ಪ್ರಧಾನಿ ನರೇಂದ್ರ ಮೋದಿ ಅವರು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರ ಮನೆಯಲ್ಲಿ ನಡೆದ ಗಣೇಶ ಪೂಜೆಗೆ ಹೋಗಿರುವುದನ್ನು ವಿರೋಧ ಪಕ್ಷಗಳು ಮತ್ತು ವಕೀಲರ ಒಂದು ವರ್ಗ ತೀವ್ರವಾಗಿ ಖಂಡಿಸಿವೆ. ಪ್ರಧಾನಿ ಮತ್ತು ಸಿಜೆಐ ಅವರು ಖಾಸಗಿ ಧಾರ್ಮಿಕ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ಸಮಂಜಸವಲ್ಲ ಎಂದು ಇತರ ಕೆಲವರು ಕೂಡ ಭಾವಿಸಿದ್ದಾರೆ. ಪ್ರಧಾನಿಯವರು ಸಿಜೆಐ ಮನೆಯಲ್ಲಿ ನಡೆದ ಪೂಜೆಯಲ್ಲಿ ಭಾಗವಹಿಸಿದ್ದಕ್ಕೆ ಸಂಬಂಧಿಸಿದ ವಿಡಿಯೊ ಮತ್ತು ಫೋಟೊಗಳನ್ನು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. ಕಾರ್ಯಾಂಗ ಮತ್ತು ನ್ಯಾಯಾಂಗ ಎರಡೂ ಪ್ರತ್ಯೇಕ ಅಂಗಗಳು ಎಂಬ ಸಂವಿಧಾನದ ತತ್ವವನ್ನೇ ಈ ಭೇಟಿಯು ಉಲ್ಲಂಘಿಸಿದೆ ಎಂಬುದು ವಿರೋಧ ಪಕ್ಷಗಳ ಪ್ರತಿಪಾದನೆ. ಅವರಿಬ್ಬರೂ ಸ್ವೀಕರಿಸಿದ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನವನ್ನು ಈ ಭೇಟಿಯ ಮೂಲಕ ಉಲ್ಲಂಘಿಸಿದ್ದಾರೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಸರ್ಕಾರದ ಹುದ್ದೆಯಲ್ಲಿರುವ ಪ್ರತಿಯೊಬ್ಬರೂ ಧರ್ಮನಿರಪೇಕ್ಷತೆಯನ್ನು ಅನುಸರಿಸಬೇಕು ಮತ್ತು ಧಾರ್ಮಿಕತೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಾರದು ಎಂದು ಸಂವಿಧಾನ ಹೇಳುತ್ತದೆ. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಮತ್ತು ಪ್ರಧಾನಿಯವರು ಜೊತೆಯಾಗಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಈ ಬಗೆಯಲ್ಲಿ ಹಿಂದೆಂದೂ ಕಾಣಿಸಿಕೊಂಡಿದ್ದೇ ಇಲ್ಲ. ಹಾಗಾಗಿಯೇ ಈಗಿನ ಬೆಳವಣಿಗೆಯು ಪ್ರಶ್ನೆಗಳನ್ನು ಎತ್ತಿದೆ ಹಾಗೂ ಗುಮಾನಿಗೆ ಕಾರಣವಾಗಿದೆ.

ಕೆಳಹಂತದ ನ್ಯಾಯಾಲಯವೇ ಇರಲಿ, ಉನ್ನತ ನ್ಯಾಯಾಲಯವೇ ಇರಲಿ ಅಲ್ಲಿ ಇರುವವರು ಕಾರ್ಯಾಂಗದ ಸದಸ್ಯರ ಜೊತೆಗೆ ನಂಟು ಬೆಳೆಸಿಕೊಳ್ಳಲೇಬಾರದು; ಕಾರ್ಯಾಂಗದ ಸದಸ್ಯರಷ್ಟೇ ಅಲ್ಲ ರಾಜಕಾರಣಿಗಳು, ಸಮಾಜದ ಮುಖಂಡರು, ಗಣ್ಯ ವ್ಯಕ್ತಿಗಳ ಜೊತೆಗೆ ಸಂಪರ್ಕ ಇರಿಸಿಕೊಂಡರೆ, ಅದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಬಹುದು ಅಥವಾ ಅದು ಜನರಲ್ಲಿ ಗುಮಾನಿ ಸೃಷ್ಟಿಸಬಹುದು. ಈ ಹಿಂದಿನ ಹಲವು ನ್ಯಾಯಮೂರ್ತಿಗಳು ಈ ಶಿಷ್ಟಾಚಾರದ ಕುರಿತು ಬಹಳ ಕಟ್ಟುನಿಟ್ಟಿನಿಂದ ಇದ್ದರು. ಸಾರ್ವಜನಿಕ ಸಭೆಗಳಲ್ಲಿ ಪರಸ್ಪರ ಭೇಟಿಯನ್ನು ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ಆದರೆ, ಪ್ರಧಾನಿಯು ಸಿಜೆಐ ಮನೆಗೆ ಭೇಟಿ ನೀಡುವುದನ್ನು ಈ ರೀತಿಯಲ್ಲಿ ನೋಡಲು ಸಾಧ್ಯವಿಲ್ಲ. ಪ್ರಧಾನಿಯವರ ಭೇಟಿಯನ್ನು ಬಿಜೆಪಿ ಬಲವಾಗಿ ಸಮರ್ಥಿಸಿಕೊಂಡಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 2009ರಲ್ಲಿ ನಡೆಸಿದ ಇಫ್ತಾರ್ ಕೂಟದಲ್ಲಿ ಆಗಿನ ಸಿಜೆಐ ಕೆ.ಜಿ. ಬಾಲಕೃಷ್ಣನ್ ಭಾಗಿಯಾಗಿರಲಿಲ್ಲವೇ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದಾರೆ. ಈ ಎರಡು ಪ್ರಸಂಗಗಳ ನಡುವೆ ಯಾವುದೇ ಹೋಲಿಕೆ ಸಾಧ್ಯವಿಲ್ಲ. ಏಕೆಂದರೆ, ಇಫ್ತಾರ್ ಕೂಟ ಎಂಬುದು ಸಾರ್ವಜನಿಕ ಕಾರ್ಯಕ್ರಮ. ಆ ಕಾರ್ಯಕ್ರಮಕ್ಕೆ ಇತರ ಹಲವರನ್ನು ಆಹ್ವಾನಿಸಲಾಗುತ್ತದೆ ಮತ್ತು ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಬಂದಿರುತ್ತಾರೆ. ಆದರೆ ಮನೆಯಲ್ಲಿನ ಗಣೇಶ ಪೂಜೆಯು ಸಂಪೂರ್ಣವಾಗಿ ಖಾಸಗಿ ಕಾರ್ಯಕ್ರಮ. ಸಿಜೆಐ ಮನೆಯಲ್ಲಿ ನಡೆದ ಪೂಜೆಗೆ ವಿರೋಧ ಪಕ್ಷಗಳ ಮುಖಂಡರು ಅಥವಾ ಇತರ ಗಣ್ಯರನ್ನು ಆಹ್ವಾನಿಸಲಾಗಿತ್ತೇ ಎಂಬ ಮಾಹಿತಿ ಇಲ್ಲ. ಈ ಕುರಿತು ಮಾಹಿತಿ ಇಲ್ಲದೇ ಇರುವುದರಿಂದ, ಪೂಜೆಯಲ್ಲಿ ಪ್ರಧಾನಿಯವರ ಉಪಸ್ಥಿತಿ ಪ್ರಶ್ನೆಗಳಿಗೆ ಕಾರಣವಾಗುತ್ತದೆ.

ಸರ್ಕಾರ ಅಥವಾ ಆಡಳಿತ ಪಕ್ಷಕ್ಕೆ ಬಹಳ ಮುಖ್ಯವಾದ ಹಲವು ಮಹತ್ವದ ಪ್ರಕರಣಗಳು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬಾಕಿ ಇವೆ ಎಂಬುದನ್ನೂ ವಿರೋಧ ಪಕ್ಷಗಳು ಉಲ್ಲೇಖಿಸಿವೆ. ಈ ರೀತಿಯಲ್ಲಿ ಒಂದಕ್ಕೊಂದು ನಂಟು ಬೆಸೆಯುವುದು ಸರಿಯಲ್ಲ. ಏಕೆಂದರೆ, ಇದು ನ್ಯಾಯಾಂಗದ ಬಗ್ಗೆಯೇ ಗುಮಾನಿ ಹುಟ್ಟಲು ಕಾರಣವಾಗುತ್ತದೆ; ಜೊತೆಗೆ, ಈಗಿನ ಮುಖ್ಯ ನ್ಯಾಯಮೂರ್ತಿಯವರು ಅತ್ಯಂತ ಗೌರವಾನ್ವಿತ ನ್ಯಾಯಮೂರ್ತಿ ಮತ್ತು ಅವರು ಅತ್ಯುನ್ನತ ನ್ಯಾಯಿಕ ತತ್ವಗಳನ್ನು ಎತ್ತಿ ಹಿಡಿದವರು. ಸಾಂವಿಧಾನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವತಂತ್ರ ನ್ಯಾಯಾಂಗಕ್ಕೆ ಅತ್ಯಂತ ಮಹತ್ವ ಇರುವುದರಿಂದಲೇ ಈಗಿನ ವಿವಾದವು ಸೃಷ್ಟಿಯಾಗಿದೆ. ಇಂತಹ ವಿವಾದವು ಕಾರ್ಯಾಂಗಕ್ಕಿಂತ ನ್ಯಾಯಾಂಗಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತದೆ. ಹಾಗಾಗಿ, ಈ ವಿವಾದವನ್ನು ತಪ್ಪಿಸಬಹುದಿತ್ತು. ನ್ಯಾಯಾಂಗವು ಸ್ವತಂತ್ರವಾಗಿರಲೇಬೇಕು ಮತ್ತು ವಿವಾದಾತೀತವಾಗಿಯೂ ಇರಬೇಕು. ಆದರೆ ಅದಷ್ಟೇ ಸಾಲದು. ಅದು ಹಾಗೆಯೇ ಇದೆ ಎಂಬುದು ಎಲ್ಲರ ಕಣ್ಣಿಗೂ ಕಾಣುವಂತಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.