ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಸಂತ್ರಸ್ತರ ಮಕ್ಕಳಿಗೆ ಮೀಸಲಾತಿ ಸ್ವಾಗತಾರ್ಹ

Last Updated 8 ಜುಲೈ 2019, 19:45 IST
ಅಕ್ಷರ ಗಾತ್ರ

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರ ಹೆಣ್ಣುಮಕ್ಕಳಿಗೆ ಶೈಕ್ಷಣಿಕ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಸಂತ್ರಸ್ತ ಮಹಿಳೆಯರ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಈ ಮೀಸಲಾತಿ ಪರಿಕಲ್ಪನೆ ಮಹತ್ವದ್ದಾಗಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಬಹುಪಾಲು ಸರ್ಕಾರಿ ಯೋಜನೆಗಳು ಅಗ್ಗದ ಜನಪ್ರಿಯತೆಯನ್ನು ಆಧರಿಸಿರುವುದೇ ಹೆಚ್ಚು. ಆದರೆ, ಶೋಷಣೆಗೆ ಒಳಗಾದ ಮಹಿಳೆಯರ ಮಕ್ಕಳಿಗೆ ಶೈಕ್ಷಣಿಕ ಮೀಸಲಾತಿ ಕಲ್ಪಿಸುವ ಪ್ರಯತ್ನ ಜನಪರವಾದುದು ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಒಳಗೊಂಡಿರುವಂತಹದ್ದು. ಲೈಂಗಿಕ ಶೋಷಿತರು ಮತ್ತು ದೇವದಾಸಿ ಪದ್ಧತಿಯಿಂದ ಹೊರಗೆ ಬಂದವರ ಮಕ್ಕಳಿಗೆ, ರಾಜ್ಯದ 19 ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಶೇ 1ರಷ್ಟು ಮೀಸಲಾತಿ ಕಲ್ಪಿಸುವುದು ಸರ್ಕಾರದ ಉದ್ದೇಶ. ಮೈಸೂರು ವಿಶ್ವವಿದ್ಯಾಲಯದಲ್ಲಿ 2011–12ರ ಶೈಕ್ಷಣಿಕ ವರ್ಷದಿಂದಲೇ ಈ ವಿಶೇಷ ಮೀಸಲಾತಿ ಜಾರಿಯಲ್ಲಿದೆ. ಪದವಿ ಕೋರ್ಸ್‌ಗಳಲ್ಲಿ ಎರಡು ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ಒಂದು ಸೀಟನ್ನು ಹೆಚ್ಚುವರಿಯಾಗಿ ಕಲ್ಪಿಸುವ ಅವಕಾಶವನ್ನು ಮೈಸೂರು ವಿಶ್ವವಿದ್ಯಾಲಯ ಒದಗಿಸಿದೆ. ಹೀಗೆ ಪ್ರವೇಶ ಪಡೆಯುವವರನ್ನು ‘ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು’ ಎಂದು ಪರಿಗಣಿಸಿ, ಅವರಿಗೆ ಶೇ 50ರ ಶುಲ್ಕ ರಿಯಾಯಿತಿಯನ್ನೂ ನೀಡಲಾಗುತ್ತಿದೆ. ಈವರೆಗೆ ಮೈಸೂರು ವಿಶ್ವವಿದ್ಯಾಲಯಕ್ಕೆ ಸೀಮಿತವಾಗಿದ್ದ ‘ಮಾದರಿ ಮೀಸಲಾತಿ’ ಇನ್ನು ಮುಂದೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅನುಷ್ಠಾನಕ್ಕೆ ಬರಲಿದೆ.

ಲೈಂಗಿಕ ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದ ಹಲವು ಸರ್ಕಾರಿ ಕಾರ್ಯಕ್ರಮಗಳು ಈಗಾಗಲೇ ಜಾರಿಯಲ್ಲಿವೆ. ಆದರೆ, ಸಂತ್ರಸ್ತ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ಹೆಸರಿನಲ್ಲಿ ಈ ಯೋಜನೆಗಳು ಅಪಬಳಕೆಯಾಗಿರುವುದೇ ಹೆಚ್ಚು. ಅಧಿಕಾರಿಗಳ ಲಂಚಗುಳಿತನ ಮತ್ತು ಸೋಗಲಾಡಿತನದಿಂದಾಗಿ ಸಂತ್ರಸ್ತ ಹೆಣ್ಣುಮಕ್ಕಳಿಗೆ ಅನುಕಂಪದ ಹೊರತು ಜೀವನವನ್ನು ಕಟ್ಟಿಕೊಳ್ಳಲಿಕ್ಕೆ ಅಗತ್ಯವಾದ ನೆರವೇನೂ ದೊರೆಯುತ್ತಿಲ್ಲ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳಿಗೆ ನಿವೇಶನ ನೀಡುವ, ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುವ ಕಾರ್ಯಕ್ರಮಗಳಿವೆ. ನೆರವು ಕೇಳಿಕೊಂಡು ಬರುವ ಮಹಿಳೆಯರನ್ನು ‘ಯಾವ ದಾಖಲೆಯನ್ನೂ ಕೇಳಬಾರದು, ಅವರ ಗೋಪ್ಯತೆ ಕಾಪಾಡಬೇಕು’ ಎಂದೂ ಕಾನೂನು ಹೇಳುತ್ತದೆ. ಆದರೆ, ಸಹಾಯ ಕೇಳಿಕೊಂಡು ಬರುವವರನ್ನು ಮುಜುಗರಕ್ಕೆ ಸಿಕ್ಕಿಸಿ ಅವರು ಯೋಜನೆಯ ಪರಿಧಿಯಿಂದ ದೂರವೇ ಉಳಿಯುವಂತೆ ಅಧಿಕಾರಿಗಳು ಮಾಡಿದ್ದಾರೆ. ಸರ್ಕಾರದ ಯೋಜನೆಗಳು ಅಸಹಾಯಕರ ಏಳಿಗೆಗೆ, ಆತ್ಮವಿಶ್ವಾಸಕ್ಕೆ ಕಾರಣವಾಗಬೇಕು. ಆದರೆ, ಅಧಿಕಾರಿಗಳ ಕರ್ತವ್ಯಲೋಪದಿಂದಾಗಿ ಯೋಜನೆಗಳ ಮೂಲ ಉದ್ದೇಶವೇ ಈಡೇರುತ್ತಿಲ್ಲ. ಅನೇಕ ಯೋಜನೆಗಳ ಜಾರಿ ನಂತರವೂ ದಮನಿತ ಹೆಣ್ಣುಮಕ್ಕಳು ಸಮಾಜದ ಕಡೆಗಣ್ಣಿಗೆ ಒಳಗಾಗಿಯೇ ಬದುಕು ಸವೆಸುವಂತಾಗಿದೆ. ಇಂಥ ಮಹಿಳೆಯರ ಮಕ್ಕಳಾದರೂ ಅರಿವು ಹಾಗೂ ಆತ್ಮವಿಶ್ವಾಸವನ್ನು ರೂಪಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಲು ಉನ್ನತ ಶಿಕ್ಷಣ ಅತ್ಯಗತ್ಯ. ಸಂತ್ರಸ್ತ ಸಮುದಾಯವನ್ನು ನೋವು, ಅವಮಾನ, ಸಂಕಟಗಳಿಂದ ಹೊರತರುವ ಔಷಧೀಯ ಗುಣ ಶಿಕ್ಷಣದಲ್ಲಿದೆ. ಉಳಿದ ಯೋಜನೆಗಳಂತೆ ಶೈಕ್ಷಣಿಕ ಮೀಸಲಾತಿ ಯೋಜನೆ ಅಪಬಳಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಈ ಮೀಸಲಾತಿ ಪರಿಕಲ್ಪನೆ ಹಂತಹಂತವಾಗಿ ಐಟಿಐ, ಡಿಪ್ಲೊಮಾ, ವೈದ್ಯಕೀಯ ಹಾಗೂ ಎಲ್ಲ ವೃತ್ತಿಪರ ಕೋರ್ಸ್‌ಗಳಿಗೆ ವಿಸ್ತರಣೆಯಾಗುವುದು ಒಳ್ಳೆಯದು. ಲೈಂಗಿಕ ಸಂತ್ರಸ್ತೆಯರ ಮಕ್ಕಳ ಜೊತೆಗೆ ಹುತಾತ್ಮ ಯೋಧರ ಮಕ್ಕಳಿಗೆ ಹಾಗೂ ಸಾಲಬಾಧೆಯಿಂದ ಜೀವ ಕಳೆದುಕೊಂಡ ರೈತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆ ಮೈಸೂರು ವಿಶ್ವವಿದ್ಯಾಲಯದಲ್ಲಿದೆ. ಆಸರೆ ಕಳೆದುಕೊಂಡವರಿಗೆ ಭರವಸೆ ತುಂಬುವ ಈ ಯೋಜನೆಯನ್ನೂ ಉಳಿದ ವಿಶ್ವವಿದ್ಯಾಲಯಗಳಲ್ಲಿ ಅನುಷ್ಠಾನಕ್ಕೆ ತರುವ ಕುರಿತು ಚಿಂತನೆ ನಡೆಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT