ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಡೋಪಿಂಗ್ ಪಿಡುಗು ತಡೆಗೆ ತ್ವರಿತ ಕ್ರಮ ಅಗತ್ಯ

Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಪ್ಯಾರಿಸ್ ಒಲಿಂಪಿಕ್ಸ್‌ ಆರಂಭಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಅದರಲ್ಲಿ ಭಾರತಕ್ಕೆ ಎಷ್ಟು ಪದಕಗಳು ಒಲಿಯಬಹುದು ಎಂಬ ಲೆಕ್ಕಾಚಾರಗಳೂ ನಡೆದಿವೆ. ಆದರೆ ಇದೇ ಹೊತ್ತಿನಲ್ಲಿ ಬಂದಿರುವ ಕಹಿಸುದ್ದಿಯೊಂದು ದೇಶದ ಕ್ರೀಡಾ ವಲಯವನ್ನು ತಲ್ಲಣಗೊಳಿಸಿದೆ. ಉದ್ದೀಪನ ಮದ್ದು ಸೇವನೆ (ಡೋಪಿಂಗ್) ನಿಯಮ ಉಲ್ಲಂಘಿಸಿದ ಅತಿ ಹೆಚ್ಚು ಪ್ರಕರಣಗಳು ಭಾರತದಲ್ಲಿ ದಾಖಲಾಗಿವೆ. 2,000 ಹಾಗೂ ಅದಕ್ಕಿಂತ ಹೆಚ್ಚು ಮಾದರಿಗಳ ಪರೀಕ್ಷೆಗಳನ್ನು ನಡೆಸಿದ ದೇಶಗಳಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಭಾರತದಲ್ಲಿವೆ ಎಂದು ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಬಹಿರಂಗಪಡಿಸಿದೆ. ಇದು ದೇಶವು ತಲೆತಗ್ಗಿಸುವ ಸಂಗತಿಯಾಗಿದೆ. ಅಷ್ಟೇ ಅಲ್ಲ, ಕಳೆದ ಒಂದು ದಶಕದಲ್ಲಿ ನಡೆದ ಪ್ರಕರಣಗಳ ಅಧ್ಯಯನದ ವರದಿಯೊಂದನ್ನು ಜನವರಿಯಲ್ಲಿ ವಾಡಾ ಪ್ರಕಟಿಸಿತ್ತು. ಅದರ ಅನ್ವಯ ಭಾರತದಲ್ಲಿ ಜೂನಿಯರ್ ಅಥ್ಲೀಟ್‌ಗಳಲ್ಲಿ ಡೋಪಿಂಗ್ ಪ್ರಮಾಣ ಹೆಚ್ಚಿದೆ. ಉದ್ದೀಪನ ಮದ್ದು ಪಿಡುಗು
ತಡೆಗಟ್ಟುವಲ್ಲಿ ಸಂಬಂಧಿಸಿದ ಆಡಳಿತ ವ್ಯವಸ್ಥೆಗಳು ವಿಫಲವಾಗಿರುವುದು ಬಹಿರಂಗವಾಗಿದೆ. ಇಂತಹ ಬೆಳವಣಿಗೆಯು 2036ರ ಒಲಿಂಪಿಕ್ಸ್‌ ಆತಿಥ್ಯಕ್ಕಾಗಿ ಬಿಡ್ ಸಲ್ಲಿಸಿರುವ ಭಾರತಕ್ಕೆ ಶೋಭೆ ತರುವುದಿಲ್ಲ.

ಈ ಪಿಡುಗು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಆತಂಕಕಾರಿ ಆಗಿದೆ. ಒಂದೆಡೆ, ಕ್ರೀಡೆಯ ಉತ್ತೇಜನಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಸರ್ಕಾರ ಮತ್ತು ಸಂಸ್ಥೆಗಳು ವಿನಿಯೋಗಿಸುತ್ತಿವೆ. ಆದರೆ ಈ ಅಭಿಯಾನಕ್ಕೆ ಡೋಪಿಂಗ್‌ ಪಿಡುಗು ಅಡ್ಡಿಯಾಗುತ್ತಿರುವುದು ಸುಳ್ಳಲ್ಲ. ಈ ವಿಷಯದಲ್ಲಿ ಅಮೆರಿಕವನ್ನೂ ಭಾರತ ಹಿಂದಿಕ್ಕಿದೆ. 2020ರ ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಭಾರತವು ಒಂದು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಜಯಿಸಿ 48ನೇ ಸ್ಥಾನ ಪಡೆದಿತ್ತು. 113 ಪದಕಗಳನ್ನು ಗೆದ್ದಿದ್ದ ಅಮೆರಿಕ ಮೊದಲ ಸ್ಥಾನ ಗಳಿಸಿತ್ತು. ಬಾಕ್ಸಿಂಗ್, ಕುಸ್ತಿ ಮತ್ತು ವೇಟ್‌ಲಿಫ್ಟಿಂಗ್‌ ಕ್ರೀಡೆಗಳಲ್ಲಿ ಅತಿ ಹೆಚ್ಚು ಡೋಪಿಂಗ್ ಪ್ರಕರಣಗಳು ಖಚಿತಪಟ್ಟಿವೆ. ಎರಡು ದಶಕಗಳ ಹಿಂದೆ ಭಾರತ ವೇಟ್‌ಲಿಫ್ಟಿಂಗ್ ಸಂಸ್ಥೆಯನ್ನು ವಿಶ್ವ ವೇಟ್‌ಲಿಫ್ಟಿಂಗ್ ಫೆಡರೇಷನ್ ನಿಷೇಧಿಸಿತ್ತು. ಆಗ ಒಂದೇ ವರ್ಷದಲ್ಲಿ ಮೂರಕ್ಕಿಂತ ಹೆಚ್ಚು ವೇಟ್‌ಲಿಫ್ಟರ್‌ಗಳು ನಿಷೇಧಿತ ಮದ್ದು ಸೇವನೆ ಮಾಡಿ ಸಿಕ್ಕಿಬಿದ್ದಿದ್ದರು. ಇತ್ತೀಚಿನ ದಿನಗಳಲ್ಲಿ ಬೇರೆ ಕ್ರೀಡೆಗಳಿಗೂ ಈ ಪಿಡುಗು ವ್ಯಾಪಿಸಿದೆ.

ಎರಡು ದಿನಗಳ ಹಿಂದಷ್ಟೇ ಕ್ರಾಸ್‌ಕಂಟ್ರಿ ಹಾಗೂ ಸ್ಟೀಪಲ್‌ಚೇಸ್ ಕ್ರೀಡೆಯ ನಾಲ್ಕು ಅಥ್ಲೀಟ್‌ಗಳ ಮೇಲೆ ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ) ನಿಷೇಧ ಹೇರಿದೆ. ರಾಷ್ಟ್ರಮಟ್ಟದ ಕ್ರೀಡೆಗಳ ಲ್ಲಿಯೇ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಹೋದ ವರ್ಷ ಒಂದು ಹಾಸ್ಯಾಸ್ಪದ ಘಟನೆ ನಡೆದಿತ್ತು. ದೆಹಲಿಯಲ್ಲಿ ನಡೆದಿದ್ದ ಅಥ್ಲೆಟಿಕ್ ಕೂಟದಲ್ಲಿ 100 ಮೀಟರ್ ಓಟದಲ್ಲಿ ಅಥ್ಲೀಟ್‌ವೊಬ್ಬ ಅಂತಿಮ ಗೆರೆ ಮೀರಿಯೂ ಓಡುತ್ತಿದ್ದ. ಆತನನ್ನು ಬೆನ್ನಟ್ಟಿ ಹಿಡಿದಿದ್ದ ನಾಡಾ ಅಧಿಕಾರಿಗಳು ಮೂತ್ರದ ಸ್ಯಾಂಪಲ್
ಸಂಗ್ರಹಿಸಿದ್ದರು. ಪರೀಕ್ಷೆಯ ನಂತರ ಆ ಅಥ್ಲೀಟ್ ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದುದು ಖಚಿತವಾಗಿತ್ತು. ಕೆಲವು ತಿಂಗಳುಗಳ ಹಿಂದೆ ಕರ್ನಾಟಕದಲ್ಲಿ ನಡೆದಿದ್ದ ಕುಸ್ತಿ ಸ್ಪರ್ಧೆಯೊಂದರಲ್ಲಿ ನಿಷೇಧಿತ ಮದ್ದು ಬಳಸಿದ್ದ ಸಿರಿಂಜ್‌ಗಳು ಪತ್ತೆಯಾಗಿದ್ದವು. ದಿಢೀರ್‌ ಯಶಸ್ಸು ಗಳಿಸುವ ದುರಾಲೋಚನೆಯಿಂದ ಕೆಲವು ಕ್ರೀಡಾಪಟುಗಳು ಡೋಪಿಂಗ್ ಪಿಡುಗಿಗೆ ಬಲಿಯಾಗುತ್ತಿದ್ದಾರೆ. ಖೇಲೋ ಇಂಡಿಯಾ ಪದಕ ವಿಜೇತರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಈಚೆಗೆ ಘೋಷಿಸಿರುವುದು ಸ್ವಾಗತಾರ್ಹ. ಆದರೆ ಈ ಕೂಟಗಳಲ್ಲಿ 5 ಸಾವಿರದಿಂದ 6 ಸಾವಿರ ಕ್ರೀಡಾಪಟುಗಳು
ಭಾಗವಹಿಸುತ್ತಾರೆ. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವ ಸಾಮರ್ಥ್ಯ ಹಾಗೂ ಸಂಪನ್ಮೂಲಗಳು ನಾಡಾದಲ್ಲಿ ಇಲ್ಲ. ಹೀಗಾಗಿ, ಇದರ ದುರ್ಲಾಭ ಪಡೆಯಲು ಕೆಲವರು ಮುಂದಾಗುವ ಸಾಧ್ಯತೆ ಇದೆ. ಕ್ರೀಡಾ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಯುರೋಪ್ ದೇಶಗಳಲ್ಲಿ ಇರುವಂತಹ ಸೌಲಭ್ಯ ನಾಡಾದಲ್ಲಿ ಇಲ್ಲ.


ಪ್ರಯೋಗಾಲಯಗಳ ಸಂಖ್ಯೆಯೂ ಕಡಿಮೆ. ಭಾರತವು 2022–23ನೇ ಸಾಲಿನಲ್ಲಿ 3,865 ಮಾದರಿಗಳ ಪರೀಕ್ಷೆ ನಡೆಸಿದೆ. ಆದರೆ ಚೀನಾ (19,228) ಮತ್ತು ಜರ್ಮನಿ (13,653) ದೇಶಗಳು ನಡೆಸುವ ಪರೀಕ್ಷೆಗಳ ಮಟ್ಟಕ್ಕೆ ಏರಲು ಇನ್ನೂ ಬಹಳಷ್ಟು ಕಾಲ ಬೇಕಾಗಬಹುದು. ನಾಡಾದ ಕಾರ್ಯಯೋಜನೆಗಳಿಗಾಗಿ 2025ರ ಕೇಂದ್ರ ಬಜೆಟ್‌ನಲ್ಲಿ ₹ 22.3 ಕೋಟಿ ಮೀಸಲಿಡಲಾಗಿದೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಆಧುನಿಕ ಕ್ರೀಡಾ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸುವುದು ತುರ್ತು ಅಗತ್ಯವಾಗಿದೆ. ನಾಡಾ ಮತ್ತು ಕ್ರೀಡಾ ಫೆಡರೇಷನ್‌ಗಳಲ್ಲಿ ಪರಿಣತ ವೈದ್ಯರು ಮತ್ತು ತಂತ್ರಜ್ಞರನ್ನು ನೇಮಿಸಬೇಕು. ಕ್ರೀಡಾಪಟುಗಳು, ಪಾಲಕರು ಮತ್ತು ತರಬೇತುದಾರರಲ್ಲಿ ಉದ್ದೀಪನ ಮದ್ದು ಸೇವನೆಯ ಅಡ್ಡಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಆದ್ಯತೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT