ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಎನ್‌ಎಚ್‌ಆರ್‌ಸಿಗೆ ಮಾನ್ಯತೆ ಪಡೆಯಲು ಮಾನವ ಹಕ್ಕು ಸ್ಥಿತಿ ಸುಧಾರಿಸಲಿ

Published 20 ಮೇ 2024, 23:30 IST
Last Updated 20 ಮೇ 2024, 23:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಷ್ಟ್ರೀಯ ಸಂಸ್ಥೆಗಳ ಮೈತ್ರಿಕೂಟದ (ಜಿಎಎನ್‌ಎಚ್‌ಆರ್‌ಐ) ಮಾನ್ಯತೆಯು ಸತತ ಎರಡನೇ ವರ್ಷವೂ ಭಾರತದ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗಕ್ಕೆ (ಎನ್‌ಎಚ್‌ಆರ್‌ಸಿ) ಕೈತಪ್ಪಿದೆ. ಎನ್‌ಎಚ್‌ಆರ್‌ಸಿಯ ಕಾರ್ಯನಿರ್ವಹಣೆ ಮತ್ತು ದೇಶದಲ್ಲಿನ ಮಾನವ ಹಕ್ಕುಗಳ ಸ್ಥಿತಿಗತಿಯ ಕುರಿತು ಜಿಎಎನ್‌ಎಚ್‌ಆರ್‌ಐ ತೃಪ್ತಿ ಹೊಂದಿಲ್ಲ ಎಂಬುದರ ಸೂಚನೆ ಇದು.
ಜಿಎಎನ್‌ಎಚ್‌ಆರ್‌ಐಯಲ್ಲಿರುವ ಮಾನ್ಯತೆ ನೀಡಿಕೆ ಉಪಸಮಿತಿಯು (ಎಸ್‌ಸಿಎ) ಪರಿಶೀಲನೆ ಬಳಿಕ ಮಾನ್ಯತೆ ನೀಡುವುದನ್ನು ಮುಂದೂಡಿದೆ. ಎನ್‌ಎಚ್‌ಆರ್‌ಸಿಯನ್ನು ‘ಬಿ’ ವರ್ಗಕ್ಕೆ ಸೇರಿಸಿ ಕೆಳದರ್ಜೆಗೆ ಇಳಿಸಬೇಕು ಎಂದು ಅಂತರರಾಷ್ಟ್ರೀಯ ಮಟ್ಟದ ಕೆಲವು ಸಂಸ್ಥೆಗಳು ಕೇಳಿದ್ದರೂ ಅದಕ್ಕೆ
ಜಿಎಎನ್‌ಎಚ್‌ಆರ್‌ಐ ಒಪ್ಪಿಗೆ ಕೊಟ್ಟಿಲ್ಲ. 1999ರಲ್ಲಿ ಮಾನ್ಯತೆ ನೀಡಿಕೆ ಪ್ರಕ್ರಿಯೆ ಆರಂಭಗೊಂಡ ಬಳಿಕ 2016ರವರೆಗೆ ಎನ್‌ಎಚ್‌ಆರ್‌ಸಿ ‘ಎ’ ವರ್ಗದ ಸ್ಥಾನವನ್ನೇ ಹೊಂದಿತ್ತು. 2016ರಲ್ಲಿ ಮಾನ್ಯತೆ ನೀಡಿಕೆಯನ್ನು ಮುಂದೂಡಲಾಯಿತಾದರೂ 2017ರಲ್ಲಿ ಮಾನ್ಯತೆ ನೀಡಲಾಯಿತು. ಈಗ ಸತತ ಎರಡು ವರ್ಷ ಮಾನ್ಯತೆಯನ್ನು ಅಮಾನತಿನಲ್ಲಿ ಇಡಲಾಗಿದೆ. ಮುಂದಿನ ಪರಾಮರ್ಶೆಯು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ. 

ಈ ಬಾರಿ ಮಾನ್ಯತೆ ನೀಡಿಕೆಯನ್ನು ಮುಂದೂಡಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಕಳೆದ ವರ್ಷ ಎಸ್‌ಸಿಎ ಕೊಟ್ಟ ಕಾರಣದಿಂದ ಈ ಬಾರಿಯೂ ಮುಂದೂಡಿಕೆ ಏಕೆ ಆಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ‘ಸರ್ಕಾರದ ಹಸ್ತಕ್ಷೇಪ ಇಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ’ ಪಡೆದುಕೊಳ್ಳಲು ಬೇಕಾದ ಪರಿಸ್ಥಿತಿಯನ್ನು ಸೃಷ್ಟಿಮಾಡಿಕೊಳ್ಳುವಲ್ಲಿ ಎನ್‌ಎಚ್‌ಆರ್‌ಸಿ ವಿಫಲವಾಗಿದೆ ಎಂದು ಕಳೆದ ವರ್ಷ ಎಸ್‌ಸಿಎ ಹೇಳಿತ್ತು. ಎನ್‌ಎಚ್‌ಆರ್‌ಸಿ ನಡೆಸುವ ತನಿಖೆಗಳಲ್ಲಿ ಪೊಲೀಸ್‌ ಅಧಿಕಾರಿಗಳು ಭಾಗಿಯಾಗುವುದನ್ನು ಹಿತಾಸಕ್ತಿ ಸಂಘರ್ಷ ಎಂದು ಅದು ಹೇಳಿದೆ. ಸಿಬ್ಬಂದಿ ಮತ್ತು ನಾಯಕತ್ವದಲ್ಲಿ ವೈವಿಧ್ಯ ಇಲ್ಲ, ಶೋಷಣೆಗೆ ಒಳಗಾದ ಗುಂಪುಗಳನ್ನು ರಕ್ಷಿಸಲು ಬೇಕಾದಷ್ಟು ಕೆಲಸವನ್ನು ಮಾಡಿಲ್ಲ ಎಂದು ಹೇಳಲಾಗಿದೆ. ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿ ಆಯೋಗದಲ್ಲಿ ಇಲ್ಲದಿರುವುದನ್ನು ಉಲ್ಲೇಖಿಸಿ ಹೀಗೆ ಹೇಳಿರಬಹುದು. ಸದಸ್ಯರಲ್ಲಿ ಒಬ್ಬರಾದ ರಾಜೀವ್‌ ಜೈನ್‌ ಅವರು ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ಸೇರಿದವರು. ಆದರೆ, ಗುಪ್ತಚರ ವಿಭಾಗದ (ಐಬಿ) ನಿರ್ದೇಶಕ ಹುದ್ದೆಯಲ್ಲಿದ್ದ ಅವರು ಸರ್ಕಾರದ ಜೊತೆ ಗುರುತಿಸಿಕೊಂಡವರು. ತನಿಖಾ ವಿಭಾಗದ ಮಹಾ ನಿರ್ದೇಶಕ ಅಜಯ್‌ ಭಟ್ನಾಗರ್ ಅವರು ಸಿಬಿಐಯ ವಿಶೇಷ ನಿರ್ದೇಶಕ ಹುದ್ದೆಯಲ್ಲಿ ಇದ್ದವರು. ಇಂತಹ ವ್ಯಕ್ತಿಗಳು ಇರುವುದರಿಂದ ಆಯೋಗದ ಕಾರ್ಯನಿರ್ವಹಣೆಗೆ ತೊಡಕಾಗುತ್ತದೆ. ಆಯೋಗದ
ವಿಶ್ವಾಸಾರ್ಹತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಾಗೆಯೇ, ನ್ಯಾಯಮೂರ್ತಿ (ನಿವೃತ್ತ) ಅರುಣ್‌ ಮಿಶ್ರಾ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿರುವುದು ಜಿಎಎನ್‌ಎಚ್‌ಆರ್‌ಐಗೆ ಸಮರ್ಥನೀಯ ಅನಿಸಿಲ್ಲ. ಮನುಸ್ಮೃತಿಯು ನ್ಯಾಯದ ತತ್ವವನ್ನು ಪ್ರತಿಪಾದಿಸುತ್ತದೆ, ಅದರಲ್ಲಿರುವ ಅಪರಾಧದ ತೀವ್ರತೆಗೆ ಅನುಗುಣವಾದ ಶಿಕ್ಷೆ ನೀಡಿಕೆಯು ಸಮರ್ಪಕವಾಗಿದೆ ಎಂದು ಎನ್‌ಎಚ್‌ಆರ್‌ಸಿ ಇತ್ತೀಚೆಗೆ ಪ್ರಕಟಿಸಿದ ಕರಪತ್ರದಲ್ಲಿ ಹೇಳಲಾಗಿತ್ತು. ಮನುಸ್ಮೃತಿಯನ್ನು ಸಮರ್ಥಿಸಿಕೊಳ್ಳುವ ಸಂಸ್ಥೆಯೊಂದು ಮಾನವ ಹಕ್ಕುಗಳ ಕುರಿತು ಸಮರ್ಪಕ ದೃಷ್ಟಿಕೋನ ಹೊಂದುವುದು ಕಷ್ಟವೇ. 

ಮಾನ್ಯತೆ ಮುಂದೂಡಿಕೆಯಿಂದಾಗಿ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಮತ್ತು ಇತರ
ಕೆಲವು ಸಮಿತಿಗಳಲ್ಲಿ ಮತ ಹಾಕುವ ಭಾರತದ ಹಕ್ಕು ಮೊಟಕಾಗಬಹುದು. ದೇಶದ ಮಾನವ ಹಕ್ಕುಗಳ ಸ್ಥಿತಿಗತಿಯತ್ತ ಅಂತರರಾಷ್ಟ್ರೀಯ ಸಮುದಾಯದ ದೃಷ್ಟಿ ಹರಿಯಬಹುದು. ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ರೀತಿ, ಮಣಿಪುರದ ಪರಿಸ್ಥಿತಿ, ಟೀಕಾಕಾರರು ಮತ್ತು ಭಿನ್ನಮತೀಯರ ಹತ್ತಿಕ್ಕುವಿಕೆ, ರಾಷ್ಟ್ರೀಯ ಮಹಿಳಾ ಆಯೋಗದಂತಹ ಸಂಸ್ಥೆಗಳ ಪಕ್ಷಪಾತಿ ಧೋರಣೆಯು ದೇಶದಲ್ಲಿ ಮಾನವ ಹಕ್ಕುಗಳ ಸ್ಥಿತಿ ಹೇಗಿದೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ. ಈ ಎಲ್ಲವುಗಳನ್ನು ಸರಿಪಡಿಸುವ ಮೂಲಕ ಎನ್‌ಎಚ್‌ಆರ್‌ಸಿಗೆ ಜಿಎಎನ್‌ಎಚ್‌ಆರ್‌ಐ ಮಾನ್ಯತೆಯನ್ನು ಪಡೆಯಬೇಕೇ ವಿನಾ ರಾಜತಾಂತ್ರಿಕ ಪ್ರಯತ್ನದ ಮೂಲಕ ಅಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT