ಶನಿವಾರ, ನವೆಂಬರ್ 26, 2022
22 °C

ವಿರೋಧ ಪಕ್ಷಗಳಿಗೆ ಸ್ಥಾನ ನಿರಾಕರಣೆ; ಆಡಳಿತಾರೂಢ ಪಕ್ಷದ ನಡೆ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಂಸತ್ತಿನ ಕೆಲವು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರತಿನಿಧಿಗಳಿಗೆ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವು ತಪ್ಪು. ಇದು ಅತ್ಯುತ್ತಮ ಸಂಸದೀಯ ಪರಂಪರೆಗೆ ವಿರುದ್ಧವಾದ ನಡೆ. ಗೃಹ ವ್ಯವಹಾರಗಳಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಕಳೆದುಕೊಳ್ಳಲಿದೆ. ಆಹಾರ ಮತ್ತು ಗ್ರಾಹಕ ವ್ಯವಹಾರಗಳಿಗೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಟಿಎಂಸಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷವು ಸಂಸತ್ತಿನ ಮೂರು ಸಮಿತಿಗಳ ನೇತೃತ್ವ ವಹಿಸಿದೆ. ಅವುಗಳ ಪೈಕಿ ಗೃಹ ವ್ಯವಹಾರಗಳದ್ದೂ ಒಂದು. ಕಾಂಗ್ರೆಸ್ಸಿನ ಶಶಿ ತರೂರ್ ಅವರು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಮಿತಿಯೊಂದರ ನೇತೃತ್ವ ವಹಿಸಿದ್ದಾರೆ. ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಮಿತಿಯ ನೇತೃತ್ವವು ಕಾಂಗ್ರೆಸ್ಸಿನ ಜೈರಾಂ ರಮೇಶ್ ಅವರದ್ದು. ಐ.ಟಿ. ಸಮಿತಿಯ ಮುಖ್ಯಸ್ಥ ಸ್ಥಾನದಿಂದ ತರೂರ್ ಅವರನ್ನು ಕೆಳಗಿಳಿಸಲು ಯತ್ನ ನಡೆದಿದೆ ಎಂಬ ವರದಿಗಳು ಇವೆ. ಈ ಯತ್ನವನ್ನು ಕಾಂಗ್ರೆಸ್ಸಿನ ಉಭಯ ಸದನಗಳ ನಾಯಕರು ವಿರೋಧಿಸಿದ್ದಾರೆ. ಅಲ್ಲದೆ, ಐ.ಟಿ. ಕುರಿತ ಸಮಿತಿಯ ಐದು ಮಂದಿ ಸದಸ್ಯರು ತರೂರ್ ಅವರನ್ನು ಅಧ್ಯಕ್ಷ ಸ್ಥಾನದಲ್ಲಿಯೇ ಉಳಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಹೀಗೆ ಆಗ್ರಹಿಸಿರುವವರಲ್ಲಿ ಬಿಜೆಪಿಯ ಒಬ್ಬ ಸಂಸದ ಕೂಡ ಸೇರಿದ್ದಾರೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್ಸಿನ ಸಂಖ್ಯಾಬಲವು ಮೊದಲು 34 ಇದ್ದಿದ್ದು ಈಗ 31ಕ್ಕೆ ಇಳಿಕೆಯಾಗಿರುವ ಕಾರಣದಿಂದಾಗಿ ಆ ಪಕ್ಷಕ್ಕೆ ಸಮಿತಿಯೊಂದರ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಲಾಗುತ್ತಿದೆ ಎಂದು ಕೇಂದ್ರವು ಹೇಳಿದೆ. ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ
ಟಿಎಂಸಿ ಪಕ್ಷವು ಸಮಿತಿಗಳನ್ನು ರಚಿಸಿದ ಬಗೆಗೆ ತಿರುಗೇಟು ನೀಡುವ ಉದ್ದೇಶದಿಂದ ಸಂಸತ್ತಿನಲ್ಲಿ ಆ ಪಕ್ಷಕ್ಕೆ ಸಮಿತಿಯೊಂದರ ಅಧ್ಯಕ್ಷ ಸ್ಥಾನ ನಿರಾಕರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ನಿರಾಕರಿಸುವುದು ಸಣ್ಣ ವಿಷಯವಾಗಿ ಕಾಣಬಹುದು. ಆದರೆ, ಸಂಸದೀಯ ವ್ಯವಹಾರಗಳಲ್ಲಿ ಇಂತಹ ಸಮಿತಿಗಳ ಪ್ರಾಮುಖ್ಯವನ್ನು ಪರಿಗಣಿಸಿ, ಚಾಲ್ತಿಯಲ್ಲಿ ಇರುವ
ಸಂಪ್ರದಾಯಗಳನ್ನು ಗೌರವಿಸಬೇಕಾದ ಅಗತ್ಯವನ್ನು ಗಮನಿಸಿ ಹೇಳುವುದಾದಲ್ಲಿ, ಆಡಳಿತಾರೂಢ ಪಕ್ಷವು ವಿರೋಧ ಪಕ್ಷಗಳ ಜೊತೆ ವ್ಯವಹರಿಸುವಾಗ ಇನ್ನಷ್ಟು ಒಳಗೊಳ್ಳುವ ಮನೋಭಾವ ತೋರಿಸಬೇಕು. ಸಂಸತ್ತು ಎಂದರೆ ಅಲ್ಲಿ ಸಂಖ್ಯೆ ಮಾತ್ರವೇ ಮುಖ್ಯವಲ್ಲ. ವಿರೋಧ ಪಕ್ಷಗಳ ಸಂಖ್ಯಾ ಬಲ ಕಡಿಮೆ ಆಗಿದ್ದರೂ, ಅವು ಸಂಸತ್ತಿನ ಬಹುಮುಖ್ಯ ಭಾಗ. ವಿರೋಧ ಪಕ್ಷಗಳ ಅಸ್ತಿತ್ವವು ಇತರರ ಗಮನಕ್ಕೆ ಬರುವಂತೆ ಹಾಗೂ ಅವುಗಳ ಧ್ವನಿಯು ಇತರರ ಕಿವಿಗೂ ಬೀಳುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು. ಆಗಮಾತ್ರ ಸರ್ಕಾರದ ಕೆಲಸವೂ ಸರಿಯಾದ ರೀತಿಯಲ್ಲಿ ಸಾಗುತ್ತದೆ.

ಆದರೆ, ಕೇಂದ್ರ ಸರ್ಕಾರವು ಸಂಸತ್ತಿನ ಒಳಗೆ ಅಥವಾ ಹೊರಗೆ ವಿರೋಧ ಪಕ್ಷಗಳನ್ನು ಒಳಗೊಳ್ಳುವ ಪ್ರವೃತ್ತಿಯನ್ನು ಹೊಂದಿಲ್ಲ. ಆದರೆ ಈ ರೀತಿ ಮಾಡುವುದರಿಂದ ತನಗೆ ಹಾಗೂ ದೇಶಕ್ಕೆ ಆಗಬಹುದಾದ ನಷ್ಟ ಏನು ಎಂಬುದು ಸರ್ಕಾರಕ್ಕೆ ಅರಿವಾಗಬೇಕು. ಮುಂದೆ ಸಂಸತ್ತಿನಲ್ಲಿ ಮಂಡನೆ ಆಗಬಹುದಾದ ಮಸೂದೆಗಳನ್ನು ಆಮೂಲಾಗ್ರವಾಗಿ ಚರ್ಚಿಸುವ ವೇದಿಕೆಗಳು ಸಂಸತ್ತಿನ ಸ್ಥಾಯಿ ಸಮಿತಿಗಳು. ಸಂಸತ್ತಿನಲ್ಲಿ ಮಸೂದೆಗಳನ್ನು ವಿಸ್ತೃತವಾಗಿ ಪರಿಶೀಲನೆಗೆ ಒಳಪಡಿಸುವುದು ಸುಲಭದ ಕೆಲಸವಲ್ಲ. ಹಾಗಾಗಿ, ಸ್ಥಾಯಿ ಸಮಿತಿಗಳು ಮಾಡಬೇಕಾದ ಕೆಲಸವು ಮಹತ್ವ ಪಡೆಯುತ್ತದೆ. ಮಸೂದೆಗಳನ್ನು ಸೂಕ್ಷ್ಮವಾಗಿ ಹಾಗೂ ವಿಮರ್ಶಾತ್ಮಕವಾಗಿ ಪರಿಶೀಲಿಸಿ, ಅವುಗಳಿಗೆ ಸೂಕ್ತ ಬದಲಾವಣೆಗಳನ್ನು ಸೂಚಿಸುವ ಮೂಲಕ ವಿರೋಧ ಪಕ್ಷಗಳು ಮಸೂದೆಗಳನ್ನು ಇನ್ನಷ್ಟು ಪರಿಣಾಮಕಾರಿ ಆಗಿಸುತ್ತವೆ. ಇಂತಹ ಸಮಾಲೋಚನೆ ಪ್ರಕ್ರಿಯೆಗಳ ಕಾರಣದಿಂದಾಗಿ ಹಿಂದೆ ಹಲವು ಮಸೂದೆಗಳು ಪ್ರಯೋಜನ ಪಡೆದುಕೊಂಡಿವೆ. ಈಗ ಸಂಸತ್ತಿನಲ್ಲಿ ಮತ್ತು ಸಂಸತ್ತಿನ ಸಮಿತಿಗಳಲ್ಲಿ ವಿರೋಧ ಪಕ್ಷಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಇಲ್ಲ. ಈಗಿರುವ ಸಣ್ಣ ಪ್ರಾತಿನಿಧ್ಯವನ್ನೂ ನಿರಾಕರಿಸುವ ಕೆಲಸವು ಆಡಳಿತಾರೂಢ ಪಕ್ಷದ ಕಡೆಯಿಂದ ಆಗಬಾರದು. ಅಧ್ಯಕ್ಷ ಸ್ಥಾನವನ್ನು ತನ್ನ ಜೊತೆ ಸ್ನೇಹದಿಂದ ಇರುವ ಇನ್ನೊಂದು ಪಕ್ಷಕ್ಕೆ ನೀಡುವುದೂ ಸರಿಯಲ್ಲ. ಏಕೆಂದರೆ, ಇಂತಹ ಸಮಿತಿಗಳು ಮಸೂದೆಗಳನ್ನು ವಿಮರ್ಶಾತ್ಮಕವಾಗಿ, ಚಿಕಿತ್ಸಕವಾಗಿ ನೋಡುವ ಅಗತ್ಯ ಇದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು