ಸೋಮವಾರ, ಡಿಸೆಂಬರ್ 5, 2022
19 °C

ಸಂಪಾದಕೀಯ | ಇಡಬ್ಲ್ಯುಎಸ್ ಕೋಟಾ: ಮೀಸಲಾತಿಯ ವ್ಯಾಪ್ತಿ ಹಿಗ್ಗಿಸಿದ ಸುಪ್ರೀಂಕೋರ್ಟ್

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಸಂವಿಧಾನದ 103ನೆಯ ತಿದ್ದುಪಡಿ ಮೂಲಕ ಜಾರಿಗೆ ತಂದಿರುವ, ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ (ಇಡಬ್ಲ್ಯುಎಸ್) ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡ 10ರಷ್ಟು ಮೀಸಲಾತಿ ಕಲ್ಪಿಸುವ ಕ್ರಮವು ‘ಮೀಸಲಾತಿ’ಯನ್ನು ಇದುವರೆಗೆ ಅರ್ಥ ಮಾಡಿಕೊಂಡಿದ್ದ ರೀತಿಯನ್ನು ಬದಲಾಯಿಸಿದೆ. 2019ರ ಲೋಕಸಭಾ ಚುನಾವಣೆಗೂ ಮೊದಲು ಕೇಂದ್ರ ಸರ್ಕಾರ ಕೈಗೊಂಡ ರಾಜಕೀಯ ತೀರ್ಮಾನ ವೊಂದಕ್ಕೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ಸಾಂವಿಧಾನಿಕ ಬೆಂಬಲ ಒದಗಿಸಿದೆ.

ಈ ತಿದ್ದುಪಡಿಯು ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಆರ್ಥಿಕ ನೆಲೆಯಲ್ಲಿ ಹೊಸ ಬಗೆಯ ಮೀಸಲಾತಿ ಕಲ್ಪಿಸಿತು. ಈ ರೀತಿಯ ಮೀಸಲಾತಿಯನ್ನು ಸಂವಿಧಾನವು ಕಲ್ಪಿಸಿಕೊಂಡಿರಲಿಲ್ಲ. ಈ ಮೀಸಲಾತಿಯು ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆ ತಂದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳ ಪೈಕಿ ಮೂವರು ನ್ಯಾಯಮೂರ್ತಿಗಳು ಹೇಳಿದ್ದಾರೆ. ಸಂವಿಧಾನದಲ್ಲಿ ಹೇಳಿರುವ ಮೀಸಲಾತಿಯು, ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ಹಾಗೂ ಇಂದಿಗೂ ನಡೆದಿರುವ ತಾರತಮ್ಯದ ಕಾರಣದಿಂದಾಗಿ ನೋವು ಅನುಭವಿಸಿರುವ ವರ್ಗಗಳಿಗೆ ಸರ್ಕಾರಿ ಹುದ್ದೆಗಳು ಹಾಗೂ ಶಿಕ್ಷಣದಲ್ಲಿ ಪ್ರಾತಿನಿಧ್ಯ ಕೊಡುವ ಉದ್ದೇಶ ಹೊಂದಿದೆ. ಹಾಗಾಗಿ, ಸಾಮಾಜಿಕ ಹಿಂದುಳಿದಿರುವಿಕೆ ಮತ್ತು ಅದರ ಪರಿಣಾಮವಾಗಿ ಆಗುವ ಆರ್ಥಿಕ ಹಿಂದುಳಿ
ದಿರುವಿಕೆಯು ಮೀಸಲಾತಿ ಕಲ್ಪಿಸುವುದಕ್ಕೆ ಅರ್ಹವಾಗುವ ಮಾನದಂಡ ಎಂದು ಅದು ಹೇಳಿದೆ.

1992ರಲ್ಲಿ ಬಂದ ಇಂದಿರಾ ಸಹಾನಿ ಪ್ರಕರಣದ ತೀರ್ಪಿನಲ್ಲಿ ಕೂಡ ಸುಪ್ರೀಂ ಕೋರ್ಟ್, ಆರ್ಥಿಕ ಮಾನದಂಡವನ್ನು ಮಾತ್ರ ಆಧರಿಸಿದ ಮೀಸಲಾತಿಗೆ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಆದರೆ ಈಗ ಬಂದಿರುವ ತೀರ್ಪು, ಸಾಮಾಜಿಕ ತಾರತಮ್ಯಕ್ಕೆ ಗುರಿಯಾಗಿರದ ಪ್ರಭಾವಿ ಜಾತಿಗಳಲ್ಲಿನ ಆರ್ಥಿಕವಾಗಿ ಹಿಂದುಳಿದಿರುವವರ ಅಭಿವೃದ್ಧಿಗೆ ಮೀಸಲಾತಿ ಕಲ್ಪಿಸುವುದಕ್ಕೆ ಅನುಮತಿ ಒದಗಿಸಿದೆ. ಇಡಬ್ಲ್ಯುಎಸ್‌ ವರ್ಗಕ್ಕೆ ಮೀಸಲಾತಿ ಕಲ್ಪಿಸುವುದಕ್ಕೆ ಅವಕಾಶ ನೀಡುವ ಮೂಲಕ  ಮೀಸಲಾತಿಯ ಮೂಲ ವ್ಯಾಪ್ತಿಯನ್ನು ಸುಪ್ರೀಂ ಕೋರ್ಟ್‌ ಹಿಗ್ಗಿಸಿದೆ. ಹೀಗೆ ಮಾಡಿದ್ದರಿಂದ ಕೆಲವು ಅನಿರೀಕ್ಷಿತ ಪರಿಣಾಮಗಳು ಎದುರಾಗಬಹುದು.

ಮೀಸಲಾತಿ ಒದಗಿಸುವುದಕ್ಕೆ ಆರ್ಥಿಕವಾಗಿ ಹಿಂದುಳಿದಿರುವಿಕೆ ಕೂಡ ಒಂದು ಮಾನದಂಡ ಆಗಬಹುದು ಎಂಬ ವಿಚಾರದಲ್ಲಿ ಸಂವಿಧಾನ ಪೀಠ ದಲ್ಲಿದ್ದ ಐವರು ನ್ಯಾಯಮೂರ್ತಿಗಳಲ್ಲಿಯೂ ಸಹಮತ ವ್ಯಕ್ತವಾಗಿದೆ. ಆದರೆ, ಭಿನ್ನಮತದ ತೀರ್ಪು ಬರೆದಿರುವ ನ್ಯಾಯಮೂರ್ತಿಗಳು, ಈಗ ಜಾತಿಯ ಮಾನದಂಡದ ಅಡಿಯಲ್ಲಿ ಮೀಸಲಾತಿ ಪಡೆಯುತ್ತಿರುವ ವರ್ಗಗಳಲ್ಲಿನ ಬಡವರನ್ನು ಇಡಬ್ಲ್ಯುಎಸ್‌ ಕೋಟಾದಿಂದ ಹೊರಗೆ ಇರಿಸುವುದು ತಾರತಮ್ಯದ ನಡೆ, ಹಾಗಾಗಿ ಅದು ಸಂವಿಧಾನದ ಮೂಲ ಸ್ವರೂಪಕ್ಕೆ ಹೊಂದುವುದಿಲ್ಲ ಎಂದು ಹೇಳಿದ್ದಾರೆ. ಭಿನ್ನಮತದ ತೀರ್ಪು ಬರೆದಿರುವ ನ್ಯಾಯಮೂರ್ತಿಗಳ ಪೈಕಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸ್ಥಾನದಿಂದ ಈಗಷ್ಟೇ ನಿರ್ಗಮಿಸಿರುವ ನ್ಯಾಯಮೂರ್ತಿ ಯು.ಯು. ಲಲಿತ್ ಅವರೂ ಒಬ್ಬರು. ಅವರ ಭಿನ್ನಮತದ ತೀರ್ಪಿನಲ್ಲಿರುವ ಮಾತುಗಳಲ್ಲಿ ಹುರುಳಿದೆ. ಏಕೆಂದರೆ, ಇಡಬ್ಲ್ಯುಎಸ್‌ ಕೋಟಾ ಸೃಷ್ಟಿಯ ಹಿಂದಿರುವ ರಾಜಕೀಯ ಲೆಕ್ಕಾಚಾರವು ಸಂವಿಧಾನದ ಮೂಲ ಆಶಯವಾಗಿರುವ ಸಮಾನತೆಯ ಪರಿಕಲ್ಪನೆಗೆ ವಿರುದ್ಧವಾದುದು. ಆರ್ಥಿಕ ಮಾನದಂಡದ ಆಧಾರದಲ್ಲಿ ಒಂದು ವರ್ಗಕ್ಕೆ ಕೊಡಲು ಉದ್ದೇಶಿಸಿರುವ ಪ್ರಯೋಜನವನ್ನು, ಅದೇ ಮಾನದಂಡದ ಅಡಿಯಲ್ಲಿ ಅರ್ಹವಾಗುವ ಇನ್ನೊಂದು ವರ್ಗಕ್ಕೆ ನಿರಾಕರಿಸುವುದು ಸರಿಯಲ್ಲ.

ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಎಲ್ಲ ಬಗೆಯ ಮೀಸಲಾತಿಗಳ ಒಟ್ಟು ಪ್ರಮಾಣವು ಶೇ 50ಕ್ಕಿಂತ ಹೆಚ್ಚಿರಬಾರದು ಎಂದು ಹೇಳಿತ್ತು. ಈ ನಿಯಮವನ್ನು ಇಡಬ್ಲ್ಯುಎಸ್‌ ಕೋಟಾ ಉಲ್ಲಂಘಿಸಿದೆಯೇ ಎಂಬುದು ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಕೋರ್ಟ್‌ ಮುಂದೆ ಇದ್ದ ಇನ್ನೊಂದು ಪ್ರಶ್ನೆಯಾಗಿತ್ತು. ಶೇ 50ರ ಮಿತಿಯು ಈಗಾಗಲೇ ಇರುವ ಮೀಸಲಾತಿಗಳಿಗೆ ಅನ್ವಯ ಆಗುತ್ತದೆ, ಇಡಬ್ಲ್ಯುಎಸ್‌ಗೆ ಇದು ಅನ್ವಯಿಸದು ಎಂದು ಬಹುಮತದ ತೀರ್ಪು ಹೇಳಿದೆ. ಆದರೆ ಭಿನ್ನಮತದ ತೀರ್ಪಿನಲ್ಲಿ, ಶೇ 50ರ ನಿಯಮದ ಉಲ್ಲಂಘನೆಯು ಮುಂದೆ ಇನ್ನಷ್ಟು ಉಲ್ಲಂಘನೆಗಳಿಗೆ ದಾರಿ ಮಾಡಿಕೊಡಬಹುದು ಎಂದು ಹೇಳಲಾಗಿದೆ.

ಪ್ರತಿಭೆ ಹಾಗೂ ಮೀಸಲಾತಿ ನಡುವಿನ ಸಮತೋಲನಕ್ಕೆ ಒಮ್ಮೆ ಧಕ್ಕೆ ಬಂದರೆ, ಮುಂದೆ ಮತ್ತಷ್ಟು ಇಂತಹ ಸಂದರ್ಭಗಳು ಎದುರಾಗಬಹುದು. ಶೇ 50ರ ಗಡಿಯನ್ನು ಮೀರುವ ವಿಶೇಷ ಸಂದರ್ಭ ಇರಬಹುದು ಎಂದು 1992ರ ತೀರ್ಪಿನಲ್ಲಿ ಕೋರ್ಟ್‌ ಹೇಳಿತ್ತು. ಆದರೆ, ಇಡಬ್ಲ್ಯುಎಸ್‌ ಮಾದರಿಯಲ್ಲಿ ನಿಯಮವನ್ನು ಮೀರುವ ಸಂದರ್ಭ ಬರಬಹುದು ಎಂದು ಅದು ಊಹಿಸಿರಲಿಕ್ಕಿಲ್ಲ. ಇಡಬ್ಲ್ಯುಎಸ್‌ ಕೋಟಾದ ಅಡಿಯಲ್ಲಿ ವ್ಯಾವಹಾರಿಕವಾಗಿಯೂ ಒಂದಿಷ್ಟು ಸಮಸ್ಯೆಗಳು ಇವೆ. ಇಡಬ್ಲ್ಯುಎಸ್‌ ಅಡಿ ಮೀಸಲಾತಿ ಸೌಲಭ್ಯ ಪಡೆಯಲು ವಾರ್ಷಿಕ ಆದಾಯ ಮಿತಿ ₹ 8 ಲಕ್ಷ ಎಂದು ಹೇಳಿರುವ ಕಾರಣದಿಂದಾಗಿ, ವಾಸ್ತವದಲ್ಲಿ ಮೀಸಲಾತಿ ಅಗತ್ಯವಿಲ್ಲದವರೂ ಇದರ ಪ್ರಯೋಜನ ಪಡೆಯಲು ಮುಂದಾಗಬಹುದು. ಇಡಬ್ಲ್ಯುಎಸ್‌ ಅಡಿಯಲ್ಲಿ ಹೊಸ ಬಗೆಯ ಮೀಸಲಾತಿ ಕಲ್ಪಿಸಲು ಹೊಸ ಕಾರಣ ನೀಡಿದ್ದರಿಂದಾಗಿ ಹಾಗೂ ಶೇ 50ರ ಮಿತಿಯನ್ನು ಮೀರಿದ್ದರಿಂದಾಗಿ ಮುಂದೆ ಹಲವು ಸಮಸ್ಯೆಗಳು ಸೃಷ್ಟಿಯಾಗಬಹುದು. ಮುಂದಿನ ಸರ್ಕಾರಗಳು ಇತರ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ಹೊಸ ಕಾರಣಗಳನ್ನು ಅನ್ವೇಷಿಸಬಹುದು. ಇದು ಮುಂದೆ ಮತ್ತೆ ನ್ಯಾಯಾಲಯದ ಮೆಟ್ಟಿಲೇರಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು