ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಬಿಬಿಎಂಪಿಯ ವಾರ್ಡ್‌ ಸಮಿತಿ ಸಭೆಗಳಿಗೆ ಸಿಗಲಿ ಕಾಯಕಲ್ಪ

Last Updated 30 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಡಳಿತ ಸುಸೂತ್ರವಾಗಿ ನಡೆಯಬೇಕು ಎಂಬ ಉದ್ದೇಶದಿಂದಲೇ ವಾರ್ಡ್‌ ಸಮಿತಿಗಳನ್ನು ರಚಿಸಲಾಗಿದೆ. ವಾರ್ಡ್‌ ಸಮಿತಿಯೂ ಬಿಬಿಎಂಪಿ ಆಡಳಿತ ವ್ಯವಸ್ಥೆಯ ಶಾಸನಬದ್ಧ ಅಂಗ. ಪಾಲಿಕೆ ಸದಸ್ಯರೇ ವಾರ್ಡ್‌ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
2020ರ ಸೆಪ್ಟೆಂಬರ್‌ 10ರ ಬಳಿಕ ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್‌ ಆಡಳಿತವಿಲ್ಲ. ಜನರ ಅಹವಾಲು ಆಲಿಸಲು ಪಾಲಿಕೆ ಸದಸ್ಯರು ಇಲ್ಲದ ಕಾರಣಕ್ಕೆ ಆಡಳಿತದಲ್ಲಿ ನಿರ್ವಾತ ಸೃಷ್ಟಿ ಆಗುವುದನ್ನು ತಪ್ಪಿಸಲು ಪ್ರತೀ ವಾರ್ಡ್‌ಗೂ ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ವಾರ್ಡ್‌ ಅಭಿವೃದ್ಧಿಯ ಮೇಲ್ವಿಚಾರಣೆ ಅವರ ಹೊಣೆ.ವಾರ್ಡ್‌ನ ನಿವಾಸಿಗಳ ಕುಂದುಕೊರತೆಗಳಿಗೆ ಪರಿಹಾರ ಒದಗಿಸುವುದು ಹಾಗೂ ವಾರ್ಡ್ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸುವ ಜವಾಬ್ದಾರಿಯೂ ಅವರದೇ. 2020ರ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 85ರ ಪ್ರಕಾರ, ಪ್ರತೀ ವಾರ್ಡ್‌ ಸಮಿತಿಯೂ ತಿಂಗಳಲ್ಲಿ ಒಮ್ಮೆಯಾದರೂ ಸಭೆ ನಡೆಸಬೇಕು. ಪಾಲಿಕೆ ಸದಸ್ಯರಿಲ್ಲದಿರುವ ಕೊರತೆ ನೀಗಿಸಲು ತಿಂಗಳಲ್ಲಿ ಎರಡು ಬಾರಿ (ಮೊದಲ ಹಾಗೂ ಮೂರನೇ ಶನಿವಾರ) ಸಭೆಗಳನ್ನು ನಡೆಸಬೇಕುಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶ ಮಾಡಿದ್ದಾರೆ. ಕಾರಣಾಂತರಗಳಿಂದ ನಿಗದಿತ ದಿನದಂದು ಸಭೆ ನಡೆಸಲು ಸಾಧ್ಯವಾಗದಿದ್ದರೆ, ಅದೇ ವಾರದಲ್ಲಿ ಸರ್ಕಾರಿ ರಜೆ ಅಲ್ಲದ ಬೇರೆ ದಿನ ಸಭೆ ನಡೆಸಬಹುದು. ಆರಂಭದಲ್ಲಿ ವಾರ್ಡ್‌ನ ನೋಡಲ್ ಅಧಿಕಾರಿಗಳು ಸಭೆಗಳನ್ನು ಉತ್ಸಾಹದಿಂದಲೇ ನಡೆಸಿದರು. ದೇಶದಲ್ಲಿ 4 ಸಾವಿರಕ್ಕೂ ಅಧಿಕ ವಾರ್ಡ್‌ ಸಮಿತಿ ಸಭೆಗಳನ್ನು ನಡೆಸಿದ ಮೊದಲ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೂ ಬಿಬಿಎಂಪಿ ಪಾತ್ರವಾಗಿತ್ತು. ಆದರೆ, ಇದು ಆರಂಭಶೂರತ್ವವಾಯಿತೇನೋ ಎಂದು ತೋರುತ್ತಿದೆ. ಇತ್ತೀಚೆಗಂತೂ ಬಹುತೇಕ ವಾರ್ಡ್‌ಗಳಲ್ಲಿ ಈ ಸಭೆಗಳು ನಿಯಮಿತವಾಗಿ ನಡೆಯುತ್ತಿಲ್ಲ. ಸಭೆ ನಡೆಸುವುದಕ್ಕೆ ಈಗ ಕೋವಿಡ್‌ನ ಆತಂಕವೇನೂ ಇಲ್ಲ. ಹಾಗಿದ್ದರೂ ವಾರ್ಡ್‌ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸದಿದ್ದರೆ ಅದಕ್ಕೆ ಕ್ಷಮೆ ಇಲ್ಲ. ಒಟ್ಟು 198 ವಾರ್ಡ್‌ಗಳ ಪೈಕಿ 77ರಲ್ಲಿ ಮಾತ್ರ ವಾರ್ಡ್‌ ಸಮಿತಿ ಸಭೆಗಳು ನಿಯಮಿತವಾಗಿ ನಡೆದಿರುವುದು ಜನಾಗ್ರಹ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ. ಇನ್ನುಳಿದ ಸಮಿತಿಗಳು, ಪ್ರತೀ ತಿಂಗಳು ಸಭೆ ನಡೆಸಬೇಕೆಂಬ ನಿಯಮವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಸಭೆಯ ನಡಾವಳಿಗಳನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲು ವ್ಯವಸ್ಥೆ ಕಲ್ಪಿಸುವ ಮೂಲಕ ಮಾಹಿತಿಯನ್ನು ಸಾರ್ವಜನಿಕರು ಮುಕ್ತವಾಗಿ ಪಡೆಯಲು ಅನುವು ಮಾಡಿಕೊಡಲಾಗಿದೆ. ಈ ಮಾರ್ಚ್‌ ತಿಂಗಳ ಸಭೆಯ ನಡಾವಳಿಯ ಮಾಹಿತಿಯನ್ನು 31 ವಾರ್ಡ್‌ ಸಮಿತಿಗಳು ಮಾತ್ರ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಿವೆ. ವಾರ್ಡ್‌ ಸಮಿತಿಯ ಶಾಸನಬದ್ಧ ಜವಾಬ್ದಾರಿಗಳನ್ನು ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 86ರಲ್ಲಿ ವಿವರಿಸಲಾಗಿದೆ. ವಾರ್ಡ್‌ ಅಭಿವೃದ್ಧಿ ಯೋಜನೆ ರೂಪಿಸುವುದು, ಯೋಜನೆಗಳ ಆದ್ಯತಾ ಪಟ್ಟಿ ರೂಪಿಸುವುದು, ವಿವಿಧ ಸರ್ಕಾರಿ ಕಾರ್ಯಕ್ರಮಗಳಿಗೆ ಫಲಾನುಭವಿಗಳ ಆದ್ಯತಾ ಪಟ್ಟಿ ಸಿದ್ಧಪಡಿಸುವುದು, ಯೋಜನೆಗಳ ಮೇಲ್ವಿಚಾರಣೆ ಹಾಗೂ ನೈರ್ಮಲ್ಯ ಕಾಪಾಡುವುದರಲ್ಲಿ ಈ ಸಮಿತಿಗಳ ಪಾತ್ರ ಮಹತ್ವದ್ದು. ಸಮಿತಿ ಸಭೆಗಳೇ ನಿಯಮಿತವಾಗಿ ನಡೆಯದಿದ್ದರೆ, ವಾರ್ಡ್‌ ಅಭಿವೃದ್ಧಿ ಕಾರ್ಯ
ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲು ಸಾಧ್ಯವೇ?

ಈ ಹಿಂದೆ ಪಾಲಿಕೆ ಸದಸ್ಯರು ವಾರ್ಡ್‌ ಸಮಿತಿಗಳ ಅಧ್ಯಕ್ಷರಾಗಿದ್ದಾಗ, ಸದಸ್ಯರ ನೇಮಕದಿಂದ ಸಭೆಯ ನಡಾವಳಿಯವರೆಗೆ ಎಲ್ಲದರಲ್ಲೂ ಅವರ ಹಸ್ತಕ್ಷೇಪ ಇತ್ತು. ಸದಸ್ಯರಿಲ್ಲದ ಸಂದರ್ಭದಲ್ಲಾದರೂ ಸಮಿತಿಗಳು ಸ್ವತಂತ್ರವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು ಎಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ. ಕೆಲವು ವಾರ್ಡ್‌ಗಳಲ್ಲಿ ಶಾಸಕರ ತಾಳಕ್ಕೆ ತಕ್ಕಂತೆ ನೋಡಲ್‌ ಅಧಿಕಾರಿಗಳು ಕುಣಿಯುತ್ತಿದ್ದಾರೆ. ಸಮಿತಿ ಸಭೆಗಳನ್ನು ಕಾಟಾಚಾರಕ್ಕೆ ನಡೆಸುತ್ತಿದ್ದಾರೆ. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ, ಪೊಲೀಸ್‌ ಹಾಗೂ ಇತರ ಇಲಾಖೆಗಳ ಅಧಿಕಾರಿಗಳುಸಭೆಗಳಲ್ಲಿ ಭಾಗವಹಿಸಬೇಕು. ಆದರೆ, ಅಧಿಕಾರಿಗಳು ಅತ್ತ ಮುಖವನ್ನೇ ಹಾಕುತ್ತಿಲ್ಲ. ಹಾಗಾಗಿ, ವಾರ್ಡ್‌ನ ಸಮಸ್ಯೆಗಳನ್ನು ತಳಹಂತದಲ್ಲೇ ಬಗೆಹರಿಸುವ ಆಶಯ ಈಡೇರುತ್ತಿಲ್ಲ. ಬಿಬಿಎಂಪಿಯ ಚುನಾಯಿತ ಕೌನ್ಸಿಲ್‌ನ ಆಡಳಿತ ಅವಧಿಯಲ್ಲಿ, ಸ್ಥಳೀಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ನಗರ ಕೇಂದ್ರ ವಾಣಿಜ್ಯ ಪ್ರದೇಶದ ವಾರ್ಡ್‌ಗಳಿಗೆ ವರ್ಷಕ್ಕೆ ತಲಾ ₹ 2 ಕೋಟಿ ಹಾಗೂ ಹೊರವಲಯದ ವಾರ್ಡ್‌ಗಳಿಗೆ ತಲಾ ₹ 3 ಕೋಟಿ ಅನುದಾನ ಹಂಚಿಕೆ ಮಾಡಲಾಗುತ್ತಿತ್ತು. 2021–22ನೇ ಸಾಲಿನಲ್ಲಿ ಪ್ರತೀ ವಾರ್ಡ್‌ಗೆ ಕೇವಲ ₹ 60 ಲಕ್ಷ ಅನುದಾನ ಹಂಚಿಕೆ ಮಾಡಲಾಗಿತ್ತು. ಹೊಸ ಯೋಜನೆ ಕೈಗೆತ್ತಿಕೊಳ್ಳುವುದು ಬಿಡಿ, ಈಗಿನ ಸೌಕರ್ಯಗಳ ನಿರ್ವಹಣೆಗೂ ಇದು ಸಾಲುತ್ತಿಲ್ಲ. ವಾರ್ಡ್‌ ಅಭಿವೃದ್ಧಿಗೆ ಹಂಚಿಕೆ ಮಾಡುವ ಅನುದಾನವನ್ನೂ ಹೆಚ್ಚಿಸಬೇಕು. ವಾರ್ಡ್‌ ಸಮಿತಿ ಸಭೆಗಳನ್ನು ನಡೆಸುವ ವಿಚಾರದಲ್ಲಿ ಅಸಡ್ಡೆ ತೋರಿಸುತ್ತಿರುವ ನೋಡಲ್‌ ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಆಡಳಿತಾಧಿಕಾರಿ ಶಿಸ್ತುಕ್ರಮ ಕೈಗೊಳ್ಳಬೇಕು. ವಾರ್ಡ್‌ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸುವುದಷ್ಟೇ ಅಲ್ಲ, ಸ್ಥಳೀಯ ಅಭಿವೃದ್ಧಿ ವಿಚಾರಗಳ ಕುರಿತು ವಾರ್ಡ್ ಸಮಿತಿ ಸಭೆಯಲ್ಲಿ ಮುಕ್ತವಾದ ಚರ್ಚೆ ನಡೆಯುವಂತೆ ನೋಡಿಕೊಳ್ಳಬೇಕು. ನಾಗರಿಕರು ಕೂಡಾ ಈ ಸಭೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT