ಬುಧವಾರ, ಸೆಪ್ಟೆಂಬರ್ 23, 2020
27 °C

ಸಂಪಾದಕೀಯ | ಆಫ್‌ಲೈನ್‌ ಪಾವತಿ ವ್ಯವಸ್ಥೆ ಆರ್‌ಬಿಐ ನಡೆ ಸ್ವಾಗತಾರ್ಹ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಸ್ಮಾರ್ಟ್‌ಫೋನ್‌ಗಳು ಹಾಗೂ ಅವುಗಳ ಮೂಲಕ ಇಂಟರ್ನೆಟ್‌ ಸೇವೆ ಒದಗಿಸುವುದು ವ್ಯಾಪಕವಾಗುವ ಮೊದಲು ಕೂಡ ಭಾರತದಲ್ಲಿ ಆನ್‌ಲೈನ್‌ ಹಣ ಪಾವತಿ ವ್ಯವಸ್ಥೆ ಇತ್ತು. ಆಯಾ ಬ್ಯಾಂಕಿನ ಆನ್‌ಲೈನ್‌ ಸೇವಾ ಪೋರ್ಟಲ್‌ ಮೂಲಕ ಇದನ್ನು ಮಾಡಬಹುದಿತ್ತು ಅಥವಾ ಬ್ಯಾಂಕ್‌ ಶಾಖೆಗಳಿಗೆ ತೆರಳಿ ಅಲ್ಲಿನ ಸಿಬ್ಬಂದಿಯ ನೆರವು ಪಡೆದೂ ಇದನ್ನು ಮಾಡಬಹುದಿತ್ತು. ಆದರೆ, ಆನ್‌ಲೈನ್‌ ಪಾವತಿ ವ್ಯವಸ್ಥೆಯಲ್ಲಿ ಭಾರತದ ಮಟ್ಟಿಗೆ ಕ್ರಾಂತಿಕಾರಕ ಬದಲಾವಣೆ ತಂದವುಗಳಲ್ಲಿ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ಯೂನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ ಅಥವಾ ಯುಪಿಐ ಕೂಡ ಒಂದು.

ಈಗ ಸರಿಸುಮಾರು ಐವತ್ತು ಬ್ಯಾಂಕುಗಳು ಯುಪಿಐ ಆಧಾರಿತ, ತಮ್ಮದೇ ಆದ ಆನ್‌ಲೈನ್‌ ಪಾವತಿ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿವೆ. 2016ರ ಆಗಸ್ಟ್‌ ತಿಂಗಳಲ್ಲಿ ₹ 3.09 ಕೋಟಿಯಷ್ಟು ಮೊತ್ತದ ವಹಿವಾಟು ಯುಪಿಐ ವ್ಯವಸ್ಥೆಯ ಮೂಲಕ ನಡೆದಿತ್ತು. 2020ರ ಜುಲೈ ತಿಂಗಳಿನಲ್ಲಿ ಈ ವ್ಯವಸ್ಥೆಯ ಮೂಲಕ ಆಗಿರುವ ವಹಿವಾಟಿನ ಮೊತ್ತ ₹ 2.90 ಲಕ್ಷ ಕೋಟಿ! ಸರಿಸುಮಾರು ನಾಲ್ಕು ವರ್ಷಗಳ ಅವಧಿಯಲ್ಲಿ, ಯುಪಿಐ ವ್ಯವಸ್ಥೆಯ ಮೂಲಕ ನಡೆಯುವ ವಹಿವಾಟಿನ ಮೊತ್ತದಲ್ಲಿ ಆಗಿರುವ ಬೃಹತ್ ಹೆಚ್ಚಳವು ಈ ವ್ಯವಸ್ಥೆ ಪಡೆದುಕೊಂಡಿರುವ ಜನಪ್ರಿಯತೆಯನ್ನೂ ಸೂಚಿಸುತ್ತದೆ. ಜನರಿಗೆ ಇಷ್ಟೊಂದು ಹತ್ತಿರವಾಗಿರುವ ಯುಪಿಐ ವ್ಯವಸ್ಥೆಯಲ್ಲಿ ಅಡಚಣೆಗಳು ಇಲ್ಲವೆಂದಲ್ಲ.

ಒಳ್ಳೆಯ ವೇಗದ ಇಂಟರ್ನೆಟ್ ಹಾಗೂ ಸ್ಥಿರವಾದ ಇಂಟರ್ನೆಟ್ ಸಂಪರ್ಕವು ಯುಪಿಐ ಪಾವತಿ ವ್ಯವಸ್ಥೆಗೆ ಬೇಕು. ಹಳ್ಳಿಗಾಡಿನ ಪ್ರದೇಶಗಳಲ್ಲಿ ಸ್ಥಿರವಾದ ಇಂಟರ್ನೆಟ್ ಸಂಪರ್ಕ ಇಲ್ಲ. ಇನ್ನು ಕೆಲವು ಕಡೆಗಳಲ್ಲಿ ವೇಗದ ಇಂಟರ್ನೆಟ್ ಸಂಪರ್ಕ ಇಲ್ಲ. ಈ ಮಾತನ್ನು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ)‌ ಕೂಡ ಒಪ್ಪಿಕೊಂಡಿದೆ. ಇಂಟರ್ನೆಟ್ ಇಲ್ಲದೆಯೂ ಹಣ ಪಾವತಿಸುವ ವ್ಯವಸ್ಥೆ ಇದೆಯಾದರೂ ಅದಕ್ಕೆ ಬಹಳಷ್ಟು ಮಿತಿಗಳಿವೆ.

ಇಂತಹ ಸ್ಥಿತಿಯಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇರಿಸಿರುವ ಆರ್‌ಬಿಐ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಮೊಬೈಲ್ ಬಳಸಿ ಆಫ್‌ಲೈನ್‌ ಮೂಲಕ ಹಣ ಪಾವತಿಸುವುದನ್ನು ಸಾಧ್ಯವಾಗಿಸುವ ವ್ಯವಸ್ಥೆಯೊಂದನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಮುಂದಾಗಿದೆ. ಇದು ಎಷ್ಟರಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬುದನ್ನು ಆಧರಿಸಿ, ವ್ಯವಸ್ಥೆಯನ್ನು ಇನ್ನಷ್ಟು ವ್ಯಾಪಕಗೊಳಿಸಬಹುದು ಅಥವಾ ಇತರ ಯಾವುದೇ ಕ್ರಮವನ್ನು ಆರ್‌ಬಿಐ ಕೈಗೊಳ್ಳಬಹುದು. ಪ್ರಾರಂಭಿಕ ಹಂತದಲ್ಲಿ ಆಫ್‌ಲೈನ್‌ ವ್ಯವಸ್ಥೆಯಲ್ಲಿ ಒಂದು ಬಾರಿಗೆ ₹ 200ರವರೆಗೆ ಹಣ ಪಾವತಿಸಲು ಸಾಧ್ಯವಾಗಲಿದೆ ಎಂಬ ವರದಿಗಳು ಇವೆ.

ಪಾಸ್‌ವರ್ಡ್‌ ಅಥವಾ ಒಟಿಪಿ (ಒಂದು ಬಾರಿಗೆ ಮಾತ್ರ ಬಳಸಬಹುದಾದ ಪಾಸ್‌ವರ್ಡ್‌) ಬಳಕೆ ಇಲ್ಲದೆಯೇ ಆಫ್‌ಲೈನ್‌ ಪಾವತಿ ಸಾಧ್ಯವಾಗಬೇಕು ಎಂದು ಆರ್‌ಬಿಐ ಹೇಳಿದೆ. ಪಾವತಿಗೆ ನಿಗದಿ ಮಾಡಿರುವ ಗರಿಷ್ಠ ಮೊತ್ತವನ್ನು ಗಮನಿಸಿದರೆ, ಆಫ್‌ಲೈನ್‌ ಪಾವತಿ ವ್ಯವಸ್ಥೆಯು ಯುಪಿಐ ವ್ಯವಸ್ಥೆಗೆ ಸಂಪೂರ್ಣವಾಗಿ ಪರ್ಯಾಯವಾಗದಿರಬಹುದು. ಆದರೆ, ಇದು ಕೆಲವು ಅಗತ್ಯ ವಸ್ತುಗಳ ಖರೀದಿಗೆ ನೆರವಾಗಬಹುದು ಎಂಬ ನಿರೀಕ್ಷೆ ಹೊಂದಲು ಅಡ್ಡಿಯಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಇದು, ಇಂಟರ್ನೆಟ್ ಸಂಪರ್ಕ ಲಭ್ಯವಿಲ್ಲದವರಿಗೆ ಡಿಜಿಟಲ್ ಪಾವತಿ ವ್ಯವಸ್ಥೆಯ ಬಂಡಿಯನ್ನು ಏರಲು ನೆರವಾಗಬಹುದು. ಆ ಮೂಲಕ, ಪಾವತಿ ವ್ಯವಸ್ಥೆಯಲ್ಲಿನ ಡಿಜಿಟಲ್ ಕಂದಕವನ್ನು ಕಿರಿದಾಗಿಸುವ ಕೆಲಸ ಮಾಡಬಹುದು.

ಒಟ್ಟಿನಲ್ಲಿ, ಇದು ಆರ್‌ಬಿಐ ಇಟ್ಟಿರುವ ಸ್ವಾಗತಾರ್ಹ ಹೆಜ್ಜೆ ಎನ್ನಲು ಅಡ್ಡಿಯಿಲ್ಲ. ಯುಪಿಐ ವ್ಯವಸ್ಥೆ ಬಳಸಿ ಕೆಲಸ ಮಾಡುವ ಕೆಲವು ಮೊಬೈಲ್‌ ಆ್ಯಪ್‌ಗಳು ಸ್ಥಳೀಯ ಭಾಷೆಗಳಲ್ಲಿಯೂ ತಮ್ಮ ಸೇವೆಗಳನ್ನು ನೀಡುತ್ತಿವೆ. ಇದನ್ನು ಆರ್‌ಬಿಐ ಒಂದು ಮಾದರಿಯಾಗಿ ಪರಿಗಣಿಸಬಹುದು. ಆಫ್‌ಲೈನ್‌ ಪಾವತಿ ವ್ಯವಸ್ಥೆಯಲ್ಲಿ ಭಾಷೆಯ ಬಳಕೆ ಇರುತ್ತದೆ ಎಂದಾದರೆ, ಸ್ಥಳೀಯ ಭಾಷೆಗಳನ್ನು ಬಳಕೆ ಮಾಡುವ ಆಯ್ಕೆಯನ್ನು ಅದು ಗ್ರಾಹಕರಿಗೆ ನೀಡಬೇಕು. ಈ ಕ್ರಮವು ಇನ್ನಷ್ಟು ಜನರನ್ನು ಡಿಜಿಟಲ್‌ ಪಾವತಿ ವ್ಯವಸ್ಥೆಯ ತೆಕ್ಕೆಗೆ ಸೆಳೆದುಕೊಳ್ಳಲು ನೆರವಾಗುತ್ತದೆ. ಹೆಚ್ಚೆಚ್ಚು ಜನ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು ಎಂಬುದು ಆರ್‌ಬಿಐನ ಆಶಯವೂ ಹೌದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು