ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಸಮೀಕ್ಷೆ: ಆಶಯ ಒಳ್ಳೆಯದು, ಗುಣಮಟ್ಟ ಸುಧಾರಿಸಿದರೆ ಚೆನ್ನ

Last Updated 9 ಜೂನ್ 2019, 18:30 IST
ಅಕ್ಷರ ಗಾತ್ರ

‘ಶಗುನೋತ್ಸವ’ ಹೆಸರಿನ ಅಡಿ ದೇಶದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಸ್ಥಿತಿಗತಿ ಸಮೀಕ್ಷೆ ನಡೆಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮುಂದಾಗಿದೆ. ಅಂದಾಜು 25 ಕೆಲಸದ ದಿನಗಳ ಅವಧಿಯಲ್ಲಿ ಒಟ್ಟು 11.85 ಲಕ್ಷ ಶಾಲೆಗಳು ಸಮೀಕ್ಷೆಗೆ ಒಳಪಡಲಿವೆ. ಅಂದರೆ, ಪ್ರತಿದಿನ ಅಂದಾಜು 47,409 ಶಾಲೆಗಳು ಸಮೀಕ್ಷೆಯ ವ್ಯಾಪ್ತಿಗೆ ಬರಲಿವೆ. ದೇಶದ ಶಾಲೆಗಳ ಈ ಬೃಹತ್ ಸಮೀಕ್ಷೆಗಾಗಿ ಒಟ್ಟು 73 ಸಾವಿರಕ್ಕಿಂತ ಹೆಚ್ಚು ಸಮೀಕ್ಷಕರನ್ನು ಬಳಸಿಕೊಳ್ಳುವ ಉದ್ದೇಶ ಸಚಿವಾಲಯಕ್ಕೆ ಇದೆ. ಈ ಕಾರ್ಯಕ್ಕಾಗಿ ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಸಚಿವಾಲಯವು ಎರಡು ಗುಂಪುಗಳಲ್ಲಿ ವಿಂಗಡಣೆ ಮಾಡಿದೆ. ಮೊದಲ ಗುಂಪಿನಲ್ಲಿ ಒಟ್ಟು 18 ರಾಜ್ಯಗಳು, ಐದು ಕೇಂದ್ರಾಡಳಿತ ಪ್ರದೇಶಗಳು ಇವೆ. ಈ ಗುಂಪಿನ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸುವವರು ಪ್ರತಿದಿನ ತಲಾ ಎರಡು ಶಾಲೆಗಳಿಗೆ ಭೇಟಿ ನೀಡಲಿದ್ದಾರೆ ಎಂದು ಸಚಿವಾಲಯ ಹೇಳಿದೆ. ಹಾಗೆಯೇ, ಎರಡನೆಯ ಗುಂಪಿನಲ್ಲಿ 11 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಇರಲಿವೆ. ಈ ಗುಂಪಿನಲ್ಲಿ ಇರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮೀಕ್ಷಕರು ಪ್ರತಿದಿನ ತಲಾ ಒಂದು ಶಾಲೆಗೆ ಭೇಟಿ ನೀಡಲಿದ್ದಾರೆ. ದೇಶದಲ್ಲಿ ಇಂಥದ್ದೊಂದು ಸಮೀಕ್ಷೆ ನಡೆಯಲಿರುವುದು ಇದೇ ಮೊದಲು ಎಂದು ವರದಿಯಾಗಿದೆ. ಸಮೀಕ್ಷೆಯನ್ನು ಸೆಪ್ಟೆಂಬರ್‌ ತಿಂಗಳಿನಲ್ಲಿ ನಡೆಸುವ ಉದ್ದೇಶ ಸಚಿವಾಲಯದ್ದು. ಶಾಲೆಗಳ ಗುಣಮಟ್ಟ ಹಾಗೂ ಅಲ್ಲಿ ಲಭ್ಯವಿರುವ ಮೂಲಸೌಕರ್ಯ ಕುರಿತ ಮಾಹಿತಿಯನ್ನು ಬೇರೆ ಬೇರೆ ಮಾರ್ಗಗಳ ಮೂಲಕ ಈಗಾಗಲೇ ಸಂಗ್ರಹಿಸಲಾಗುತ್ತಿದೆ. ಆದರೆ, ಈ ಮಾಹಿತಿ ಸಮರ್ಪಕವಾಗಿ ಇದೆಯೇ ಎಂಬುದನ್ನು ಕ್ಷೇತ್ರಕಾರ್ಯದ ಮೂಲಕ ತಾಳೆ ಮಾಡುವ ಕೆಲಸ ಆಗಿಲ್ಲ. ಪ್ರತಿ ಶಾಲೆಗೂ ಭೇಟಿ ನೀಡಿ, ಅಲ್ಲಿನ ಮೂಲಸೌಕರ್ಯ, ಶಿಕ್ಷಕರು, ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕೆಲಸ ಆಗಬೇಕು ಎಂದು ಸಚಿವಾಲಯಕ್ಕೆ ಅನಿಸಿರುವುದಕ್ಕೆ ಇದೇ ಕಾರಣ. ತಾಳೆ ಮಾಡುವುದರ ಜೊತೆಯಲ್ಲೇ, ಸಮೀಕ್ಷೆಯಿಂದ ಸಿಗುವ ಮಾಹಿತಿಯಿಂದ ಶಾಲೆಗಳ ಶ್ರೇಣೀಕರಣ ಕೂಡ ಸಾಧ್ಯವಾಗುತ್ತದೆ. ಶಾಲೆಗಳ ಸುಧಾರಣೆಗೆ ಕೈಗೊಳ್ಳಬೇಕಿರುವ ನಿರ್ದಿಷ್ಟ ಕ್ರಮಗಳು ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ನೀತಿ ನಿರೂಪಕರಿಗೆ ಸಾಧ್ಯವಾಗುತ್ತದೆ.

ಶಗುನೋತ್ಸವದ ಉದ್ದೇಶಗಳು ಚೆನ್ನಾಗಿವೆ. ಆದರೆ, ಸಮೀಕ್ಷೆಯ ಮೂಲಕ ಸಿಗುವ ಮಾಹಿತಿಯನ್ನು ಆಳುವವರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರಲ್ಲಿ ಸಮೀಕ್ಷೆಯ ಸಾರ್ಥಕ್ಯ ಅಡಗಿದೆ. ದೇಶದಲ್ಲಿ ಶಾಲಾ ಶಿಕ್ಷಣದ ಹಂತದಲ್ಲೇ ಹಲವು ಬಗೆಯ ಪಠ್ಯಕ್ರಮಗಳಿವೆ. ಒಂದು ಪಠ್ಯಕ್ರಮಕ್ಕಿಂತ ಇನ್ನೊಂದು ಪಠ್ಯಕ್ರಮ ಶ್ರೇಷ್ಠ ಎನ್ನುವ ಭಾವನೆ ಜನರಲ್ಲಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಡುವೆ ಪೋಷಕರ ಆಯ್ಕೆ ಯಾವುದಿರುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಚರ್ಚೆಯ ಅಗತ್ಯ ಬೇಕಿಲ್ಲ. ಉಳ್ಳವರಿಗೆ ಒಂದು ಮಟ್ಟದ ಶಾಲೆ, ಇಲ್ಲದಿರುವವರಿಗೆ ಇನ್ನೊಂದು ರೀತಿಯ ಶಾಲೆ ಎಂಬ ಚೋದ್ಯಕ್ಕೆ ಇಡೀ ದೇಶ ಸಾಕ್ಷಿಯಾಗಿ ನಿಂತಿದೆ. ಕಡಿಮೆ ಗುಣಮಟ್ಟದ ಬೋಧನೆ ಹಾಗೂ ಮೂಲಸೌಕರ್ಯ ಹೊಂದಿರುವ ಶಾಲೆಯಲ್ಲಿ ಕಲಿತವ, ಉತ್ತಮ ಗುಣಮಟ್ಟದ ಬೋಧನೆ ಹಾಗೂ ಮೂಲಸೌಕರ್ಯ ಹೊಂದಿರುವ ಶಾಲೆಯಲ್ಲಿ ಕಲಿತವ ಉದ್ಯೋಗ ಮಾರುಕಟ್ಟೆಯಲ್ಲಿ ಅಕ್ಕ–ಪಕ್ಕ ನಿಂತು ಸ್ಪರ್ಧಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ, ಕಡಿಮೆ ಗುಣಮಟ್ಟದ ಶಾಲೆಯಲ್ಲಿ ಕಲಿತವ ಮಾನಸಿಕವಾಗಿ ಎಷ್ಟರಮಟ್ಟಿಗೆ ಕುಗ್ಗಿಹೋಗಬಹುದು ಎಂಬುದನ್ನೂ ನೀತಿ ನಿರೂಪಕರು ಅರ್ಥ ಮಾಡಿಕೊಳ್ಳಬೇಕು. ಸರ್ಕಾರಿ ಶಾಲೆಗಳ ಗುಣಮಟ್ಟ ವೃದ್ಧಿಗೆ ಹಿಂದೆಯೂ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತಾದರೂ, ಹಲವೆಡೆ ಶಾಲೆಗಳ ಗುಣಮಟ್ಟ ತೀರಾ ಕಳಪೆಯಾಗಿಯೇ ಇದೆ. ಮಕ್ಕಳಿಗೆ ಕುಳಿತುಕೊಳ್ಳುವ ಬೆಂಚ್‌ಗಳು ಸರಿಯಾಗಿ ಇಲ್ಲದಿರುವುದು, ಶಿಕ್ಷಕರ ಕೊರತೆ ಇರುವುದು, ಕಂಪ್ಯೂಟರ್‌ನಂತಹ ಅಗತ್ಯ ಆಧುನಿಕ ಸೌಲಭ್ಯಗಳು ಮಕ್ಕಳಿಗೆ ಲಭ್ಯವಾಗದಿರುವುದು ಹಳ್ಳಿಗಾಡುಗಳಿಂದ– ಕೆಲವೊಮ್ಮೆ ನಗರ ಪ್ರದೇಶಗಳಿಂದಲೂ– ವರದಿಯಾಗುತ್ತಲೇ ಇವೆ. ಸಮೀಕ್ಷೆಯ ಮೂಲಕ ಸಿಗುವ ಮಾಹಿತಿಯಿಂದ ಇಂತಹ ಕೊರತೆಗಳನ್ನು ನೀಗಿಸಲು ಸಂಬಂಧಪಟ್ಟವರು ಮುಂದಾದರೆ ಒಳ್ಳೆಯದು. ದೇಶವು ಶಿಕ್ಷಣ ಕ್ಷೇತ್ರದ ಮೇಲೆ ಮಾಡುತ್ತಿರುವ ಹಣಕಾಸಿನ ವಿನಿಯೋಗವನ್ನು ಹೆಚ್ಚಿಸುವ ಅಗತ್ಯ ಕೂಡ ಇದೆ. ಈಗ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ 3ರಷ್ಟನ್ನು ಮಾತ್ರ ಶಿಕ್ಷಣಕ್ಕಾಗಿ ಮೀಸಲಿಡಲಾಗುತ್ತಿದೆ. ಇದನ್ನು ಶೇಕಡ 6ರಷ್ಟಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆ ಶಿಕ್ಷಣ ತಜ್ಞರ ವಲಯದಿಂದ ಹಲವು ಬಾರಿ ವ್ಯಕ್ತವಾಗಿದೆ. ಅದು ಯುಕ್ತವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT