ಮುಡಾ ಹಗರಣದ ಆರೋಪಗಳಿಂದ ಹೊರಬಂದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಶಕ್ತಿ ತುಂಬಲಿದೆ. ಆದರೆ, ಪ್ರಾಧಿಕಾರದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮುಂದುವರಿದೇ ಇವೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಅಕ್ರಮವಾಗಿ ನಿವೇಶನ ಪಡೆದಿದ್ದಾರೆಂದು ಆರೋಪಿಸಲಾದ ಪ್ರಕರಣದಲ್ಲಿ ‘ಕ್ಲೀನ್ ಚಿಟ್’ ದೊರೆತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿರಾಳಭಾವ ಉಂಟುಮಾಡುವಂತಹ ಬೆಳವಣಿಗೆ. ಸಿದ್ದರಾಮಯ್ಯ ಮತ್ತು ಅವರ ಪತ್ನಿ ಬಿ.ಎಂ. ಪಾರ್ವತಿ ಸೇರಿದಂತೆ ನಾಲ್ವರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ. ಹೀಗಾಗಿ, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಸದ್ಯಕ್ಕೆ ನಿರಾಳರಾದಂತಾಗಿದೆ. ಮುಖ್ಯಮಂತ್ರಿ ಪಾಲಿಗೆ ಕಾನೂನು ಹೋರಾಟಕ್ಕೆ ಸಂಬಂಧಿಸಿದಂತೆ ಮಾತ್ರವಲ್ಲದೆ ರಾಜಕೀಯವಾಗಿ ಕೂಡ ಈ ವಿದ್ಯಮಾನ ಮಹತ್ವದ್ದಾಗಿದೆ. ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಊಹಾಪೋಹಗಳು ಚಾಲ್ತಿಯಲ್ಲಿರುವ ಸಂದರ್ಭದಲ್ಲಿ, ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ವರದಿಯನ್ನು ನ್ಯಾಯಾಲಯ ಒಪ್ಪಿಕೊಂಡಿರುವುದು ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಿದಂತಾಗಿದೆ. ಒಂದುವೇಳೆ, ಈ ವರದಿಯನ್ನು ನ್ಯಾಯಾಲಯ ಒಪ್ಪಿಕೊಳ್ಳದೆ ಹೋಗಿದ್ದಲ್ಲಿ ಸರ್ಕಾರ ಹಾಗೂ ಪಕ್ಷದಲ್ಲಿ ಅವರ ಸ್ಥಾನ ಅತಂತ್ರವಾಗುವ ಸಾಧ್ಯತೆಯಿತ್ತು. ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ವಿರೋಧ ಪಕ್ಷದ ಆಗ್ರಹವನ್ನೂ ನ್ಯಾಯಾಲಯದ ಆದೇಶ ದುರ್ಬಲಗೊಳಿಸಿದೆ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮೇಲಿನ ಸಿದ್ದರಾಮಯ್ಯನವರ ಹಿಡಿತವನ್ನು ಮತ್ತಷ್ಟು ಬಲಪಡಿಸಿದೆ. ಸುಮಾರು ನಾಲ್ಕು ದಶಕಗಳ ಅವಧಿಯ ತಮ್ಮ ಕಳಂಕರಹಿತ ರಾಜಕೀಯ ಪಯಣದ ಬಗ್ಗೆ ಹೆಮ್ಮೆಪಡುತ್ತಿದ್ದ ಮುಖ್ಯಮಂತ್ರಿ ಅವರ ಸಾರ್ವಜನಿಕ ಜೀವನದ ವರ್ಚಸ್ಸನ್ನು ಅಕ್ರಮ ನಿವೇಶನ ಪಡೆದಿರುವ ಆರೋಪಗಳು ಮಬ್ಬಾಗಿಸಿದ್ದವು. ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮುಡಾ 14 ಪರಿಹಾರ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದೆ ಎನ್ನುವ ಆರೋಪ ಮುಖ್ಯಮಂತ್ರಿ ಅವರ ರಾಜಕೀಯ ವಿರೋಧಿಗಳಿಗೆ ಆಯುಧವಾಗಿ ಪರಿಣಮಿಸಿತ್ತು. ಮುಖ್ಯಮಂತ್ರಿ ಪತ್ನಿ ನಿವೇಶನಗಳನ್ನು ಹಿಂದಿರುಗಿಸಿದರೂ, ಕಾನೂನು ಪ್ರಕ್ರಿಯೆ ಮುಂದುವರಿದಿತ್ತು. ಪ್ರಸ್ತುತ ನ್ಯಾಯಾಲಯ ನೀಡಿರುವ ಕಾನೂನು ಪರಿಭಾಷೆಯಲ್ಲಿನ ಕ್ಲೀನ್ ಚಿಟ್, ವಿಚಾರಣೆಗೆ ಅಗತ್ಯವಾದ ಪುರಾವೆಗಳು ಇಲ್ಲದಿರುವುದರಿಂದ ಸಿದ್ದರಾಮಯ್ಯ ಸೇರಿದಂತೆ ಎಲ್ಲ ಆರೋಪಿಗಳನ್ನೂ ಕ್ರಿಮಿನಲ್ ಹೊಣೆಗಾರಿಕೆಯಿಂದ ಮುಕ್ತಗೊಳಿಸಿದೆ.

ಮುಖ್ಯಮಂತ್ರಿಗೆ ದೊರೆತಿರುವ ಈ ನಿರಾಳಭಾವದ ಹಾದಿ, ಸಾಂವಿಧಾನಿಕ ಹಾಗೂ ಕಾನೂನು ನಡುವಿನ ಸಂಘರ್ಷದಿಂದ ಕೂಡಿತ್ತು. ಈ ಸಂಘರ್ಷ, ಸಿದ್ದರಾಮಯ್ಯನವರ ವಿರುದ್ಧದ ಆರೋಪಗಳ ವಿಚಾರಣೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು 2024ರಲ್ಲಿ ಅನುಮತಿ ನೀಡುವುದರೊಂದಿಗೆ ಆರಂಭವಾಗಿತ್ತು. ರಾಜ್ಯಪಾಲರ ತೀರ್ಮಾನವನ್ನು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಎಂದು ಕಾಂಗ್ರೆಸ್ ಟೀಕಿಸಿತ್ತು. ಹೈಕೋರ್ಟ್ನ ಏಕಸದಸ್ಯ ಪೀಠ ರಾಜ್ಯಪಾಲರ ನಿರ್ಧಾರವನ್ನು ಎತ್ತಿಹಿಡಿದರೂ, ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ನೋಟಿಸ್ಗಳಿಗೆ ತಡೆನೀಡಿತ್ತು. ಸುಪ್ರೀಂ ಕೋರ್ಟ್ ಕೂಡ ಇಡಿ ಮೇಲ್ಮನವಿಯನ್ನು ತಳ್ಳಿಹಾಕಿತ್ತು. ಪ್ರಸ್ತುತ ನ್ಯಾಯಾಲಯ ಒಪ್ಪಿಕೊಂಡಿರುವ ಲೋಕಾಯುಕ್ತರ ವರದಿ, ಇಡೀ ಪ್ರಕ್ರಿಯೆಯನ್ನು ರಾಜಕೀಯಪ್ರೇರಿತ ಎಂದು ವಾದಿಸಲು ಕಾಂಗ್ರೆಸ್ಗೆ ಅವಕಾಶ ಮಾಡಿಕೊಟ್ಟಿದೆ.

ಲೋಕಾಯುಕ್ತರ ‘ಬಿ’ ರಿಪೋರ್ಟ್ ಅನ್ನು ನ್ಯಾಯಾಲಯ ಒಪ್ಪಿಕೊಂಡಿರುವುದರಿಂದಾಗಿ, ಮುಡಾ ಹಗರಣಗಳ ಪ್ರಕರಣ ಕೊನೆಗೊಂಡಿದೆ ಎಂದು ಹೇಳಲಾಗದು. ‘ಬಿ’ ರಿಪೋರ್ಟ್ ಪ್ರಶ್ನಿಸಿ ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿರುವುದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುವ ಇಂಗಿತವನ್ನು ದೂರುದಾರ ಸ್ನೇಹಮಯಿ ಕೃಷ್ಣ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಡಾದ ದೊಡ್ಡಮಟ್ಟದ ಅಕ್ರಮಗಳ ತನಿಖೆಯನ್ನು ಮುಂದುವರಿಸಬೇಕೆಂದು ವಿಶೇಷ ನ್ಯಾಯಾಲಯ ಆದೇಶಿಸಿದೆ. ಮುಡಾದ ಮಾಜಿ ಆಯುಕ್ತರನ್ನು ಜಾರಿ ನಿರ್ದೇಶನಾಲಯ ಈಗಾಗಲೇ ಬಂಧಿಸಿದ್ದು, ₹450 ಕೋಟಿಗೂ ಹೆಚ್ಚಿನ ಸ್ಥಿರಾಸ್ತಿ ವಶಪಡಿಸಿಕೊಂಡಿದೆ. ಹಾಗಾಗಿ, ಪ್ರಸಕ್ತ ಬೆಳವಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೈಯಕ್ತಿಕ ಹಾಗೂ ರಾಜಕೀಯ ಗೆಲುವಷ್ಟೇ ಆಗಿದೆ. ಈ ಗೆಲುವಿನಿಂದಾಗಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಂಟಿಕೊಂಡಿರುವ ಕೊಳೆ ತೊಳೆದುಹೋಗದು. ಹಗರಣಗಳ ಬಗೆಗಿನ ತನಿಖೆಯನ್ನು ಸರ್ಕಾರ ಮುಂದುವರಿಸಬೇಕು. ಪಾರದರ್ಶಕ ಹಾಗೂ ತ್ವರಿತ ತನಿಖೆಯ ಮೂಲಕ ಸಾರ್ವಜನಿಕ ವಿಶ್ವಾಸಕ್ಕೆ ಚ್ಯುತಿ ಆಗದಂತೆ ನಡೆದುಕೊಳ್ಳುವ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.