ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಆಮ್ಲಜನಕ ಪೂರೈಕೆಯಲ್ಲಿ ನಿರ್ಲಕ್ಷ್ಯ ಕೇಂದ್ರ ಸರ್ಕಾರದ ನಡೆ ಅಕ್ಷಮ್ಯ

Last Updated 5 ಮೇ 2021, 19:39 IST
ಅಕ್ಷರ ಗಾತ್ರ

ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎನ್ನುವುದು ಮೇಲ್ನೋಟಕ್ಕೇ ಗೋಚರಿಸುತ್ತಿದೆ. ಈಗ ಸೋಂಕಿತರ ತುರ್ತುಚಿಕಿತ್ಸೆಗೆ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡುವಲ್ಲಿಯೂ ಎಡವಿರುವುದು ಅಕ್ಷಮ್ಯ. ಸೋಂಕು ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ರಾಜ್ಯಗಳಿಗೆ ಅಗತ್ಯ ಪ್ರಮಾಣದಲ್ಲಿ ಸಕಾಲಕ್ಕೆ ಆಮ್ಲಜನಕ ಪೂರೈಸುವಲ್ಲಿ ಕೇಂದ್ರದ ನಿರ್ಲಕ್ಷ್ಯ ಮತ್ತು ಮಲತಾಯಿ ಧೋರಣೆ ಎದ್ದು ಕಾಣುತ್ತಿದೆ. ಕರ್ನಾಟಕದ ಹಲವು ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ತೀವ್ರವಾಗಿದೆ.

ಆಮ್ಲಜನಕದ ಕೊರತೆಯಿಂದ ರೋಗಿಗಳು ಸಾಲುಸಾಲಾಗಿ ಸಾಯುತ್ತಿರುವ ವರದಿಗಳು ಪ್ರತಿದಿನವೂ ಬರುತ್ತಿವೆ. ಆಮ್ಲಜನಕದ ರಾಜ್ಯವಾರು ವಿತರಣೆಯ ನಿಯಂತ್ರಣವನ್ನು ಕೈಯಲ್ಲಿ ಇಟ್ಟುಕೊಂಡಿರುವ ಕೇಂದ್ರ ಸರ್ಕಾರವು ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿರುವಂತೆ ಕಾಣಿಸುತ್ತಿದೆ. ಕರ್ನಾಟಕದ ಪ್ರಕರಣವನ್ನೇ ಗಮನಿಸಿ. ರಾಜ್ಯಕ್ಕೆ 1,792 ಟನ್‍ಗಳಷ್ಟು ಆಮ್ಲಜನಕದ ಅಗತ್ಯವಿದೆ. ಕೇಂದ್ರವು ರಾಜ್ಯಕ್ಕೆ ನೀಡುತ್ತಿರುವ ಆಮ್ಲಜನಕದ ಪಾಲು 865 ಟನ್ ಮಾತ್ರ. ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳ ಜೊತೆಗೆ ಆಮ್ಲಜನಕ ನಿರ್ವಹಣೆಗೆ ಸಂಬಂಧಿಸಿ ಕಳೆದ ತಿಂಗಳು ವಿಡಿಯೊ ಸಂವಾದ ನಡೆಸಿದ್ದರು.

ರಾಜ್ಯದಲ್ಲಿ ಆಮ್ಲಜನಕದ ತೀವ್ರ ಕೊರತೆಯಿದೆ ಎನ್ನುವುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿಯವರ ಗಮನಕ್ಕೆ ತಂದಿದ್ದರು. ಆಮ್ಲಜನಕದ ಪೂರೈಕೆ ಹೆಚ್ಚಿಸುವಂತೆ ಆಗ್ರಹಪೂರ್ವಕ ಮನವಿ ಮಾಡಿದ್ದರು. ಆದರೆ ಬೇಡಿಕೆ ಸಲ್ಲಿಸಿ ಎರಡು ವಾರ ಕಳೆದಿದ್ದರೂ ಕೇಂದ್ರ ಸರ್ಕಾರವು ರಾಜ್ಯದ ಆಮ್ಲಜನಕ ಪೂರೈಕೆಯ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಂಡಿಲ್ಲ. ಏಪ್ರಿಲ್ 30ರಂದು ರಾಜ್ಯ ಸರ್ಕಾರವು ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದು 1,162 ಟನ್ ಆಮ್ಲಜನಕದ ಅಗತ್ಯವಿದೆ ಎಂದು ಬೇಡಿಕೆ ಮಂಡಿಸಿದೆ. ಅದಕ್ಕೂ ಉತ್ತರವಿಲ್ಲ.

ಪ್ರತಿನಿತ್ಯ 927 ಟನ್ ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿರುವ ಕರ್ನಾಟಕದಲ್ಲಿ ಈಗ ಆಮ್ಲಜನಕದ ಕೊರತೆಯಿಂದ ಸಾವಿಗೀಡಾಗುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ 24 ರೋಗಿಗಳು ಒಂದೇ ದಿನ ಪ್ರಾಣ ಕಳೆದುಕೊಂಡರೆ, ಕಲಬುರ್ಗಿ ಜಿಲ್ಲೆಯಲ್ಲಿ ನಾಲ್ವರು, ವಿಜಯಪುರದಲ್ಲಿ ಮೂವರು ರೋಗಿಗಳು ಪ್ರಾಣ ಬಿಟ್ಟಿದ್ದಾರೆ; ಈ ಎಲ್ಲ ಸಾವುಗಳಿಗೆ ಆಮ್ಲಜನಕದ ಕೊರತೆಯೇ ಕಾರಣ ಎಂಬ ದೂರುಗಳು ಇವೆ. ಹಾಗಾಗಿ ಈ ಸಾವುಗಳಿಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಮತ್ತು ಮಲತಾಯಿ ಧೋರಣೆಯೇ ಕಾರಣ ಎನ್ನದೆ ನಿರ್ವಾಹವಿಲ್ಲ.

ರಾಜ್ಯದಲ್ಲೇ 1,043 ಟನ್ ಆಮ್ಲಜನಕ ಉತ್ಪಾದನೆ ಆಗುತ್ತಿದ್ದರೂ ಅದರಲ್ಲಿ ಒಂದು ಪಾಲನ್ನು ಕೇಂದ್ರ ಸರ್ಕಾರವು ನೆರೆಯ ರಾಜ್ಯಗಳಿಗೆ ವಿತರಿಸಿ, ಕರ್ನಾಟಕಕ್ಕೆ ದೂರದ ವಿಶಾಖಪಟ್ಟಣದಿಂದ ಪೂರೈಸುವಂತಹ ಅಸಂಬದ್ಧವೂ ನಡೆಯುತ್ತಿದೆ. ನೋಟು ಅಮಾನ್ಯೀಕರಣದಂತಹ ನಿರ್ಧಾರವನ್ನು ರಾತ್ರೋರಾತ್ರಿ ಕೈಗೊಳ್ಳುವ ಸರ್ಕಾರಕ್ಕೆ ಆಡಳಿತಾತ್ಮಕವಾದ ಸಣ್ಣದೊಂದು ನಿರ್ಧಾರದ ಮೂಲಕ ಈ ಅಸಂಗತ ವ್ಯವಸ್ಥೆಯನ್ನು ಸರಿಪಡಿಸಲು ಆಗದೇ?

ಪರಿಸ್ಥಿತಿಯು ಕೈಮೀರಿದೆ ಎಂಬುದನ್ನು ಅರಿತ ಕರ್ನಾಟಕ ಹೈಕೋರ್ಟ್‌, ಆಮ್ಲಜನಕ ಕೊರತೆಗೆ ಸಂಬಂಧಿಸಿ ಸಲ್ಲಿಕೆಯಾಗಿರುವ 19 ಅರ್ಜಿಗಳನ್ನು ಮುಂಚಿತವಾಗಿಯೇ ವಿಚಾರಣೆಗೆ ಎತ್ತಿಕೊಂಡಿದೆ. ಆದರೆ ಹೈಕೋರ್ಟ್ ಮುಂದೆ ವಾದ ಮಂಡಿಸಿರುವ ಕೇಂದ್ರ ಸರ್ಕಾರದ ವಕೀಲರು ‘ಒಂದಕ್ಕಿಂತ ಹೆಚ್ಚು ಸಚಿವಾಲಯಗಳಿಗೆ ಸಂಬಂಧಿಸಿದ ವಿಷಯ ಇದು. ನಿಗದಿತ ಪ್ರಕ್ರಿಯೆ ಅನುಸರಿಸಿದ ಬಳಿಕವೇ ಕೇಂದ್ರ ಸರ್ಕಾರವು ಒಂದು ನಿರ್ಧಾರಕ್ಕೆ ಬರಲಿದೆ’ ಎಂದಿದ್ದಾರೆ.

‘ಜನರು ಸಾಯುತ್ತಿದ್ದಾರೆ, ನಿಮ್ಮ ಎಲ್ಲ ಪ್ರಕ್ರಿಯೆಗಳನ್ನೂ ಬದಿಗಿಡಿ. ಆಮ್ಲಜನಕ ಹಂಚಿಕೆ ಯಾವಾಗ ಹೆಚ್ಚಿಗೆ ಮಾಡುತ್ತೀರಿ ಹೇಳಿ’ ಎಂದು ಮುಖ್ಯ ನ್ಯಾಯಮೂರ್ತಿಯೂ ಇರುವ ನ್ಯಾಯಪೀಠ ಸಿಟ್ಟಿನಿಂದ ಪ್ರಶ್ನಿಸಿರುವುದು ಪರಿಸ್ಥಿತಿಯ ಗಂಭೀರತೆಗೆ ಹಿಡಿದಿರುವ ಕೈಗನ್ನಡಿ. ರಾಜ್ಯಕ್ಕೆ ಆಮ್ಲಜನಕ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ಎಷ್ಟು ಸಂವೇದನಾಶೂನ್ಯವಾಗಿದೆ ಎನ್ನುವುದಕ್ಕೂ ಇದು ಸಾಕ್ಷಿಯಾಗಿದೆ.

ರಾಜ್ಯದಿಂದ ಅತ್ಯಧಿಕ ಸಂಖ್ಯೆಯಲ್ಲಿ ದೆಹಲಿಗೆ ಆಯ್ಕೆಯಾಗಿ ಹೋಗಿರುವ ಬಿಜೆಪಿಯ ಸಂಸದರು ಈ ವಿಷಯದಲ್ಲಿ ಬಾಯಿಗೆ ಬೀಗ ಜಡಿದುಕೊಂಡು ಕುಳಿತಿರುವುದು ಏನನ್ನು ಸೂಚಿಸುತ್ತಿದೆ? ಕರ್ನಾಟಕಕ್ಕಿಂತ ಕಡಿಮೆ ಸೋಂಕು ಪ್ರಕರಣಗಳಿರುವ ಕೆಲವು ರಾಜ್ಯಗಳಿಗೆ ಕೇಂದ್ರವು ಹೆಚ್ಚು ಆಮ್ಲಜನಕ ಪೂರೈಕೆ ಮಾಡುತ್ತಿರುವ ಬಗ್ಗೆ ಈ ಸಂಸದರು ಮೂಕರಾಗಿರುವುದು ಏಕೆ? ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ರಾಜ್ಯದ ಆಡಳಿತ ಅತ್ಯುತ್ತಮವಾಗಿರಲಿದೆ ಎಂದು ಚುನಾವಣೆಯ ವೇಳೆ ಭರವಸೆ ನೀಡಿದ್ದ ಬಿಜೆಪಿ ಮುಖಂಡರು, ಈಗ ಕೇಂದ್ರ ಮತ್ತು ರಾಜ್ಯ ಎರಡೂ ತಾಳಮೇಳವಿಲ್ಲದೆ ವರ್ತಿಸುತ್ತಿರುವ ವಿದ್ಯಮಾನವನ್ನು ಹೇಗೆ ಸಮರ್ಥಿಸುತ್ತಾರೆ? ರಾಜ್ಯದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ 4.87 ಲಕ್ಷ ದಾಟಿದೆ. ಇವರಲ್ಲಿ ಶೇ 17ರಷ್ಟು ಮಂದಿಗೆ ಆಮ್ಲಜನಕ ಪೂರೈಕೆಯುಳ್ಳ ಹಾಸಿಗೆ ಮತ್ತು ಶೇ 3ರಷ್ಟು ಮಂದಿಗೆ ಐಸಿಯು ಅಗತ್ಯ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.

ಮೇ 10ರ ವೇಳೆಗೆ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂದು ರಾಜ್ಯ ಸರ್ಕಾರವೇ ಹೇಳಿದೆ. ಕೇಂದ್ರ ಸರ್ಕಾರವು ತಕ್ಷಣವೇ ಕರ್ನಾಟಕಕ್ಕೆ ಆಮ್ಲಜನಕ ಪೂರೈಕೆಯನ್ನು 1,792 ಟನ್‍ಗಳಿಗೆ ಹೆಚ್ಚಿಸಬೇಕು. ಆಮ್ಲಜನಕ ಪೂರೈಕೆ ಹೆಚ್ಚಿಸಲು ಕೇಂದ್ರ ಸರ್ಕಾರದ ಮೇಲೆ ರಾಜ್ಯದ ಬಿಜೆಪಿ ಮುಖಂಡರು ತೀವ್ರ ಒತ್ತಡ ಹೇರಬೇಕು. ಇಲ್ಲವಾದಲ್ಲಿ ಚಾಮರಾಜನಗರದಲ್ಲಿ ನಡೆದಂತಹ ದಾರುಣ ಘಟನೆಗಳು ಇನ್ನಷ್ಟು ಜಿಲ್ಲೆಗಳಲ್ಲಿ ಮರುಕಳಿಸುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT