ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಕೇರಳದಲ್ಲಿ ನಿಪಾ ಸೋಂಕು, ಆಸುಪಾಸಿನ ರಾಜ್ಯಗಳಲ್ಲಿ ಕಟ್ಟೆಚ್ಚರ ಅಗತ್ಯ

Published 14 ಸೆಪ್ಟೆಂಬರ್ 2023, 23:30 IST
Last Updated 14 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ನಿಪಾ ವೈರಸ್‌ನಿಂದ ಇಬ್ಬರು ಸಾವಿಗೀಡಾದ ಬಳಿಕ ಕೇರಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಸೋಂಕಿನಿಂದಾಗಿ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಕೆಲವರು ನಿಗಾದಲ್ಲಿ ಇದ್ದಾರೆ. ಕೇರಳದಲ್ಲಿ ನಿಪಾ ಸೋಂಕಿನ ಐದು ಪ್ರಕರಣಗಳು ಪತ್ತೆಯಾಗಿವೆ. ಈ ಸೋಂಕಿನಿಂದಾಗಿ 2017ರಲ್ಲಿ 17 ಜನರು ಮೃತಪಟ್ಟಿದ್ದರು. 2019 ಮತ್ತು 2021ರಲ್ಲಿಯೂ ಈ ಸೋಂಕು ಕಾಣಿಸಿಕೊಂಡಿತ್ತು. ಆದರೆ ಆಗ ಯಾರೂ ಈ ಸೋಂಕಿನಿಂದಾಗಿ ಸಾವಿಗೀಡಾಗಿರಲಿಲ್ಲ. ಕೋಯಿಕ್ಕೋಡ್‌ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಮಾಸ್ಕ್‌ ಧರಿಸುವಂತಹ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಈ ಸೋಂಕಿನಿಂದಾಗಿ ಮೊದಲ ಸಾವು ಎರಡು ವಾರಗಳ ಹಿಂದೆಯೇ ಸಂಭವಿಸಿದ್ದರೂ ಕಾರಣ ಈಗಷ್ಟೇ ಗೊತ್ತಾಗಿದೆ. ಮೃತರ ಸಂಪರ್ಕಕ್ಕೆ ಬಂದಿದ್ದ ಎಲ್ಲ ವ್ಯಕ್ತಿಗಳನ್ನು ಗುರುತಿಸಲು ಕಾರ್ಯಾಚರಣೆ ಆರಂಭಿಸಲಾಗಿದೆ. ಜನರು ದಿಗಿಲುಗೊಳ್ಳುವ ಅಗತ್ಯ ಇಲ್ಲ ಎಂದು ಸರ್ಕಾರ ಹೇಳಿದೆ. ಹಾಗಿದ್ದರೂ ಸೋಂಕು ಮತ್ತೆ ಕಾಣಿಸಿಕೊಂಡಿರುವುದು ಕಳವಳ ಮೂಡಿಸಿದೆ. 

ಸೋಂಕು ಈ ಹಿಂದೆ ಕಾಣಿಸಿಕೊಂಡಾಗ ಅದರ ಮೂಲ ಬಾವಲಿಗಳು ಎಂದು ದೃಢಪಟ್ಟಿತ್ತು. ಈ ಬಾರಿ ಸೋಂಕಿನ ಮೂಲ ಖಚಿತಪಟ್ಟಿಲ್ಲ. ಹಂದಿಯಂತಹ ಪ್ರಾಣಿಗಳು ಕೂಡ ಈ ಸೋಂಕಿನ ವಾಹಕಗಳಾಗುತ್ತವೆ. ನಿಪಾ ಸೋಂಕಿನಿಂದ ಮೊದಲಿಗೆ ವ್ಯಕ್ತಿಯೊಬ್ಬರು ಸತ್ತಾಗ ಇದಕ್ಕೆ ನಿಪಾ ಸೋಂಕು ಕಾರಣವಾಗಿರಬಹುದು ಎಂಬ ಸಂದೇಹ ಬಂದಿರಲಿಲ್ಲ. ಆದರೆ, ಮೊದಲಿಗೆ ಸತ್ತ ವ್ಯಕ್ತಿಯಲ್ಲಿ ಇದ್ದಂತಹುದೇ ಲಕ್ಷಣಗಳನ್ನು ಹೊಂದಿದ್ದ ಇನ್ನೊಬ್ಬ ವ್ಯಕ್ತಿ ಸತ್ತಾಗ ನಿಪಾ ಸೋಂಕು ಇರಬಹುದು ಎಂಬ ಅನುಮಾನ ವೈದ್ಯರಿಗೆ ಮೂಡಿತು. ಸೋಂಕು ಇರುವುದು ದೃಢಪಟ್ಟ ಕೂಡಲೇ ಅನುಸರಣೆ ಕೆಲಸಗಳನ್ನು ಮಾಡಲಾಗಿದೆ. ಸೋಂಕನ್ನು ಈ ಹಿಂದೆ ನಿಭಾಯಿಸಿದ್ದ ಅನುಭವವು ಈ ಬಾರಿ ಸೋಂಕು ನಿರ್ವಹಿಸಲು ನೆರವಾಯಿತು. ಆದರೆ, ಸೋಂಕನ್ನು ಇನ್ನೂ ತ್ವರಿತವಾಗಿ ಮತ್ತು ಉತ್ತಮ ರೀತಿಯಲ್ಲಿ ಪತ್ತೆ ಮಾಡುವ ವಿಧಾನಗಳು ಬೇಕಿವೆ. ಸೋಂಕು ದೃಢಪಡಿಸಿಕೊಳ್ಳುವುದಕ್ಕೆ ರೋಗಿಯಿಂದ ಸಂಗ್ರಹಿಸಿದ ಮಾದರಿಯನ್ನು ಪುಣೆಯ ವೈರಾಣು ಸಂಸ್ಥೆಗೆ ಕಳುಹಿಸಿಕೊಡಬೇಕಿದೆ. ಸಾಂಕ್ರಾಮಿಕವು ಈ ಹಿಂದೆ ಕಂಡು ಬಂದಿದ್ದಾಗ ಕೆಲವು ಪ್ರಸ್ತಾವಗಳು ಮತ್ತು ಶಿಫಾರಸುಗಳನ್ನು ಮುಂದಿರಿಸಲಾಗಿತ್ತು. ಹಕ್ಕಿಗಳು ಮತ್ತು ಪ್ರಾಣಿಗಳನ್ನು ಅದರಲ್ಲೂ ವಿಶೇಷವಾಗಿ ಬಾವಲಿಗಳನ್ನು ಕಾಲಕಾಲಕ್ಕೆ ಸಮೀಕ್ಷೆಗೆ ಒಳಪಡಿಸಬೇಕು ಎಂಬ ಶಿಫಾರಸು ಕೂಡ ಇತ್ತು. ಆದರೆ ಇವು ಜಾರಿಯಾಗಿಲ್ಲ. ಸೋಂಕು ಇದೆ ಎಂಬುದು ದೃಢಪಡುವುದು ವಿಳಂಬವಾದಷ್ಟೂ ರೋಗಿಗಳಿಗೆ ತೊಂದರೆ ಹೆಚ್ಚುತ್ತದೆ ಮತ್ತು ಸೋಂಕು ಹರಡುವ ಅಪಾಯವೂ ಹೆಚ್ಚಾಗುತ್ತದೆ. 

ವನ್ಯಮೃಗಗಳಿಂದ ಸಸ್ತನಿಗಳಿಗೆ ಮತ್ತು ಅವುಗಳಿಂದ ಮನುಷ್ಯರಿಗೆ ಸೋಂಕು ಹರಡುವಿಕೆಯು ಇತ್ತೀಚೆಗೆ ಹೆಚ್ಚಾಗಿದೆ. ಅರಣ್ಯ ನಾಶ, ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಒಡನಾಟ ಹೆಚ್ಚಳ, ಜನಸಂಖ್ಯೆ ಏರಿಕೆ ಮತ್ತು ಹವಾಮಾನ ಬದಲಾವಣೆಯಂತಹ ಕಾರಣಗಳಿಂದ ಸೋಂಕು ಹರಡುವಿಕೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ. ಕೇರಳ, ಕರ್ನಾಟಕ ಮತ್ತು ತಮಿಳುನಾಡು ಸೇರಿ ಒಂಬತ್ತು ರಾಜ್ಯಗಳಲ್ಲಿ ಇಂತಹ ಸೋಂಕಿನ ಅಪಾಯ ಹೆಚ್ಚು ಎಂಬುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ನಡೆಸಿದ ಸಮೀಕ್ಷೆಯು ಕಂಡುಕೊಂಡಿದೆ. ಭಾರತ ಮತ್ತು ಚೀನಾವು ಇಂತಹ ಸೋಂಕುಗಳ ಕೇಂದ್ರಗಳಾಗಬಹುದು ಎಂಬುದರತ್ತ 2022ರ ಭಾರತದ ಅರಣ್ಯ ಸ್ಥಿತಿಗತಿ ವರದಿಯೂ ಹೇಳಿದೆ. ಕೇರಳದ ಆಸುಪಾಸಿನ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡು ನಿಪಾ ಸೋಂಕಿನ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಿದೆ. ನಿಪಾ ಸೋಂಕಿನ ಲಕ್ಷಣಗಳು ಕಂಡು ಬರುತ್ತಿವೆಯೇ ಎಂಬುದರತ್ತ ವೈದ್ಯಾಧಿಕಾರಿಗಳು ನಿಗಾ ಇರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT