ಮಂಗಳವಾರ, ಮೇ 18, 2021
27 °C

ಸಂಪಾದಕೀಯ| ಎಲ್ಲರಿಗೂ ಕೋವಿಡ್‌ ಲಸಿಕೆ ಲಭ್ಯತೆಯನ್ನು ಸರ್ಕಾರ ಖಾತರಿಪಡಿಸಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19 ಪಿಡುಗು ದೇಶವನ್ನು ಮತ್ತೆ ವಿಷಮ ಸ್ಥಿತಿಗೆ ತಳ್ಳಿದೆ. ಈ ರೋಗಕ್ಕೆ ಪರಿಣಾಮಕಾರಿ ಔಷಧ ಇಲ್ಲ. ಆದರೆ, ಅತ್ಯಂತ ತ್ವರಿತವಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕೋವಿಡ್‌ನಿಂದ ಸುರಕ್ಷಿತವಾಗಿ ಇರಲು ಲಸಿಕೆ ಹಾಕಿಸಿಕೊಳ್ಳುವುದೇ ಈಗ ಲಭ್ಯ ಇರುವ ಅತ್ಯಂತ ಪರಿಣಾಮಕಾರಿ ವಿಧಾನ. ಈವರೆಗೆ ಲಸಿಕೆ ಎಲ್ಲರಿಗೂ ದೊರಕುತ್ತಿರಲಿಲ್ಲ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೇ 1ರಿಂದ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಇದೆ ಎಂದು ಸರ್ಕಾರ ಮಾರ್ಗಸೂಚಿ ರೂ‍ಪಿಸಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿ ಅದರಿಂದ ರಕ್ಷಿಸಿಕೊಳ್ಳುವುದು ಎಲ್ಲರ ಮೂಲಭೂತ ಹಕ್ಕು. ಲಸಿಕೆ ಬೇಕೆಂದು ಬಯಸುವ ಎಲ್ಲರಿಗೂ ಲಸಿಕೆ ನೀಡಲಾಗದು ಎಂದು ಇತ್ತೀಚೆಗಷ್ಟೇ ಹೇಳಿದ್ದ ಸರ್ಕಾರ, ಸಾರ್ವಜನಿಕರು ಮತ್ತು ಪರಿಣತರ ಒತ್ತಡಕ್ಕೆ ಮಣಿದು 18 ವರ್ಷ ಮೀರಿದ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಒದಗಿಸಿರುವುದು ಸ್ವಾಗತಾರ್ಹ ಕ್ರಮ. ಆದರೆ, ಅದಕ್ಕೆ ಬೇಕಾದ ಪೂರ್ವಸಿದ್ಧತೆ ಮಾಡಿಕೊಳ್ಳದೆ ಸರ್ಕಾರವು ವೈಫಲ್ಯ ಮೆರೆದಿದೆ. ಈ ಸಂಕಷ್ಟದ ಸನ್ನಿವೇಶದಲ್ಲಿ ಜೀವ ರಕ್ಷಣೆಗಾಗಿ ಇರುವ ಲಸಿಕೆಯ ವಿಚಾರದಲ್ಲಿ ಹತ್ತಾರು ಗೊಂದಲಗಳನ್ನು ಸೃಷ್ಟಿಸಿರುವುದು ಸರಿಯಲ್ಲ. ಜನವರಿ 16ರಿಂದ ಆರಂಭವಾದ ಲಸಿಕೆ ಅಭಿಯಾನ ಕುಂಟುತ್ತಲೇ ಸಾಗಿದೆ. ಗುರುವಾರದವರೆಗೆ 13.23 ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಇದೆ. ನಾಲ್ಕು ದಿನಗಳ ‘ಲಸಿಕೆ ಉತ್ಸವ’ ನಡೆಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಕರೆ ನೀಡಿದ್ದರು. ಆದರೆ, ಈ ಅವಧಿಯಲ್ಲಿ ಲಸಿಕೆ ನೀಡಿಕೆಗೆ ಇನ್ನಷ್ಟು ಹಿನ್ನಡೆ ಆಯಿತು ಎಂಬುದು ವರ್ತಮಾನದ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಕೋವಿಶೀಲ್ಡ್‌ ಲಸಿಕೆ ತಯಾರಿಸುವ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ತಿಂಗಳಿಗೆ 7 ಕೋಟಿಯಿಂದ 10 ಕೋಟಿ ಡೋಸ್ ಮತ್ತು ಕೋವ್ಯಾಕ್ಸಿನ್‌ ತಯಾರಿಸುವ ಹೈದರಾಬಾದ್‌ನ ಭಾರತ್‌ ಬಯೊಟೆಕ್‌ ಸಂಸ್ಥೆಯು 1.2 ಕೋಟಿ ಡೋಸ್‌ ಲಸಿಕೆ ತಯಾರಿಸುವ ಸಾಮರ್ಥ್ಯ ಹೊಂದಿವೆ. ಈ ಪ್ರಮಾಣದ ಉತ್ಪಾದನೆಯಲ್ಲಿ ಈ ವರ್ಷದ ಡಿಸೆಂಬರ್‌ ಕೊನೆಯ ಹೊತ್ತಿಗಷ್ಟೇ ಶೇ 70ರಷ್ಟು ಜನರಿಗೆ ಲಸಿಕೆ ಹಾಕಿಸಲು ಸಾಧ್ಯ. ರಷ್ಯಾದ ಸ್ಪುಟ್ನಿಕ್‌–ವಿ ಲಸಿಕೆಯ ಬಳಕೆಗೆ ಅನುಮೋದನೆ ನೀಡಲಾಗಿದೆ. ಆದರೆ, ಎಷ್ಟು ಸಂಖ್ಯೆಯಲ್ಲಿ ಇದನ್ನು ತಯಾರಿಸಲು ಸಾಧ್ಯ ಎಂಬುದು ತಿಳಿದಿಲ್ಲ. ಫೈಝರ್‌ ಮತ್ತು ಮೊಡೆರ್ನಾ ಲಸಿಕೆಗಳ ಬಳಕೆಗೆ ಅವಕಾಶ ಕೊಟ್ಟರೂ ಈ ಲಸಿಕೆ ತಯಾರಿಸುವ ಕಂಪನಿಗಳು ಈಗಾಗಲೇ ಮಾಡಿಕೊಂಡಿರುವ ಪೂರೈಕೆ ಒಪ್ಪಂದಗಳಿಂದಾಗಿ ಭಾರತದ ಬೇಡಿಕೆ ಪೂರೈಸಲು ಸಾಧ್ಯವಿಲ್ಲ. ಜನರಲ್ಲಿ ಹಿಂಜರಿಕೆ ಇದ್ದರೂ ಲಸಿಕೆ ಅಭಿಯಾನ ಕುಂಟುತ್ತಾ ಸಾಗಲು ಮುಖ್ಯ ಕಾರಣ ಲಸಿಕೆಯ ಕೊರತೆಯೇ.  

ಇಷ್ಟೊಂದು ಕೊರತೆಯ ನಡುವೆಯೂ ಬೇರೆ ದೇಶಗಳಿಗೆ ಲಸಿಕೆ ರಫ್ತು ಮಾಡಿದ್ದು ಸಮರ್ಪಕವಾದ ನಡೆ ಅಲ್ಲ. ಈಗ, ಲಸಿಕೆಯ ಕೊರತೆಯನ್ನು ನೀಗಿಸದೆಯೇ 18ರ ಮೇಲಿನ ಎಲ್ಲರಿಗೂ ಲಸಿಕೆ ಹಾಕಿಸಿಕೊಳ್ಳುವ ಅವಕಾಶ ಕೊಡಲಾಗಿದೆ. ಬುಧವಾರ ಒಂದೇ ದಿನ 3.15 ಲಕ್ಷ ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಜನರಲ್ಲಿ ಆತಂಕ ಹೆಚ್ಚಿದೆ. ಹೀಗಾಗಿ ಲಸಿಕೆಗೆ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ. ರಾಜ್ಯಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಖರೀದಿಸಲು ಅವಕಾಶ ಕೊಡಲಾಗಿದೆ. ಕೇಂದ್ರ ಸರ್ಕಾರವು ಈಗ ಕೋವಿಶೀಲ್ಡ್‌ ಲಸಿಕೆಯ ಪ್ರತೀ ಡೋಸ್‌ಗೆ ₹150 ಪಾವತಿಸುತ್ತಿದೆ. ರಾಜ್ಯಗಳಿಗೆ ₹400 ಮತ್ತು ಖಾಸಗಿ ಆಸ್ಪತ್ರೆಗಳಿಗೆ ₹600 ದರ ನಿಗದಿ ಮಾಡಲಾಗಿದೆ. ಈ ದರ ವ್ಯತ್ಯಾಸದ ಹಿಂದಿನ ತರ್ಕವೇನು ಎಂಬುದು ಅರ್ಥವಾಗುತ್ತಿಲ್ಲ. ₹600 ಕೊಟ್ಟು ಲಸಿಕೆ ಖರೀದಿಸಿದ ಖಾಸಗಿ ಆಸ್ಪತ್ರೆಗಳು ಅದನ್ನು ಜನರಿಗೆ ಯಾವ ಮೊತ್ತಕ್ಕೆ ನೀಡಬೇಕು ಎಂಬುದು ಸ್ಪಷ್ಟವಿಲ್ಲ. ಜಿಎಸ್‌ಟಿ ಸಂಗ್ರಹದಲ್ಲಿ ಕೊರತೆ, ಇತರ ಗೊಂದಲಗಳು ಮತ್ತು ಕೋವಿಡ್‌ನಿಂದಾದ ಆರ್ಥಿಕ ಹಿನ್ನಡೆಯಿಂದಾಗಿ ರಾಜ್ಯಗಳು ಲಸಿಕೆ ಖರೀದಿಸುವ ಅಥವಾ ಲಸಿಕೆಗೆ ಸಹಾಯಧನ ನೀಡುವ ಸ್ಥಿತಿಯಲ್ಲಿ ಇಲ್ಲ. ರಾಜ್ಯಗಳಿಗೆ ಕೇಂದ್ರವು ಆರ್ಥಿಕ ನೆರವು ನೀಡಲಿದೆಯೇ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿಲ್ಲ. ರಾಜ್ಯಗಳಿಗೆ ಕೇಂದ್ರವೇ ಲಸಿಕೆ ಹಂಚಿಕೆ ಮಾಡಲಿದೆಯೇ, ಇಲ್ಲ ತಯಾರಕರಿಂದ ರಾಜ್ಯಗಳೇ ಖರೀದಿಸಬೇಕೇ ಎಂಬುದೂ ಸ್ಪಷ್ಟವಿಲ್ಲ. ವೈದ್ಯಕೀಯ ಆಮ್ಲಜನಕ ಹಂಚಿಕೆಯಲ್ಲಿ ಭಾರಿ ತಾರತಮ್ಯ ಆಗುತ್ತಿದೆ ಎಂದು ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳು ಆರೋಪ ಮಾಡಿವೆ. ಲಸಿಕೆಯ ವಿಚಾರದಲ್ಲಿ ಇಂತಹ ಆರೋಪ ಕೇಳಿಬರದಂತೆ ಕೇಂದ್ರ ನೋಡಿಕೊಳ್ಳಬೇಕಿದೆ. 45 ವರ್ಷಕ್ಕಿಂತ ಒಳಗಿನವರು ಹಣ ಪಾವತಿಸಿಯೇ ಲಸಿಕೆ ಹಾಕಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ, ಜನಸಂಖ್ಯೆಯ ಒಂದು ವರ್ಗವು ಲಸಿಕೆಯಿಂದ ವಂಚಿತವಾಗಬಹುದು ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕಾದುದು ಸರ್ಕಾರದ ಹೊಣೆ. ಖಾಸಗಿ ಆಸ್ಪ‍ತ್ರೆಯಲ್ಲಿ ಲಸಿಕೆ ದೊರೆಯುವಂತಾದರೂ ಅದು ಹಣ, ಪ್ರಭಾವ ಇದ್ದವರಿಗಷ್ಟೇ ಸಿಗಬಹುದು. ಲಸಿಕೆಯಂತಹ ಜೀವರಕ್ಷಕ ಸಾಧನವು ಸಿಕ್ಕವರಿಗೆ ಸೀರುಂಡೆ ರೀತಿಯಲ್ಲಿ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು