ಮಂಗಳವಾರ, ಮೇ 17, 2022
30 °C

ಹೂಡಿಕೆದಾರರ ಹಿತರಕ್ಷಣೆಗೆ ಕಾನೂನು ಪರಿಣಾಮಕಾರಿ ಅನುಷ್ಠಾನಕ್ಕೆ ಸಿಗಲಿ ಒತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಚ್ಚಿನ ಬಡ್ಡಿ, ಲಾಭ ನೀಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸುವ ಪ್ರಕರಣಗಳು ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ವಿನಿವಿಂಕ್‌ ಕಂಪನಿಯಿಂದ ಐ– ಮಾನಿಟರಿ ಅಡ್ವೈಸರಿವರೆಗೆ (ಐಎಂಎ) ನೂರಾರು ಕಂಪನಿಗಳು ಗ್ರಾಹಕರಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿವೆ. 1990ರ ದಶಕದಿಂದಲೂ ಇಂತಹ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಆಗಿರುವುದನ್ನು ಅಪರಾಧ ದಾಖಲೆಗಳ ಬ್ಯೂರೊ ಅಂಕಿಅಂಶಗಳು ರುಜುವಾತುಪಡಿಸುತ್ತವೆ.
ಚಿನ್ನ ಖರೀದಿಸಿ, ಮಾರಾಟ ಮಾಡುವ ಹೆಸರಿನಲ್ಲಿ ಕೆಲವು ಕಂಪನಿಗಳು ಇತ್ತೀಚಿನ ವರ್ಷಗಳಲ್ಲಿ ತಲೆ ಎತ್ತಿವೆ. ಅಲ್ಲದೆ, ಸಹಕಾರಿ ಬ್ಯಾಂಕ್‌ಗಳು, ಸೌಹಾರ್ದ ಸಹಕಾರಿ ಸಂಸ್ಥೆಗಳನ್ನು ಆರಂಭಿಸಿ ಗ್ರಾಹಕರಿಂದ ಠೇವಣಿ ಪಡೆದು ವಂಚಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ವಂಚನೆ ಹಗರಣ ಇದಕ್ಕೆ ತಾಜಾ ಉದಾಹರಣೆ. ರಾಜ್ಯದ ಉದ್ದಗಲಕ್ಕೆ ಹತ್ತಾರು ಸಹಕಾರಿ ಸಂಸ್ಥೆಗಳು ಗ್ರಾಹಕರನ್ನು ವಂಚಿಸಿರುವ ಆರೋಪ ಎದುರಿಸುತ್ತಿವೆ. ಕಂಪನಿಗಳು, ಸಹಕಾರಿ ಸಂಸ್ಥೆಗಳ ವಹಿವಾಟಿನ ಕುರಿತು ಉತ್ಪ್ರೇಕ್ಷಿತ ವರದಿಗಳನ್ನು, ಮಾಹಿತಿಯನ್ನು ಹಂಚಿಕೊಳ್ಳುವ ವಂಚಕರ ಬಣ್ಣದ ಮಾತಿಗೆ ಮರುಳಾಗುವ ಜನರು ಜೀವನಪರ್ಯಂತ ಕೂಡಿಟ್ಟ ದುಡಿಮೆಯ ಮೊತ್ತವನ್ನೆಲ್ಲಾ ಕಳೆದುಕೊಂಡು ಬೀದಿಗೆ ಬೀಳುತ್ತಿರುವುದು ಹೆಚ್ಚುತ್ತಿದೆ. ಐಎಂಎ ಮತ್ತು ಗುರು ರಾಘವೇಂದ್ರ ಸಹಕಾರ ಸಂಸ್ಥೆಯ ಪ್ರಕರಣಗಳಲ್ಲೇ ಸಾವಿರಾರು ಮಂದಿ ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ವಂಚನೆ ಪ್ರಕರಣಗಳನ್ನು ತಡೆಯಲೆಂದೇ ‘ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ಕೆಪಿಐಡಿ) ಕಾಯ್ದೆ’ಯು 2004ರಿಂದಲೂ ಜಾರಿಯಲ್ಲಿತ್ತು. ಕೇಂದ್ರ ಸರ್ಕಾರವು 2019ರಲ್ಲಿ ಜಾರಿಗೊಳಿಸಿದ ಹೂಡಿಕೆದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆಯ ಅಂಶಗಳನ್ನೂ ಸೇರಿಸಿಕೊಂಡು ಕೆಪಿಐಡಿ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲಾಗಿತ್ತು. ಆದರೆ, ಅಧಿಕ ಬಡ್ಡಿ, ಲಾಭ ವಿತರಣೆಯ ಆಮಿಷವೊಡ್ಡಿ ವಂಚಿಸುವವರಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ ಎಂಬುದು ಗೋಡೆಯ ಮೇಲಿನ ಬರಹದಷ್ಟೇ ನಿಚ್ಚಳವಾದ ಸತ್ಯ.

ಐಎಂಎ, ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣಗಳ ನಂತರ ಎಚ್ಚೆತ್ತ ರಾಜ್ಯ ಸರ್ಕಾರವು ಕೆಪಿಐಡಿ ಕಾಯ್ದೆಗೆ ಮತ್ತಷ್ಟು ತಿದ್ದುಪಡಿಗಳನ್ನು ತಂದಿದೆ. ಹೂಡಿಕೆದಾರರನ್ನು ವಂಚಿಸುವ ಕಂಪನಿಗಳು, ಸಂಸ್ಥೆಗಳ ಪ್ರವರ್ತಕರಿಂದ ನೌಕರರವರೆಗೆ ಎಲ್ಲರಿಗೂ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹ 50 ಕೋಟಿವರೆಗೂ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ (ತಿದ್ದುಪಡಿ) ಮಸೂದೆ–2020’ಕ್ಕೆ ವಿಧಾನಮಂಡಲದ ಎರಡೂ ಸದನಗಳು ಅಂಗೀಕಾರ ನೀಡಿವೆ. ರಾಜ್ಯಪಾಲರ ಅಂಕಿತ ಪಡೆದು ಕಾಯ್ದೆಯ ರೂಪದಲ್ಲಿ ಜಾರಿಗೆ ಬರುವುದಷ್ಟೇ ಬಾಕಿ ಉಳಿದಿದೆ. ವಂಚನೆ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ಹೂಡಿಕೆದಾರರ ಕ್ಲೇಮುಗಳ ವಿಲೇವಾರಿಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದಕ್ಕೂ ಮಸೂದೆ ಅವಕಾಶ ಕಲ್ಪಿಸಲಿದೆ. ಹೆಚ್ಚಿನ ಬಡ್ಡಿ ಅಥವಾ ಲಾಭಾಂಶದ ಆಮಿಷದಿಂದ ಪ್ರಲೋಭನೆಗೆ ಒಳಗಾಗಿ ಹೂಡಿಕೆ ಮಾಡುವವರು ಇರಿಸಿದ ನಂಬಿಕೆಯನ್ನೇ ಹುಸಿಗೊಳಿಸಿ ವಂಚಿಸುವವರಿಗೆ ಹೆಚ್ಚಿನ ಶಿಕ್ಷೆ ಮತ್ತು ದಂಡ ವಿಧಿಸಲು ತಿದ್ದುಪಡಿ ಮಸೂದೆಯಲ್ಲಿ ಅವಕಾಶ ಕಲ್ಪಿಸಿರುವುದು ಸ್ವಾಗತಾರ್ಹ. ಕಾಯ್ದೆಯನ್ನು ರೂಪಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅದರ ಅನುಷ್ಠಾನ. ಕಾಯ್ದೆಯ ಸಮರ್ಪಕ ಅನುಷ್ಠಾನ ಹಾಗೂ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವ ಕಂಪನಿಗಳು, ಸಂಸ್ಥೆಗಳ ಮೇಲೆ ನಿರಂತರ ನಿಗಾ ಇಡುವ ವ್ಯವಸ್ಥೆ ರೂಪಿಸಿದರೆ ಮಾತ್ರ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯ. ವಂಚಕ ಕಂಪನಿಗಳು ಆರಂಭವಾಗದಂತೆ ಕಠಿಣ ನಿರ್ಬಂಧಗಳನ್ನು ಹೇರುವ ಅಂಶವನ್ನೂ ಮಸೂದೆಯಲ್ಲಿ ಸೇರಿಸಬೇಕು ಎಂದು ಕೆಲವು ಶಾಸಕರು ಆಗ್ರಹಿಸಿದ್ದಾರೆ. ನಿಯಮಗಳನ್ನು ರೂಪಿಸುವ ಹಂತದಲ್ಲಿ ಸರ್ಕಾರ ಈ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯವಿದೆ. ಐಎಂಎ ಸೇರಿದಂತೆ ಹಲವು ಪ್ರಕರಣಗಳಲ್ಲಿ ಕೆಪಿಐಡಿ ಕಾಯ್ದೆಯನ್ನೇ ದುರ್ಬಳಕೆ ಮಾಡಿಕೊಂಡ ಅಧಿಕಾರಿಗಳು, ರಾಜಕಾರಣಿಗಳು ವಂಚಕ ಕಂಪನಿಗಳಿಂದ ಕೋಟ್ಯಂತರ ರೂಪಾಯಿ ಸುಲಿಗೆ ಮಾಡಿರುವ ಆರೋಪಗಳಿವೆ. ಹೊಸ ಕಾಯ್ದೆಯ ಅನುಷ್ಠಾನದಲ್ಲಿ ಅಂತಹ ಪ್ರಕರಣಗಳಿಗೆ ಅವಕಾಶ ಇರದಂತೆ ಎಚ್ಚರ ವಹಿಸುವ ಹೊಣೆಗಾರಿಕೆಯೂ ರಾಜ್ಯ ಸರ್ಕಾರದ ಮೇಲಿದೆ. ಹೂಡಿಕೆಯ ಹೆಸರಿನಲ್ಲಿ ನಡೆಯುವ ವಂಚನೆಗಳ ಕುರಿತು ಜನರನ್ನು ನಿರಂತರವಾಗಿ ಎಚ್ಚರಿಸಿ, ಜಾಗೃತಿ ಮೂಡಿಸುವ ಕಾರ್ಯವೂ ಜತೆಯಾಗಿಯೇ ನಡೆದಾಗ ಮಾತ್ರ ಕಾಯ್ದೆ ಬದಲಾವಣೆಯಿಂದ ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು