ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಲೋಕಸಭಾ ಅಧಿವೇಶನ: ಸದನದಲ್ಲಿ ಕಾಣಿಸಿದ್ದು ಅಪನಂಬಿಕೆ, ವೈಷಮ್ಯ

Published 4 ಜುಲೈ 2024, 19:30 IST
Last Updated 4 ಜುಲೈ 2024, 19:30 IST
ಅಕ್ಷರ ಗಾತ್ರ

ಹದಿನೆಂಟನೇ ಲೋಕಸಭೆಯ ಮೊದಲ ಅಧಿವೇಶನವು ಲವಲವಿಕೆಯಿಂದಲೇ ಆರಂಭವಾಯಿತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಹುರುಪಿನಿಂದಲೇ ಇದ್ದಂತೆ ತೋರಿಸಿಕೊಂಡವು. ಆದರೂ ಕೆಲವೊಮ್ಮೆ ಎರಡೂ ಕಡೆಯವರು ಅತಿರೇಕಕ್ಕೆ ಇಳಿದದ್ದೂ ನಡೆಯಿತು. ಎರಡೂ ಕಡೆಯವರು ನಡೆದುಕೊಂಡ ರೀತಿಯಲ್ಲಿ ಗಾಢ ವ್ಯತ್ಯಾಸವನ್ನೂ ಸಾಮ್ಯತೆಯನ್ನೂ ಗುರುತಿಸಬಹುದು. ಲೋಕಸಭೆ ಚುನಾವಣಾ ಪ್ರಚಾರದ ಸಂದರ್ಭದ ಕಹಿ ನೆನಪುಗಳನ್ನು ಎರಡೂ ಕಡೆಯ ಕೆಲವರು ಸದನಕ್ಕೆ ಹೊತ್ತು ತಂದದ್ದೂ ಹೌದು. ಈ ಅಧಿವೇಶನದ ಪ್ರಮುಖ ಕಾರ್ಯಕ್ರಮವೇ ರಾಷ್ಟ್ರಪತಿಯವರ ಭಾಷಣ ಮತ್ತು ಅದಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆ. ರಾಜಕೀಯವಾಗಿ ತಿರುಗೇಟು ನೀಡಲು ಈ ಸಂದರ್ಭವನ್ನು ಆಡಳಿತ ಮತ್ತು ವಿರೋಧ ಪಕ್ಷಗಳು ಬಳಸಿಕೊಂಡಿವೆ. ತಮ್ಮ ಕುರಿತು, ತಮ್ಮ ಚಿಂತನೆಗಳು ಮತ್ತು ನೀತಿಗಳ ಕುರಿತು ಮಾತನಾಡುವುದಕ್ಕಿಂತ ಹೆಚ್ಚಾಗಿ ಇತರರ ಮೇಲೆ ದಾಳಿ ನಡೆಸುವುದಕ್ಕೇ ಹೆಚ್ಚು ಮಹತ್ವ ನೀಡಲಾಗಿದೆ. ಮಾತುಕತೆ, ಸಂವಾದ ನಡೆದೇ ಇಲ್ಲ. ಬದಲಿಗೆ ಕಾಣಿಸಿದ್ದು ಪರಸ್ಪರ ಅಪನಂಬಿಕೆ ಮತ್ತು ವೈಷಮ್ಯ. ಮುಂದಿನ ಅಧಿವೇಶನಕ್ಕೆ ಸಂಬಂಧಿಸಿ ಇದು ಒಳ್ಳೆಯ ಬೆಳವಣಿಗೆ ಅಲ್ಲ. 

ಈ ಬಾರಿ ಲೋಕಸಭೆಯಲ್ಲಿ ಎದ್ದು ಕಂಡ ಅಂಶವೆಂದರೆ, ಹೆಚ್ಚು ಬಲಯುತವಾದ ಹಾಗೂ ಅದರ ಪರಿಣಾಮವಾಗಿ ಹೊಸ ಆತ್ಮವಿಶ್ವಾಸದಿಂದ ಬೀಗುತ್ತಿರುವ ವಿರೋಧ ಪಕ್ಷ. ಹೊಸದಾಗಿ ವಿರೋಧ ಪಕ್ಷದ ನಾಯಕ ಸ್ಥಾನ ವಹಿಸಿಕೊಂಡ ರಾಹುಲ್‌ ಗಾಂಧಿ ಅವರ ಮೊದಲ ಭಾಷಣವು ಅದರ ವ್ಯಾಪ್ತಿ ಮತ್ತು ಪ್ರಸ್ತಾಪಿಸಿದ ವಿಚಾರಗಳ ಕಾರಣಕ್ಕೆ ಮೆಚ್ಚುಗೆ ಪಡೆದಿದೆ. ಅವರು ಸರ್ಕಾರಕ್ಕೆ ಕೆಲವು ಗಂಭೀರ ಪ್ರಶ್ನೆಗಳನ್ನು ಕೇಳಿದ್ದಾರೆ. ಆಡಳಿತ ಪಕ್ಷವು ರಾಹುಲ್‌ ಅವರ ಮಾತನ್ನು ಆಲಿಸಿದ್ದು ವಿಶೇಷ. ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರವು ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳನ್ನೇ ಗುರಿಯಾಗಿಸಿಕೊಂಡಿತ್ತು. ಆದರೆ, ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಅವರು ಉತ್ತರ ನೀಡಲಿಲ್ಲ. ಪ್ರಧಾನಿಯು ರಾಹುಲ್‌ ಅವರ ವೈಯಕ್ತಿಕ ನಿಂದೆಗೆ ಮುಂದಾಗಿದ್ದು ದುರದೃಷ್ಟಕರ. ಪ್ರಧಾನಿಯ ಭಾಷಣಕ್ಕೆ ಪದೇ ಪದೇ ಅಡ್ಡಿಪಡಿಸಿದ ವಿರೋಧ ಪಕ್ಷಗಳ ನಡವಳಿಕೆ ಶೋಭೆ ತರುವಂತಹುದಲ್ಲ. ಸಂಸತ್ತಿನ ಬದಲಾಗಿರುವ ಸಮೀಕರಣಕ್ಕೆ ಮನ್ನಣೆ ನೀಡಲು ತಾವು ಸಿದ್ಧವಿಲ್ಲ ಎಂಬುದನ್ನು ಮೋದಿಯವರು ತಮ್ಮ ಮಾತು ಮತ್ತು ನಡವಳಿಕೆ ಮೂಲಕ ತೋರಿಸಿಕೊಟ್ಟರು. ಸಂಪೂರ್ಣ ಮತ್ತು ಪ್ರಶ್ನಾತೀತ ಅಧಿಕಾರ ತಮಗಿದೆ ಎಂಬ ಈ ಹಿಂದಿನ ಭಾವನೆಯನ್ನೇ ಈ ಬಾರಿಯೂ ಅವರು ತೋರ್ಪಡಿಸಿದರು. ಆದರೆ, ಸುದೀರ್ಘ ಮೌನದ ನಂತರ ಮಣಿಪುರದ ಕುರಿತು ಅವರು ಕೊನೆಗೂ ಮಾತನಾಡಬೇಕಾಯಿತು ಎಂಬುದು ಗಮನಿಸಬೇಕಾದ ಅಂಶ. ಹೊಸ ಸನ್ನಿವೇಶವು ಅವರ ಮೇಲೆ ಒತ್ತಡ ಹೇರಿದೆ ಎಂಬುದಾಗಿ ಇದನ್ನು ಭಾವಿಸಬಹುದು.

ಪ್ರಜಾಸತ್ತಾತ್ಮಕವಾದ ಅತ್ಯುನ್ನತ ಮಟ್ಟದ ವಾಗ್ವಾದಕ್ಕೆ, ಹೇಳಿಕೆಗಳನ್ನು ದಾಖಲಿಸುವುದಕ್ಕೆ, ನಿಲುವುಗಳನ್ನು ವ್ಯಕ್ತಪಡಿಸುವುದಕ್ಕೆ, ನೀತಿಗಳ ಪರಿಶೀಲನೆಗೆ, ನಿರ್ದಿಷ್ಟ ವಿಚಾರಗಳ ಟೀಕೆಗೆ ಇರುವ ವೇದಿಕೆ ಸಂಸತ್ತು. ಸದನ ಮತ್ತು ಸಭಾಧ್ಯಕ್ಷರು ನಿಷ್ಪಕ್ಷಪಾತವಾಗಿ ಇದ್ದರೆ ಮಾತ್ರ ಇದು ಸಾಧ್ಯ. ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಮತ್ತು ರಾಜ್ಯಸಭೆಯ ಸಭಾಪತಿ ಜಗದೀಪ್‌ ಧನಕರ್‌ ಅವರು ಕಲಾಪವನ್ನು ನಡೆಸುವಾಗ ತಾವು ತಟಸ್ಥವಾಗಿರಬೇಕಾದ ಬಹುದೊಡ್ಡ ಹೊಣೆಗಾರಿಕೆ ತಮಗಿದೆ ಎಂಬುದನ್ನು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕು. ರಾಹುಲ್‌ ಅವರ ಭಾಷಣದ ಸ್ವಲ್ಪ ಭಾಗವನ್ನು ಕಡತದಿಂದ ತೆಗೆದುಹಾಕಿದ್ದು ಅನಗತ್ಯವಾಗಿತ್ತು ಮತ್ತು ಇದು ನ್ಯಾಯಯುತವಲ್ಲದ ನಡೆ. ತುರ್ತುಪರಿಸ್ಥಿತಿಯ ಕುರಿತು ನಿರ್ಣಯವೊಂದನ್ನು ಸ್ಪೀಕರ್‌ ಓದುವುದಕ್ಕೆ ಮುನ್ನ ವಿರೋಧ ಪಕ್ಷಗಳ ಜೊತೆ ಸಮಾಲೋಚನೆ ನಡೆಸಲಿಲ್ಲ. ಸಭಾಧ್ಯಕ್ಷ ಅಥವಾ ಸಭಾಪತಿಯು ಯಾವುದೇ ಒಂದು ಪಕ್ಷಕ್ಕೆ ಸೇರಿದವರಲ್ಲ, ಬದಲಿಗೆ ಇಡೀ ಸದನದ ಹೊಣೆಯನ್ನು ಹೊತ್ತವರು. ಹಾಗಾಗಿ, ಮಾತು, ನಿರ್ಧಾರ, ನಡವಳಿಕೆ ಮೂಲಕ ವಿರೋಧ ಪಕ್ಷಗಳ ವಿಶ್ವಾಸವನ್ನು ಅವರು ಸದಾ ಉಳಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT