ಶುಕ್ರವಾರ, ಆಗಸ್ಟ್ 23, 2019
25 °C

ವಿದ್ಯಾರ್ಥಿಗಳ ಜಾಲತಾಣ ಖಾತೆ ಜೋಡಣೆ: ಅಪಾಯಕಾರಿ ಚಿಂತನೆ

Published:
Updated:
Prajavani

ಪ್ರಭುತ್ವದ ಮನಸ್ಸಿನಲ್ಲಿ ಸಾಮಾನ್ಯವಾಗಿ ಒಂದು ಧೋರಣೆ ಸ್ಥಾಯಿಯಾಗಿ ಇರುತ್ತದೆ. ತನ್ನ ಪ್ರಜೆಗಳೆಲ್ಲ ತಮಗೆ ಸಂಬಂಧಿಸಿದ ಎಲ್ಲವನ್ನೂ ತನ್ನೆದುರು ತೆರೆದಿಡಬೇಕು, ಪ್ರಜೆಗಳೆಲ್ಲ ಏನು ಮಾಡುತ್ತಾರೆ ಎಂಬುದನ್ನು ತಾನು ಆಮೂಲಾಗ್ರವಾಗಿ ಗಮನಿಸುವಂತೆ ಇರಬೇಕು, ಪ್ರಜೆಗಳು ತನ್ನಿಂದ ಏನನ್ನೂ ಮುಚ್ಚಿಡಬಾರದು ಎಂಬುದು ಆ ಧೋರಣೆ. ಆದರೆ, ತಾನು ಪ್ರಜೆಯಿಂದ ಎಷ್ಟರಮಟ್ಟಿಗೆ
ಪಾರದರ್ಶಕತೆಯನ್ನು ಬಯಸುತ್ತೇನೋ, ಅಷ್ಟೇ ಪ್ರಮಾಣದಲ್ಲಿ ತಾನು ಕೂಡ ಪಾರದರ್ಶಕವಾಗಿ ಇರಬೇಕಾಗುತ್ತದೆ ಎಂಬ ವಾದವನ್ನು ಪ್ರಭುತ್ವ ಒಪ್ಪುವುದಿಲ್ಲ ಎಂಬುದು ಇನ್ನೊಂದು ವಿಚಾರ. ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆ ವಿವರಗಳನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಾಮಾಜಿಕ ಜಾಲತಾಣ ಖಾತೆಗಳ ಜೊತೆ ಜೋಡಿಸಬೇಕು ಎಂದು ಸಚಿವಾಲಯವು ಈ ತಿಂಗಳ ಮೊದಲ ವಾರದಲ್ಲಿ ಹೊರಡಿಸಿದ ಆದೇಶವನ್ನು ಪ್ರಭುತ್ವ-ಪ್ರಜೆ-ಪಾರದರ್ಶಕತೆ ಹಿನ್ನೆಲೆಯಲ್ಲಿಯೂ ಗ್ರಹಿಸಬಹುದು. ವಿದ್ಯಾರ್ಥಿಗಳ ಖಾಸಗಿತನಕ್ಕೆ ಎದುರಾಗಿರುವ ಅಪಾಯವಾಗಿಯೂ ನೋಡಬಹುದು. ಸಚಿವಾಲಯ ಹೊರಡಿಸಿರುವ ಆದೇಶದ ಅನ್ವಯ, ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮಲ್ಲಿನ ಒಬ್ಬರನ್ನು ಈ ಕೆಲಸಕ್ಕೆ ಗೊತ್ತು ಮಾಡಬೇಕು. ಅವರು ತಮ್ಮ ಸಂಸ್ಥೆಯ ಪರವಾಗಿ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಮತ್ತು ಟ್ವಿಟರ್‌ ಖಾತೆ ತೆರೆಯಬೇಕು. ಅದನ್ನು ಇತರ ಉನ್ನತ ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜಾಲತಾಣ ಖಾತೆಗಳ ಜೊತೆ ಹಾಗೂ ಸಚಿವಾಲಯದ ಸಾಮಾಜಿಕ ಜಾಲತಾಣ ಖಾತೆಗಳ ಜೊತೆ ಜೋಡಿಸಬೇಕು. ಅಷ್ಟೇ ಅಲ್ಲ, ಅವರು ವಿದ್ಯಾರ್ಥಿಗಳ ಸಾಮಾಜಿಕ ಜಾಲತಾಣ ಖಾತೆಗಳನ್ನು ಸಚಿವಾಲಯದ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಖಾತೆಗಳ ಜೊತೆಯೂ ಜೋಡಣೆ ಮಾಡಬೇಕು. ಆಯಾ ಉನ್ನತ ಶಿಕ್ಷಣ ಸಂಸ್ಥೆಯ ಬೋಧಕರು, ವಿದ್ಯಾರ್ಥಿಗಳು ಅಥವಾ ಸಂಸ್ಥೆ ನಡೆಸುವ ‘ಗುಣಾತ್ಮಕ’ ಕೆಲಸಗಳನ್ನು ವಾರಕ್ಕೆ ಒಮ್ಮೆ ಪ್ರಕಟಿಸಬೇಕು ಎಂಬುದು ಸಚಿವಾಲಯ ಹೊರಡಿಸಿರುವ ಆದೇಶದಲ್ಲಿ ಇದೆ. ಈ ಕ್ರಮ ವಿವಾದಕ್ಕೆ ತುತ್ತಾಗುತ್ತಿದ್ದಂತೆಯೇ, ವಿದ್ಯಾರ್ಥಿಗಳು ತಮ್ಮ ಖಾತೆಗಳನ್ನು ಜೋಡಣೆ ಮಾಡುವುದು ಕಡ್ಡಾಯವಲ್ಲ, ಅದು ಐಚ್ಛಿಕ ಎಂದು ಸಚಿವಾಲಯ ಸ್ಪಷ್ಟನೆ ನೀಡಿದೆ.

‘ಗುಣಾತ್ಮಕ’ ವಿಚಾರಗಳನ್ನು ಪ್ರಚುರಪಡಿಸುವುದು ಈ ಕ್ರಮದ ಹಿಂದಿನ ಉದ್ದೇಶ ಎಂದು ಸಚಿವಾಲಯ ಹೇಳಿರುವುದು ಕೇಳುವವರಿಗೆ ಹಿತವಾಗಿ ಕಂಡರೂ, ಆ ಕೆಲಸ ಮಾಡಲು ವಿದ್ಯಾರ್ಥಿಗಳ ಸಾಮಾಜಿಕ ಜಾಲತಾಣ ಖಾತೆಗಳನ್ನು ಜೋಡಿಸುವ ಅಗತ್ಯ ಏನಿದೆ ಎಂಬ ಪ್ರಶ್ನೆ ಎದುರಾಗುತ್ತದೆ. ‘ಗುಣಾತ್ಮಕ’ ವಿಚಾರ ಹರಡಲು ಸಂಸ್ಥೆಗಳ ವೆಬ್‌ಸೈಟ್‌ಗಳನ್ನು ಬಳಸಿಕೊಳ್ಳಬಹುದು ಅಥವಾ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳನ್ನು ಬಳಸಿಕೊಳ್ಳಬಹುದು. ಆ ವಿಚಾರಗಳ ಬಗ್ಗೆ ಸಹಮತ ಇದ್ದರೆ ವಿದ್ಯಾರ್ಥಿಗಳು ಅದನ್ನು ತಮ್ಮ ಫೇಸ್‌ಬುಕ್‌, ಟ್ವಿಟರ್‌ ಅಥವಾ ಇತರ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಹಂಚಿಕೊಳ್ಳುತ್ತಾರೆ. ಆದರೆ, ಅವರ ಖಾತೆಗಳ ವಿವರ ಸಂಸ್ಥೆಗಳಿಗೆ ಏಕೆ ಬೇಕು? ಅವರ ಖಾತೆಗಳನ್ನು ಸಂಸ್ಥೆಗಳು ಹಾಗೂ ಸಚಿವಾಲಯದ ಖಾತೆಗಳ ಜೊತೆ ಜೋಡಿಸುವುದು, ವಿದ್ಯಾರ್ಥಿಗಳ ಅಂತರ್ಜಾಲ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡಲು ಅವಕಾಶ ಮಾಡಿಕೊಡುತ್ತದೆ. ಈ ರೀತಿ ಕಣ್ಗಾವಲು ಇರಿಸುವ ಅವಕಾಶ ಲಭ್ಯವಾಗುವುದು ವಿದ್ಯಾರ್ಥಿಗಳ ಖಾಸಗಿತನದ ಹಕ್ಕಿಗೆ ಧಕ್ಕೆ ತರುತ್ತದೆ. ಖಾಸಗಿತನವು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದು ಇಲ್ಲಿ ನೆನಪಿಸಿಕೊಳ್ಳಬೇಕಾದ ಅಂಶ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ವ್ಯವಸ್ಥೆಯೊಂದನ್ನು ರೂಪಿಸಲು ಕೇಂದ್ರ ಸರ್ಕಾರ 2018ರಲ್ಲಿ ಮುಂದಾಗಿತ್ತು. ಆದರೆ, ಇದಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌, ‘ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸುವುದು ಅಂದರೆ ಕಣ್ಗಾವಲು ವ್ಯವಸ್ಥೆ ಸೃಷ್ಟಿಸುವತ್ತ ಸಾಗುವುದು’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿತ್ತು. ಕೊನೆಗೆ, ಈ ರೀತಿಯ ವ್ಯವಸ್ಥೆ ರೂಪಿಸುವ ಆಲೋಚನೆ ಕೈಬಿಟ್ಟಿರುವುದಾಗಿ ಕೋರ್ಟ್‌ಗೆ ಕೇಂದ್ರ ಹೇಳಿಕೆ ನೀಡಿತ್ತು. ವಿದ್ಯಾರ್ಥಿಗಳ ಸಾಮಾಜಿಕ ಜಾಲತಾಣ ಖಾತೆಗಳನ್ನು ಸಚಿವಾಲಯದ ಖಾತೆಗಳೊಂದಿಗೆ ಜೋಡಿಸುವ ಆಲೋಚನೆಯನ್ನೂ ಇದೇ ನೆಲೆಯಲ್ಲಿ ನೋಡಬೇಕಾಗುತ್ತದೆ. ಖಾತೆಗಳ ಜೋಡಣೆ ಮಾಡಿದ ಮಾತ್ರಕ್ಕೇ ವಿದ್ಯಾರ್ಥಿಗಳು ತೊಂದರೆಗೆ ಸಿಲುಕುತ್ತಾರೆ ಎನ್ನಲಾಗದು. ಆದರೆ, ಅದು
ವಿದ್ಯಾರ್ಥಿಗಳನ್ನು ತೊಂದರೆಗೆ ಸಿಲುಕಿಸುವ ಸಾಧ್ಯತೆಗಳನ್ನು ತೆರೆದಿಡುತ್ತದೆ ಎಂಬುದನ್ನು ಮರೆಯುವಂತಿಲ್ಲ. ವಿದ್ಯಾರ್ಥಿಗಳು ಒಂದಲ್ಲ ಒಂದು ಚಿಂತನೆಯ, ಸಿದ್ಧಾಂತದ ಪರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಮಾತನಾಡುವುದಿದೆ. ಅದು ಅವರ ಹಕ್ಕು ಕೂಡ ಹೌದು, ಯುವ ಮನಸ್ಸುಗಳು ಹೊಸ ಚಿಂತನೆಗಳಿಗೆ ತೆರೆದುಕೊಳ್ಳುವ ಪ್ರಕ್ರಿಯೆಯೂ ಹೌದು. ಆದರೆ, ಅವರ ಖಾತೆಗಳ ಮೇಲೆ ಕಣ್ಗಾವಲಿಡುವ ಅವಕಾಶ ದೊರೆತರೆ, ಭಿನ್ನ ದನಿಗಳನ್ನು ಗುರುತಿಸಿ ದಮನಿಸುವ ಅವಕಾಶ ದೊರೆಯುತ್ತದೆ. ಅಲ್ಲದೆ, ವಿದ್ಯಾರ್ಥಿಯು ನಿರ್ದಿಷ್ಟ ಸಂಸ್ಥೆಯಿಂದ ಹೊರನಡೆದ ನಂತರವೂ ಆತನ ಅನಿಸಿಕೆ, ಅಭಿಪ್ರಾಯಗಳ ಮೇಲೆ ಕಣ್ಣಿಡುವ ಅಪಾಯ ಇದ್ದೇ ಇರುತ್ತದೆ. ಸಚಿವಾಲಯವು ಖಾಸಗಿತನದ ರಕ್ಷಣೆ ಮತ್ತು ಆಲೋಚನಾ ಸ್ವಾತಂತ್ರ್ಯದ ಪರವಾಗಿ ನಿಲ್ಲಬೇಕು.

Post Comments (+)