ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಐಸಿ ವೇದಿಕೆಯಲ್ಲಿ ಭಾರತ ರಾಜನೀತಿಗೆ ಸಂದ ಜಯ

Last Updated 1 ಮಾರ್ಚ್ 2019, 20:07 IST
ಅಕ್ಷರ ಗಾತ್ರ

ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ), ವಿಶ್ವದ 57 ಪ್ರಭಾವಿ ಮುಸ್ಲಿಂ ದೇಶಗಳ ಸಂಘಟನೆ. ಐವತ್ತು ವರ್ಷ ತುಂಬಿರುವ ಇದರ ಸಂಸ್ಥಾಪಕ ಸದಸ್ಯ ರಾಷ್ಟ್ರಗಳ ಪೈಕಿ ಪಾಕಿಸ್ತಾನವೂ ಒಂದು. ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ರಾಜಧಾನಿ ಅಬುಧಾಬಿಯಲ್ಲಿ ಒಐಸಿಯ ವಿದೇಶಾಂಗ ಮಂತ್ರಿಗಳ ಎರಡು ದಿನಗಳ ಸಮಾವೇಶ ಶುಕ್ರವಾರ ಆರಂಭ ಆಯಿತು. ಐವತ್ತು ವರ್ಷಗಳ ಹಿಂದೆ ಈ ಸಂಘಟನೆ ಹುಟ್ಟಿದಾಗ ಜರುಗಿದ ಸಮಾವೇಶಕ್ಕೆ ಭಾರತವನ್ನು ಆಹ್ವಾನಿಸಲಾಗಿತ್ತು. ಆದರೆ ಆಹ್ವಾನ ವಾಪಸು ಪಡೆಯುವಂತೆ ಪಾಕಿಸ್ತಾನ ಒತ್ತಡ ಹೇರಿ ಯಶಸ್ವಿಯಾಗಿತ್ತು. ಅಂದು ಕೈ ತಪ್ಪಿದ್ದ ಆಹ್ವಾನ ಈಗ ಮತ್ತೆ ದೊರೆತಿದೆ. ಮತ್ತೆ ಅಡ್ಡಗಾಲು ಹಾಕುವ ಪಾಕ್ ಹುನ್ನಾರ ವಿಫಲ ಆಗಿದೆ. ಪ್ರತಿಭಟಿಸಿರುವ ಪಾಕ್, ಸಮಾವೇಶವನ್ನು ಬಹಿಷ್ಕರಿಸಿದೆ. ಆದರೂ ಒಐಸಿ ಸೊಪ್ಪು ಹಾಕಲಿಲ್ಲ. ಬದಲಾಗಿ, ಆಹ್ವಾನ ನೀಡಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ಭಾರತದೊಂದಿಗೆ ಯುದ್ಧೋನ್ಮಾದದ ಹೊಸ್ತಿಲಲ್ಲಿ ನಿಂತಿರುವ ದಿನಗಳಲ್ಲಿ ಪಾಕಿಸ್ತಾನ ಈ ‘ಮುಖಭಂಗ’ ಎದುರಿಸಿದೆ. ಅಂತರರಾಷ್ಟ್ರೀಯ ಸಮುದಾಯಗಳ ನಡುವೆ ಅದರ ಒಂಟಿತನ ಇನ್ನಷ್ಟು ಹೆಚ್ಚಿದೆ. ಜಗತ್ತಿನ ಮೂರನೆಯ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶ ಭಾರತ ಎಂಬ ಕಾರಣಕ್ಕಾಗಿ ಈ ಆಹ್ವಾನ ದೊರೆತಿದೆ. ಒಐಸಿಯ ಸದಸ್ಯತ್ವ ಇಲ್ಲವೇ ವೀಕ್ಷಕ ಸ್ಥಾನ ನೀಡಬೇಕೆಂಬ ಭಾರತದ ಬೇಡಿಕೆ ಈಗಲೂ ಈಡೇರಿಲ್ಲ. ಸದ್ಯದಲ್ಲಿ ಈಡೇರುವ ಸೂಚನೆಯೂ ಇಲ್ಲ. ಆದರೆ ಮುಸ್ಲಿಂ ಜಗತ್ತಿನೊಂದಿಗೆ ಭಾರತದ ದೀರ್ಘಕಾಲೀನ ರಾಜಕೀಯ ಸಂಬಂಧಕ್ಕೆ ಈ ಆಹ್ವಾನ ಹೊಸ ಆಯಾಮ ನೀಡಿದೆ.

ಹಲವು ಮುಸ್ಲಿಂ ರಾಷ್ಟ್ರಗಳ ನಡುವೆ ಈಗಾಗಲೇ ಅನೇಕ ಬಿಕ್ಕಟ್ಟುಗಳಿವೆ. ಕತಾರ್‌ ರಾಜತಾಂತ್ರಿಕ ಬಿಕ್ಕಟ್ಟಿನ ಪರಿಣಾಮವಾಗಿ ಅರಬ್‌ ವಲಯದ ಬಹುಪಾಲು ರಾಷ್ಟ್ರಗಳು ಕತಾರ್‌ ಅನ್ನು ಏಕಾಂಗಿಯಾಗಿಸಿವೆ. ಸೌದಿ ಅರೇಬಿಯಾ ಮತ್ತು ಇರಾನ್, ಈಜಿಪ್ಟ್ ಮತ್ತು ಟರ್ಕಿ ದೇಶಗಳು ಪರಸ್ಪರ ಕಡು ಹಗೆಗಳು. ಇವುಗಳ ಪೈಕಿ ಒಂದನ್ನು ರಮಿಸಿದರೆ ಮತ್ತೊಂದಕ್ಕೆ ಕಿರಿಕಿರಿ. ಆದರೆ ಈ ದೇಶಗಳ ಪೈಕಿ ಒಂದು ದೇಶ ಮುನಿಯದಂತೆ ಮತ್ತೊಂದನ್ನು ಒಲಿಸಿಕೊಳ್ಳುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ಸು ಕಂಡಿರುವುದಾಗಿ ರಾಜತಾಂತ್ರಿಕ ತಜ್ಞರು ಗುರುತಿಸಿದ್ದಾರೆ. ವಿಶೇಷವಾಗಿ ಯುಎಇ ಮತ್ತು ಸೌದಿ ಅರೇಬಿಯಾದಂತಹ ಸಂಪ್ರದಾಯವಾದಿ ಅರಬ್ ಅರಸೊತ್ತಿಗೆಗಳ ಜೊತೆಗೆ ಭಾರತದ ಸಂಬಂಧ ಸುಧಾರಣೆ ಈ ಸರ್ಕಾರದ ವಿಶಿಷ್ಟ ಸಾಧನೆ ಎನ್ನಲಾಗಿದೆ. ಈ ಎರಡು ಮುಸ್ಲಿಂ ದೇಶಗಳು ಪಾಕಿಸ್ತಾನದ ನಿಡುಗಾಲದ ಹಿತೈಷಿಗಳು. ಪಾಕಿಸ್ತಾನ ಈ ಎರಡೂ ಪ್ರಭುತ್ವಗಳೊಂದಿಗೆ ತನ್ನ ಆಪ್ತ ಗೆಳೆತನವನ್ನು ಪಾರಿತೋಷಕದಂತೆ ಪ್ರದರ್ಶಿಸುತ್ತಾ ಬಂದಿದೆ. ಭಯೋತ್ಪಾದನೆ ಮತ್ತು ಧಾರ್ಮಿಕ ಕಟ್ಟರ್‌ವಾದವನ್ನು ಬೆಂಬಲಿಸುವ ಪಾಕಿಸ್ತಾನದತ್ತ ಈ ಅರಸೊತ್ತಿಗೆಗಳ ಕಣ್ಣುಗಳು ಬಹುಕಾಲ ಕುರುಡಾಗಿದ್ದವು. ಭಯೋತ್ಪಾದನೆ ಮತ್ತು ಮೂಲಭೂತವಾದದ ಇದೇ ಶಕ್ತಿಗಳು ಇಂದು ಸೌದಿ ಅರೇಬಿಯಾ ಮತ್ತು ಯುಎಇಗೂ ಸವಾಲಾಗಿವೆ. ಒಂದು ಕಾಲದಲ್ಲಿ ವಹಾಬಿ ಪ್ರಭಾವಿತ ಕಟ್ಟರ್‌ವಾದವನ್ನು ಕುರುಡಾಗಿ ಪ್ರೋತ್ಸಾಹಿಸಿದ ಸೌದಿ ಅರೇಬಿಯಾ ಇಂದು ಅದರ ಪರಿಣಾಮವನ್ನು ಅನುಭವಿಸುತ್ತಿದೆ. ಹೀಗಾಗಿ ಮುಸ್ಲಿಂ ಜಗತ್ತು ಮತ್ತು ಮಧ್ಯಪ್ರಾಚ್ಯದಲ್ಲಿ ಭಾರತಕ್ಕೆ ಮಾನ್ಯತೆ ದೊರೆಯತೊಡಗಿದೆ. ಈ ಹಿನ್ನೆಲೆಯಲ್ಲಿ ಒಐಸಿ ಆಹ್ವಾನವು ಭಾರತದ ರಾಜತಾಂತ್ರಿಕ ಜಾಣತನಕ್ಕೆ ಸಂದಿರುವ ಜಯ. ಅಬುಧಾಬಿ ವೇದಿಕೆಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಭಯೋತ್ಪಾದಕರಿಗೆ ಹಣ ಮತ್ತು ಆಶ್ರಯ ಒದಗಿಸದಂತೆ ಮುಸ್ಲಿಂ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ. ‘ಭಾರತದಲ್ಲಿ 18.5 ಕೋಟಿ ಮುಸ್ಲಿಮರಿದ್ದಾರೆ ಮತ್ತು ಅದರ ಬಹುಮುಖಿ ಮೌಲ್ಯಗಳಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ ಹಾಗೂ ಇಸ್ಲಾಮಿಕ್ ಜಗತ್ತಿಗೆ ಭಾರತ ಕೂಡ ವಿಶಿಷ್ಟ ಪಾಲು ಸಲ್ಲಿಸಿದೆ ಎಂಬ ವಾಸ್ತವವನ್ನು ಈ ಆಹ್ವಾನ ಗುರುತಿಸಿರುವುದು ಸ್ವಾಗತಾರ್ಹ’ ಎಂಬ ವಿದೇಶಾಂಗ ಸಚಿವಾಲಯದ ಅಧಿಕೃತ ನಿಲುವು ಶ್ಲಾಘನೀಯ. ಈ ವಿಷಯದಲ್ಲಿ ಆಡಳಿತಾರೂಢರು ತಮ್ಮ ರಾಜಕೀಯ ನಿಲುವುಗಳನ್ನು ಮೀರಿ ಪ್ರಬುದ್ಧತೆ ತೋರಿದ್ದಾರೆ ಎನ್ನಲೇಬೇಕಾಗುತ್ತದೆ. ಮುಸ್ಲಿಂ ದೇಶಗಳ ಜಗತ್ತು ಮತ್ತು ದೊಡ್ಡ ಮುಸ್ಲಿಂ ನೆಲೆಯ ಭಾರತ ಪರಸ್ಪರರನ್ನು ನಿರ್ಲಕ್ಷಿಸಲಾಗದು ಎಂಬ ಮಹತ್ವದ ಅಂಶದೆಡೆಗೆ ಈ ಬೆಳವಣಿಗೆ ಬೊಟ್ಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT