ಶುಕ್ರವಾರ, ಜುಲೈ 1, 2022
25 °C

ಸಂಪಾದಕೀಯ| ಮುಚ್ಚಿದ ಲಕೋಟೆ ಪದ್ಧತಿಯು ಮೂಲಭೂತ ಹಕ್ಕಿನ ನಿರಾಕರಣೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ, ಗೋಪ್ಯ ಎನ್ನಲಾದ ಮಾಹಿತಿಯನ್ನು ನ್ಯಾಯಾಲಯಗಳು ಮುಚ್ಚಿದ ಲಕೋಟೆಯಲ್ಲಿ ಸ್ವೀಕರಿಸುವ ಪದ್ಧತಿಗೆ ಸುಪ್ರೀಂ ಕೋರ್ಟ್‌ ಈಚೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್‌ನ ಅಸಮಾಧಾನ ಸರಿಯಾಗಿಯೇ ಇದೆ. ಈ ರೀತಿ ಮುಚ್ಚಿದ ಲಕೋಟೆಯಲ್ಲಿ ಕೆಲವು ಮಾಹಿತಿಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಪೀಠಗಳಿಗೇ ಸಲ್ಲಿಸಿರುವ ನಿದರ್ಶನಗಳು ಇವೆ.
ನ್ಯಾಯಾಂಗದಲ್ಲಿಯೇ ಆಚರಣೆಯಲ್ಲಿ ಇರುವ ಮತ್ತು ನ್ಯಾಯಾಂಗದ ತತ್ವಗಳಿಗೆ ವಿರುದ್ಧವಾಗಿರುವ ಇಂತಹ ಪದ್ಧತಿಗಳ ಬಗ್ಗೆ ಸುಪ್ರೀಂ ಕೋರ್ಟ್‌ ಹುಬ್ಬು ಗಂಟಿಕ್ಕಿರುವುದು ಸ್ವಾಗತಾರ್ಹ. ‘ನಮಗೆ ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ನೀಡಬೇಡಿ. ಅದು ನಮಗೆ ಇಲ್ಲಿ ಬೇಕಾಗಿಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಪಟ್ನಾ ಹೈಕೋರ್ಟ್‌ನ ವಕೀಲರಿಗೆ ಹೇಳಿದ್ದಾರೆ. ಮಲಯಾಳದ ಟಿ.ವಿ. ವಾಹಿನಿ ‘ಮೀಡಿಯಾ ಒನ್‌’ ನಿಷೇಧಿಸಿದ ಕೇಂದ್ರ ಸರ್ಕಾರದ ಆದೇಶವನ್ನು ಎತ್ತಿಹಿಡಿದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯೊಂದರ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ದಾಖಲೆಗಳನ್ನು ಆಧರಿಸಿ ಕೇರಳ ಹೈಕೋರ್ಟ್ ಆದೇಶ ಹೊರಡಿಸಿತ್ತು. ಸರ್ಕಾರವು ತನ್ನ ಮುಂದೆ ಮುಚ್ಚಿದ ಲಕೋಟೆಯಲ್ಲಿ ಇರಿಸಿದ್ದ ಮಾಹಿತಿಯನ್ನು ಒಪ್ಪದ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು, ನಿಷೇಧಕ್ಕೆ ತಡೆಯಾಜ್ಞೆ ನೀಡಿದೆ.

ಈಚೆಗಿನ ಕೆಲವು ಪ್ರಮುಖ ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಮುಚ್ಚಿದ ಲಕೋಟೆಯಲ್ಲಿ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದ ಅರ್ಜಿ, ಭೀಮಾ ಕೋರೆಗಾಂವ್ ಪ್ರಕರಣ, ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿಗೆ ಸಂಬಂಧಿಸಿದ ಪ್ರಕರಣ, ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಈ ರೀತಿ ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ಸಲ್ಲಿಸಿದ್ದು ಇದೆ. ಮುಚ್ಚಿದ ಲಕೋಟೆಯಲ್ಲಿ ವಿವರಗಳನ್ನು ಸಲ್ಲಿಸುವುದು ಬಹುತೇಕ ಸಂದರ್ಭಗಳಲ್ಲಿ ಸರ್ಕಾರವೇ ಆಗಿರುತ್ತದೆ. ಆಗ ಆ ಲಕೋಟೆ ಯಲ್ಲಿ ಯಾವ ವಿವರ ಇದೆ ಎಂಬುದು ಎದುರು ಪಕ್ಷದವರಿಗೆ ಗೊತ್ತಾಗುವುದಿಲ್ಲ. ಹೀಗೆ ಮಾಡುವುದು ತಪ್ಪು, ಇದು ನ್ಯಾಯಸಮ್ಮತ ಅಲ್ಲ. ಈ ರೀತಿ ಮಾಡುವುದರಿಂದ ಎದುರು ಪಕ್ಷದವರಿಗೆ ಆ ಲಕೋಟೆಯಲ್ಲಿ ಇರುವ ಮಾಹಿತಿ ಏನು ಎಂಬುದನ್ನು ಪರಿಶೀಲಿಸುವ ಹಾಗೂ ಅವುಗಳಿಗೆ ಪ್ರತಿವಾದ ಸಿದ್ಧಪಡಿಸುವ ಅವಕಾಶ ಇಲ್ಲದಂತೆ ಆಗುತ್ತದೆ. ಅಂದರೆ, ಪ್ರಕರಣದ ಕಕ್ಷಿದಾರರೊಬ್ಬರಿಗೆ ಮೂಲಭೂತ ಕಾನೂನು ಹಕ್ಕಿನ ನಿರಾಕರಣೆ ಆದಂತಾಗುತ್ತದೆ.‌

ಕೋರ್ಟ್‌ಗೆ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವ ಪರಿಪಾಟವು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ  ಹೆಚ್ಚಳ ಆಗಿದೆ. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ಅಥವಾ ಕೆಲವು ಮಾಹಿತಿ ಬಹಿರಂಗಪಡಿಸುವುದರಿಂದ ‍ಪ್ರಗತಿಯಲ್ಲಿ ಇರುವ ತನಿಖೆಯ ಮೇಲೆ ಪರಿಣಾಮ ಆಗಬಾರದು ಎಂಬ ಕಾರಣ ನೀಡಿ, ಮುಚ್ಚಿದ ಲಕೋಟೆಯಲ್ಲಿ ಮಾಹಿತಿ ಸಲ್ಲಿಸಿರುವ ಕ್ರಮವನ್ನು ಸರ್ಕಾರವು ಸಮರ್ಥಿಸಿಕೊಂಡಿದೆ. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬಹಳ ಮುಖ್ಯ. ಅದರಲ್ಲೂ, ನ್ಯಾಯಾಂಗ ವ್ಯವಸ್ಥೆಯಲ್ಲಿ ಅದು ಇನ್ನೂ ಮುಖ್ಯ. ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಹಲವು ಪ್ರಕರಣಗಳು ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದವು, ಉನ್ನತ ಹುದ್ದೆಯಲ್ಲಿ ಇರುವ ವ್ಯಕ್ತಿಗಳ ನಡವಳಿಕೆಗಳಿಗೆ ಸಂಬಂಧಿಸಿದವು. ಆರೋಪಿ ಸ್ಥಾನದಲ್ಲಿ ನಿಂತ ವ್ಯಕ್ತಿಗೆ ತನ್ನ ವಿರುದ್ಧದ ಸಾಕ್ಷ್ಯಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವ ಅವಕಾಶ ಇಲ್ಲದಿದ್ದರೆ ನ್ಯಾಯದಾನ ಪ್ರಕ್ರಿಯೆಯು ಅಪಾರದರ್ಶಕ ಆಗುತ್ತದೆ. ರಫೇಲ್ ಪ್ರಕರಣದಂತಹವುಗಳಲ್ಲಿ ಉನ್ನತ ಸ್ಥಾನಗಳಲ್ಲಿನ ವ್ಯಕ್ತಿಗಳ ಬಗ್ಗೆಯೇ ಅನುಮಾನಗಳು ಇದ್ದವು.  ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ, ಮಾಹಿತಿಯನ್ನು ರಹಸ್ಯವಾಗಿಟ್ಟು ತನಿಖೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅಂಥವರಿಗೆ ಅವಕಾಶ ನೀಡಲಾಗದು. ಗೋಪ್ಯ ಮಾಹಿತಿಯನ್ನು ಆಧರಿಸಿದ ತೀರ್ಮಾನಗಳು ‘ನ್ಯಾಯದಾನ ನಡೆದರೆ ಮಾತ್ರವೇ ಸಾಲದು; ನ್ಯಾಯದಾನ ಆಗಿದೆ ಎಂಬುದು ಗೊತ್ತಾಗುವಂತೆಯೂ ಇರಬೇಕು’ ಎಂಬ ಮಾತಿಗೆ ವಿರುದ್ಧ. ನ್ಯಾಯದಾನ ಎಂಬುದು ಪ್ರಕರಣದ ಒಬ್ಬ ಕಕ್ಷಿದಾರ ಹಾಗೂ ಕೋರ್ಟ್‌ನ ನಡುವಣ ವಿಚಾರ ಅಲ್ಲ. ಅರ್ಜಿದಾರ ಮತ್ತು ಪ್ರತಿವಾದಿ ಮಾತ್ರವೇ ಅಲ್ಲದೆ, ನ್ಯಾಯಾಲಯದ ತೀರ್ಮಾನಕ್ಕೆ ಕಾರಣವಾದ ವಿಚಾರಗಳು ಯಾವುವು ಎಂಬುದನ್ನು ತಿಳಿಯುವ ಹಕ್ಕು ಪ್ರಜೆಗಳಿಗೂ ಇರುತ್ತದೆ. ಆದರೆ, ಮುಚ್ಚಿದ ಲಕೋಟೆಯಲ್ಲಿ ವಿವರ ಸಲ್ಲಿಸುವ ಪದ್ಧತಿಯು ಈ ಹಕ್ಕನ್ನು ನಿರಾಕರಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು