ಭಾವನೆಗಳನ್ನು ಕೆರಳಿಸುವ ರಾಜಕಾರಣಕ್ಕೆ ಸೀಮಿತ

ಶುಕ್ರವಾರ, ಏಪ್ರಿಲ್ 19, 2019
30 °C

ಭಾವನೆಗಳನ್ನು ಕೆರಳಿಸುವ ರಾಜಕಾರಣಕ್ಕೆ ಸೀಮಿತ

Published:
Updated:
Prajavani

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆ ಎಂಬುದು ಬಹಳ ಮಹತ್ವದ ದಾಖಲೆ. ಪಕ್ಷವೊಂದು ತನ್ನ ಸೈದ್ಧಾಂತಿಕ ಒಲವುಗಳ ಚೌಕಟ್ಟಿನೊಳಗೆ ದೇಶದ ಆಡಳಿತವನ್ನು ಹೇಗೆ ಮುಂಗಾಣುತ್ತಿದೆ ಎಂಬುದನ್ನು ಈ ದಾಖಲೆ ವಿವರಿಸಬೇಕು. ಆದರೆ ಕಳೆದ ಒಂದೂವರೆ ದಶಕದ ಅವಧಿಯಲ್ಲ ಇದು ಕೇವಲ ಈಡೇರಿಸಲಾಗದ ಭರವಸೆಗಳ ಪಟ್ಟಿಯಾಗಿ ಬದಲಾಗಿಬಿಟ್ಟಿದೆ. ತಮ್ಮ ಮಟ್ಟಿಗೆ ಪ್ರಣಾಳಿಕೆ ಎಂಬುದು ಎಳ್ಳಷ್ಟೂ ಮುಖ್ಯವಲ್ಲ ಎಂಬುದನ್ನು ರಾಜಕೀಯ ಪಕ್ಷಗಳು ಭಿನ್ನ ಬಗೆಯಲ್ಲಿ ಹೇಳುತ್ತಲೇ ಬಂದಿವೆ. ಈ ವಿಚಾರದಲ್ಲಿ ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ.

2014ರ ಚುನಾವಣೆಯ ಸಂದರ್ಭದಲ್ಲಿ ಮೊದಲ ಹಂತದ ಮತದಾನಕ್ಕೆ ಒಂದು ದಿನವಿರುವಾಗ ಅದರ ಪ್ರಣಾಳಿಕೆ ಹೊರಬಂತು. ಇದು ತೀವ್ರವಾಗಿ ಟೀಕೆಗೆ ಗುರಿಯಾಯಿತು. ಪ್ರಣಾಳಿಕೆಗಳು ಕನಿಷ್ಠ 48 ಗಂಟೆಗಳ ಮುನ್ನವೇ ಬಿಡುಗಡೆಯಾಗಬೇಕು ಎಂಬ ಷರತ್ತನ್ನು ಚುನಾವಣಾ ಆಯೋಗ ವಿಧಿಸಿತು. ಪರಿಣಾಮವಾಗಿ ಮೊದಲ ಹಂತದ ಮತದಾನಕ್ಕೆ 72 ಗಂಟೆಗಳ ಮನ್ನವೇ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಹೊರತಂದಿದೆ. 2014ರಲ್ಲಿ ‘ಈ ಬಾರಿ ಮೋದಿ ಸರ್ಕಾರ’ ಎಂದು ಹೇಳುವ ಮೂಲಕ ‘ಏಕ ವ್ಯಕ್ತಿ ಪಂಥ’ದ ಹಾದಿಯನ್ನು ತುಳಿದಿತ್ತು. ಆದರೆ, ಇದರ ಜೊತೆಗೆ ‘ಒಳ್ಳೆಯ ದಿನ’ದ ಭರವಸೆಯಿತ್ತು.

ಕಳೆದ ಬಾರಿ ‘ಗುಜರಾತ್ ಮಾದರಿ ಅಭಿವೃದ್ಧಿ’ಯ ಹಿನ್ನೆಲೆಯೊಂದು ‘ಮೋದಿ ಪಂಥ’ಕ್ಕಿತ್ತು. ಈ ಬಾರಿ ಅವೆಲ್ಲವೂ ಇಲ್ಲವಾಗಿವೆ. ಆ ಸ್ಥಾನವನ್ನು ‘ರಾಷ್ಟ್ರೀಯ ಭದ್ರತೆ’ ಆವರಿಸಿಕೊಂಡಿದೆ. ಸ್ವಾತಂತ್ರ್ಯೋತ್ತರ ಭಾರತ ಭಾರಿ ಬಹುಮತದ ಸ್ಥಿರ ಸರ್ಕಾರಗಳಿಂದ ತೊಡಗಿ ಅಲ್ಪಮತದ ಅಸ್ಥಿರ ಸರ್ಕಾರಗಳ ತನಕದ ಹಲವು ಬಗೆಯ ನಾಯಕತ್ವವನ್ನು ಕಂಡಿದೆ. ಯಾವತ್ತೂ ಯಾರೂ ರಾಷ್ಟ್ರೀಯ ಭದ್ರತೆಯನ್ನು ಕಡೆಗಣಿಸಿದ್ದರು ಎಂದು ಹೇಳಲು ಸಾಧ್ಯವಿಲ್ಲ. ರಕ್ಷಣಾ ವೆಚ್ಚವು ಬಜೆಟ್‌ನಿಂದ ಬಜೆಟ್‌ಗೆ ಹೆಚ್ಚುತ್ತಾ ಹೋಗಿದೆಯೇ ಹೊರತು ಕಡಿಮೆಯಾಗಿಲ್ಲ. ಆದರೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ‘ರಾಷ್ಟ್ರೀಯ ಭದ್ರತೆ’ಗೆ ಹೆಚ್ಚು ಒತ್ತು ನೀಡಿರುವುದಕ್ಕೆ ಇರುವ ಅರ್ಥ ಒಂದೇ. ಅದು ಮತ್ತೆ ಭಾವನೆಗಳನ್ನು ಕೆರಳಿಸುವ ತನ್ನ ರಾಜಕಾರಣಕ್ಕೆ ಹಿಂದಿರುಗಿದೆ!

ಬಿಜೆಪಿಯ ಪ್ರಣಾಳಿಕೆಯಲ್ಲಿ ಚಿಂತನೆಯ ಮಟ್ಟದಲ್ಲಾದರೂ ಹೊಸತೆಂದು ಹೇಳಬಹುದಾದ ಯಾವ ಅಂಶವೂ ಇಲ್ಲ. ಮತ್ತೆ ಅದೇ 370ನೇ ವಿಧಿ, ರಾಮಮಂದಿರ ನಿರ್ಮಾಣ ಈ ಬಾರಿಯೂ ಸ್ಥಾನ ಪಡೆದುಕೊಂಡಿವೆ. ಭಾರತದ ಉನ್ನತ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಬಹುದಾದ ಯೋಜನೆಗಳ ಬದಲಿಗೆ ಮತ್ತಷ್ಟು ಐಐಟಿ, ಐಐಎಂ, ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜುಗಳಂಥ ಹಳೆಯ ಭರವಸೆಗಳೇ ತುಂಬಿಕೊಂಡಿವೆ. ಕಾಂಗ್ರೆಸ್ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸುವುದಕ್ಕೆ ಬೇಕಿರುವ ಹಣದ ಮೊತ್ತ ವಾರ್ಷಿಕ ಆಯವ್ಯಯಕ್ಕಿಂತ ಹೆಚ್ಚು ಎಂದು ಬಿಜೆಪಿ ಟೀಕಿಸಿತ್ತು. ತನ್ನ ಭರವಸೆಗಳ ಪಟ್ಟಿಯನ್ನು ಈಡೇರಿಸುವುದಕ್ಕೆ ಇನ್ನೂ ಹೆಚ್ಚು ಮೊತ್ತ ಬೇಕು ಎಂಬುದನ್ನು ಅದು ಮರೆತೇಬಿಟ್ಟಿದೆ. ಇವೆಲ್ಲವೂ ಸೂಚಿಸುತ್ತಿರುವುದು ಒಂದೇ ಅಂಶವನ್ನು.

ಪ್ರಣಾಳಿಕೆ ಎಂಬುದು ಬಿಜೆಪಿಯೂ ಸೇರಿದಂತೆ ಯಾವ ರಾಜಕೀಯ ಪಕ್ಷಕ್ಕೂ ಮುಖ್ಯವಾಗಿ ಉಳಿದಿಲ್ಲ. ಪ್ರಣಾಳಿಕೆಗೆ ಒಂದು ಗಾಂಭೀರ್ಯ ಬರಬೇಕಾದರೆ ಮತ್ತೆ ಚುನಾವಣಾ ಆಯೋಗದ ಮಧ್ಯಪ್ರವೇಶದ ಅಗತ್ಯವಿದೆ. ಚುನಾವಣೆಯ ಅಧಿಸೂಚನೆ ಹೊರಟ ಇಂತಿಷ್ಟು ದಿನಗಳ ಒಳಗೆ ಎಲ್ಲಾ ಪಕ್ಷಗಳೂ ಪ್ರಣಾಳಿಕೆಗಳನ್ನು ಹೊರತರಲೇಬೇಕು ಎಂಬ ನಿಯಮವೊಂದನ್ನು ರೂಪಿಸುವ ಅಗತ್ಯವಿದೆ. ಎಲ್ಲಾ ಪಕ್ಷಗಳ ಪ್ರಣಾಳಿಕೆ ಮತ್ತು ಭರವಸೆಗಳ ಕುರಿತು ಚುನಾವಣೆಗೆ ಮುನ್ನವೇ ವ್ಯಾಪಕ ಸಾರ್ವಜನಿಕ ಚರ್ಚೆ ನಡೆಯಲು ಇದು ಅಗತ್ಯ. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿದ್ದ ಅಸಂಭವನೀಯವಾದ ಭರವಸೆಗಳ ಕುರಿತು ತಿಳಿಯಲು ಸಾಧ್ಯವಾದದ್ದು ಹೀಗೆ ಸಮಯ ದೊರೆತಿದ್ದರಿಂದ ಎಂಬುದನ್ನು ನಾವು ಮರೆಯಬಾರದು. ಕೊನೆಯ ಕ್ಷಣದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ, ಅದರ ಕುರಿತಂತೆ ಪತ್ರಕರ್ತರ ಪ್ರಶ್ನೆಗಳನ್ನು ಕೇಳಿಸಿಕೊಳ್ಳಲೂ ಸಿದ್ಧವಿರಲಿಲ್ಲ. ಬರೀ ಮೋದಿಯವರ ಸುತ್ತಲೇ ತನ್ನ ಚುನಾವಣಾ ತಂತ್ರವನ್ನು ಹೆಣೆದಿರುವ ಬಿಜೆಪಿಗೆ ಇವೆಲ್ಲಾ ಮುಖ್ಯವೆನಿಸದೇ ಇರಬಹುದು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಇವೆಲ್ಲವೂ ಅಗತ್ಯವಾಗಿ ಬೇಕು.

ಬರಹ ಇಷ್ಟವಾಯಿತೆ?

 • 21

  Happy
 • 0

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !