ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Editorial | ಕಲ್ಯಾಣ ಕರ್ನಾಟಕ: ಯೋಜನೆಗಳ ಅನುಷ್ಠಾನಕ್ಕೆ ಕಾಲಮಿತಿ ಇರಲಿ

Published : 18 ಸೆಪ್ಟೆಂಬರ್ 2024, 23:39 IST
Last Updated : 18 ಸೆಪ್ಟೆಂಬರ್ 2024, 23:39 IST
ಫಾಲೋ ಮಾಡಿ
Comments

ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಕಲ್ಯಾಣ
ಕರ್ನಾಟಕ ಭಾಗದ ಏಳು ಜಿಲ್ಲೆಗಳ ಅಭಿವೃದ್ಧಿಗೆ ಪೂರಕವಾದ 46 ನಿರ್ಣಯಗಳನ್ನು ಕೈಗೊಂಡಿದೆ. ದಶಕದ ಹಿಂದೆ ಇಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆ ಹಾಗೂ ಆ ನಂತರದ ವರ್ಷಗಳಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಗಳಲ್ಲಿ ಆಗಿರುವ ನಿರ್ಧಾರಗಳಿಂದ ಈ ಪ್ರದೇಶದಲ್ಲಿ ದೊಡ್ಡ ಮಟ್ಟದ ಪರಿವರ್ತನೆ ಆದಂತೆ ಕಾಣಿಸುತ್ತಿಲ್ಲ. ಇಂತಿಷ್ಟು ಹಣ ಖರ್ಚು ಮಾಡಿ, ಇವಿಷ್ಟು ಕಾಮಗಾರಿಗಳನ್ನು ನಡೆಸಲಾಗಿದೆ ಎಂಬ ವಿವರವಷ್ಟೇ ಸರ್ಕಾರದ ಬಳಿ ಇದೆ. ಹಣ ವೆಚ್ಚವಾಗಿರುವುದಕ್ಕೆ ಅನುಗುಣವಾಗಿ ಈ ಭಾಗದಲ್ಲಿ ಅಭಿವೃದ್ಧಿಯ ಚಿತ್ರಣ ಗೋಚರಿಸುತ್ತಿಲ್ಲ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆಯಂತಹ ಮೂಲ ಸೌಕರ್ಯಗಳಲ್ಲಿ ಸುಧಾರಣೆಯಾಗಿರುವುದನ್ನು ದೃಢೀಕರಿಸುವ ಸಾಮಾಜಿಕ ಪರಿಶೋಧನೆಯೂ ನಡೆದಂತಿಲ್ಲ. ಕರ್ನಾಟಕಕ್ಕೆ ಸೇರಿ ಪುರೋಭಿವೃದ್ಧಿಯ ಭಾಗವಾಗಬೇಕೆಂಬುದು ಏಕೀಕರಣ ಚಳವಳಿ ರೂವಾರಿಗಳ ಕನಸಾಗಿತ್ತು. ದಶಕಗಳೇ ಕಳೆದರೂ ಆ ಕನಸು ಪೂರ್ಣಪ್ರಮಾಣದಲ್ಲಿ ನನಸಾಗಿಲ್ಲ. ಮೈಸೂರು ಪ್ರಾಂತ್ಯದಲ್ಲಿ ಕಾಣಸಿಗುವಂತಹ ಪ್ರಗತಿಯ ಚಿತ್ರಣವು ಕಲ್ಯಾಣ ಕರ್ನಾಟಕ ಅಥವಾ ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಣಿಸುವುದಿಲ್ಲ. ಈ ಭಾಗ ಅವಗಣನೆಗೆ ಒಳಗಾಗಿದೆ ಎಂಬ ಇಲ್ಲಿನವರ ಭಾವನೆಯನ್ನು ಪೂರ್ತಿ ಹೋಗಲಾಡಿಸುವ ಬದ್ಧತೆಯನ್ನು ಆಳುವವರು ತೋರಿಸಿಲ್ಲ. ಈ ಭಾಗದ ಜನಸಮೂಹದ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿರುವುದು ಸಕಾರಾತ್ಮಕ ಬೆಳವಣಿಗೆ. 

ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 46 ಯೋಜನೆ–ಕಾಮಗಾರಿಗಳಿಗೆ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ,₹11,770 ಕೋಟಿ ವಿನಿಯೋಗಿಸಲು ಸಭೆ ಅನುಮೋದನೆ ನೀಡಿದೆ. ಹೊಸದಾಗಿ 45 ಪ್ರಾಥಮಿಕ ಆರೋಗ್ಯ ಕೇಂದ್ರ, 31 ಸಮುದಾಯ ಆರೋಗ್ಯ ಕೇಂದ್ರಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. 9 ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಹಾಗೂ 2 ತಾಲ್ಲೂಕು ಆಸ್ಪತ್ರೆಗಳನ್ನು ಜಿಲ್ಲಾ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಜತೆಗೆ, ಶಾಲೆ, ವಸತಿ ನಿಲಯ, ವಸತಿ ಶಾಲೆಗಳ ಆರಂಭ ಹಾಗೂ ಕಟ್ಟಡಗಳ ನಿರ್ಮಾಣಕ್ಕೂ ಆಡಳಿತಾತ್ಮಕ ಒಪ್ಪಿಗೆ
ಸೂಚಿಸಲಾಗಿದೆ. ಈ ಭಾಗದ ಬಹುದಿನಗಳ ಬೇಡಿಕೆಯಾಗಿದ್ದ ಪ್ರತ್ಯೇಕ ಸಚಿವಾಲಯ ರಚನೆಗೂ ಸಮ್ಮತಿ ದೊರಕಿದೆ. ಈ ಭಾಗದಲ್ಲಿ ಖಾಲಿ ಇರುವ 17,439 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವ ಭರವಸೆಯನ್ನೂ ನೀಡಲಾಗಿದೆ. ಆರೋಗ್ಯ, ಶಿಕ್ಷಣ, ನೀರಾವರಿ, ಪ್ರವಾಸೋದ್ಯಮ, ಮೂಲಸೌಕರ್ಯಕ್ಕೆ ಆದ್ಯತೆ ನೀಡುವ ಹಲವು ಮಹತ್ವದ ತೀರ್ಮಾನಗಳನ್ನು ಸರ್ಕಾರ ಕೈಗೊಂಡಿರುವುದು ಸ್ವಾಗತಾರ್ಹ.

‘ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನಕ್ಕೆ ತಿದ್ದುಪಡಿ ತಂದು ‘371 ಜೆ’ ಅನ್ನು ಕಾಯ್ದೆ ರೂಪದಲ್ಲಿ ಜಾರಿಗೊಳಿಸಿ 10 ವರ್ಷಗಳಾದವು. ಈ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸರ್ಕಾರವು ₹19,778 ಕೋಟಿ ಅನುದಾನ ಹಂಚಿಕೆ ಮಾಡಿದೆ. ಆ ಪೈಕಿ ₹13,299 ಕೋಟಿ ಬಿಡುಗಡೆ ಮಾಡಿದೆ. ಇದುವರೆಗೆ ₹11,174 ಕೋಟಿ ಖರ್ಚು ಮಾಡಲಾಗಿದೆ. ಒಟ್ಟು 35,885 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 27,264 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ’ ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಇಷ್ಟು ಹಣವನ್ನು ವ್ಯಯ ಮಾಡಿದ್ದರೂ ಈ ಭಾಗದ ಶೈಕ್ಷಣಿಕ ಗುಣಮಟ್ಟ ಉತ್ತಮ ಸ್ಥಿತಿಗೆ ಏರಿಲ್ಲ. ಆರೋಗ್ಯ ವ್ಯವಸ್ಥೆ, ಪೌಷ್ಟಿಕತೆಯಲ್ಲಿ ಸುಧಾರಣೆ ಆಗಿರುವುದನ್ನು ದೃಢಪಡಿಸುವ ಅಂಕಿ ಅಂಶಗಳೂ ಇಲ್ಲ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡಿರುವ ಅನುದಾನವು ಕಾಮಗಾರಿಗಳಿಗೆ ಹೆಚ್ಚು ವಿನಿಯೋಗ ಆಗಿದೆಯೇ ವಿನಾ ಮಾನವಸಂಪನ್ಮೂಲದ ಬಲವರ್ಧನೆಗೆ ಬಳಕೆ ಆದಂತಿಲ್ಲ. ಕಾಮಗಾರಿಗಳಿಗೆ ಅನುದಾನ ವಿನಿಯೋಗ ಆಗಿದೆ ಎಂದು ಹೇಳಲಾಗಿದ್ದರೂ ಅದು ಅಭಿವೃದ್ಧಿ ರೂಪದಲ್ಲಿ ಕಾಣಿಸುತ್ತಿಲ್ಲ. ಜನರ ತೆರಿಗೆ ಹಣ ‍ಪೋಲಾಗುವುದನ್ನು ತಪ್ಪಿಸಿ, ಅಭಿವೃದ್ಧಿ ಕಾರ್ಯಗಳು  ಪರಿಣಾಮಕಾರಿಯಾಗಿ ನಡೆಯುವಂತೆ ಮತ್ತು ಕಾಲಮಿತಿಯಲ್ಲಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು. ಅನುದಾನದ ಪ್ರತಿ ರೂಪಾಯಿಯೂ ಸದ್ಬಳಕೆ ಆಗಬೇಕು. ಅದಕ್ಕೊಂದು ನಿಗಾ ವ್ಯವಸ್ಥೆ ಇರಬೇಕು. ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಒತ್ತು ಕೊಡಬೇಕು. ಈಗ ಕೈಗೊಂಡಿರುವ ನಿರ್ಣಯಗಳ ಅನುಷ್ಠಾನದ ಬಗೆಯು ನಿರಂತರ ಪರಾಮರ್ಶೆಗೆ ಒಳಗಾಗಬೇಕು. ಆಗಮಾತ್ರ, ನೀಡಿದ ಅನುದಾನ ಸದ್ಬಳಕೆಯಾಗಿ, ಜನರಿಗೆ ‘ಕಲ್ಯಾಣ’ ರಾಜ್ಯದ ಹಿತಾನುಭವ ದಕ್ಕೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT