ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕೇಂದ್ರೀಕರಣ ತತ್ವ ಬಲಪಡಿಸುವ ಸ್ಮಾರ್ಟ್‌ ಸಿಟಿಗಳು ಬೇಕು

Last Updated 26 ಡಿಸೆಂಬರ್ 2018, 19:58 IST
ಅಕ್ಷರ ಗಾತ್ರ

ಸ್ಮಾರ್ಟ್ ಸಿಟಿ ಯೋಜನೆಗಾಗಿ ಕೇಂದ್ರ ಸರ್ಕಾರ ನೀಡಿರುವ ಅನುದಾನದಲ್ಲಿ ಕರ್ನಾಟಕ ರಾಜ್ಯ ಬಳಸಿಕೊಂಡದ್ದು ಶೇಕಡ 9.70ರಷ್ಟು ಮಾತ್ರ. ರಾಜ್ಯಕ್ಕೆ ಮಂಜೂರಾದ ₹ 886 ಕೋಟಿಗಳಲ್ಲಿ ಬರೀ ₹ 86.02 ಕೋಟಿಗಳನ್ನಷ್ಟೇ ಬಳಸಲಾಗಿದೆ ಎಂದು ಸ್ವತಃ ರಾಜ್ಯ ಸರ್ಕಾರವೇ ಒಪ್ಪಿಕೊಂಡಿದೆ. ಕರ್ನಾಟಕದ ಒಟ್ಟು ಏಳು ನಗರಗಳು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅನುದಾನ ಪಡೆದುಕೊಂಡಿವೆ. ಮಂಜೂರಾದ ಮೊತ್ತದಲ್ಲಿ ಶೇ 22ರಷ್ಟನ್ನಾದರೂ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿರುವುದು ತುಮಕೂರು ಮಾತ್ರ. ಉಳಿದೆಲ್ಲಾ ನಗರಗಳೂ ಶೇಕಡ ಹತ್ತು ಮತ್ತು ಅದಕ್ಕಿಂತ ಕಡಿಮೆ ಪ್ರಮಾಣದ ಹಣವನ್ನಷ್ಟೇ ಬಳಸಿವೆ. ಈ ಸಮಸ್ಯೆ ಇರುವುದು ಕರ್ನಾಟಕದ ನಗರಗಳಿಗೆ ಮಾತ್ರವೇನೂ ಅಲ್ಲ. ಕೊಚ್ಚಿ, ಗುವಾಹಟಿ, ಲೂಧಿಯಾನ, ಸೊಲ್ಲಾಪುರಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಇದೇ ವೇಳೆ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶದಂಥ ರಾಜ್ಯಗಳ ಕೆಲವು ನಗರಗಳು ನಿಜಕ್ಕೂ ಅತ್ಯುತ್ತಮ ಸಾಧನೆಯನ್ನೇ ತೋರಿವೆ. ರಾಜಸ್ಥಾನದ ಉದಯಪುರ ಅತ್ಯುತ್ತಮ ಸಾಧನೆ ತೋರಿರುವಾಗಲೇ ಜೈಪುರ ಕಳಪೆ ಸಾಧನೆಯನ್ನೂ ದಾಖಲಿಸಿದೆ. ದೆಹಲಿಯ ಅತಿಮುಖ್ಯ ಪ್ರದೇಶವೆಂದು ಭಾವಿಸಲಾಗುವ ನವದೆಹಲಿ ಮುನಿಸಿಪಲ್ ಕಾರ್ಪೊರೇಷನ್ (ಎನ್‌ಡಿಎಂಸಿ) ಕೂಡಾ ಅನುದಾನ ಬಳಕೆಯಲ್ಲಿ ಹಿಂದುಳಿದಿದೆ. ಅಂದರೆ ಈ ಸ್ಮಾರ್ಟ್ ಸಿಟಿ ಅನುದಾನದ ಬಳಕೆಯಲ್ಲಿ ಆಗಿರುವ ಹಿನ್ನಡೆಯಲ್ಲಿ ರಾಜ್ಯ ಸರ್ಕಾರಗಳ ಅದಕ್ಷತೆಯಷ್ಟೇ ಇಲ್ಲ ಎಂದರ್ಥ. ಇಡೀ ಯೋಜನೆಯ ಸ್ವರೂಪವೇ ಸಂಕೀರ್ಣವಾಗಿದೆ. ಇದನ್ನು ಸ್ಥಳೀಯಾಡಳಿತ ಸಂಸ್ಥೆಗಳು ನೇರವಾಗಿ ಬಳಸಲು ಸಾಧ್ಯವಿಲ್ಲ. ಅದಕ್ಕೊಂದು ವಿಶೇಷ ಸಾಂಸ್ಥಿಕವ್ಯವಸ್ಥೆಯನ್ನು ರೂಪಿಸಬೇಕು. ಅದಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ಆಡಳಿತಾತ್ಮಕ ಮೂಲಸೌಕರ್ಯವನ್ನು ಪಡೆದುಕೊಳ್ಳಬೇಕು. ಆಮೇಲಷ್ಟೇ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನದ ಹಾದಿಯಲ್ಲಿ ಹೆಜ್ಜೆಯಿಡಲು ಸಾಧ್ಯ. ಈ ನಿಯಮಾವಳಿಗಳ ಕಸರತ್ತಿನಲ್ಲಿ ಬಹಳಷ್ಟು ಸಮಯ ವ್ಯಯವಾಗಿದೆ. ಪರಿಣಾಮವಾಗಿ ಕೆಲವು ನಗರಗಳು ಅನುದಾನವನ್ನು ನಿರೀಕ್ಷಿತ ಪ್ರಮಾಣದಲ್ಲಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.

ಹಾಗಿದ್ದರೆ ಕೆಲವು ನಗರಗಳೇಕೆ ಯಶಸ್ವಿಯಾದವು ಎಂಬ ವಿಚಾರವನ್ನೂ ಗಮನಿಸಬೇಕಾಗಿದೆ. ಸ್ಮಾರ್ಟ್ ಸಿಟಿ ಮಿಷನ್ ಒದಗಿಸಿರುವ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ವಿಚಾರ ಅರ್ಥವಾಗುತ್ತದೆ. ಸೂರತ್ ನಗರಪಾಲಿಕೆಯ ಬಜೆಟ್ ಗಾತ್ರವೇ ಐದು ಸಾವಿರದಿಂದ ಆರು ಸಾವಿರ ಕೋಟಿ ರೂಪಾಯಿಗಳಷ್ಟಿದೆ. ಅಹಮದಾಬಾದ್ ಮತ್ತು ಇಂದೋರ್‌ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಬೆಂಗಳೂರನ್ನು ಹೊರತುಪಡಿಸಿದರೆ ಸ್ಮಾರ್ಟ್ ಸಿಟಿ ಯೋಜನೆಗಾಗಿ ಆಯ್ಕೆಯಾದ ಕರ್ನಾಟಕದ ಎಲ್ಲಾ ನಗರಪಾಲಿಕೆಗಳ ಬಜೆಟ್ ಗಾತ್ರ ಗರಿಷ್ಠ ₹ 600 ಕೋಟಿ. ಕನಿಷ್ಠ ₹ 200 ಕೋಟಿ. ಅಂದರೆ ಈ ಎಲ್ಲಾ ನಗರಗಳಲ್ಲಿಯೂ ಆಡಳಿತಾತ್ಮಕ ಮೂಲಸೌಕರ್ಯದ ತೀವ್ರ ಕೊರತೆ ಇತ್ತು. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಬಜೆಟ್ ಗಾತ್ರವೇನೋ ₹ 9000 ಕೋಟಿಗಳ ಆಸುಪಾಸಿನಲ್ಲಿದೆ. ಆದರೆ ಆಡಳಿತಾತ್ಮಕ ಮೂಲಸೌಕರ್ಯದ ವಿಷಯದಲ್ಲಿ ಇದು ಕರ್ನಾಟಕದ ಇತರ ನಗರಪಾಲಿಕೆಗಳಿಗಿಂತ ಭಿನ್ನವೇನೂ ಅಲ್ಲ. ಇದೇ ಸಮಸ್ಯೆ ಭಾರತದ ಇತರ ರಾಜ್ಯಗಳ ನಗರಗಳಲ್ಲಿಯೂ ಇದೆ. ಆಡಳಿತಾತ್ಮಕ ಮೂಲಸೌಕರ್ಯವೇ ಕಡಿಮೆ ಇರುವ ನಗರಗಳಿಗೆ ಒಂದಷ್ಟು ಅನುದಾನ ನೀಡಿ, ಬಳಕೆಗೆ ಹಲವು ಷರತ್ತುಗಳನ್ನು ಒಡ್ಡಿದರೆ ಏನಾಗಬಹುದೋ ಅದು ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಸಂಭವಿಸಿದೆ. ಈ ಬಗೆಯ ಯೋಜನೆಗಳನ್ನು ವಿಕೇಂದ್ರೀಕೃತವಾಗಿ ಅನುಷ್ಠಾನಗೊಳಿಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಆಲೋಚಿಸಬೇಕು. ಸ್ಮಾರ್ಟ್‌ ಸಿಟಿಗೆ ಆಯ್ಕೆಯಾಗಿರುವ ಎಲ್ಲಾ ನಗರಗಳ ಸಮಗ್ರ ನಗರಾಡಳಿತ ವ್ಯವಸ್ಥೆಯನ್ನೇ ಬದಲಾಯಿಸುವ ಪ್ರಕ್ರಿಯೆಯೂ ಸ್ಮಾರ್ಟ್‌ ಸಿಟಿ ಯೋಜನೆಯ ಮೂಲಕ ನಡೆಯಬೇಕಾಗಿದೆ. ಸಂವಿಧಾನದ 73ನೇ ತಿದ್ದುಪಡಿಯನ್ನೇ ಅವಮಾನಿಸುವಂತೆ ಸ್ಮಾರ್ಟ್‌ ಸಿಟಿಗಾಗಿ ಒಂದು ವಿಶೇಷ ಸಾಂಸ್ಥಿಕ ವ್ಯವಸ್ಥೆಯನ್ನು ರೂಪಿಸಿರುವುದು ಸರಿಯಲ್ಲ. ಅನುದಾನ ಬಳಕೆಯ ಅಂಕಿ-ಅಂಶಗಳನ್ನು ಇಟ್ಟುಕೊಂಡು ‘ದಕ್ಷತೆ’ಯನ್ನು ಅಳೆಯುವ ಬದಲಿಗೆ ಯೋಜನೆಯನ್ನು ಎಷ್ಟು ಪ್ರಜಾಸತ್ತಾತ್ಮಕವಾಗಿ ರೂಪಿಸಲಾಗಿದೆ ಎಂಬುದರ ಕುರಿತು ಚರ್ಚೆ ನಡೆಯುವ ಅಗತ್ಯವಿದೆ. ವಿಶೇಷ ಸಾಂಸ್ಥಿಕ ವ್ಯವಸ್ಥೆ ಅಥವಾ ಸ್ಪೆಷಲ್ ಪರ್ಪಸ್ ವೆಹಿಕಲ್‌ಗಳ ಸ್ಥಾಪನೆಯಲ್ಲಿಯೂ ಕೇಂದ್ರ ಸರ್ಕಾರ ಅನಗತ್ಯ ಹಸ್ತಕ್ಷೇಪ ಮಾಡಿರುವ ಆರೋಪಗಳೂ ಇವೆ. ನಿರ್ದಿಷ್ಟ ಅಧಿಕಾರಿಗಳೇ ವ್ಯವಸ್ಥಾಪಕ ನಿರ್ದೇಶಕರಾಗಬೇಕು ಎಂಬಂಥ ಪರೋಕ್ಷ ಒತ್ತಡಗಳ ವಿಚಾರವೂ ಇಲ್ಲಿದೆ. ಸರಳವಾಗಿ ಹೇಳುವುದಾದರೆ ಮತ್ತೆ ಕೇಂದ್ರ-ರಾಜ್ಯ ಸಂಬಂಧದ ಪ್ರಶ್ನೆಯೇ ಇಲ್ಲಿಯೂ ಇದೆ. ‘ಸ್ಮಾರ್ಟ್ ಸಿಟಿ’ ಎಂಬ ಪರಿಕಲ್ಪನೆಯನ್ನು ಆಡಳಿತದ ವಿಕೇಂದ್ರೀಕರಣವನ್ನು ಮರೆತು ನಡೆಸುವುದರ ಬದಲಿಗೆ ವಿಕೇಂದ್ರೀಕರಣ ತತ್ವವನ್ನು ಬಲಪಡಿಸುವ ಬಗೆಯಲ್ಲಿ ಕಾರ್ಯರೂಪಕ್ಕೆ ತರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT