ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಕುಸ್ತಿ – ಲೈಂಗಿಕ ದೌರ್ಜನ್ಯ ಪ್ರಕರಣ: ಶಂಕೆಗೆ ಕಾರಣವಾದ ಸರ್ಕಾರದ ನಡೆ

Last Updated 27 ಜನವರಿ 2023, 23:07 IST
ಅಕ್ಷರ ಗಾತ್ರ

ಒಲಿಂಪಿಕ್ ಕೂಟಗಳ ವೈಯಕ್ತಿಕ ವಿಭಾಗಗಳಲ್ಲಿ ಭಾರತಕ್ಕೆ ಹೆಚ್ಚು ಪದಕ ತಂದುಕೊಡುತ್ತಿರುವ ಕ್ರೀಡೆಯೆಂದರೆ ಕುಸ್ತಿ. ವಿಶ್ವದ ಘಟಾನುಘಟಿ ಕುಸ್ತಿಪಟುಗಳು ಭಾರತದ ಪೈಲ್ವಾನರನ್ನು ಕಠಿಣ ಪ್ರತಿಸ್ಪರ್ಧಿಗಳೆಂದೇ ಪರಿಗಣಿಸುತ್ತಾರೆ. ಇಂತಹ ಗೌರವ ಮತ್ತು ಖ್ಯಾತಿಯನ್ನು ತಂದುಕೊಡುತ್ತಿರುವ ಕುಸ್ತಿಕ್ಷೇತ್ರ ಈಗ ವಿವಾದಕ್ಕೀಡಾಗಿದೆ. ಕ್ರೀಡಾಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಹಾಸುಹೊಕ್ಕಾಗಿರುವುದು ಮತ್ತು ಆಡಳಿತ ವ್ಯವಸ್ಥೆ ಹಳಿ ತಪ್ಪಿರುವುದು ಕಣ್ಣಿಗೆ ರಾಚಿದೆ. ಭಾರತ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿಸಿ ಖ್ಯಾತನಾಮ ಕುಸ್ತಿಪಟುಗಳು ಹೋದ ವಾರ ನವದೆಹಲಿಯಲ್ಲಿ ಮೂರು ದಿವಸ ಧರಣಿ ನಡೆಸಿದರು. ವಿಶ್ವ ಚಾಂಪಿಯನ್‌ಷಿಪ್ ಮತ್ತು ಒಲಿಂಪಿಕ್ಸ್‌ ಪದಕಗಳನ್ನು ಗೆದ್ದ ಕುಸ್ತಿಪಟು ಗಳಾದ ಬಜರಂಗ್ ಪುನಿಯಾ, ರವಿ ದಹಿಯಾ, ವಿನೇಶಾ ಪೋಗಟ್, ಬಬಿತಾ ಪೋಗಟ್ ಮತ್ತು ಸಾಕ್ಷಿ ಮಲಿಕ್ ನೇತೃತ್ವದಲ್ಲಿ ಧರಣಿ ನಡೆಯಿತು. ಬ್ರಿಜ್‌ಭೂಷಣ್ ಅವರನ್ನು ಪದಚ್ಯುತಗೊಳಿಸಿ ಹೊಸ ಆಡಳಿತ ಸಮಿತಿಯನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ತನಿಖೆ ನಡೆಸಲು ಸಮಿತಿ ರಚಿಸುವುದಾಗಿ ಭರವಸೆ ನೀಡಿದ ನಂತರ ಕುಸ್ತಿಪಟುಗಳು ಧರಣಿ ಸ್ಥಗಿತಗೊಳಿಸಿದರು. ಇದೀಗ ಸರ್ಕಾರವು ಬಾಕ್ಸಿಂಗ್ ತಾರೆ ಮೇರಿ ಕೋಮ್ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ನೇಮಕ ಮಾಡಿದೆ. ಆದರೆ ಸಮಿತಿಯ ವಿಚಾರಣೆಯು ಪೂರ್ಣವಾಗುವವರೆಗೆ ಬ್ರಿಜ್‌ಭೂಷಣ್ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡುವುದಾಗಿ ಹೇಳಿದ್ದ ಭರವಸೆಯನ್ನು ಸರ್ಕಾರ ಈಡೇರಿಸಿಲ್ಲ. ಅಲ್ಲದೆ ಸಮಿತಿ ರಚನೆಗೂ ಮುನ್ನ ಕುಸ್ತಿಪಟುಗಳ ಅಭಿಪ್ರಾಯ ಆಲಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆ ಭರವಸೆಯೂ ಹುಸಿಯಾಗಿದೆ ಎಂದು ಕುಸ್ತಿಪಟುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿವಾದವನ್ನು ತಣ್ಣಗಾಗಿಸಿ, ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ ನಡೆದಿದೆ ಎಂಬ ಅನುಮಾನವನ್ನೂ ಕುಸ್ತಿಪಟುಗಳು ವ್ಯಕ್ತಪಡಿಸಿದ್ದಾರೆ. ಲೈಂಗಿಕ ಕಿರುಕುಳದ ಆರೋಪಗಳು ಎದುರಾದಾಗ ಮತ್ತು ಆಂತರಿಕ ಸಮಿತಿಯ ವ್ಯವಸ್ಥೆಯು ಅಸ್ತಿತ್ವದಲ್ಲಿ ಇಲ್ಲದೇ ಇದ್ದಾಗ ಅಥವಾ ಅಂತಹ ಸಮಿತಿಗಳು ನಿಷ್ಕ್ರಿಯವಾಗಿದ್ದರೆ, ಪೊಲೀಸರಿಗೆ ದೂರು ನೀಡಬೇಕಾಗಿರುವುದು ಸಹಜ ಪ್ರಕ್ರಿಯೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಬೇಕು. ವಿಶ್ವದರ್ಜೆಯ ಕುಸ್ತಿಪಟುಗಳು ಬೀದಿಗಿಳಿದು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದರೂ ಸಂಬಂಧಪಟ್ಟವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಗಳಿಗೆ ಪೂರಕವಾದ ಸಾಕ್ಷ್ಯಾಧಾರಗಳು ತಮ್ಮ ಬಳಿ ಇವೆ ಎಂದೂ ಕ್ರೀಡಾಪಟುಗಳು ಹೇಳಿದ್ದಾರೆ. ಆದರೂ ಕ್ರಮ ಜರುಗಿಸಿಲ್ಲ. ಅದಕ್ಕೆ ಕಾರಣ ಸಿಂಗ್ ಅವರು ಸಂಸದರಾಗಿರುವುದು ಮತ್ತು ಆಡಳಿತಾರೂಢ ಬಿಜೆಪಿಯ ಪ್ರಬಲ ನಾಯಕರಾಗಿರುವುದು. ಅವರು ಒಂದು ದಶಕದಿಂದ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿದ್ದಾರೆ. ಪಕ್ಷ ಮತ್ತು ಕ್ರೀಡಾಕ್ಷೇತ್ರದಲ್ಲಿ ಬಹಳ ಪ್ರಭಾವ ಹೊಂದಿದ್ದಾರೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಕುಸ್ತಿಪಟುಗಳಲ್ಲಿ ಹೆಚ್ಚಿನವರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವವರೇ ಆಗಿದ್ದಾರೆ. ಪಕ್ಷಕ್ಕೆ ಮುಜುಗರ ಆಗುವುದನ್ನು ತಡೆಯಲು ಸರ್ಕಾರವು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಹೊಸ ಕ್ರೀಡಾ ನೀತಿಯ ಕೆಲವು ನಿಯಮಗಳ ಬಗ್ಗೆ ಕ್ರೀಡಾಪಟುಗಳಿಗೆ ಅಸಮಾಧಾನವಿದೆ, ಆದರೆ ಆ ನಿಯಮಗಳಿಂದ ಕ್ರೀಡೆಗೆ ಒಳ್ಳೆಯದಾಗಲಿದೆ, ಇದನ್ನು ಸಹಿಸದ ಕೆಲವರು ಈ ಧರಣಿಗೆ ಕುಮ್ಮಕ್ಕು ನೀಡಿದ್ದಾರೆ, ತನಿಖೆ ಪಾರದರ್ಶಕವಾಗಿ ನಡೆದರೆ ಎಲ್ಲವೂ ಬಹಿರಂಗವಾಗಲಿವೆ ಎಂದು ಬ್ರಿಜ್‌ಭೂಷಣ್ ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಪ್ರಕರಣವನ್ನು ಸರ್ಕಾರ ಇದುವರೆಗೆ ನಿರ್ವಹಿಸಿದ ರೀತಿಯು ತನಿಖೆ ಪಾರದರ್ಶಕವಾಗಿ ನಡೆಯುವ ಕುರಿತು ಅನುಮಾನಗಳು ಮೂಡುವಂತೆ ಮಾಡಿದೆ. ಆರೋಪ ಕೇಳಿಬಂದ ಕೂಡಲೇ ಸಂಬಂಧಪಟ್ಟವರು ಕುಸ್ತಿಪಟುಗಳ ಅಹವಾಲನ್ನು ಕೇಳಿ ಕ್ರಮಕ್ಕೆ ಮುಂದಾಗಬೇಕಿತ್ತು. ಅದರಿಂದ ವಿಶ್ವಮಟ್ಟದಲ್ಲಿ ದೇಶದ ಗೌರವ ಮುಕ್ಕಾಗುವುದನ್ನು ತಡೆಯಬಹುದಿತ್ತು. ದೇಶದ ಎಲ್ಲ ಕ್ಷೇತ್ರಗಳಲ್ಲಿಯೂ ಇಂದು ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳಿಂದ ಮಹಿಳೆಯರ ಮನೋಬಲ ಕುಗ್ಗಬಾರದು. ತ್ವರಿತಗತಿಯಲ್ಲಿ ತನಿಖೆ ಪೂರ್ಣಗೊಳಿಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಆ ಮೂಲಕ ತಮ್ಮ ಹೆಣ್ಣುಮಕ್ಕಳನ್ನು ಕ್ರೀಡೆಗೆ ಕಳುಹಿಸಲು ಬಯಸುವ ಪಾಲಕರಲ್ಲಿ ವಿಶ್ವಾಸ ತುಂಬಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT