ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಡಿಆರ್‌ ಅಕ್ರಮ ಸಮಗ್ರ ತನಿಖೆಯಾಗಲಿ

Last Updated 29 ಮೇ 2019, 19:12 IST
ಅಕ್ಷರ ಗಾತ್ರ

ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಸಲುವಾಗಿ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಪ್ರತಿಯಾಗಿ ಅಭಿವೃದ್ಧಿ ಹಕ್ಕು ಹಸ್ತಾಂತರ (ಟಿಡಿಆರ್‌) ಪ್ರಮಾಣಪತ್ರ ನೀಡುವ ವಿಚಾರದಲ್ಲಿ ನಡೆದಿರುವ ಹಗರಣ ನಗರಾಡಳಿತ ಸಂಸ್ಥೆಗಳಲ್ಲಿ ಭ್ರಷ್ಟಾಚಾರದ ಬೇರು ಎಷ್ಟು ಆಳಕ್ಕೆ ಇಳಿದಿದೆ ಎಂಬುದನ್ನು ಬಯಲು ಮಾಡಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಭಟ್ಟರಹಳ್ಳಿ– ಟಿ.ಸಿ. ಪಾಳ್ಯ ರಸ್ತೆ ವಿಸ್ತರಣೆಗೆ ಸ್ವಾಧೀನ‍‍ಪಡಿಸಿಕೊಂಡಿದ್ದ ಜಮೀನಿಗೆ ಟಿಡಿಆರ್‌ ನೀಡಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಟಿಡಿಆರ್‌ ವಂಚನೆ ಜಾಲದ ಕರಾಳ ರೂಪಗಳನ್ನು ಬಿಚ್ಚಿಟ್ಟಿದೆ.

ಈ ಹಿಂದೆ ಬಿಬಿಎಂಪಿಯಲ್ಲಿ ಎಂಜಿನಿಯರ್‌ ಆಗಿದ್ದ ಹಾಗೂ ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (ಬಿಡಿಎ) ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಕೃಷ್ಣಲಾಲ್‌ ಹಾಗೂ ಅವರ ಆಪ್ತರ ಮನೆಗಳಲ್ಲಿ ಸಿಕ್ಕಿರುವ ದಾಖಲೆಗಳು ಟಿಡಿಆರ್‌ ವಿತರಣೆಯಲ್ಲಿ ಹೇಗೆಲ್ಲಾ ಅಕ್ರಮಗಳು ನಡೆದಿವೆ ಎಂಬುದನ್ನು ಎತ್ತಿ ತೋರಿಸಿವೆ. ಕೆಲವೆಡೆ ಸರ್ಕಾರಿ ಜಾಗವನ್ನು ಖಾಸಗಿ ಜಾಗವೆಂದು ಬಿಂಬಿಸಿ ಟಿಡಿಆರ್‌ ನೀಡಲಾಗಿದೆ. ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಟಿಡಿಆರ್‌ ನೀಡಿರುವುದನ್ನು ಹಾಗೂ ಜಮೀನಿನ ನಿಜವಾದ ಮಾಲೀಕರ ಬದಲು ಬೇರೆಯವರ ಹೆಸರಿಗೆ ಟಿಡಿಆರ್‌ ನೀಡಿದ್ದನ್ನೂ ಎಸಿಬಿ ಪತ್ತೆಹಚ್ಚಿದೆ. ನಗರ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದು ಸರ್ಕಾರದ ಪಾಲಿಗೆ ಸವಾಲಿನ ವಿಷಯ. ಜಾಗ ಬಿಟ್ಟುಕೊಡುವುದಕ್ಕೆ ಭೂಮಾಲೀಕರಿಗೆ ಉತ್ತೇಜನ ನೀಡುವ ಸಲುವಾಗಿ 2005ರಲ್ಲಿ ರಾಜ್ಯದ ಆಯ್ದ ಕೆಲವು ನಗರಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಯಿತು. ಆದರೆ, ಭ್ರಷ್ಟಾಚಾರವು ಈ ಆಶಯವನ್ನೇ ಬುಡಮೇಲು ಮಾಡಿದೆ. ಟಿಡಿಆರ್‌ ಮಾರಾಟದಲ್ಲೂ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಈ ವ್ಯವಸ್ಥೆಯ ಲೋಪವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಅಧಿಕಾರಿಗಳೂ ಶಾಮೀಲಾಗಿ ಟಿಡಿಆರ್‌ ದಾಖಲೆಗಳನ್ನೇ ತಿದ್ದಿದ್ದಾರೆ. ಮನಬಂದಂತೆ ಟಿಡಿಆರ್‌ ನೀಡಿದ್ದಾರೆ. ಜಾಗ ಬಿಟ್ಟುಕೊಟ್ಟವರಿಗೆ ಅಭಿವೃದ್ಧಿ ಹಕ್ಕು ಪ್ರಮಾಣಪತ್ರ ನೀಡುವಾಗ ಒಂದು ಲೆಕ್ಕ ಹಾಗೂ ಅದನ್ನು ಮಾರಾಟ ಮಾಡಿದ ಬಳಿಕ ಇನ್ನೊಂದು ಲೆಕ್ಕ ತೋರಿಸಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಜಾಗ ಬಿಟ್ಟುಕೊಟ್ಟವರಿಗೆ ನೆರವಾಗಬೇಕಿದ್ದ ಈ ವ್ಯವಸ್ಥೆಯು ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಅಕ್ರಮಗಳಿಗೆ ವರವಾಗಿ ಪರಿಣಮಿಸಿದೆ.ಈ ಅಕ್ರಮದ ತನಿಖೆ ಚುರುಕುಗೊಳ್ಳುತ್ತಿದ್ದಂತೆಯೇ ಬಿಬಿಎಂಪಿಯ ಬೆಳ್ಳಂದೂರು ಉಪವಲಯದ ಕಚೇರಿಯಲ್ಲಿ ಕಡತಗಳು ಬೆಂಕಿಗೆ ಆಹುತಿಯಾಗಿವೆ. ನಗರದ ಮಹಿಳಾ ಸಹಕಾರ ಬ್ಯಾಂಕ್‌ ಒಂದರಲ್ಲಿ ಮಧ್ಯವರ್ತಿಗಳ ಕೈವಾಡದಿಂದ ಪ್ರತೀ ಅಭಿವೃದ್ಧಿ ಹಕ್ಕು ಪ್ರಮಾಣಪತ್ರಕ್ಕೆ ಒಂದರಂತೆ ಖಾತೆ ತೆರೆಯಲಾಗಿದೆ. ಜಾಗ ನೀಡಿದ ಮಾಲೀಕರಿಗೆ ಕೊಟ್ಟ ಚೆಕ್‌ ನಗದೀಕರಿಸಿಕೊಂಡ ಬಳಿಕ ಆ ಖಾತೆಗಳು ನಿಷ್ಕ್ರಿಯಗೊಂಡಿವೆ. ಇನ್ನೊಂದೆಡೆ, ಈ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳು ಕಣ್ಮರೆಯಾಗಿವೆ. ಈ ಪ್ರಕರಣದ ತನಿಖೆ ನಿಲ್ಲಿಸುವಂತೆ ಪ್ರಭಾವಿ ರಾಜಕಾರಣಿಗಳು ಒತ್ತಡ ಹೇರುತ್ತಿರುವುದೂ ಗುಟ್ಟಾಗಿ ಉಳಿದಿಲ್ಲ. ಈ ಅಕ್ರಮ ಜಾಲ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಈ ಬೆಳವಣಿಗೆಗಳು ಕನ್ನಡಿ ಹಿಡಿಯುತ್ತವೆ.

2005ರಿಂದ 2015ರ ನಡುವೆ ಬಿಬಿಎಂಪಿ ಸುಮಾರು 3 ಸಾವಿರ ಟಿಡಿಆರ್‌ ವಿತರಿಸಿದೆ. ಹತ್ತು ವರ್ಷಗಳಲ್ಲಿ 22.08 ಲಕ್ಷ ಚ.ಮೀ.ಗಳಷ್ಟು ಸ್ವತ್ತಿಗೆ ಟಿಡಿಆರ್‌ ವಿತರಿಸಲಾಗಿದ್ದು, 10.98 ಲಕ್ಷ ಚ.ಮೀ.ಗಳಷ್ಟು ಸ್ವತ್ತುಗಳ ಹಕ್ಕು ಬಳಕೆಯಾಗಿದೆ. ಸದ್ಯಕ್ಕೆ ವಿಚಾರಣೆ ನಡೆಯುತ್ತಿರುವುದು ಟಿಡಿಆರ್‌ ಅಕ್ರಮದ ಒಂದು ಪ್ರಕರಣ ಮಾತ್ರ. ಇಂತಹದ್ದೇ ಪ್ರಕರಣಗಳ ಸಂಬಂಧ ಎಸಿಬಿಗೆ ಮತ್ತೆ 20ಕ್ಕೂ ಅಧಿಕ ದೂರುಗಳು ಬಂದಿವೆ. ಈ ಪ್ರಕರಣಗಳಲ್ಲಿ ನಡೆದಿರಬಹುದಾದ ಅಕ್ರಮಗಳ ಬಗ್ಗೆಯೂ ಸಮಗ್ರ ತನಿಖೆ ನಡೆಯಬೇಕಿದೆ. ಈಗ ಬೆಳಕಿಗೆ ಬಂದಿರುವ ಅಕ್ರಮಗಳು 2008ರಿಂದ 2015ರ ನಡುವೆ ನಡೆದಿರುವಂತಹವು.

ಈ ಅಕ್ರಮಗಳ ಸುಳಿವು ಸಿಕ್ಕಿದ್ದರಿಂದಲೇ ಸರ್ಕಾರ ಟಿಡಿಆರ್‌ ವಿತರಣೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು 2017ರ ಮಾರ್ಚ್‌ನಲ್ಲಿ ಹೊಸ ಅಧಿಸೂಚನೆ ಹೊರಡಿಸಿದೆ. ಟಿಡಿಆರ್‌ ನೀಡುವ ಹೊಣೆಯನ್ನು ಬಿಬಿಎಂಪಿ ಬದಲು ಬಿಡಿಎಗೆ ವಹಿಸಿದೆ. ಬಿಟ್ಟುಕೊಟ್ಟ ಜಾಗದ ವಿಸ್ತೀರ್ಣ, ಮಾರುಕಟ್ಟೆ ಮೌಲ್ಯ ಸೇರಿದಂತೆ ಒಟ್ಟು 14 ಬಗೆಯ ವಿವರಗಳನ್ನು ಟಿಡಿಆರ್‌ನಲ್ಲಿ ನಮೂದಿಸುವುದನ್ನು ಕಡ್ಡಾಯಗೊಳಿಸಿದೆ. ಟಿಡಿಆರ್‌ ವಿತರಿಸುವಾಗ ಮತ್ತು ಅದನ್ನು ಮಾರಾಟ ಮಾಡುವಾಗ ಎರಡೆರಡು ಬಾರಿ ಪರಿಶೀಲನೆ ನಡೆಯಲಿದೆ. ಈ ಸುಧಾರಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ. ಜೊತೆಗೆ ಟಿಡಿಆರ್‌ಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುವಂತೆಯೂ ನೋಡಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT