ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪ್ರಕರಣಗಳ ವಿಚಾರಣೆ ಮುಂದಕ್ಕೆ, ಸಿಜೆಐ ಕಳವಳ ಅರ್ಥಮಾಡಿಕೊಳ್ಳಬೇಕು

Published 10 ನವೆಂಬರ್ 2023, 23:30 IST
Last Updated 10 ನವೆಂಬರ್ 2023, 23:30 IST
ಅಕ್ಷರ ಗಾತ್ರ

ದೇಶದ ಸುಪ್ರೀಂ ಕೋರ್ಟ್‌ ‘ತಾರೀಖ್ ಪೆ ತಾರೀಖ್’ ನ್ಯಾಯಾಲಯ ಆಗುವುದನ್ನು ತಾವು ಬಯಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಹೇಳಿದ್ದಾರೆ. ಈ ಮಾತು ದೇಶದ ಎಲ್ಲ ಹಂತಗಳ ನ್ಯಾಯಾಲಯಗಳು ಎದುರಿಸುತ್ತಿರುವ ಗಂಭೀರ ಸಮಸ್ಯೆಯೊಂದನ್ನು ಹೇಳುತ್ತಿದೆ. ಕೋರ್ಟ್‌ಗಳಲ್ಲಿ ವ್ಯಾಪಕವಾಗಿರುವ, ಪ್ರಕರಣದ ವಿಚಾರಣೆಯನ್ನು ಮುಂದಿನ ದಿನಾಂಕಕ್ಕೆ ನಿಗದಿ ಮಾಡಿಸಿಕೊಳ್ಳುವ ಸಂಸ್ಕೃತಿಯ ಬಗ್ಗೆ ಸಿಜೆಐ ಈ ಮಾತು ಆಡಿದ್ದಾರೆ. ಈ ಸಂಸ್ಕೃತಿಯು ದೇಶದ ನ್ಯಾಯಾಂಗ ವ್ಯವಸ್ಥೆಯ ಪಾಲಿಗೆ ಒಂದು ಶಾಪವಾಗಿ ಪರಿಣಮಿಸಿದೆ. ಪ್ರಕರಣಗಳ ವಿಚಾರಣೆಯನ್ನು ಮತ್ತೆ ಮತ್ತೆ ಮುಂದಕ್ಕೆ ಹಾಕುವುದು ನ್ಯಾಯ ಕೇಳಿ ಬಂದವರ ಹಿತಾಸಕ್ತಿಗಳಿಗೆ ವಿರುದ್ಧ. ಅತ್ಯಂತ ಕ್ಷುಲ್ಲಕವಾದ ಕೆಲವು ಕಾರಣಗಳಿಗೂ ಕೆಲವು ವಕೀಲರು ವಿಚಾರಣೆಯನ್ನು ಮುಂದಕ್ಕೆ ಹಾಕುವಂತೆ ಮನವಿ ಮಾಡುವುದಿದೆ. ಸಿಜೆಐ ಅವರು ಮೇಲೆ ಉಲ್ಲೇಖಿಸಿದ ಮಾತು ಆಡಿದ ದಿನ ತಮ್ಮ ಎದುರು, ಪ್ರಕರಣಗಳ ವಿಚಾರಣೆಯನ್ನು ಮುಂದಕ್ಕೆ ಹಾಕುವಂತೆ ಕೋರಿ ಒಟ್ಟು 178 ಮನವಿಗಳು ಇವೆ ಎಂದು ಹೇಳಿದ್ದರು. ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಪ್ರಕರಣಗಳ ವಿಚಾರಣೆಯನ್ನು ಮುಂದಕ್ಕೆ ಹಾಕುವಂತೆ ಕೋರಿ ಒಟ್ಟು 3,688 ಮನವಿಗಳು ಬಂದಿದ್ದವು ಎಂದು ಅವರು ಹೇಳಿದ್ದರು. ತೀರಾ ಅಗತ್ಯವಾದ ಸಂದರ್ಭ ಹೊರತುಪಡಿಸಿದರೆ ಬೇರೆ ಸಂದರ್ಭಗಳಲ್ಲಿ ವಿಚಾರಣೆಯನ್ನು ಮುಂದಕ್ಕೆ ಹಾಕುವಂತೆ ಮನವಿ ಮಾಡಬಾರದು ಎಂದು ಸಿಜೆಐ ಅವರು ವಕೀಲ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ನ್ಯಾಯಾಲಯದ ಬಗೆಗಿನ ಗ್ರಹಿಕೆಯನ್ನು ಬದಲಾಯಿಸಬೇಕು ಎಂಬ ಉದ್ದೇಶದಿಂದ ಸಿಜೆಐ ಅವರು ಕಳೆದ ವರ್ಷ ಒಂದು ಪ್ರಕರಣದ ವಿಚಾರಣೆಯನ್ನು ಮುಂದಕ್ಕೆ ಹಾಕಲು ಒಪ್ಪಿರಲಿಲ್ಲ.

ವಿಚಾರಣೆಯನ್ನು ಮತ್ತೆ ಮತ್ತೆ ಮುಂದಕ್ಕೆ ಹಾಕುವುದು ನ್ಯಾಯದಾನದ ಅಂತಿಮ ಉದ್ದೇಶವನ್ನು ಹಾಳುಮಾಡುತ್ತದೆ, ನ್ಯಾಯ ಕೇಳಿ ಬಂದವರಿಗೆ ಹಲವು ಬಗೆಗಳಲ್ಲಿ ತೊಂದರೆ ಉಂಟುಮಾಡುತ್ತದೆ. ಇದರಲ್ಲಿ ಹೆಚ್ಚಿನ ತೊಂದರೆಗೆ ಒಳಗಾಗುವವರು ಬಡವರು. ಪ್ರಕರಣಗಳಲ್ಲಿ ತ್ವರಿತವಾಗಿ ನ್ಯಾಯ ಪಡೆಯಲು ಅವರಿಗೆ ಸಾಧ್ಯವಾಗುವುದಿಲ್ಲ, ಅವರು ಹಲವು ಬಗೆಗಳಲ್ಲಿ ಹೆಚ್ಚು ಹಣ ವೆಚ್ಚ ಮಾಡಬೇಕಾಗುತ್ತದೆ. ನ್ಯಾಯದಾನ ವಿಳಂಬ ಆಗುವುದು ಅಂದರೆ ನ್ಯಾಯದಾನವನ್ನು ನಿರಾಕರಿಸುವುದಕ್ಕೆ ಸಮ. ಹೀಗಾಗಿ, ತನ್ನ ಬಳಿ ನ್ಯಾಯ ಕೇಳಿ ಬರುವವರಿಗೆ ನ್ಯಾಯವನ್ನು ಆದಷ್ಟು ಬೇಗ ನೀಡಲು ನ್ಯಾಯಾಂಗ ವ್ಯವಸ್ಥೆಯು ಗಮನಹರಿಸಬೇಕು. ಒಂದಲ್ಲ ಒಂದು ಕಾರಣಕ್ಕೆ ವಿಚಾರಣೆ ಹಲವು ಬಾರಿ ಮುಂದಕ್ಕೆ ಹೋದ ಪ್ರಕರಣಗಳಿವೆ. ತುರ್ತು ವಿಚಾರಣೆಯ ಮನವಿಯೊಂದಿಗೆ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಕೂಡ ಮುಂದಕ್ಕೆ ಹಾಕುವಂತೆ ಮನವಿ ಸಲ್ಲಿಸಿದ ನಿದರ್ಶನಗಳು ಇವೆ. 2,361 ಪ್ರಕರಣಗಳನ್ನು ಬೇಗ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂಬ ಮನವಿಯು ವಕೀಲರ ಕಡೆಯಿಂದ ಬಂದಿತ್ತು. ಆದರೆ ಅವು ವಿಚಾರಣೆಗೆ ಬಂದಾಗ, ಅವುಗಳಲ್ಲಿ ಬಹುತೇಕ ಪ್ರಕರಣಗಳ ವಿಚಾರಣೆಯನ್ನು ಮುಂದಕ್ಕೆ ಹಾಕಬೇಕು ಎಂಬ ಮನವಿ ಕೂಡ ಬಂತು ಎಂದು ಸಿಜೆಐ ಹೇಳಿದ್ದಾರೆ. ಹಣ ಮತ್ತು ನ್ಯಾಯಾಂಗದ ಸಮಯವನ್ನು ಅತ್ಯಂತ ಉತ್ತಮವಾದ ಬಗೆಯಲ್ಲಿ ಬಳಸಿಕೊಳ್ಳಬೇಕಿರುವಾಗ, ಈ ರೀತಿ ವಿಚಾರಣೆಯನ್ನು ಮುಂದಕ್ಕೆ ಹಾಕುವುದರಿಂದ ಸಂಪನ್ಮೂಲವೂ ವ್ಯರ್ಥವಾಗುತ್ತದೆ. ಈ ಸಮಸ್ಯೆಯು ಅತ್ಯಂತ ಕೆಳಗಿನ ಹಂತದ ನ್ಯಾಯಾಲಯಗಳಿಂದ ಆರಂಭಿಸಿ
ಸುಪ್ರೀಂ ಕೋರ್ಟ್‌ವರೆಗೆ ಇದೆ.

ದೇಶದಲ್ಲಿ ವಿವಿಧ ಹಂತಗಳ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆಯು ದೊಡ್ಡದಿದೆ. ಈ ಸಂಖ್ಯೆಯು ಕಡಿಮೆ ಆಗುತ್ತಿಲ್ಲ. ಬೇರೆ ಬೇರೆ ನ್ಯಾಯಾಲಯಗಳಲ್ಲಿ ಐದು ಕೋಟಿಗೂ ಹೆಚ್ಚು ಪ್ರಕರಣಗಳು ವಿಚಾರಣೆಯ ಹಂತದಲ್ಲಿ ಇವೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ರಾಜ್ಯಸಭೆಯಲ್ಲಿ ಜುಲೈ ತಿಂಗಳಲ್ಲಿ ಹೇಳಿದ್ದರು. ಈ ಪ್ರಕರಣಗಳಲ್ಲಿ ಹಲವು ಇನ್ನೂ ಇತ್ಯರ್ಥ ಕಾಣದಿರುವುದಕ್ಕೆ ಕಾರಣ, ಅವುಗಳ ವಿಚಾರಣೆಯನ್ನು ಮತ್ತೆ ಮತ್ತೆ ಮುಂದಕ್ಕೆ ಹಾಕಿರುವುದೂ ಆಗಿರಬಹುದು. ವಿಚಾರಣೆಯನ್ನು ಮುಂದಕ್ಕೆ ಹಾಕುವುದರಿಂದ ಆಗುವ ವಿಳಂಬವು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರು ಇಟ್ಟಿರುವ ವಿಶ್ವಾಸಕ್ಕೆ ಪೆಟ್ಟು ಕೊಡಬಹುದು. ಪ್ರಕರಣಗಳ ವಿಚಾರಣೆಯು ಬಾಕಿ ಉಳಿಯುವ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ, ವಿಚಾರಣೆ ಮುಂದಕ್ಕೆ ಹಾಕುವುದಕ್ಕೆ ಮಿತಿ ಇರಬೇಕು ಎಂದು ಕಾನೂನು ಆಯೋಗ ಹೇಳಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಚಾರಣೆಗಳನ್ನು ಮುಂದಕ್ಕೆ ಹಾಕುವುದು ಅಗತ್ಯ ಹಾಗೂ ಅದು ಕಾನೂನುಬದ್ಧ ಕ್ರಮ ಕೂಡ ಹೌದು. ಆದರೆ, ಈ ಸೌಲಭ್ಯದ ದುರ್ಬಳಕೆಯನ್ನು ನ್ಯಾಯಾಲಯಗಳು ಕಂಡಿವೆ. ಈ ಸೌಲಭ್ಯವನ್ನು ಯಾರೂ ವ್ಯವಸ್ಥೆಯನ್ನು ಹಾಳು ಮಾಡಲು ಬಳಸದಂತೆ ಎಲ್ಲರೂ ನಿಗಾ ವಹಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT