೋಗ್ಯಾಧಿಕಾರಿಯ ಪತ್ರ ಇತ್ಯಾದಿ ಪ್ರಕ್ರಿಯಾತ್ಮಕ ಗೊಂದಲಗಳು ಸೃಷ್ಟಿಯಾಗುತ್ತವೆ. ಇವೆಲ್ಲವೂ ಲಂಚದ ಹೊಸ ಮೂಲಗಳಾಗಿ ಬದಲಾಗುತ್ತವೆ. ಈ ವಿಚಾರದ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕಾದ ವಿರೋಧ ಪಕ್ಷವೂ ಅದನ್ನು ಮಾಡುವುದಿಲ್ಲ. ಏಕೆಂದರೆ ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಆಸ್ಪತ್ರೆಗಳ ಮಾಲೀಕರು ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ. ಸೀಟು ಖರೀದಿಗೆ ನೀಡಿದ ಹಣವನ್ನು ಮರುಗಳಿಕೆ ಮಾಡಲು ಹೊರಟಿರುವ ಖಾಸಗಿ ವೈದ್ಯರು ಮತ್ತು ಮೂಲಸೌಕರ್ಯ ಹಾಗೂ ವೈದ್ಯರೇ ಇಲ್ಲದ ಸರ್ಕಾರಿ ಆಸ್ಪತ್ರೆಗಳ ಮಧ್ಯೆ ರೋಗಿಗಳು ಸಿಲುಕಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಇರುವುದು ಒಂದೇ ದಾರಿ. ನಮ್ಮ ಆರೋಗ್ಯ ನೀತಿಗಳ ಸಮಗ್ರ ಬದಲಾವಣೆ. ಕೇಂದ್ರ ಮತ್ತು ರಾಜ್ಯಗಳು ಒಂದೇ ಬಗೆಯ ಹಲವು ಯೋಜನೆಗಳನ್ನು ರೂಪಿಸುವ ಈಗಿನ ಸ್ಥಿತಿ ಬದಲಾಗಬೇಕು. ಆರೋಗ್ಯ ಸೇವೆಗಳನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರಕ್ಕೆ ವಹಿಸಬೇಕು. ಇದು, ನೀತಿ ನಿರೂಪಣೆಯ ಮಟ್ಟದ ಗೊಂದಲವನ್ನಾದರೂ ನಿವಾರಿಸುತ್ತದೆ. ಆರೋಗ್ಯ ಸೇವೆಯನ್ನು ಅಭಿವೃದ್ಧಿ ಹೊಂದಿದ ದೇಶಗಳ ಮಾದರಿಯಲ್ಲಿ ಎಲ್ಲರಿಗೂ ಉಚಿತವಾಗಿ ಒದಗಿಸುವುದಕ್ಕೆ ವ್ಯವಸ್ಥೆ ಮಾಡಿ ಸರ್ಕಾರಿ ಆಸ್ಪತ್ರೆಗಳ ಜಾಲವನ್ನು ಬಲಪಡಿಸಬೇಕು. ಇದಕ್ಕೆಲ್ಲಾ ಸಂಪನ್ಮೂಲದ ಕೊರತೆಯಂತೂ ಇಲ್ಲ. ಆದ್ಯತೆಗಳನ್ನು ನಿಗದಿಪಡಿಸಿಕೊಳ್ಳುವುದಷ್ಟೇ ಸದ್ಯದ ಸಮಸ್ಯೆ. ಅದನ್ನು ನಿವಾರಿಸಿಕೊಳ್ಳುವ ರಾಜಕೀಯ ಇಚ್ಛಾಶಕ್ತಿ ಮತ್ತು ಮುತ್ಸದ್ದಿತನವನ್ನು ಸರ್ಕಾರ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT