ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಹೊಸಕೆರೆಹಳ್ಳಿ ಕೆರೆಯನ್ನು ಭೂಮಾಫಿಯಾದಿಂದ ರಕ್ಷಿಸಿ

Last Updated 2 ಏಪ್ರಿಲ್ 2023, 20:07 IST
ಅಕ್ಷರ ಗಾತ್ರ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಹೊಸಕೆರೆಹಳ್ಳಿ ಕೆರೆಗೆ ಮಣ್ಣು ಸುರಿದು 25 ಅಡಿ ಅಗಲದ ರಸ್ತೆ ನಿರ್ಮಿಸುತ್ತಿದೆ. ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಕೆರೆಗೆ ಮಣ್ಣು ಸುರಿಯಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ ಬಳಿಕ ಬಿಬಿಎಂಪಿಯು ಕೆರೆಯನ್ನು ದುರಸ್ತಿಗೊಳಿಸಿ ಮೊದಲಿನ ಸ್ಥಿತಿಗೆ ತರುವುದಾಗಿ ಭರವಸೆ ನೀಡಿತ್ತು. ಆದರೆ, ಈ ಮಾತನ್ನು ಉಳಿಸಿಕೊಂಡಿಲ್ಲ. ಅಚ್ಚರಿ ಎಂದರೆ, ಕೆರೆಯಲ್ಲಿ ರಸ್ತೆ ನಿರ್ಮಿಸುತ್ತಿರುವ ವಿಷಯ ಗೊತ್ತೇ ಇಲ್ಲ ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ, ತೋಟಗಾರಿಕೆ ಸಚಿವರೂ ಆಗಿರುವ ಸ್ಥಳೀಯ ಶಾಸಕ ಮುನಿರತ್ನ ಅವರು, ಮುಖ್ಯಮಂತ್ರಿಯವರ ವಿಶೇಷ ಅನುದಾನದಡಿ ಕೈಗೆತ್ತಿಕೊಂಡ ಕೆರೆ ಅಭಿವೃದ್ಧಿ ಕಾಮಗಾರಿಯ ಭಾಗವಾಗಿಯೇ ಈ ದುರಸ್ತಿ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 60 ಎಕರೆಗಳಷ್ಟು ವಿಶಾಲವಾದ ಈ ಕೆರೆಯಲ್ಲಿ ನೂರಾರು ವರ್ಷಗಳಿಂದ ಹೂಳು ತುಂಬಿಕೊಂಡಿದೆ. ಹೂಳನ್ನು ತೆಗೆದು ಕೆರೆಯನ್ನು ಪುನರುಜ್ಜೀವನಗೊಳಿಸುವ ಮೂಲಕ ಮತ್ತಷ್ಟು ಸುಂದರಗೊಳಿಸಲಾಗುತ್ತಿದೆ ಎಂದೂ ಮುನಿರತ್ನ ಹೇಳಿದ್ದಾರೆ. ಈ ಕೆರೆ ಅಭಿವೃದ್ಧಿ ಕಾಮಗಾರಿಗೂ ಮುನ್ನ ಕಡ್ಡಾಯವಾಗಿ ಪಡೆಯಬೇಕಾದ ಮಂಜೂರಾತಿಯನ್ನು ಪಡೆದುಕೊಂಡೇ ಇಲ್ಲ ಎಂದು ಕರ್ನಾಟಕ ಸರೋವರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ. ಕೆರೆಯ ಹೂಳೆತ್ತಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ, ಕೆರೆಗೆ ಮಣ್ಣು ತಂದು ಸುರಿಯಲಾಗುತ್ತಿದೆ. ಹೀಗಾಗಿ ಸಚಿವರ ಹೇಳಿಕೆಯೇ ವಿರೋಧಾಭಾಸದಿಂದ ಕೂಡಿದೆ ಎನ್ನುತ್ತಾರೆ ಪರಿಸರ ಕಾರ್ಯಕರ್ತರು. ಕೆರೆಯಲ್ಲಿ ಈಗ ನಿರ್ಮಿಸಿರುವ ರಸ್ತೆಯು ಈ ಜಲಕಾಯದ ಒಂದು ಬದಿಗೆ ನೀರು ಸೇರುವುದನ್ನು ತಡೆಯಲಿದೆ. ಆ ಭಾಗವು ಒಣಗಿ ಹೋಗಲಿದ್ದು, ರಿಯಲ್‌ ಎಸ್ಟೇಟ್‌ ಕುಳಗಳು ಆಪೋಶನ ಪಡೆಯಲು ಅನುಕೂಲ ಕಲ್ಪಿಸಲಿದೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪ ಮತ್ತು ಆತಂಕ.

ಈ ಕೆರೆ ಕಬಳಿಕೆಗೆ ಹಿಂದೆಯೂ ಅನೇಕ ಬಗೆಯ ಪ್ರಯತ್ನಗಳು ನಡೆದಿದ್ದವು. ಕೆರೆಯ ಒಡಲಿಗೆ ಒಳಚರಂಡಿ ನೀರನ್ನು ಶುದ್ಧೀಕರಿಸದೆಯೇ ಬಿಡಲಾಗುತ್ತಿತ್ತು. ಕಸ ಹಾಗೂ ಕಟ್ಟಡಗಳ ತ್ಯಾಜ್ಯವನ್ನು ಕೆರೆಯಂಗಳದಲ್ಲಿ ಸುರಿಯಲಾಗುತ್ತಿತ್ತು. ಒಳಚರಂಡಿಯ ಕೊಳಚೆ ನೀರನ್ನು ಈ ಕೆರೆಗೆ ಸೇರಿಸುವ ಉದ್ದೇಶದಿಂದಲೇ, ಇಲ್ಲಿನ ಒಳಚರಂಡಿ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಮಹಾಲೇಖಪಾಲರ 2021ನೇ ಸಾಲಿನ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಕೆರೆಯಂಗಳದ 7 ಎಕರೆಗಳಷ್ಟು ಜಾಗ ಈಗಾಗಲೇ ಒತ್ತುವರಿಯಾಗಿದೆ. ಕೆರೆಗೆ ಮಣ್ಣು ಸುರಿದ ಬಗ್ಗೆ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ ಬಳಿಕ ಬಿಬಿಎಂಪಿಯು ಇಲ್ಲಿ ಫಲಕ ಅಳವಡಿಸಿ, ‘ಕೆರೆಗೆ ಮಣ್ಣು ಸುರಿದಿರುವುದು ತಾತ್ಕಾಲಿಕ ರಸ್ತೆ ನಿರ್ಮಿಸುವ ಸಲುವಾಗಿ ಮಾತ್ರ. ಹೂಳೆತ್ತುವ ಕಾಮಗಾರಿ ಪೂರ್ಣಗೊಂಡ ಬಳಿಕ ಮಣ್ಣನ್ನು ತೆರವುಗೊಳಿಸಲಾಗುತ್ತದೆ’ ಎಂದು ತಿಳಿಸಿದೆ. ಆದರೆ ಸ್ಥಳೀಯರು, ‘ಇದು ಸುಳ್ಳಿನ ಕಂತೆ. ಬಿಬಿಎಂಪಿ ಅಧಿಕಾರಿಗಳು ಒಂದರ ಮೇಲೊಂದರಂತೆ ವಿರೋಧಾಭಾಸದ ಹೇಳಿಕೆಗಳನ್ನೇ ನೀಡುತ್ತಿದ್ದಾರೆ’ ಎಂದು ಆರೋಪಿಸುತ್ತಾರೆ. ನಗರದ ಅನೇಕ ಕೆರೆಗಳನ್ನು ರಿಯಲ್‌ ಎಸ್ಟೇಟ್ ಮಾಫಿಯಾ ಈಗಾಗಲೇ ಕಬಳಿಸಿದೆ. ನಗರದ ಅತ್ಯಂತ ಹಳೆಯ ಜಲಮೂಲಗಳಲ್ಲಿ ಒಂದಾದ ಹೊಸಕೆರೆಹಳ್ಳಿ ಕೆರೆ ಭೂಮಾಫಿಯಾದ ಪಾಲಾಗದಂತೆ ನೋಡಿಕೊಳ್ಳಬೇಕು ಮತ್ತು ಅದನ್ನು ಸಂರಕ್ಷಿಸಬೇಕು. ಈ ಕೆರೆ, 2010ರವರೆಗೆ ಅರಣ್ಯ ಇಲಾಖೆಯ ಅಧೀನದಲ್ಲಿತ್ತು. ಅಭಿವೃದ್ಧಿಯ ಹೆಸರಿನಲ್ಲಿ 2011ರಲ್ಲಿ ಸರ್ಕಾರ ಇದನ್ನು ಬಿಬಿಎಂಪಿಗೆ, ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಒಪ್ಪಿಸಿತು. 2019ರಲ್ಲಿ ಮತ್ತೆ ಬಿಬಿಎಂಪಿ ಸುಪರ್ದಿಗೆ ನೀಡಲಾಯಿತು. ಕೆರೆಗಳನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಬಿಬಿಎಂಪಿಯ ವಿಶ್ವಾಸಾರ್ಹತೆಯ ಬಗ್ಗೆಯೇ ಪ್ರಶ್ನೆ ಮೂಡಿದೆ. ಕೆರೆ ಅಂಗಳದಲ್ಲಿ ಯಾವುದೇ ಬಗೆಯ ಅಕ್ರಮ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕಾದ ಅಧಿಕಾರಿಗಳಿಗೇ ಹೊಸಕೆರೆಹಳ್ಳಿ ಕೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಮಾಹಿತಿ ಇಲ್ಲ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆರೆಯ ಒಡಲಿನಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸರ್ಕಾರ ತಕ್ಷಣವೇ ಸ್ಥಗಿತಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT