ಭಾನುವಾರ, ಜುಲೈ 3, 2022
27 °C
ಸಂಕುಚಿತ ಸ್ವಹಿತಾಸಕ್ತಿಯನ್ನು ಮರೆತು ರಾಜಕೀಯ ಮತ್ತು ಆಳ್ವಿಕೆಯ ಸಕಾರಾತ್ಮಕ ಕಾರ್ಯಸೂಚಿಯನ್ನು ಮುಂದಿಟ್ಟು ಜನರನ್ನು ಆಕರ್ಷಿಸಬೇಕಿದೆ

ಸಂಪಾದಕೀಯ: ವಿರೋಧ ಪಕ್ಷಗಳ ಒಗ್ಗಟ್ಟಿಗೆ ಬೇಕು ಗಟ್ಟಿಯಾದ ಸಮಾನ ನೆಲೆಗಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಿ ಅಥವಾ ಆಡಳಿತ ಪಕ್ಷಕ್ಕೆ ಸರ್ವಾಧಿಕಾರ ಇಲ್ಲ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ವ್ಯವಸ್ಥೆಯ ಅವಿಭಾಜ್ಯ ಭಾಗಗಳು; ವಿರೋಧ ಪಕ್ಷಕ್ಕೆ ಇರುವ ಮಹತ್ವವು ಕಡಿಮೆಯೇನೂ ಅಲ್ಲ. ಆದರೆ, 2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಅಧಿಕಾರಕ್ಕೆ ಏರಿತು. ಲೋಕಸಭೆಗೆ ನಡೆದ ಸತತ ಎರಡು ಚುನಾವಣೆಗಳಲ್ಲಿ ಯಾವ ಪಕ್ಷವೂ ಅಧಿಕೃತ ವಿರೋಧ ಪಕ್ಷ ಎಂಬ ಮಾನ್ಯತೆಗೆ ಬೇಕಾದಷ್ಟು ಸ್ಥಾನಗಳನ್ನು ಗಳಿಸದೇ ಇದ್ದುದು ಆಡಳಿತ ಪಕ್ಷವು ವಿರೋಧ ‍ಪಕ್ಷಗಳನ್ನು ನಿರ್ಲಕ್ಷ್ಯದಿಂದ ಕಾಣಲು, ವಿರೋಧ ಪಕ್ಷಗಳ ನಾಯಕರನ್ನು ಹೀನಾಯವಾಗಿ ಟೀಕಿಸಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಮುಂದಿಟ್ಟ ಆಗ್ರಹ, ಬೇಡಿಕೆ, ಪ್ರತಿಭಟನೆ ಯನ್ನು ಕೂಡ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದಕ್ಕೆ ಈಚೆಗಷ್ಟೇ ಮುಕ್ತಾಯವಾದ ಮುಂಗಾರು ಅಧಿವೇಶನವು ಸಾಕ್ಷಿಯಾಗಿದೆ. ಸರ್ಕಾರ ಮತ್ತು ಆಡಳಿತ ಪಕ್ಷದ ನಡವಳಿಕೆಯು ಬಿಜೆಪಿಯ ವಿರುದ್ಧ ಎಲ್ಲ ವಿರೋಧ ಪಕ್ಷಗಳು ಒಂದಾಗಿ ಹೋರಾಡಬೇಕು ಎಂಬ ಮನೋಭಾವವು ಕಾಂಗ್ರೆಸ್‌ನ ಸೋನಿಯಾ ಗಾಂಧಿ, ಟಿಎಂಸಿಯ ಮಮತಾ ಬ್ಯಾನರ್ಜಿ, ಡಿಎಂಕೆಯ ಎಂ.ಕೆ.ಸ್ಟಾಲಿನ್‌, ನ್ಯಾಷನಲ್‌ ಕಾನ್ಫರೆನ್ಸ್‌ನ ಒಮರ್‌ ಅಬ್ದುಲ್ಲಾ, ಸಿಪಿಎಂನ ಸೀತಾರಾಂ ಯೆಚೂರಿ ಮುಂತಾದವರಲ್ಲಿ ಮೂಡಲು ಕಾರಣವಾಗಿದೆ. 

ವಿರೋಧ ಪಕ್ಷಗಳ ಒಕ್ಕೂಟವೊಂದು ರೂಪುಗೊಳ್ಳಬೇಕು ಎಂಬ ಉದ್ದೇಶದಿಂದ ಅನೌಪಚಾರಿಕ ರೀತಿಯಲ್ಲಿ ಹಲವು ಸಭೆಗಳು ನಡೆದಿವೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 18 ಪಕ್ಷಗಳ ನಾಯಕರನ್ನು ಆಹ್ವಾನಿಸಿ ಶುಕ್ರವಾರ ನಡೆಸಿದ ಸಭೆಯು, ವಿರೋಧ ಪಕ್ಷಗಳ ಒಕ್ಕೂಟ ರಚನೆ ಆಗಲೇಬೇಕು ಎಂಬ ಭಾವ ವಿವಿಧ ಪಕ್ಷಗಳಲ್ಲಿ ಇದೆ ಎಂಬುದನ್ನು ತೋರಿಸಿಕೊಟ್ಟಿದೆ. ಈ ಹಿಂದೆ ನಡೆದ ಇಂತಹ ಪ್ರಯತ್ನಗಳ ಬಗ್ಗೆಯೂ ಪಕ್ಷಗಳಿಂದ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತ ಆಗಿತ್ತು.

ಯಶವಂತ ಸಿನ್ಹಾ ನೇತೃತ್ವದ ರಾಷ್ಟ್ರ ಮಂಚ್‌ ಆಯೋಜಿಸಿದ್ದ ಸಭೆಯಲ್ಲಿ ಟಿಎಂಸಿ, ಎಸ್‌ಪಿ, ಎಎಪಿ ಸೇರಿ ಎಂಟು ಪಕ್ಷಗಳ ನಾಯಕರು ಭಾಗಿಯಾಗಿದ್ದರು. 2024ರ ಸಾರ್ವತ್ರಿಕ ಚುನಾವಣೆಯ ಹೊತ್ತಿಗೆ ವಿರೋಧ ಪಕ್ಷಗಳ ಒಕ್ಕೂಟವು ಇರಬೇಕು ಎಂಬ ಉದ್ದೇಶದಿಂದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರೂ ವಿರೋಧ ಪಕ್ಷಗಳ ಅನೌಪಚಾರಿಕ ಸಭೆಯನ್ನು ನಡೆಸಿದ್ದರು. ಸೋನಿಯಾ ಅವರು ಕರೆದಿದ್ದ ಸಭೆಯಲ್ಲಿ ಅತಿ ಹೆಚ್ಚು ಪಕ್ಷಗಳ ಭಾಗೀದಾರಿಕೆ ಇತ್ತು. ಮಮತಾ ಬ್ಯಾನರ್ಜಿ, ಶರದ್‌ ಪವಾರ್‌, ಸ್ಟಾಲಿನ್‌, ಉದ್ಧವ್‌ ಠಾಕ್ರೆ, ಸೀತಾರಾಂ ಯೆಚೂರಿ ಮುಂತಾದ ನಾಯಕರು ಭಾಗಿಯಾಗಿದ್ದರು. ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಒಕ್ಕೂಟವೊಂದು ರೂಪುಗೊಳ್ಳುವ ಸಾಧ್ಯತೆಯನ್ನು ಈ ಸಭೆಯು ತೆರೆದಿಟ್ಟಿದೆ.

ಕಾಂಗ್ರೆಸ್ ಪಕ್ಷದ ನೇತೃತ್ವ ಇಲ್ಲದೇ ಇದ್ದರೆ ಇಂತಹ ಪ್ರಯತ್ನ ಸಾಕಾರಗೊಳ್ಳುವುದು ಸುಲಭವಲ್ಲ ಎಂಬ ಸೂಚನೆಯನ್ನೂ ಕೊಟ್ಟಿದೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಎಲ್ಲ ವಿರೋಧ ಪಕ್ಷಗಳು ತೋರಿದ ‘ಬದ್ಧತೆಯ ಒಗ್ಗಟ್ಟು’ ಹೇಗೆ ಫಲಪ್ರದವಾಗಿತ್ತು ಎಂಬುದನ್ನು ಸೋನಿಯಾ ಅವರು ಸಭೆಯಲ್ಲಿ ಉಲ್ಲೇಖಿಸಿದ್ದಾರೆ. 2024ರಲ್ಲಿ ಎನ್‌ಡಿಎಯನ್ನು ಎದುರಿಸಲು ವಿರೋಧ ಪಕ್ಷಗಳು ಒಟ್ಟಾಗುವುದನ್ನು ಬಿಟ್ಟರೆ ಬೇರೆ ಪರ್ಯಾಯವೇ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಸೋನಿಯಾ ಅವರ ಪ್ರತಿಪಾದನೆಯಲ್ಲಿ ಸತ್ಯ ಇದೆ.

ಆದರೆ, ಎಲ್ಲ ವಿರೋಧ ಪಕ್ಷಗಳನ್ನು ಜತೆಗೆ ಒಯ್ಯುವ ಸ್ಥಿತಿಯಲ್ಲಿ ಕಾಂಗ್ರೆಸ್‌ ಇದೆಯೇ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಬಿಜೆಪಿಯ ನಂತರ ಕಾಂಗ್ರೆಸ್‌ ಈಗ ಈ ದೇಶದ ಅತ್ಯಂತ ದೊಡ್ಡ ಪಕ್ಷ. ಆದರೆ, ಕಾಂಗ್ರೆಸ್‌ ನಿತ್ರಾಣಗೊಂಡಿದೆ. ಸುದೀರ್ಘ ಕಾಲ ದೇಶವನ್ನು ಆಳಿದ ಪಕ್ಷಕ್ಕೆ ಈಗ ಅಧಿಕೃತ ವಿರೋಧ ಪಕ್ಷದ ಮಾನ್ಯತೆಯೂ ಇಲ್ಲ. ಸ್ವತಂತ್ರವಾಗಿ ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೂ ಅಲ್ಲಿ ಒಳಜಗಳ ನಿಲ್ಲುತ್ತಲೇ ಇಲ್ಲ.

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್‌ ಗೆಹಲೊತ್‌ ಮತ್ತು ಮುಖಂಡ ಸಚಿನ್ ಪೈಲಟ್‌ ನಡುವೆ ಒಮ್ಮೆ ಸ್ಫೋಟಿಸಿ, ಸರ್ಕಾರವನ್ನೇ ಪತನದ ಅಂಚಿಗೆ ಒಯ್ದಿದ್ದ ಭಿನ್ನಮತವು ಶಮನವೇ ಆಗಿಲ್ಲ. ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಮತ್ತು ನವಜೋತ್‌ ಸಿಂಗ್‌ ಸಿಧು ನಡುವಣ ವೈಷಮ್ಯಕ್ಕೆ ಹೈಕಮಾಂಡ್‌ ಹಾಕಿದ್ದ ತೇಪೆಯು ಕೆಲವೇ ದಿನಗಳಲ್ಲಿ ಹರಿದು ಹೋದಂತೆ ಕಾಣಿಸುತ್ತಿದೆ. ಅಮರಿಂದರ್‌ ಮತ್ತು ಸಿಧು ಬಣದ ನಡುವೆ ಮತ್ತೆ ವಾಕ್ಸಮರ ಆರಂಭವಾಗಿದೆ. ಕಾಂಗ್ರೆಸ್‌ ಅಧಿಕಾರದಲ್ಲಿರುವ ಛತ್ತೀಸಗಡದಲ್ಲಿಯೂ ಭಿನ್ನಮತ ತೀವ್ರವಾಗಿದೆ.

ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ಅವರಿಗೆ ಹಿರಿಯ ಮುಖಂಡ ಟಿ.ಎಸ್‌. ಸಿಂಗ್‌ ದೇವ್‌ ಅವರು ಸವಾಲೆಸೆದು ಕೂತಿದ್ದಾರೆ. ಅಧಿಕಾರದ ಬರಗಾಲದ ಈ ಸಮಯದಲ್ಲಿಯೂ ಮೂರು ರಾಜ್ಯಗಳ ನಾಯಕರನ್ನು ಒಟ್ಟಾಗಿ ಇರಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಇಂತಹ ಪಕ್ಷವು ಸುಮಾರು 20 ಪಕ್ಷಗಳ ಒಕ್ಕೂಟವನ್ನು ಮುನ್ನಡೆಸಬಲ್ಲುದೇ ಎಂಬ ಪ್ರಶ್ನೆಯು ಬಿಜೆಪಿ ವಿರೋಧಿ ಪಕ್ಷಗಳಲ್ಲಿ ಮೂಡಿದರೆ ತಪ್ಪೇನೂ ಅಲ್ಲ. 

ಇದರ ಜತೆಗೆ, ಕಾಂಗ್ರೆಸ್‌ ಪಕ್ಷದ ನಾಯಕತ್ವ ಪ್ರಶ್ನೆಯು ಗಜಪ್ರಸವದಂತಾಗಿದೆ. ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಅವರು ಎಷ್ಟು ದಿನ ಆ ಹುದ್ದೆಯಲ್ಲಿ ಇರಲಿದ್ದಾರೆ, ಮುಂದೆ ಯಾರು ಅಧ್ಯಕ್ಷರಾಗಲಿದ್ದಾರೆ ಎಂಬುದಕ್ಕೆಲ್ಲ ಉತ್ತರ ಸಿಕ್ಕಿಲ್ಲ. ವಿರೋಧ ಪಕ್ಷಗಳ ಒಕ್ಕೂಟಕ್ಕೆ ಮುಂದಾಗಿರುವ ಬಹುತೇಕ ಪಕ್ಷಗಳು ಒಂದೊಂದು ರಾಜ್ಯಕ್ಕೆ ಸೀಮಿತ. ಅದರಾಚೆಗೆ ಈ ಪಕ್ಷಗಳಿಗೆ ಅಸ್ತಿತ್ವವೇ ಇಲ್ಲ. ಕೆಲವು ಪಕ್ಷಗಳು ಒಂದೇ ರಾಜ್ಯದಲ್ಲಿ ಪ್ರತಿಸ್ಪರ್ಧಿಗಳೂ ಹೌದು.

ಈ ಎಲ್ಲದರ ನಡುವೆಯೂ ಬಿಜೆಪಿಯನ್ನು ಒಗ್ಗಟ್ಟಾಗಿ ಎದುರಿಸಬೇಕು ಎಂಬ ದೃಢ ನಿಲುವು ವ್ಯಕ್ತವಾಗಿದೆ. ಬಿಜೆಪಿ ವಿರುದ್ಧ ಯಾವೆಲ್ಲ ಅಂಶಗಳನ್ನು ಬಳಸಿಕೊಳ್ಳಬಹುದು ಎಂಬುದನ್ನು ಈ ಪಕ್ಷಗಳು ಗುರುತಿಸಿವೆ. ಚುನಾವಣೆ ಹೊತ್ತಿಗೆ ಇವುಗಳಲ್ಲಿ ಕೆಲವು ಅಪ್ರಸ್ತುತ ಅನಿಸಬಹುದು. ಅದೇನೇ ಇದ್ದರೂ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಗಟ್ಟಿಯಾದ ಸಮಾನ
ನೆಲೆಗಟ್ಟೊಂದನ್ನು ರೂಪಿಸುವ ಕೆಲಸ ಆಗಬೇಕು. ಸಂಕುಚಿತ ಸ್ವಹಿತಾಸಕ್ತಿಯನ್ನು ಮರೆತು ರಾಜಕೀಯ ಮತ್ತು ಆಳ್ವಿಕೆಯ ಸಕಾರಾತ್ಮಕ ಕಾರ್ಯಸೂಚಿಯನ್ನು ಮುಂದಿಟ್ಟು ಜನರನ್ನು ಆಕರ್ಷಿಸಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು