ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಪ್ಲಾಸ್ಟಿಕ್‌ ತ್ಯಾಜ್ಯ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಅಗತ್ಯ

Published : 10 ಸೆಪ್ಟೆಂಬರ್ 2024, 23:31 IST
Last Updated : 10 ಸೆಪ್ಟೆಂಬರ್ 2024, 23:31 IST
ಫಾಲೋ ಮಾಡಿ
Comments

ಜಗತ್ತಿನಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿಸುತ್ತಿರುವ ದೇಶ ಎಂಬ ಕುಖ್ಯಾತಿಯನ್ನು ಈಗ ಭಾರತ ಪಡೆದುಕೊಂಡಿದೆ. ಈ ಹಿಂದೆ ಅಂತಹ ಕುಖ್ಯಾತಿಗೆ ಚೀನಾ ಒಳಗಾಗಿತ್ತು. ಸದ್ಯದ ಭವಿಷ್ಯದಲ್ಲಿ ಈ ಕುಖ್ಯಾತಿಯನ್ನು ನಮ್ಮ ದೇಶ ಕಳಚಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಭಾರತದಲ್ಲಿ ಪ್ರತಿವರ್ಷ ಸೃಷ್ಟಿಯಾಗುವ ಪ್ಲಾಸ್ಟಿಕ್‌ ತ್ಯಾಜ್ಯವು ಸುಮಾರು 93 ಲಕ್ಷ ಟನ್‌. ಜಗತ್ತಿನಲ್ಲಿ ಸೃಷ್ಟಿಯಾಗುವ ‍ಪ್ಲಾಸ್ಟಿಕ್‌ ತ್ಯಾಜ್ಯದ ಐದನೇ ಒಂದು ಭಾಗ ಇದು. ಲೀಡ್ಸ್‌ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಿಂದ ಈ ಮಾಹಿತಿ ತಿಳಿದುಬಂದಿದೆ. ಇತರ ಅಧ್ಯಯನಗಳ ಫಲಿತಾಂಶವೂ ಇದೇ ರೀತಿಯಲ್ಲಿ ಇದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು 2020–21ರಲ್ಲಿ ಸಿದ್ಧಪಡಿಸಿದ ವರದಿಯ ಪ್ರಕಾರ, ದೇಶದಲ್ಲಿ ಪ್ರತಿವರ್ಷ ಸೃಷ್ಟಿಯಾಗುವ ಪ್ಲಾಸ್ಟಿಕ್‌ ತ್ಯಾಜ್ಯವು 40 ಲಕ್ಷ ಟನ್‌. ತ್ಯಾಜ್ಯದ ಪ್ರಮಾಣವನ್ನು ಸರಿಯಾಗಿ ಅಂದಾಜಿಸುವುದು ಬಹಳ ಕಷ್ಟ. ಹೀಗಾಗಿ, ಸೃಷ್ಟಿಯಾಗುವ ಪ್ಲಾಸ್ಟಿಕ್‌ ತ್ಯಾಜ್ಯವು ಈ ಅಂಕಿಗಳಿಗಿಂತಲೂ ಬಹಳ ಹೆಚ್ಚು ಆಗಿರಬಹುದು. ಗ್ರಾಮೀಣ ಪ್ರದೇಶದಲ್ಲಿ ಬೆಂಕಿಗೆ ಹಾಕಲಾದ, ಸಂಗ್ರಹಿಸಿಲ್ಲದ ಮತ್ತು ಮರುಬಳಕೆಯಾದ ಪ್ಲಾಸ್ಟಿಕ್‌ ಇದರಲ್ಲಿ ಸೇರಿಲ್ಲ ಎಂದು ಲೀಡ್ಸ್‌ ವರದಿ ಹೇಳಿದೆ. ದೇಶದಲ್ಲಿ ಅತಿ ಹೆಚ್ಚು ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿಯಾಗುವ ನಗರ ದೆಹಲಿ.

ಪ್ಲಾಸ್ಟಿಕ್‌ ತ್ಯಾಜ್ಯವು ಅತಿಯಾಗಿದೆ ಎಂಬುದಾಗಲೀ ಅದರ ಬಗೆಗಿನ ಕಳವಳವಾಗಲೀ ಹೊಸದೇನೂ ಅಲ್ಲ. ಪ್ಲಾಸ್ಟಿಕ್‌ ತ್ಯಾಜ್ಯದ  ಸಮಸ್ಯೆಯು ವರ್ಷ ಕಳೆದಂತೆ ಹೆಚ್ಚುತ್ತಲೇ ಇದೆ. ಈ ಹಿಂದೆ, ಅತಿ ಹೆಚ್ಚು ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿಸುತ್ತಿದ್ದ ಚೀನಾ ತನ್ನ ಈ ಸಮಸ್ಯೆಯನ್ನು ಅತ್ಯಂತ ದಕ್ಷವಾಗಿ ನಿವಾರಿಸಿಕೊಂಡಿದೆ; ಪ್ಲಾಸ್ಟಿಕ್‌ನ ದಹಿಸುವಿಕೆ ಮತ್ತು ಹೂಳುವಿಕೆ ಮೂಲಕ ಚೀನಾ ಈ ಕೆಲಸ ಮಾಡಿದೆ. ತ್ಯಾಜ್ಯ ವಿಲೇವಾರಿ, ನಿವಾರಣೆ ಮತ್ತು ಮರುಬಳಕೆಯ ವ್ಯವಸ್ಥೆಯನ್ನು ಭಾರತವು ಉತ್ತಮಪ‍ಡಿಸಿಕೊಳ್ಳಬೇಕಿದೆ. ಸಾರ್ವಜನಿಕ ಆರೋಗ್ಯ, ಸುಸ್ಥಿರ ಅಭಿವೃದ್ಧಿ ಮತ್ತು ಸ್ವಚ್ಛ ಪರಿಸರ ಎಲ್ಲದರ ಮೇಲೆಯೂ ಇದು ಪ್ರತಿಕೂಲ ಪರಿಣಾಮ ಬೀರುತ್ತದೆ. ಸುಟ್ಟ ಬಳಿಕವೂ ಉಳಿಯುವ ಪ್ಲಾಸ್ಟಿಕ್‌ನ ಅತಿ ಸಣ್ಣ ಕಣಗಳು ನಮ್ಮ ದೇಹದೊಳಕ್ಕೆ ಪ್ರವೇಶಿಸಿ, ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತವೆ. ಜಗತ್ತಿನ ಉತ್ತರ ಭಾಗದ ದೇಶಗಳಿಗೆ ಹೋಲಿಸಿದರೆ ದಕ್ಷಿಣದ ದೇಶಗಳಲ್ಲಿ ‍ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸುವ ಸಂ‍ಪನ್ಮೂಲ ಕಡಿಮೆ ಇದೆ. ಆದರೆ, ಪ್ಲಾಸ್ಟಿಕ್‌ ತ್ಯಾಜ್ಯವು ‍ಪ್ರತಿಯೊಬ್ಬರ ಮೇಲೆಯೂ ಪರಿಣಾಮ ಬೀರುತ್ತದೆ. ಹಾಗಾಗಿ, ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇಡೀ ಜಗತ್ತು ಒಟ್ಟಾಗಿ ಶ್ರಮಿಸಬೇಕು.

ಪ್ಲಾಸ್ಟಿಕ್‌ ತ್ಯಾಜ್ಯದ ಸಂಗ್ರಹ, ವಿಲೇವಾರಿ ಮತ್ತು ಮರುಬಳಕೆಗೆ ಭಾರತದಲ್ಲಿ ನಿಯಮಗಳು ಮತ್ತು ನಿಬಂಧನೆಗಳು ಇವೆ. ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ನಿಯಮಗಳು ಮತ್ತು ಪ್ಲಾಸ್ಟಿಕ್‌ ತಯಾರಕರ ಹೊಣೆಗಾರಿಕೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದಕ್ಕೆ ಸಂಬಂಧಿಸಿ ವಿಸ್ತೃತವಾದ ಪ್ರಕ್ರಿಯೆಗಳನ್ನೂ ರೂಪಿಸಲಾಗಿದೆ. ಆದರೆ, ಅನುಷ್ಠಾನ ಮಾತ್ರ ಸಮರ್ಪಕವಾಗಿ ಇಲ್ಲ. ನಿಯಮಗಳಿಂದ ತಪ್ಪಿಸಿಕೊಳ್ಳಲಾಗುತ್ತದೆ. ಭ್ರಷ್ಟಾಚಾರವೂ ಇದೆ. ತ್ಯಾಜ್ಯ ಸಂಗ್ರಹ, ವಿಲೇವಾರಿ ಮತ್ತು ಮರುಬಳಕೆಗೆ ಬೇಕಾದ ಸಂಪನ್ಮೂಲದ ಕೊರತೆ ಇದೆ. ದಕ್ಷತೆಯೂ ಇಲ್ಲ. ಏಕಬಳಕೆ ಪ್ಲಾಸ್ಟಿಕ್‌ ಅನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸುವ ಪ್ರಯತ್ನಗಳ ಸಮನ್ವಯಕ್ಕೆ ಕಾರ್ಯಪಡೆಯನ್ನು ರಚಿಸಲಾಗಿದೆ. ನಿಯಮಗಳ ಅನುಷ್ಠಾನವನ್ನು ಉತ್ತಮಪಡಿಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಕೆಲವು ಕ್ರಮಗಳನ್ನು ಕೈಗೊಂಡಿದೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ತು ಸುಸ್ಥಿರ ಪ್ಯಾಕಿಂಗ್‌ಗಾಗಿ ಅಭಿಯಾನವೊಂದನ್ನು ಆರಂಭಿಸಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಪಾತ್ರ ನಿರ್ಣಾಯಕ. ಆದರೆ, ಹಲವು ರಾಜ್ಯಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ನಿಷ್ಕ್ರಿಯವಾಗಿವೆ. ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಇದ್ದರೂ ಪ್ಲಾಸ್ಟಿಕ್ ತಲಾ ಬಳಕೆ ಪ್ರಮಾಣವು ಕಡಿಮೆ. ಆದರೆ, ಇದು ಖುಷಿಪಡುವ ವಿಚಾರವೇನೂ ಅಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT