ಮೌನ ಮುರಿದ ಮಹಿಳೆಯರು; ಮನೋಭಾವಗಳು ಬದಲಾಗಲಿ

7

ಮೌನ ಮುರಿದ ಮಹಿಳೆಯರು; ಮನೋಭಾವಗಳು ಬದಲಾಗಲಿ

Published:
Updated:

ಲೈಂಗಿಕ ಕಿರುಕುಳಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ #ಮೀ ಟೂ ಅಭಿಯಾನ, ಭಾರತದಲ್ಲಿ ಕಳೆದ ಕೆಲವು ದಿನಗಳಲ್ಲಿ ತೀವ್ರತೆ ಪಡೆದುಕೊಂಡಿದೆ. ಇತ್ತೀಚೆಗೆ ಬಾಲಿವುಡ್ ನಟಿ ತನುಶ್ರೀ ದತ್ತಾ ಅವರು ನಿರ್ದೇಶಕ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ನಂತರ ಇಂತಹದೇ ಹತ್ತು ಹಲವು ಅನುಭವಗಳ ದನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ರೀತಿಯಲ್ಲಿ ಸೇರ್ಪಡೆಯಾಗಿವೆ.

ವರ್ಷಾನುಗಟ್ಟಲೆ ಮೌನದಲ್ಲಿ ಹುದುಗಿಹೋಗಿದ್ದಂತಹ ಆಕ್ರೋಶ, ನೋವು ಹಾಗೂ ತಪ್ಪಿತಸ್ಥ  ಭಾವನೆಗಳ ವೈಯಕ್ತಿಕ ಕಥಾನಕಗಳು ಸೇರ್ಪಡೆಯಾಗುತ್ತಲೇ ಇವೆ. ಅನೇಕ ಹಿರಿಯ ಪತ್ರಕರ್ತರು, ಲೇಖಕರು, ಸಂಪಾದಕರು ಹಾಗೂ ಕಾಮಿಡಿಯನ್‌ಗಳ ವಿರುದ್ಧ ನಿರ್ದಿಷ್ಟ ಆರೋಪಗಳನ್ನು ಮಾಡಲಾಗಿದೆ. ಅಸಭ್ಯ ಮಾತುಗಳು, ಅನಗತ್ಯ ಸ್ಪರ್ಶಗಳು, ಲೈಂಗಿಕ ಸಂಬಂಧಗಳಿಗೆ ಕೋರಿಕೆ, ಅಶ್ಲೀಲ ವಿಚಾರಗಳು, ಚಿತ್ರಗಳ ಹಂಚಿಕೆ– ಹೀಗೆ ತಾವು ಅನುಭವಿಸಿದ ಕಿರುಕುಳಗಳಿಗೆ ಚಿತ್ರರಂಗದ ತಾರೆಯರು, ಪತ್ರಕರ್ತೆಯರು ಸೇರಿದಂತೆ ಅನೇಕ ಮಹಿಳೆಯರು ಆರೋಪಗಳನ್ನು ಹೊರಿಸಿದ್ದಾರೆ.

ಪತ್ರಿಕೆಗಳ ಸಂಪಾದಕರಾಗಿದ್ದಂತಹ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಅನೇಕ ಮಹಿಳೆಯರು ಆರೋಪಗಳನ್ನು ಹೊರಿಸಿದ್ದಾರೆ. ‘ಮೀ ಟೂ’ ಅಭಿಯಾನಕ್ಕೆ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ಆರೋಪ ಕೇಳಿಬಂದಿರುವ ಒಬ್ಬೊಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಅದರಲ್ಲೂ ವಿಶೇಷವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ವಿಚಾರದಲ್ಲಿ ಮೌನ ವಹಿಸಿದೆ.

ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆ ಸಚಿವ ಎಂ.ಜೆ. ಅಕ್ಬರ್ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಪಡಿಸಿದೆ. ಏಳು ಮಂದಿ ಪತ್ರಕರ್ತೆಯರು ಆರೋಪಗಳನ್ನು ಹೊರಿಸಿದ್ದರೂ ಸಚಿವ ಅಕ್ಬರ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಲೈಂಗಿಕ ದೌರ್ಜನ್ಯಗಳ ವಿರುದ್ಧ ನಮ್ಮಲ್ಲಿ ಬಲವಾದ ಕಾನೂನುಗಳಿವೆ. ಆದರೆ ಈ ಕಾನೂನುಗಳು ಲೆಕ್ಕಕ್ಕೇ ಇಲ್ಲ ಎಂಬ ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಿವೆ ಎಂಬುದು ವಿಷಾದನೀಯ.

ಅಧಿಕಾರ ಶ್ರೇಣೀಕರಣದ ವ್ಯವಸ್ಥೆ ಇರುವ ಸ್ಥಳಗಳು ಅಥವಾ ದುಡಿಯುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳಗಳ ವಿರುದ್ಧದ ಹೋರಾಟ ಮಹಿಳೆಗೆ ಈವರೆಗೆ ಏಕಾಂಗಿ ಹೋರಾಟವಾಗಿತ್ತು. ಆದರೆ ಈ ಅಭಿಯಾನ, ಮಹಿಳೆಗೆ ಸಂಘಟಿತ ಬಲ ನೀಡಿರುವುದು ವಿಶೇಷವಾದದ್ದು. ದುಡಿಯುವ ಸ್ಥಳಗಳಲ್ಲಿ ತನ್ನ ಘನತೆಯನ್ನು ಕಾಯ್ದುಕೊಳ್ಳುವ ಹೋರಾಟದಲ್ಲಿ ಮಹಿಳೆಗೆ ಈ ಅಭಿಯಾನ ದೊಡ್ಡ ತಿರುವನ್ನೇ ನೀಡಿದೆ.

ಮಹಿಳೆಯನ್ನು ಶೋಷಿಸಲು ಅಧಿಕಾರ ಸ್ಥಾನಗಳ ದುರ್ಬಳಕೆ, ಹೆಣ್ಣಿನ ಕುರಿತಾದ ಪಿತೃಪ್ರಧಾನ ಸಂಸ್ಕೃತಿಯ ಎಳೆಗಳನ್ನು ಢಾಳಾಗಿ ಬಿಂಬಿಸುತ್ತವೆ. ಸಮಾನ ಹಕ್ಕುಗಳುಳ್ಳ ಸಹೋದ್ಯೋಗಿಯಾಗಿ, ಸ್ನೇಹಿತೆಯಾಗಿ ಪರಿಗಣಿಸದೆ, ಅಧಿಕಾರ ಸ್ಥಾನ ಬಲದಿಂದ ದೌರ್ಜನ್ಯ ನಡೆಸಿರುವ ಕಥಾನಕಗಳು ಸಮಾಜದ ಪ್ರಜ್ಞೆಯನ್ನು ಕಲಕುವಂತಹವು. ತಲ್ಲಣ ಉಂಟುಮಾಡುವಂತಹವು. ಈ ಅಭಿಯಾನ, ಜನರ ಬೆಂಬಲ ಗಳಿಸಿಕೊಂಡಿದೆ. ಅನೇಕ ವಕೀಲರು ಸಂತ್ರಸ್ತೆಯರಿಗೆ ನೆರವಾಗಲು ಮುಂದೆ ಬಂದಿದ್ದಾರೆ ಎಂಬುದು ವಿಶೇಷ.

ಲೈಂಗಿಕ ದೌರ್ಜನ್ಯ, ವಿಶ್ವದ ಎಲ್ಲೆಡೆ ಪಸರಿಸಿಕೊಂಡಿರುವ ಮಹಿಳಾ ಅನುಭವವಾಗಿದೆ. ಆದರೆ ನ್ಯಾಯ ಸಿಗುವುದು ಕಷ್ಟ. ಈಗ ಈ ಅಭಿಯಾನ ಅಥವಾ ಆಂದೋಲನ, ಮಹಿಳೆಯರ ಅನುಭವಗಳ ಸಾರ್ವತ್ರೀಕರಣಕ್ಕೆ ಸಂಕೇತ. ವೈಯಕ್ತಿಕವಾದದ್ದು ರಾಜಕೀಯವಾಗುವ ಬಗೆ ಇದು. ಸಮಸ್ಯೆಯ ವ್ಯಾಪ್ತಿಯನ್ನು ಈ ಅಭಿಯಾನ ಬಯಲು ಮಾಡಿದೆ.

ಕಳೆದ ವರ್ಷ ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್‍ಸ್ಟೀನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಸಾಲುಸಾಲಾಗಿ ಬಂದವು. ಆ ನಂತರ, ಕ್ಯಾಲಿಫೋರ್ನಿಯಾ ಮೂಲದ ಭಾರತೀಯ ವಕೀಲೆ ರಾಯಾ ಸರ್ಕಾರ್ ಅವರು ಶೈಕ್ಷಣಿಕ ವಲಯದ ಅನೇಕ ಮಂದಿಯನ್ನು ಲೈಂಗಿಕ ಕಿರುಕುಳ ನೀಡುವ ಆರೋಪಿಗಳಾಗಿ ಹೆಸರಿಸಿ ಅಂತರ್ಜಾಲದಲ್ಲಿ ಪಟ್ಟಿ ಪ್ರಕಟಿಸಿದ್ದರು. ಹೊಸ ಅಂದೋಲನಕ್ಕೆ ಚಾಲನೆ ನೀಡಿದ ಈ ದನಿಗಳು ಒಂದೇ ದಿನದಲ್ಲಿ ಮೂಡಿದ್ದಲ್ಲ.

ಅನುಭವಗಳನ್ನು ಅನಾವರಣಗೊಳಿಸುವಂತಹ ಸಾಹಸ ಪ್ರದರ್ಶಿಸಿದ ಈ ವೈಯಕ್ತಿಕ ನಡೆಗಳು ಹುಟ್ಟುಹಾಕಿದ ಈ ಅಂದೋಲನ ಅಭೂತಪೂರ್ವ. ಭಾರತೀಯ ಸಮಾಜ ಹಾಗೂ ಸಾಂಸ್ಥಿಕ ವ್ಯವಸ್ಥೆಗಳು ಇದನ್ನು ಕೇಳಿಸಿಕೊಳ್ಳಬೇಕು. ಸಹಜ ನ್ಯಾಯದಾನದ ವಿಧಾನದಲ್ಲಿ ಅನುಸರಿಸಬೇಕಾದ ಯಾವ ಪ್ರಕ್ರಿಯೆಯನ್ನೂ ಅನುಸರಿಸದೆ ಆರೋಪಿಗಳ ಹೆಸರುಗಳನ್ನು ಪ್ರಕಟಿಸುವ ವಿಧಾನ ಟೀಕೆಗಳಿಗೂ ಒಳಗಾಗಿದೆ. ಹೀಗಾಗಿ ಆರೋಪಗಳನ್ನು ಮಾಡುವ ಪ್ರಕ್ರಿಯೆ ತೃಣೀಕರಣಕ್ಕೆ ಒಳಗಾಗದಂತೆ ಎಚ್ಚರ ಕಾಯ್ದುಕೊಳ್ಳುವುದೂ ಮುಖ್ಯ.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !