ಸಾಲ ವಸೂಲಾತಿ: ಅನಿಶ್ಚಿತ ಸ್ಥಿತಿ ನಿವಾರಣೆಗೆ ಆರ್‌ಬಿಐ ಮುಂದಾಗಲಿ

ಮಂಗಳವಾರ, ಏಪ್ರಿಲ್ 23, 2019
25 °C

ಸಾಲ ವಸೂಲಾತಿ: ಅನಿಶ್ಚಿತ ಸ್ಥಿತಿ ನಿವಾರಣೆಗೆ ಆರ್‌ಬಿಐ ಮುಂದಾಗಲಿ

Published:
Updated:
Prajavani

ಕಾರ್ಪೊರೇಟ್‌ ವಲಯದ ದೊಡ್ಡ ಮೊತ್ತದ ಸಾಲ ವಸೂಲಿ ಸುಗಮಗೊಳಿಸಿದ್ದ ಭಾರತೀಯ ರಿಸರ್ವ್‌ ಬ್ಯಾಂಕ್‌ನ ‘ಫೆಬ್ರುವರಿ 12ರ ಸುತ್ತೋಲೆ’ಯನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ಇದರಿಂದ, ದೇಶಿ ಆರ್ಥಿಕತೆ ಮತ್ತು ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಮೇಲೆ  ದೂರಗಾಮಿ ಪರಿಣಾಮ ಉಂಟಾಗಲಿದೆ. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಆರ್ಥಿಕ ಶಿಸ್ತು ರೂಢಿಸುವ ಆರ್‌ಬಿಐನ ಇರಾದೆಗೆ ಇದು ತಣ್ಣೀರೆರಚಿದೆ. ಅದರ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಸಾಧ್ಯತೆ ಇದೆ.

ವಸೂಲಾಗದ ಸಾಲದ (ಎನ್‌ಪಿಎ) ಸಮಸ್ಯೆಯ ಪರಿಹಾರಕ್ಕೆ ಆರ್‌ಬಿಐ ಹೊರಡಿಸಿದ್ದ ಸುತ್ತೋಲೆ ಪ್ರಬಲ ಅಸ್ತ್ರವಾಗಿತ್ತು. ಸಾಲ ಮರುಪಾವತಿಗೆ ದೊಡ್ಡ ಕಂಪನಿಗಳು ಒಂದು ದಿನ ತಡ ಮಾಡಿದರೂ ಅಂತಹ ಸಾಲ ಖಾತೆಗಳನ್ನು ಸುಸ್ತಿ ಸಾಲ ಎಂದು ವರ್ಗೀಕರಿಸಿ, ಸಾಲ ವಸೂಲಾತಿಗೆ ದಿವಾಳಿ ಸಂಹಿತೆಯಡಿ ಕ್ರಮ ಕೈಗೊಳ್ಳಲು ಸುತ್ತೋಲೆಯು ಬ್ಯಾಂಕ್‌ಗಳಿಗೆ ಅವಕಾಶ ಕಲ್ಪಿಸಿತ್ತು. ₹2 ಸಾವಿರ ಕೋಟಿ ಮೊತ್ತಕ್ಕಿಂತ ಹೆಚ್ಚಿನ ಸುಸ್ತಿಸಾಲದ ಪ್ರಕರಣಗಳಲ್ಲಿ 180 ದಿನಗಳಲ್ಲಿ ಪರಿಹಾರ ಕಂಡುಕೊಳ್ಳದಿದ್ದರೆ, ಅಂತಹ ಸಾಲದ ಖಾತೆಗಳನ್ನು ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಗೆ ಇಲ್ಲವೇ ದಿವಾಳಿ ಕೋರ್ಟ್‌ಗೆ ಕಡ್ಡಾಯವಾಗಿ ಶಿಫಾರಸು ಮಾಡಬೇಕಾಗಿತ್ತು.

ಸುತ್ತೋಲೆಯನ್ನು ರದ್ದುಪಡಿಸಿರುವುದರಿಂದ ₹ 2 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವ 70 ದೊಡ್ಡ ಸಾಲಗಾರರಿಂದ ₹3.80 ಲಕ್ಷ ಕೋಟಿಗಳಷ್ಟು ಸಾಲ ವಸೂಲಿ ಮಾಡುವ ಪ್ರಕ್ರಿಯೆ ಈಗ ಜಟಿಲವಾಗಿದೆ. ವಿಳಂಬಕ್ಕೂ ಕಾರಣವಾಗಲಿದೆ. ಬ್ಯಾಂಕ್‌ಗಳ ವಸೂಲಾಗದ ಒಟ್ಟು ₹10.8 ಲಕ್ಷ ಕೋಟಿ ಸಾಲ ಮರುಪಾವತಿ ಪ್ರಕ್ರಿಯೆಗೂ ಹಿನ್ನಡೆ ಆಗಲಿದೆ. ಒಟ್ಟಾರೆ, ಸಾಲ ಮರುಪಾವತಿ ಪ್ರಕ್ರಿಯೆಯ ಅನಿಶ್ಚಿತ ಸ್ಥಿತಿ ಮುಂದುವರಿಯಲಿದೆ. ಕಂಪನಿಗಳ ಹಣಕಾಸಿಗೆ ಸಂಬಂಧಿಸಿದ ಗೋಜಲುಗಳು ಹೆಚ್ಚಲಿವೆ.

ಕೇಂದ್ರ ಸರ್ಕಾರದ ಒಪ್ಪಿಗೆ ಇಲ್ಲದೆ ಸುತ್ತೋಲೆ ಜಾರಿಗೊಳಿಸಿರುವುದು ನಿಯಮಬಾಹಿರ ಕ್ರಮ, ಆ ಮೂಲಕ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಕೋರ್ಟ್‌ ವಿಶ್ಲೇಷಿಸಿದೆ. ಕಾಯ್ದೆಯಲ್ಲಿನ ಇತರ ನ್ಯೂನತೆಗಳ ಕುರಿತೂ ತೀರ್ಪು ಬೆಳಕು ಚೆಲ್ಲಿದೆ. ಆದರೆ, ತಾಂತ್ರಿಕ ಕಾರಣಗಳ ನೆಪದಲ್ಲಿ ನೀಡಿರುವ ಈ ತೀರ್ಪು, ವಿದ್ಯುತ್‌, ಜವಳಿ, ಸಕ್ಕರೆ, ಸಾರಿಗೆ ಮತ್ತಿತರ ವಲಯಗಳಲ್ಲಿನ ಸಾಲ ವಸೂಲಾತಿಗೆ ತೊಡರುಗಾಲಾಗಿ ಪರಿಣಮಿಸಿದೆ.

ಬ್ಯಾಂಕ್‌ಗಳು ಮತ್ತು ಸಾಲಗಾರರ ನಡುವಣ ಒಳಒಪ್ಪಂದದ ಹೊಂದಾಣಿಕೆ ಕೊನೆಗೊಳಿಸುವ, ಸಾಲ ಮರುಪಾವತಿ ಶಿಸ್ತು ರೂಢಿಸುವ ಆರ್‌ಬಿಐ ಉದ್ದೇಶಕ್ಕೆ ಇದರಿಂದ ತೀವ್ರ ಹಿನ್ನಡೆಯಾಗಿದೆ. ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಮೇಲೆ ಇದು ವ್ಯತಿರಿಕ್ತ ಪರಿಣಾಮವನ್ನೂ ಬೀರಲಿದೆ. ಎಲ್ಲ ಸಾಲಗಾರರೂ ಉದ್ದೇಶಪೂರ್ವಕವಾಗಿ ಸುಸ್ತಿದಾರರಾಗಿರುವುದಿಲ್ಲ. ತಮ್ಮ ಕೈಮೀರಿದ ಬೆಳವಣಿಗೆಗಳ ಕಾರಣಕ್ಕೆ ಕೆಲವರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗಿರುವುದಿಲ್ಲ. ವಿವಿಧ ವಲಯಗಳ ಇಂತಹ ನಿರ್ದಿಷ್ಟ ಪ್ರಕರಣಗಳನ್ನು ಆರ್‌ಬಿಐ ಬೇರ್ಪಡಿಸಿರಲಿಲ್ಲ.

ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗಿ, ಕಠಿಣ ನಿಲುವಿಗೆ ಅಂಟಿಕೊಂಡಿತ್ತು. ಇದರಿಂದಾಗಿ ಕೇಂದ್ರೀಯ ಬ್ಯಾಂಕ್‌ ತನ್ನ ಸದುದ್ದೇಶಕ್ಕೆ ಸ್ವಯಂ ಹಾನಿ ಮಾಡಿಕೊಂಡಂತಾಗಿತ್ತು. ಈಗಾಗಲೇ ವಿವಿಧ ಹಂತಗಳಲ್ಲಿ ಇರುವ ಸಾಲ ವಸೂಲಾತಿ ಪ್ರಕರಣಗಳ ಹಣೆಬರಹ ಏನಾಗಲಿದೆ ಎನ್ನುವುದು ಕೋರ್ಟ್‌ ತೀರ್ಪಿನಿಂದ ಸ್ಪಷ್ಟಗೊಂಡಿಲ್ಲ.

ಈ ಗೊಂದಲ ತಕ್ಷಣಕ್ಕೆ ದೂರವಾಗಬೇಕಾಗಿದೆ. ಆರ್ಥಿಕತೆಗೆ ಇಂಬು ನೀಡುವ ಈ ಪ್ರಕ್ರಿಯೆಗೆ ಹುರುಪು ತುಂಬಬೇಕಾಗಿದೆ. ಆರ್‌ಬಿಐ ಈಗ ಸರ್ಕಾರದ ಬೆಂಬಲ ಪಡೆದು ಹೊಸ ಸುತ್ತೋಲೆ ಹೊರಡಿಸಿ, ತನ್ನ ಸಾಲ ವಸೂಲಾತಿ ಪ್ರಕ್ರಿಯೆ ಮುಂದುವರಿಸಬೇಕಾಗಿದೆ. ವೈಯಕ್ತಿಕ ಸುಸ್ತಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರವೂ ಆರ್‌ಬಿಐಗೆ ಅಗತ್ಯವಾದ ಅಧಿಕಾರ ನೀಡಬೇಕಾಗಿದೆ.

ಆರ್ಥಿಕ ಶಿಸ್ತು ಕಾಯ್ದುಕೊಳ್ಳುವ ತೀವ್ರತೆಯು ಯಾವುದೇ ಕಾರಣಕ್ಕೂ ಕಡಿಮೆಯಾಗದಂತೆ ಕೇಂದ್ರೀಯ ಬ್ಯಾಂಕ್‌ ಹೆಚ್ಚು ಎಚ್ಚರ ವಹಿಸಬೇಕು. ಕೋರ್ಟ್‌ ತೀರ್ಪನ್ನು ಕೂಲಂಕಷವಾಗಿ ಪರಾಮರ್ಶಿಸಿ ತನ್ನ ಮಾರ್ಗದರ್ಶಿ ಸೂತ್ರಗಳಲ್ಲಿ ಬದಲಾವಣೆ ತರಬೇಕು. ಇಲ್ಲದಿದ್ದರೆ ಇದುವರೆಗೆ ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಲಿವೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !