ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಟಿ20 ವಿಶ್ವಕಪ್‌ ವಿಜಯ; ಭಾರತದ ಕಿರೀಟಕ್ಕೆ ಮತ್ತೊಂದು ಗರಿ

Published 30 ಜೂನ್ 2024, 22:25 IST
Last Updated 30 ಜೂನ್ 2024, 22:25 IST
ಅಕ್ಷರ ಗಾತ್ರ

ಭಾರತದ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಕನಸು ನನಸಾಯಿತು. ರೋಹಿತ್ ಶರ್ಮಾ ನಾಯಕತ್ವದ ತಂಡವು ವೆಸ್ಟ್ ಇಂಡೀಸ್‌ನ ಬಾರ್ಬಾಡೋಸ್‌ನಲ್ಲಿ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಗೆದ್ದಿದೆ. ಭಾರತದ ತಂಡವು 11 ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಟ್ರೋಫಿ ಜಯಿಸಿರಲಿಲ್ಲ. ಈ ಗೆಲುವು ಆ ಬರ ನೀಗಿಸಿದೆ. ಚುಟುಕು ಕ್ರಿಕೆಟ್ ಮಾದರಿಯಲ್ಲಿ ಭಾರತಕ್ಕೆ ಒಲಿದ ಎರಡನೇ ಪ್ರಶಸ್ತಿ ಇದು. 2007ರಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದ ತಂಡವು ಮೊದಲ ಟಿ20 ಟೂರ್ನಿಯಲ್ಲಿ ಕಿರೀಟ ಧರಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಭಾರತದ ಕ್ರಿಕೆಟ್ ಕ್ಷೇತ್ರವು ಹಲವು ಏಳು–ಬೀಳುಗಳನ್ನು ಕಂಡಿದೆ.

2011ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿದೆ. ಇದರ ನಂತರ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಸುತ್ತು ಸೇರಿದಂತೆ ಮೂರು ಮಾದರಿಗಳ ಕ್ರಿಕೆಟ್‌ನಲ್ಲಿಯೂ ನಾಕೌಟ್‌ ಹಂತದಲ್ಲಿ ಎಡವಿದೆ. ಏಳು ತಿಂಗಳುಗಳ ಹಿಂದಷ್ಟೇ ಅಹಮದಾಬಾದಿನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ರೋಹಿತ್ ಪಡೆಯು ಸೋತಿತ್ತು. ಕ್ರಿಕೆಟ್‌ಪ್ರಿಯರನ್ನು ಕಾಡಿದ್ದ ಆ ನೋವನ್ನು ಈ ಗೆಲುವು ಶಮನಗೊಳಿಸಿದೆ. ಸೋಲು, ಟೀಕೆಗಳಿಗೆ ಕುಗ್ಗದೇ, ಲೋಪಗಳನ್ನು ತಿದ್ದಿಕೊಂಡು ಮುನ್ನುಗ್ಗಿದರೆ ಯಶಸ್ಸು ಸಾಧ್ಯ ಎಂಬುದನ್ನು ಈ ಜಯ ತೋರಿಸಿಕೊಟ್ಟಿದೆ.

ಈ ಟೂರ್ನಿಗಾಗಿ ತಂಡವನ್ನು ಆಯ್ಕೆ ಮಾಡಿದಾಗ ನಾಲ್ವರು ಸ್ಪಿನ್ನರ್‌ಗಳು ಏಕೆ ಎಂದು ಹಲವರು ಕೇಳಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಹಾರ್ದಿಕ್ ಪಾಂಡ್ಯ ಮತ್ತು ರನ್‌ ಯಂತ್ರವೆಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಅವರ ಆಯ್ಕೆಯ ಬಗ್ಗೆಯೂ ಅಪಸ್ವರ ಕೇಳಿಬಂದಿತ್ತು.

ವಿರಾಟ್ ಅವರು ಇಡೀ ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೂ ಫೈನಲ್‌ನಲ್ಲಿ ಮಾತ್ರ ಚೆಂದದ ಅರ್ಧಶತಕ ಗಳಿಸಿ ಗೆಲುವಿಗೆ ಅಮೂಲ್ಯ ಕಾಣಿಕೆ ನೀಡಿದರು. ಪಾಂಡ್ಯ ತಮ್ಮ ಆಲ್‌ರೌಂಡ್ ಆಟದಿಂದ ಮಿಂಚಿದರು. ಸ್ಪಿನ್ನರ್‌ಗಳೂ ತಮ್ಮ ಹೊಣೆಯನ್ನು ಚೆನ್ನಾಗಿಯೇ ನಿಭಾಯಿಸಿದರು. ಅದರಲ್ಲೂ ಸ್ಪಿನ್ ಆಲ್‌ರೌಂಡರ್‌ ಅಕ್ಷರ್‌ ಪಟೇಲ್ ಅವರ ಅಮೋಘ ಆಟ ಬಹುಕಾಲ ನೆನಪಿನಲ್ಲಿ ಉಳಿಯುವಂತಹದ್ದು. ವೇಗಿ ಜಸ್‌ಪ್ರೀತ್ ಬೂಮ್ರಾ ಅವರಂತೂ ಎದುರಾಳಿಗಳಿಗೆ ಸಿಂಹಸ್ವಪ್ನರಾದರು. ಅವರೊಂದಿಗೆ ಅರ್ಷದೀಪ್ ಸಿಂಗ್ ಕೂಡ ಮಿಂಚಿದರು. ಬ್ಯಾಟಿಂಗ್‌ನಲ್ಲಿ ಅಸ್ಥಿರತೆ ತೋರಿದ್ದ ಸೂರ್ಯಕುಮಾರ್ ಯಾದವ್ ಫೀಲ್ಡಿಂಗ್‌ನಲ್ಲಿ ನೀಡಿದ ಕಾಣಿಕೆ ಅಸಾಧಾರಣ.

ವಿಕೆಟ್‌ಕೀಪರ್ ರಿಷಭ್ ಪಂತ್ ಅವರು ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅದರಿಂದ ಚೇತರಿಸಿಕೊಂಡ ನಂತರ ಆಡಿದ ಮೊದಲ ಅಂತರರಾಷ್ಟ್ರೀಯ ಟೂರ್ನಿ ಇದು. ಅವರ ವಿಕೆಟ್‌ಕೀಪಿಂಗ್ ಕೌಶಲ, ಚಾಕಚಕ್ಯತೆಯು ಗಮನ ಸೆಳೆಯಿತು. ಇವರೆಲ್ಲರ ಸಂಘಟಿತ ಆಟದ ಪರಿಣಾಮವಾಗಿ ಭಾರತ ತಂಡವು ಈ ಟೂರ್ನಿಯಲ್ಲಿ ಅಜೇಯವಾಗಿ ಉಳಿಯಿತು. ಗುಂಪು ಹಂತದಲ್ಲಿ ಪಾಕಿಸ್ತಾನ, ಸೂಪರ್ ಎಂಟರ ಹಂತದಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಅಫ್ಗಾನಿಸ್ತಾನ ಮತ್ತು ಸೆಮಿಫೈನಲ್‌ನಲ್ಲಿ  ಹೋದ ಬಾರಿಯ ಚಾಂಪಿಯನ್ ಇಂಗ್ಲೆಂಡ್ ಎದುರು ಗೆದ್ದಿದ್ದು ಗಮನಾರ್ಹ ಸಾಧನೆ. ಫೈನಲ್‌ನಲ್ಲಿ ಎದುರಾಳಿಯಾಗಿದ್ದ ಏಡನ್ ಮರ್ಕರಂ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವೂ ಟೂರ್ನಿಯುದ್ದಕ್ಕೂ ಅಜೇಯವಾಗಿ ಉಳಿದಿತ್ತು. ಆದ್ದರಿಂದಲೇ ಉಭಯ ತಂಡಗಳ ಫೈನಲ್ ಹಣಾಹಣಿಯು ರೋಚಕವಾಗಿತ್ತು. 

ಇದೆಲ್ಲದರಾಚೆ ಭಾರತಕ್ಕೆ ಈ ಟೂರ್ನಿಯು ಭಾವನಾತ್ಮಕವಾದುದು. ಏಕೆಂದರೆ, ತಾರಾವರ್ಚಸ್ಸಿನ ಮೂವರು ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ಅವರು ಇದೇ ಸಂದರ್ಭದಲ್ಲಿ ಟಿ20 ಮಾದರಿಗೆ ವಿದಾಯ ಹೇಳಿದ್ದಾರೆ. ತಂಡವನ್ನು ಮುನ್ನಡೆಸಿದ ರೋಹಿತ್‌ ಮತ್ತು ವಿರಾಟ್‌ ಅವರು ಯುವ ಆಟಗಾರರಿಗೆ ಮಾದರಿಯಾಗಿದ್ದಾರೆ. ನಾಯಕರಾಗಿ ವಿರಾಟ್ ಐಸಿಸಿ ಟ್ರೋಫಿ ಜಯದ ಸಾಧನೆ ಮಾಡದಿದ್ದರೂ ಭಾರತದ ಕ್ರಿಕೆಟ್‌ನ ಬ್ರ್ಯಾಂಡ್‌ ಮೌಲ್ಯವನ್ನು ಉತ್ತುಂಗಕ್ಕೇರಿಸಿದವರು. ರೋಹಿತ್ ನಾಯಕರಾಗಿ ತಮ್ಮದೇ ಆದ ಛಾಪು ಮೂಡಿಸಿದವರು, ಇದೀಗ ಟಿ20 ವಿಶ್ವಕಪ್ ವಿಜೇತರೂ ಆಗಿದ್ದಾರೆ. ಇವರಲ್ಲದೇ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ತಮ್ಮ ಕಾರ್ಯಾವಧಿಯನ್ನು ಪೂರ್ಣಗೊಳಿಸಿದ್ದಾರೆ. ಬಲಿಷ್ಠ ತಂಡವನ್ನು ರೂಪಿಸುವ ಬಗೆಯನ್ನು ಹೇಳಿಕೊಟ್ಟಿದ್ದಾರೆ. ಏಳು ತಿಂಗಳುಗಳ ಹಿಂದಷ್ಟೇ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋತಿದ್ದ ತಂಡವು ಮತ್ತೆ ಪುಟಿದೆದ್ದು ಈಗ ಪ್ರಶಸ್ತಿ ಜಯಿಸಿದ್ದರ ಹಿಂದೆ ದ್ರಾವಿಡ್ ಅವರ ಮಾರ್ಗದರ್ಶನದ ಕೊಡುಗೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಮೂವರು ಪ್ರಮುಖ ಆಟಗಾರರ ವಿದಾಯದಿಂದ ತೆರವಾದ ಸ್ಥಾನವನ್ನು ತುಂಬುವವರು ಯಾರು ಎಂಬುದನ್ನು ಕಾದು ನೋಡಬೇಕಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಬೆಳವಣಿಗೆಯ ದೃಷ್ಟಿಯಿಂದಲೂ ಈ ಟೂರ್ನಿಯು ಪ್ರಮುಖವಾಗಿದೆ. ಇದೇ ಮೊದಲ ಬಾರಿಗೆ ಅಮೆರಿಕವು ವೆಸ್ಟ್‌ ಇಂಡೀಸ್‌ ಜೊತೆ ಸೇರಿ ಆತಿಥ್ಯ ವಹಿಸಿತ್ತು. ಇದರೊಂದಿಗೆ ಕ್ರಿಕೆಟ್ ಆಟಕ್ಕೆ ಹೊಸದೊಂದು ಮಾರುಕಟ್ಟೆ ತೆರೆದುಕೊಂಡಿತು. ಆದರೆ, ಇಲ್ಲಿ ಬಳಸಲಾಗಿದ್ದ ಡ್ರಾಪ್ ಇನ್ ಪಿಚ್‌ಗಳ ಗುಣಮಟ್ಟ ಮತ್ತು ವೇಳಾಪಟ್ಟಿ ರೂಪಿಸಿದ ರೀತಿ ಕುರಿತು ಟೀಕೆಗಳು ಕೇಳಿಬಂದವು. ಬಲಾಢ್ಯ ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡಗಳು ಬೇಗ ನಿರ್ಗಮಿಸಿದವು. ಇದೇ ಮೊದಲ ಬಾರಿಗೆ ಆಡಿದ ಅಮೆರಿಕ ತಂಡವು ಸೂಪರ್ ಎಂಟರ ಹಂತ ಪ್ರವೇಶಿಸಿತು. ಅಫ್ಗಾನಿಸ್ತಾನ ತಂಡವು ಘಟಾನುಘಟಿಗಳನ್ನು ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿತು. ಯುಗಾಂಡ, ನಮೀಬಿಯಾ, ಐರ್ಲೆಂಡ್ ತಂಡಗಳೂ ಗಮನ ಸೆಳೆದವು. ಇದರೊಂದಿಗೆ ಟಿ20 ಕ್ರಿಕೆಟ್ ಮಾದರಿಯಲ್ಲಿ ಯಾವುದೇ ಒಂದು ತಂಡದ ಪ್ರಾಬಲ್ಯ ಹೆಚ್ಚು ಕಾಲ ನಡೆಯುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT