ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Editorial | ರಾಗಿ ಖರೀದಿಯಲ್ಲಿ ಅಕ್ರಮ: ಸಮಗ್ರ ತನಿಖೆ ನಡೆಯಲಿ

Published 17 ಜುಲೈ 2023, 23:32 IST
Last Updated 17 ಜುಲೈ 2023, 23:32 IST
ಅಕ್ಷರ ಗಾತ್ರ

ಕೃಷಿ ಉತ್ಪನ್ನಗಳ ದರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕುವ ರೈತರ ನೆರವಿಗೆ ನಿಲ್ಲುವುದಕ್ಕಾಗಿ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ, ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ದರ ಕುಸಿತವನ್ನು ತಡೆಯಲಾಗುತ್ತಿದೆ. ಭತ್ತ, ಗೋಧಿ, ರಾಗಿ, ಜೋಳ, ತೊಗರಿ ಸೇರಿದಂತೆ 24 ಕೃಷಿ ಉತ್ಪನ್ನಗಳು ಈಗ ಕನಿಷ್ಠ ಬೆಂಬಲ ಬೆಲೆ ಯೋಜನೆ ವ್ಯಾಪ್ತಿಯಲ್ಲಿವೆ. ರಾಜ್ಯದಲ್ಲಿ ಈ ಬಾರಿಯೂ ಭತ್ತ, ರಾಗಿ, ಜೋಳ, ತೊಗರಿ ಸೇರಿದಂತೆ ಹಲವು ಉತ್ಪನ್ನಗಳನ್ನು ಈ ಯೋಜನೆಯಡಿ ಖರೀದಿಸಲಾಗಿದೆ. ಕೊಬ್ಬರಿ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬೆಂಬಲ ಬೆಲೆಯಲ್ಲಿ ಐದು ಲಕ್ಷ ಟನ್‌ ರಾಗಿ ಮತ್ತು ಎರಡು ಲಕ್ಷ ಟನ್‌ ಜೋಳವನ್ನು ಖರೀದಿಸಿದ್ದು, ದಾಸ್ತಾನು ಮಾಡಿರುವ ಆಹಾರ ಧಾನ್ಯಗಳನ್ನು ಪಡಿತರ ಚೀಟಿದಾರರಿಗೆ ವಿತರಿಸಲು ಬಳಸಿಕೊಳ್ಳಲಾಗುತ್ತಿದೆ. ಈ ಯೋಜನೆಯನ್ನು ಕೆಲವು ವರ್ತಕರು ಮತ್ತು ದಲ್ಲಾಳಿಗಳು ದುರ್ಬಳಕೆ ಮಾಡಿಕೊಳ್ಳುವುದು ದಶಕಗಳ ಕಾಲದಿಂದಲೂ ನಡೆದೇ ಇತ್ತು. ಕೃಷಿಕರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ಜಾರಿಯಲ್ಲಿರುವ ಯೋಜನೆಯ ದುರ್ಬಳಕೆ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ, ತಂತ್ರಜ್ಞಾನ ಆಧಾರಿತ ಖರೀದಿ ವ್ಯವಸ್ಥೆಯನ್ನೂ ವರ್ತಕರು ಮತ್ತು ಮಧ್ಯವರ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಈ ಬಾರಿಯ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಜಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ತೆರೆದಿದ್ದ ಖರೀದಿ ಕೇಂದ್ರಗಳಲ್ಲಿ ವರ್ತಕರು ಮತ್ತು ದಲ್ಲಾಳಿಗಳು ರೈತರ ಸೋಗಿನಲ್ಲಿ ರಾಗಿಯನ್ನು ಮಾರಾಟ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಎರಡೂ ಕಡೆ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಸ್ಥಳೀಯ ಜಿಲ್ಲಾಧಿಕಾರಿ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳ ಜಂಟಿ ತಂಡವು ನಡೆಸಿದ ಪ್ರಾಥಮಿಕ ತನಿಖೆಯು ರಾಗಿ ಖರೀದಿಯಲ್ಲಿ ಅಕ್ರಮ ನಡೆದಿರುವುದನ್ನು ದೃಢಪಡಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನಡೆದಿದ್ದು, ಅಲ್ಲಿಯೂ ಅಕ್ರಮ ಎಸಗಿರುವ ಅನುಮಾನಗಳಿವೆ.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರುಕಟ್ಟೆ ಮಧ್ಯಪ್ರವೇಶ ಮಾಡುವುದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅನುದಾನದಲ್ಲಿ ನಡೆಯುವ ಕಾರ್ಯಕ್ರಮ. ಆದರೆ, ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಯ ಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಭತ್ತ, ರಾಗಿ ಮತ್ತು ಜೋಳ ಖರೀದಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ ನೋಡೆಲ್‌ ಏಜೆನ್ಸಿಯಾಗಿತ್ತು. ನಿಗಮದ ಜತೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳವನ್ನು ಖರೀದಿ ಏಜೆನ್ಸಿಗಳನ್ನಾಗಿ ನೇಮಿಸಲಾಗಿತ್ತು. ‘ಫಾರ್ಮರ್‌ ರಿಜಿಸ್ಟ್ರೇಷನ್‌ ಆ್ಯಂಡ್‌ ಯೂನಿಫೈಡ್‌ ಬೆನಿಫಿಷಿಯರಿ ಇನ್ಫರ್ಮೇಷನ್‌ ಸಿಸ್ಟಂ’ (FRUITS) ಗುರುತಿನ ದಾಖಲೆಯ ಆಧಾರದಲ್ಲಿ ರೈತರು ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕಿತ್ತು. ನಂತರ ನಿಗದಿತ ದಿನಾಂಕಕ್ಕೆ ಖರೀದಿ ಕೇಂದ್ರಕ್ಕೆ ರಾಗಿ ತಂದು ಮಾರಾಟ ಮಾಡಬೇಕಿತ್ತು. ರೈತರು ಮಾತ್ರವೇ ಎಂಎಸ್‌ಪಿ ಯೋಜನೆಯಡಿ ಕೃಷಿ ಉತ್ಪನ್ನ ಮಾರಾಟ ಮಾಡಬಹುದು. ಆದರೆ, ನೋಂದಣಿಗೂ ಮೊದಲೇ ‘ಫ್ರೂಟ್ಸ್‌ ಐ.ಡಿ’ಗಳನ್ನೇ ತಿರುಚಿರುವ ಕೆಲವು ವರ್ತಕರು, ದಲ್ಲಾಳಿಗಳು ರೈತರ ಹೆಸರಿನಲ್ಲಿ ರಾಗಿ ಮಾರಾಟ ಮಾಡಿರುವುದು ಎರಡೂ ಖರೀದಿ ಕೇಂದ್ರಗಳಲ್ಲಿ ಪತ್ತೆಯಾಗಿದೆ. ಆಹಾರ ಧಾನ್ಯ ಮಾರಾಟ ಮಾಡಿದ ರೈತರಿಗೆ ಹಣ ಪಾವತಿ ಖಾತರಿಗಾಗಿ ಕಂಪ್ಯೂಟರೀಕೃತ ರಸೀದಿ (ಧಾನ್ಯ ವೋಚರ್‌) ನೀಡಲಾಗುತ್ತದೆ. ಕೆಲವರಿಗೆ ಈ ವೋಚರ್‌ ವಿತರಣೆಯಲ್ಲಿ ಆದ ವಿಳಂಬದಿಂದ ಅಕ್ರಮ ಹೊರಬರುವಂತಾಗಿದೆ. ಕೃಷಿ ಉತ್ಪನ್ನಗಳ ದರ ಕುಸಿತದಿಂದ ರೈತರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಜಾರಿಯಲ್ಲಿರುವ ಎಂಎಸ್‌ಪಿ ಯೋಜನೆಯನ್ನು ಖರೀದಿ ಕೇಂದ್ರಗಳು ಹಾಗೂ ಏಜೆನ್ಸಿಗಳ ಅಧಿಕಾರಿಗಳ ಸಹಕಾರವಿಲ್ಲದೆ ವರ್ತಕರು, ದಲ್ಲಾಳಿಗಳು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರದ ಯೋಜನೆಗಳಿಗೆ ಈ ರೀತಿ ಕನ್ನ ಕೊರೆದು ರೈತರು ಮತ್ತು ಬೊಕ್ಕಸಕ್ಕೆ ಏಕಕಾಲಕ್ಕೆ ನಷ್ಟ ಉಂಟುಮಾಡುವ ವಿಷಮ ಜಾಲ ಎರಡೇ ಖರೀದಿ ಕೇಂದ್ರಗಳಿಗೆ ಸೀಮಿತವಾಗಿದೆ ಎಂದು ಭಾವಿಸುವಂತಿಲ್ಲ. ಎಂಎಸ್‌ಪಿ ಯೋಜನೆಯಡಿ ಆಹಾರ ಧಾನ್ಯಗಳ ಖರೀದಿ ನಡೆದಿರುವ ಎಲ್ಲ ಕೇಂದ್ರಗಳಿಗೂ ತನಿಖೆಯನ್ನು ವಿಸ್ತರಿಸಬೇಕು. ವರ್ತಕರು ಮತ್ತು ದಲ್ಲಾಳಿಗಳು ರೈತರ ಸೋಗಿನಲ್ಲಿ ಆಹಾರ ಧಾನ್ಯ ಮಾರಾಟ ಮಾಡಲು ಯಾವ ಮಾರ್ಗವನ್ನು ಬಳಕೆ ಮಾಡಿಕೊಂಡಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು. ತಪ್ಪಿತಸ್ಥರನ್ನು ಪತ್ತೆಮಾಡಿ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮಕ್ಕೆ ಒಳಪಡಿಸಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಸರಿಪಡಿಸುವುದಕ್ಕೆ ಆದ್ಯತೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT