ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಅಂಗಾಂಗ ದಾನಿಗಳಿಗೆ ಗೌರವ, ಸರ್ಕಾರದ ನಡೆ ಸ್ವಾಗತಾರ್ಹ

Published 7 ನವೆಂಬರ್ 2023, 23:30 IST
Last Updated 7 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾನವೀಯ ನೆಲೆಯಲ್ಲಿ ಅಂಗಾಂಗ ದಾನ ಮಾಡಿ, ಇನ್ನೊಬ್ಬರ ಜೀವ ಉಳಿಸಲು ನೆರವಾಗುವ ವ್ಯಕ್ತಿಗಳು ಮತ್ತು ಅವರ ಕುಟುಂಬದವರನ್ನು ಗುರುತಿಸಿ, ಗೌರವಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ನಡೆ. ಅಂಗಾಂಗ ವೈಫಲ್ಯದಿಂದ ಗಣನೀಯ ಪ್ರಮಾಣದಲ್ಲಿ ರೋಗಿಗಳು ಬದುಕಿನ ಉದ್ದಕ್ಕೂ ನರಳುವುದನ್ನು ಕಾಣುತ್ತಿದ್ದೇವೆ. ಅತ್ಯಂತ ತುರ್ತಿನ ಸಮಯದಲ್ಲಿ ಕಸಿ ಮಾಡುವ ಸಲುವಾಗಿ ಅಂಗಾಂಗ ಸಿಗದೆ ರೋಗಿಗಳು ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ನಿತ್ಯವೂ ನಡೆಯುತ್ತಲೇ ಇವೆ. ಸಮಾಜದಲ್ಲಿ ಅಂಗಾಂಗ ದಾನದ ಅರಿವು ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ.

ಭಾರತದಲ್ಲಿ ಅಂಗಾಂಗ ದಾನಿಗಳ ಸಂಖ್ಯೆ ಪ್ರತಿ ಹತ್ತು ಲಕ್ಷಕ್ಕೆ ಒಂದರಷ್ಟೂ ಇಲ್ಲ. ಅದೇ ಪಶ್ಚಿಮದ ಹಲವು ರಾಷ್ಟ್ರಗಳಲ್ಲಿ ಈ ದಾನಿಗಳ ಸಂಖ್ಯೆ ಪ್ರತಿ ಹತ್ತು ಲಕ್ಷಕ್ಕೆ 40ಕ್ಕಿಂತ ಹೆಚ್ಚಿದೆ. ಕೇಂದ್ರ ಆರೋಗ್ಯ ಇಲಾಖೆಯ ಲೆಕ್ಕಾಚಾರದ ಪ್ರಕಾರ, 2014ರಲ್ಲಿ ಅಂಗಾಂಗ ದಾನಿಗಳ ಸಂಖ್ಯೆ (ಅಸುನೀಗಿದವರೂ ಸೇರಿ) 6,916 ಆಗಿದ್ದರೆ, 2023ರಲ್ಲಿ ಈ ಸಂಖ್ಯೆ 16 ಸಾವಿರಕ್ಕೆ ಏರಿದೆ. ಇದು ಹೇಳಿಕೊಳ್ಳುವಂತಹ ಪ್ರಗತಿಯೇನೂ ಅಲ್ಲ. ಪ್ರಾಣ ಕಳೆದುಕೊಂಡ ಒಬ್ಬ ವ್ಯಕ್ತಿಯಿಂದ ಪಡೆದ ಹೃದಯ, ಮೂತ್ರಪಿಂಡ, ಮೇದೋಜೀರಕ ಗ್ರಂಥಿ, ಶ್ವಾಸಕೋಶ, ಯಕೃತ್ತು, ಕರುಳು, ಮೂಳೆ ಮಜ್ಜೆಯಂತಹ ವಿವಿಧ ಅಂಗಗಳನ್ನು ಕಸಿ ಮಾಡಿ ಎಂಟರಿಂದ ಹತ್ತು ಜನರಿಗೆ ಜೀವ ತುಂಬಬಹುದು.

ಜೀವಂತ ದಾನಿಗಳಲ್ಲಿ ಮಹಿಳೆಯರ ಪ್ರಮಾಣವೇ ಅಧಿಕ. ಬೇಕಾದ ಜೀವವೊಂದು ಅಪಾಯ ಎದುರಿಸುತ್ತಿದೆ ಎಂದಾಗ, ಅದು ಪತ್ನಿ, ಸಹೋದರಿ, ಅಮ್ಮ ಯಾರೇ ಆಗಿರಲಿ, ಹೆಣ್ಣುಮಕ್ಕಳಂತೂ ನೆರವಿಗೆ ಸದಾ ಸಜ್ಜಾಗಿ ನಿಲ್ಲುತ್ತಾರೆ. ಜನಸಾಮಾನ್ಯರಿಗೆ ಮಾತ್ರವಲ್ಲ, ವೈದ್ಯವೃತ್ತಿಯಲ್ಲಿ ನಿರತರಾದವರು, ನೀತಿ ನಿರೂಪಕರಲ್ಲೂ ಅಂಗಾಂಗ ದಾನದ ಕುರಿತು ಸರಿಯಾದ ಅರಿವು ಇಲ್ಲ. ಹೀಗಾಗಿ, ಅಸುನೀಗಿದವರ ಅಂಗಾಂಗಗಳು ವ್ಯರ್ಥವಾಗಿ ಮಣ್ಣಾಗುತ್ತಿವೆ. ವಾರಸುದಾರರು ಇಲ್ಲದ ಅನಾಥ ಶವಗಳ ಅಂಗಾಂಗ ಪಡೆಯುವ ಸಂಬಂಧ ಕೂಡ ನಮ್ಮಲ್ಲಿ ಸಮರ್ಪಕ ನೀತಿಗಳಿಲ್ಲ. ಅವುಗಳನ್ನೂ ವ್ಯರ್ಥ ಮಾಡಲಾಗುತ್ತಿದೆ.

ಅಂಗಾಂಗ ದಾನಿಯ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ಮಾಡಲಾಗುವುದು ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಇತ್ತೀಚೆಗಷ್ಟೇ ಪ್ರಕಟಿಸಿದ್ದಾರೆ. ತಮಗೆ ಪ್ರೀತಿಪಾತ್ರರಾದ ವ್ಯಕ್ತಿಗಳ ಮೆದುಳು ನಿಷ್ಕ್ರಿಯವಾದಾಗ, ಅವರ ಅಂಗಾಂಗಗಳನ್ನು ತಮ್ಮ ನೋವು–ಸಂಕಟವನ್ನು ಮರೆತು ದಾನ ಮಾಡಿದ ಸಂಬಂಧಿಕರನ್ನು ಸಮಾಜ ಕೂಡ ಗೌರವದಿಂದ ಕಂಡಿದೆ. 2008ರಷ್ಟು ಹಿಂದೆಯೇ ದೇಶದಲ್ಲಿ ಮೊದಲ ಬಾರಿಗೆ ಅಂಗಾಂಗ ಕಸಿ ಪ್ರಾಧಿಕಾರ ರಚಿಸಿ ಮಾದರಿ ಹೆಜ್ಜೆ ಇರಿಸಿದ್ದ ತಮಿಳುನಾಡು, ಅಂಗಾಂಗ ದಾನದ ಅರಿವು ಮೂಡಿಸುವಲ್ಲಿಯೂ ಮುಂಚೂಣಿಯಲ್ಲಿ ನಿಂತಿದೆ.

ತಮಿಳುನಾಡಿಗೆ ಅಧ್ಯಯನ ತಂಡವೊಂದನ್ನು ಕಳುಹಿಸಿ, ರಾಜ್ಯದಲ್ಲೂ ಅದೇ ಮಾದರಿಯ ನೀತಿ ನಿರೂಪಣೆಗೆ ಕ್ರಮ ಜರುಗಿಸುವುದಾಗಿ ರಾಜ್ಯ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಅಂಗಾಂಗ ದಾನಿಗಳು ಮತ್ತು ಅವರ ಸಂಬಂಧಿಕರನ್ನು ಗೌರವಿಸುವ ಜತೆಗೆ, ಅಂಗಾಂಗ ದಾನದ ಕುರಿತು ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಧಾರ್ಮಿಕ ಮುಖಂಡರ ಮೂಲಕವೇ ಜಾಗೃತಿ ಮೂಡಿಸುವ ಮಾತುಗಳನ್ನೂ ಅವರು ಆಡಿದ್ದಾರೆ. ಅಂಗಾಂಗ ದಾನದ ಕುರಿತು ಜಾಗೃತಿ ಅಭಿಯಾನ ಆರಂಭಿಸುವುದಷ್ಟೇ ಅಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವ ಕೆಲಸವನ್ನೂ ಮಾಡಲಾಗುವುದು, ಅಂಗ ಕಸಿ ಅಗತ್ಯ ಇಲ್ಲದಂತೆ ಆರೋಗ್ಯಕರ ಜೀವನವಿಧಾನ ರೂಢಿಸಿಕೊಳ್ಳುವಂತೆಯೂ ಅರಿವು ಮೂಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಆದರೆ, ಯೋಚನೆಗಳನ್ನು ಹಂಚಿಕೊಂಡಷ್ಟು ಯೋಜನೆಗಳನ್ನು ಅನುಷ್ಠಾನ ಮಾಡುವುದು ಸುಲಭವಲ್ಲ. ಆರೋಗ್ಯ ಇಲಾಖೆಯು ಅಂಗಾಂಗ ದಾನದ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಅದೊಂದು ಸಹಜ ನಡೆ ಎನಿಸುವಷ್ಟರ ಮಟ್ಟಿಗೆ ಅಂಗಾಂಗ ದಾನದ ಪ್ರಮಾಣ ಹೆಚ್ಚುವಂತೆ ಆಗಬೇಕು. ಈ ಕುರಿತ ಎಲ್ಲ ಅಡೆತಡೆ ನಿವಾರಣೆಗೆ ಸರ್ಕಾರ ಪ್ರಬಲ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಆಗಬೇಕಾಗಿರುವ ಕೆಲಸಗಳ ಕುರಿತು ಮಾರ್ಗದರ್ಶನ ಮಾಡಲು ತಜ್ಞರ ಸಮಿತಿಯೊಂದನ್ನು ರಚಿಸಬೇಕು. ದಾನಿಗಳನ್ನು ಗೌರವಿಸುವ ಚಿಂತನೆ ಒಳ್ಳೆಯದು. ಆದರೆ ಅದರ ಜೊತೆಗೆ ಅಂಗಾಂಗ ದಾನಕ್ಕೆ ಪೂರಕವಾದ ಕ್ರಮಗಳ ಪರಿಣಾಮಕಾರಿ ಜಾರಿಯೂ ಅತ್ಯವಶ್ಯ ಎನ್ನುವುದನ್ನು ಕೂಡ ಸರ್ಕಾರ ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT