ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌ಗೆ ಮಾರಕವಾದ ಜಗಳ

Last Updated 30 ನವೆಂಬರ್ 2018, 20:32 IST
ಅಕ್ಷರ ಗಾತ್ರ

ಕ್ರಿಕೆಟ್ ಆಟವನ್ನು ಆರಾಧಿಸುವವರ ದೇಶ ಇದು. ಆದರೆ ಇಂದಿಗೂ ಪುರುಷರ ಕ್ರಿಕೆಟ್‌ನ ಮಟ್ಟಕ್ಕೆ ಮಹಿಳಾ ಕ್ರಿಕೆಟ್ ಬೆಳೆದಿಲ್ಲ. ಪುರುಷ ಆಟಗಾರರಿಗೆ ಇರುವಷ್ಟು ಜನಪ್ರಿಯತೆ, ಶ್ರೀಮಂತಿಕೆ ಮಹಿಳೆಯರ ಕ್ರಿಕೆಟ್‌ಗೆ ಇಲ್ಲ. ಇತ್ತೀಚಿನ ಕೆಲವು ವರ್ಷಗಳಲ್ಲಿ ಒಂದಷ್ಟು ಒಳ್ಳೆಯ ಸಾಧನೆಗಳ ಮೂಲಕ ನಾರಿಯರ ಕ್ರಿಕೆಟ್‌ ಕೂಡ ಬೆಳವಣಿಗೆಯ ಪಥದಲ್ಲಿದೆ. ಆದರೆ ಇದೀಗ ಭಾರತ ಮಹಿಳಾ ಕ್ರಿಕೆಟ್‌ ತಂಡದಲ್ಲಿ ತಲೆ ಎತ್ತಿರುವ ವಿವಾದವು ಕ್ರೀಡೆಗೆ ಮಾರಕವಾಗುತ್ತಿದೆ.

ಎರಡು ದಶಕಗಳಿಂದ ಭಾರತದ ಮಹಿಳಾ ಕ್ರಿಕೆಟ್‌ಗೆ ಮಹತ್ವದ ಕಾಣಿಕೆ ನೀಡುತ್ತಿರುವ ಮಿಥಾಲಿರಾಜ್ ಅವರೇ ಈಗ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಈಚೆಗೆ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಡಿದ ಹನ್ನೊಂದು ಆಟಗಾರ್ತಿಯರ ಬಳಗದಿಂದ ಮಿಥಾಲಿ ಅವರನ್ನು ಕೈಬಿಡಲಾಗಿತ್ತು. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಬಳಗವು ಇಂಗ್ಲೆಂಡ್‌ ಎದುರು ಸೋತಿತ್ತು. ಟೂರ್ನಿಯ ಗುಂಪು ಹಂತದಲ್ಲಿ ತಂಡವು ಸತತ ಜಯ ಸಾಧಿಸಿತ್ತು. ಮೊದಲ ಪಂದ್ಯದಲ್ಲಿ ಮಿಥಾಲಿ ಆಡಿರಲಿಲ್ಲ. ಆದರೆ ಎರಡು ಮತ್ತು ಮೂರನೇ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದರು. ಸ್ಟ್ರೈಕ್‌ರೇಟ್‌ ಕೂಡ ಚೆನ್ನಾಗಿತ್ತು. ಆದರೂ ಸೆಮಿಫೈನಲ್‌ನಲ್ಲಿ ಅವರು ಬೆಂಚ್‌ನಲ್ಲಿ ಕೂರಬೇಕಾಯಿತು.

ಪಂದ್ಯದ ನಂತರ ತಂಡದ ಈ ನಡೆಯನ್ನು ಟೀಕಿಸಿದ ಮಿಥಾಲಿಯವರ ಬ್ರ್ಯಾಂಡ್ ಮ್ಯಾನೇಜರ್ ಅನೀಶಾ ಗುಪ್ತಾ ಅವರ ಟ್ವೀಟ್ ಚರ್ಚೆಗಳಿಗೆ ನಾಂದಿ ಹಾಡಿತು. ಕ್ರಿಕೆಟ್ ಆಡಳಿತ ಸಮಿತಿಯ (ಸಿಒಎ) ಸದಸ್ಯೆ ಡಯಾನಾ ಎಡುಲ್ಜಿ ಅವರು ‘ಆಯ್ಕೆಯನ್ನು ಯಾರೂ ಪ್ರಶ್ನಿಸುವಂತಿಲ್ಲ’ ಎಂದು ಹೇಳಿದ್ದು ಮಿಥಾಲಿಯವರ ಆಕ್ರೋಶಕ್ಕೆ ಕಾರಣವಾಯಿತು. ಬಿಸಿಸಿಐಗೆ ಅವರು ಬರೆದ ಪತ್ರದಲ್ಲಿ ಕೋಚ್ ರಮೇಶ್ ಪೊವಾರ್ ವಿರುದ್ಧ ಕಿಡಿಕಾರಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಪೊವಾರ್ ಕೂಡ ಮಿಥಾಲಿ ಮೇಲೆ ಅನೇಕ ಆರೋಪಗಳನ್ನು ಮಾಡಿದ್ದಾರೆ. ಇದೀಗ ಮಿಥಾಲಿಯವರು ‘ನನ್ನ ಜೀವನದ ಕರಾಳ ದಿನ ಇದು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಎರಡು ದಶಕಗಳ ಹಿಂದೆ ಅಚ್ಚುಮೆಚ್ಚಿನ ಭರತನಾಟ್ಯವನ್ನು ಬಿಟ್ಟು ಕ್ರಿಕೆಟ್‌ಗೆ ಕಾಲಿಟ್ಟ ಹೈದರಾಬಾದಿನ ಮಿಥಾಲಿ ದೊರೈ ರಾಜ್ ಅವರ ಹೆಸರಿನಲ್ಲಿ ಹತ್ತಾರು ವಿಶ್ವದಾಖಲೆಗಳು ಇವೆ. 35 ವರ್ಷದ ಮಿಥಾಲಿ ಅವರು ಈಗ ವೃತ್ತಿಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಬಹುಶಃ ಇದು ಅವರಿಗೆ ಕೊನೆಯ ವಿಶ್ವಕಪ್ ಟೂರ್ನಿ ಕೂಡ. ಆದ್ದರಿಂದ ನಾಲ್ಕರ ಘಟ್ಟದಲ್ಲಿ ಆಡಬೇಕೆಂಬ ಅವರ ಹಂಬಲ ಸಹಜವೇ ಆಗಿತ್ತು. ಅಂತಹ ಆಟಗಾರ್ತಿ ಈ ರೀತಿಯ ಆರೋಪಗಳನ್ನು ನಿರಾಧಾರವಾಗಿ ಮಾಡಲು ಸಾಧ್ಯವೇ? ಪೊವಾರ್ ಕೂಡ ಅಂತರರಾಷ್ಟ್ರೀಯ ಆಟಗಾರ. ಅವರ ಹೇಳಿಕೆಗಳ ಸತ್ಯಾಸತ್ಯತೆಯೂ ಬಯಲಾಗಬೇಕು. ನಿಷ್ಪಕ್ಷಪಾತವಾದ ತನಿಖೆ ನಡೆಯಬೇಕು. ಇಷ್ಟೆಲ್ಲ ಕೆಸರೆರಚಾಟ ನಡೆಯುವ ಹೊತ್ತಿನಲ್ಲಿ ಬಿಸಿಸಿಐನ ಉನ್ನತ ಅಧಿಕಾರಿಗಳು ಮಗುಮ್ಮಾಗಿದ್ದಾರೆ.

ಯಥಾಪ್ರಕಾರ ಮಹಿಳಾ ಕ್ರಿಕೆಟ್‌ ಬಗ್ಗೆ ‘ನಿರ್ಲಕ್ಷ್ಯ’ ವಹಿಸಿದ್ದಾರೆ. ಸೆಮಿಫೈನಲ್‌ ಸೋಲಿನ ಬಗ್ಗೆ ಆತ್ಮಾವಲೋಕನ ನಡೆಯುವ ಬದಲು ವಿವಾದವೇ ಮೇಲುಗೈ ಸಾಧಿಸಿದೆ. ಇದರಿಂದ ಮಹಿಳಾ ಕ್ರಿಕೆಟ್‌ನ ಬೆಳವಣಿಗೆಯು ಹತ್ತು ಪಟ್ಟು ಹಿಂದೆ ಸರಿದಿದೆ ಎನ್ನಲಡ್ಡಿಯಿಲ್ಲ. ಮಹಿಳಾ ತಂಡದ ಕೋಚ್‌ಗಳ ವಿವಾದ ಹೊಸದೇನಲ್ಲ. ಹಿಂದೆ ತುಷಾರ ಅರೋತೆ ಕೂಡ ವಿವಾದಕ್ಕೊಳಗಾಗಿದ್ದರು. ಆದ್ದರಿಂದ ಕೋಚ್ ಮತ್ತು ಆಯ್ಕೆ ಸಮಿತಿಯ ಸದಸ್ಯರನ್ನು ನೇಮಕ ಮಾಡುವಾಗ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಬೇಕು. ಇಲ್ಲದಿದ್ದರೆ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತವೆ. ದೇಶ ಮತ್ತು ಕ್ರಿಕೆಟ್‌ನ ಘನತೆ ಮಣ್ಣುಪಾಲಾಗುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT