ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

PAYTM ಪೇಮೆಂಟ್ಸ್‌ ಬ್ಯಾಂಕ್‌ಗೆ ನಿರ್ಬಂಧ: ಬ್ಯಾಂಕ್ ತಪ್ಪಿಗೆ ಗ್ರಾಹಕರಿಗೆ ಸಮಸ್ಯೆ

ಸಂಪಾದಕೀಯ
Published 6 ಫೆಬ್ರುವರಿ 2024, 19:29 IST
Last Updated 6 ಫೆಬ್ರುವರಿ 2024, 19:29 IST
ಅಕ್ಷರ ಗಾತ್ರ

ಮಾರ್ಚ್‌ 1ರಿಂದ ಜಾರಿಗೆ ಬರುವಂತೆ ಹಲವು ಬಗೆಯ ನಿರ್ಬಂಧಗಳನ್ನು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಮೇಲೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೇರಿದೆ. ಇದು ಬ್ಯಾಂಕಿಂಗ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಆರ್‌ಬಿಐ ಈ ಹಿಂದೆಯೂ ಕೆಲವು ನಿರ್ಬಂಧಗಳನ್ನು ಈ ಪೇಮೆಂಟ್ಸ್‌ ಬ್ಯಾಂಕ್ ಮೇಲೆ ಹೇರಿತ್ತು. ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳಬಾರದು ಎಂದು 2022ರ ಮಾರ್ಚ್‌ನಲ್ಲಿ ತಾಕೀತು ಮಾಡಿತ್ತು. ಅದರ ಮುಂದುವರಿದ ಭಾಗವಾಗಿ ಈಗ ಹೊಸದಾಗಿ ನಿರ್ಬಂಧಗಳನ್ನು ಹೇರಿದೆ. ಇವು ಜಾರಿಗೆ ಬಂದ ನಂತರದಲ್ಲಿ, ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಖಾತೆಗಳಿಗೆ, ವಾಲೆಟ್‌ಗಳಿಗೆ ಹೊಸದಾಗಿ ಹಣ ಜಮಾ ಮಾಡಲು ಅವಕಾಶ ಇರುವುದಿಲ್ಲ. ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ನೀಡಿರುವ ಎನ್‌ಸಿಎಂಸಿ (ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್) ಕಾರ್ಡ್‌ಗಳಿಗೆ ಹೊಸದಾಗಿ ಹಣ ಹಾಕಿಕೊಳ್ಳಲು ಸಾಧ್ಯವಿಲ್ಲ. ಬ್ಯಾಂಕ್‌ ಖಾತೆಗಳಲ್ಲಿ ಇರುವ ಹಣವನ್ನು ಹಿಂಪಡೆಯುವ ಸೇವೆಯೊಂದನ್ನು ಹೊರತುಪಡಿಸಿದರೆ, ಈ ಬ್ಯಾಂಕ್‌ ಮೂಲಕ ಇತರ ಯಾವುದೇ ಸೇವೆ ಪಡೆಯಲು ಅವಕಾಶ ಇರುವುದಿಲ್ಲ. ಅಂದರೆ, ಮಾರ್ಚ್‌ 1ರಿಂದ ಈ ಬ್ಯಾಂಕ್‌ ಸೇವೆಗಳು ಗ್ರಾಹಕರ ಪಾಲಿಗೆ ಬಹುತೇಕ ಸ್ಥಗಿತವಾದಂತೆಯೇ. ಈ ಬ್ಯಾಂಕ್‌ನ ಗ್ರಾಹಕರಿಗೆ ಇದರಿಂದ ತೊಂದರೆ ಆಗುವುದಂತೂ ಖಚಿತ.

ಚಿಲ್ಲರೆ ವಹಿವಾಟುಗಳ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ ಬಳಸಿ ಹಣ ಪಾವತಿಸುವ ಸೌಲಭ್ಯ ಒದಗಿಸುವ ಕಂಪನಿಗಳ ಸಾಲಿನಲ್ಲಿ ಪೇಟಿಎಂಗೆ ದೊಡ್ಡ ಸ್ಥಾನ ಇದ್ದೇ ಇದೆ. ಹೀಗಿದ್ದರೂ, ಪೇಟಿಎಂನ ಮಾತೃಸಂಸ್ಥೆಯಾದ ಒನ್‌ 97 ಕಮ್ಯುನಿಕೇಷನ್ಸ್‌ ಹಾಗೂ ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ಬಹುಪಾಲು ಷೇರು ಹೊಂದಿರುವ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ನಿಯಮಗಳನ್ನು ಸರಿಯಾಗಿ ಪಾಲಿಸದೇ ಇದ್ದುದನ್ನು ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಮೇಲೆ ಆರ್‌ಬಿಐ ನಡೆಸಿದ ಪ್ರಹಾರವು ದೇಶದ ಫಿನ್‌ಟೆಕ್‌ ಉದ್ಯಮದ ಒಂದು ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ದೇಶದ ಫಿನ್‌ಟೆಕ್ ಹಾಗೂ ನವೋದ್ಯಮ ವಲಯಗಳ ಕೆಲವರು, ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಮೇಲಿನ ಕಠಿಣ ಕ್ರಮಗಳನ್ನು ಹಿಂಪಡೆಯಬೇಕು ಎಂಬ ಆಗ್ರಹದೊಂದಿಗೆ ಆರ್‌ಬಿಐ ಗವರ್ನರ್‌ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ. ಆದರೆ, ಫಿನ್‌ಟೆಕ್‌ ಕಂಪನಿಗಳಿಗೆ ನಿಯಮಗಳಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ; ನಿಯಮಗಳನ್ನು ಅನುಸರಿಸಬೇಕಿರುವುದು ಆ ಕಂಪನಿಗಳ ಹೊಣೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಈಗಾಗಲೇ ಹೇಳಿದ್ದಾರೆ.

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ವಿರುದ್ಧ ಇಂತಹ ಕಠಿಣ ಕ್ರಮಕ್ಕೆ ಮುಂದಾಗಿರುವುದಕ್ಕೆ ನಿರ್ದಿಷ್ಟ ಕಾರಣಗಳು ಏನು ಎಂಬುದನ್ನು ಆರ್‌ಬಿಐ ವಿವರಿಸಿಲ್ಲ. ಈ ರೀತಿಯ ಕ್ರಮಕ್ಕೆ ಮುಂದಾಗಲು ಹಲವು ಗಂಭೀರ ಕಾರಣಗಳು ಇದ್ದವು ಎಂದು ವರದಿಗಳು ಹೇಳುತ್ತವೆ. ಬ್ಯಾಂಕ್‌ ಖಾತೆಗಳಿಗೆ ಅಗತ್ಯವಿರುವ ಕೆವೈಸಿ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದೇ ಇದ್ದುದು ಒಂದು ಪ್ರಮುಖ ಕಾರಣ ಎಂದು ಹಲವು ವರದಿಗಳು ಹೇಳುತ್ತವೆ. ಇಷ್ಟೆಲ್ಲ ನಡೆಯುವಾಗ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಆಡಳಿತ ಮಂಡಳಿ ಏನು ಮಾಡುತ್ತಿತ್ತು ಎಂಬ ಪ್ರಶ್ನೆ ಎದುರಾಗುತ್ತದೆ. ಪೇಮೆಂಟ್ಸ್‌ ಬ್ಯಾಂಕ್‌ ಎಂಬ ಹೊಸ ಬಗೆಯ, ಹೊಸ ಕಾಲದ ಬ್ಯಾಂಕಿಂಗ್ ವ್ಯವಸ್ಥೆಗೆ ಚಾಲನೆ ನೀಡುವಾಗ ಆರ್‌ಬಿಐ ಮನಸ್ಸಿನಲ್ಲಿ ಇದ್ದುದು ಹಣಕಾಸಿನ ಒಳಗೊಳ್ಳುವಿಕೆಯ ವಿಚಾರ. ಹೀಗಿದ್ದರೂ, ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ ನಿರ್ಬಂಧಗಳನ್ನು ವಿಧಿಸುವ ಸಂದರ್ಭದಲ್ಲಿ ಗ್ರಾಹಕರು ಮುಂದೆ ಏನು ಮಾಡಬೇಕು ಎಂಬುದನ್ನು ಆರ್‌ಬಿಐ ಹೇಳಿಲ್ಲ. ಪೇಮೆಂಟ್ಸ್‌ ಬ್ಯಾಂಕ್‌ಗಳನ್ನು ಹೆಚ್ಚಾಗಿ ಬಳಸುವವರು ಸಣ್ಣ ವರಮಾನ ಹೊಂದಿರುವವರು. ಇವರಲ್ಲಿ ಸಮಾಜದ ಎಲ್ಲ ವರ್ಗಗಳಿಗೂ ಸೇರಿದವರು ಇದ್ದಾರೆ. ಮಾರ್ಚ್‌ 1ರಿಂದ ಬ್ಯಾಂಕ್‌ ಖಾತೆಗಳಿಗೆ ಹೊಸದಾಗಿ ಹಣ ಜಮಾ ಮಾಡಲು ಸಾಧ್ಯವಾಗದಿದ್ದಾಗ ತೊಂದರೆಗೆ ಒಳಗಾಗುವವರು ಸಣ್ಣ ಆದಾಯದ ಗ್ರಾಹಕರು. ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ ಖಾತೆಗಳನ್ನು ವಹಿಸಿಕೊಳ್ಳಲು ಬೇರೆ ಬ್ಯಾಂಕ್‌ಗಳು ಮುಂದಾಗದೇ ಇದ್ದಲ್ಲಿ, ತೊಂದರೆ ಇನ್ನಷ್ಟು ಹೆಚ್ಚಾಗಬಹುದು. ಬ್ಯಾಂಕ್‌ ಮಾಡಿರುವ ತಪ್ಪಿಗೆ ಗ್ರಾಹಕರಿಗೆ ತೊಂದರೆ ಆಗಬಾರದು. ಆರ್‌ಬಿಐ ನಿರ್ಧಾರ ಸ್ವಾಗತಾರ್ಹ. ಆದರೆ, ಪೇಮೆಂಟ್ಸ್‌ ಬ್ಯಾಂಕ್‌ಗಳಿಗೆ ಇರುವ ಸೀಮಿತ ಮಾರುಕಟ್ಟೆಯನ್ನು ಪರಿಗಣಿಸಿದರೆ, ಈ ಮಾದರಿಯ ಬ್ಯಾಂಕ್‌ಗಳು ಹಣಕಾಸಿನ ಒಳಗೊಳ್ಳುವಿಕೆಯ ಉದ್ದೇಶವನ್ನು ಎಷ್ಟರಮಟ್ಟಿಗೆ ಈಡೇರಿಸಿವೆ, ಈ ಉದ್ದೇಶವನ್ನು ವಾಣಿಜ್ಯ ಬ್ಯಾಂಕ್‌ಗಳ ಮೂಲಕ, ಸಹಕಾರ ಸಂಘಗಳ ಮೂಲಕ ಅಥವಾ ಕಿರು ಹಣಕಾಸು ಬ್ಯಾಂಕ್‌ಗಳ ಮೂಲಕ ಸಾಧಿಸಲು ಸಾಧ್ಯವಿಲ್ಲವೇ ಎಂಬ ವಿಸ್ತೃತ ಚರ್ಚೆಗೂ ಈ ವಿದ್ಯಮಾನವು ಒಂದು ಕಾರಣವಾಗಿ ಒದಗಿಬರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT