ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ದೂರಸಂಪರ್ಕ ವಲಯಕ್ಕೆ ನೆರವು: ಅನಿವಾರ್ಯ, ಸ್ವಾಗತಾರ್ಹ

Last Updated 17 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು ದೇಶದ ದೂರಸಂಪರ್ಕ ವಲಯಕ್ಕೆ ಸಂಬಂಧಿಸಿದಂತೆ ಕೆಲವು ಸುಧಾರಣಾ ಕ್ರಮಗಳನ್ನು, ನೆರವು ಕ್ರಮಗಳನ್ನು ಘೋಷಿಸಿದೆ. ತೀವ್ರ ಸ್ವರೂಪದ ಹಣಕಾಸಿನ ಬಿಕ್ಕಟ್ಟನ್ನು ಎದುರಿಸು ತ್ತಿರುವ ದೂರಸಂಪರ್ಕ ವಲಯದ ಚೇತರಿಕೆಗೆ ಈ ಕ್ರಮಗಳು ಪೂರಕವಾಗಬಹುದು. ದೇಶದ ಕೆಲವು ದೂರಸಂಪರ್ಕ ಕಂಪನಿಗಳು ಸಾಲದ ಸುಳಿಗೆ ಸಿಲುಕಿವೆ, ನಷ್ಟದಲ್ಲಿ ನಡೆಯುತ್ತಿವೆ. ದೇಶದಲ್ಲಿ ಈ ಹಿಂದೆ ಹತ್ತಕ್ಕೂ ಹೆಚ್ಚು ಖಾಸಗಿ ಕಂಪನಿಗಳು ದೂರಸಂಪರ್ಕ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದವು. ಈಗ ಮೊಬೈಲ್‌ ಸೇವೆಗಳನ್ನು ನೀಡುತ್ತಿರುವ ಖಾಸಗಿ ಕಂಪನಿಗಳ ಸಂಖ್ಯೆಯು ಮೂರಕ್ಕೆ ಇಳಿದಿದೆ. ಕಂಪನಿಗಳ ದಿವಾಳಿ, ಸ್ಥಗಿತ, ವಿಲೀನ, ಮಾರಾಟವನ್ನು ದೂರಸಂಪರ್ಕ ವಲಯವು ಈಚಿನ ವರ್ಷಗಳಲ್ಲಿ ಕಂಡಿದೆ. ಇಡೀ ಉದ್ಯಮ ವಲಯ ಅನುಭವಿಸುತ್ತಿರುವ ಹಣಕಾಸಿನ ಒತ್ತಡವನ್ನು ಇವು ಹೇಳುತ್ತವೆ. ಕೆಲವು ವರ್ಷಗಳ ಹಿಂದೆ ದೂರಸಂಪರ್ಕ ವಲಯದಲ್ಲಿ ದೈತ್ಯ ಉದ್ದಿಮೆಯೊಂದು ಹೂಡಿಕೆ ಮಾಡಿದ ಬಳಿಕ, ತೀವ್ರ ದರಸಮರ ಶುರುವಾಯಿತು. ಇದರಿಂದಾಗಿ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಇಂಟರ್ನೆಟ್‌ ಸಂಪರ್ಕ ಹಾಗೂ ಧ್ವನಿ ಕರೆಗಳ ಸೌಲಭ್ಯ ದೊರೆಯಿತು. ಆದರೆ, ಕಂಪನಿಗಳು ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದವು. ಈಗ ಸೇವೆ ಒದಗಿಸುತ್ತಿರುವ ಖಾಸಗಿ ಕಂಪನಿಗಳ ಪೈಕಿ ಒಂದಾಗಿರುವ ವೊಡಾಫೋನ್ ಐಡಿಯಾ ಲಿಮಿಟೆಡ್‌ ಕಂಪನಿಯು ನಷ್ಟದಲ್ಲಿ ಇದೆ, ಸಾಲದ ಸುಳಿಗೆ ಸಿಲುಕಿದೆ. ಸರ್ಕಾರದ ನೆರವು ಸಿಗದಿದ್ದರೆ ಈ ಕಂಪನಿಯು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿತ್ತು. ಹಾಗಾಗಿ ಈಗ ಸರ್ಕಾರ ಪ್ರಕಟಿಸಿರುವ ಕ್ರಮಗಳ ಅತಿದೊಡ್ಡ ಪ್ರಯೋಜನ ಈ ಕಂಪನಿಗೆ ದಕ್ಕಬಹುದು. ಸಮಸ್ಯೆಯ ಕೇಂದ್ರಬಿಂದು ಆಗಿದ್ದ ಹೊಂದಾಣಿಕೆ ಮಾಡಿದ ನಿವ್ವಳ ಆದಾಯದ (ಎಜಿಆರ್‌) ವ್ಯಾಖ್ಯಾನವನ್ನು ಕೇಂದ್ರವು ಬದಲಾಯಿಸಿದೆ. ದೂರಸಂಪರ್ಕ ಸೇವೆಗಳು ಅಲ್ಲದೆ, ಇತರ ಸೇವೆಗಳ ಮೂಲಕ ಬರುವ ಆದಾಯವನ್ನು ಎಜಿಆರ್‌ ವ್ಯಾಪ್ತಿಗೆ ತರಬಾರದು ಎಂದು ಕಂಪನಿಗಳು ಹಲವು ಬಾರಿ ಕೋರಿದ್ದವು. ಅಲ್ಲದೆ, ಇದುವರೆಗಿನ ಎಜಿಆರ್‌ ಬಾಕಿ ಪಾವತಿಗೆ ನಾಲ್ಕು ವರ್ಷಗಳ ಕಾಲಾವಕಾಶ ನೀಡುವ ತೀರ್ಮಾನವನ್ನೂ ಕೇಂದ್ರವು ಪ್ರಕಟಿಸಿದೆ. ಇದು ಕಂಪನಿಗಳಲ್ಲಿನ ನಗದು ಹರಿವಿನ ಸಮಸ್ಯೆಯನ್ನು ತುಸು ನಿವಾರಿಸಬಹುದು. ಲಭ್ಯ ಬಂಡವಾಳವನ್ನು ಕಂಪನಿಗಳು ಮೂಲಸೌಕರ್ಯ ಹೆಚ್ಚಿಸಲು ಬಳಸಿಕೊಳ್ಳಬಹುದು.

ಎಜಿಆರ್‌ ವಿಚಾರದಲ್ಲಿ ಈಗ ಕೈಗೊಂಡಿರುವ ತೀರ್ಮಾನದ ಕಾರಣದಿಂದಾಗಿ, ಕೇಂದ್ರದ ಪಾಲಿಗೆ ತಕ್ಷಣಕ್ಕೆ ಬರಬಹುದಾಗಿದ್ದ ವರಮಾನವು ಕಡಿಮೆ ಆಗುವ ಸಾಧ್ಯತೆ ಇದೆ. ಆದರೆ ಎಜಿಆರ್‌ ವ್ಯಾಖ್ಯಾನ ಬದಲಿಸದೆ, ಹೆಚ್ಚುವರಿ ಕಾಲಾವಕಾಶವನ್ನೂ ಕೊಡದೆ ಇದ್ದರೆ, ಹಿಂಬಾಕಿ ಹಣ ಪಾವತಿ ಮಾಡಲಾಗದೆ ಕಂಪನಿಗಳು ಕುಸಿದುಬೀಳುವ ಅಪಾಯವೂ ಇತ್ತು. ಹೀಗಾಗಿ, ಈಗ ಕೇಂದ್ರ ಕೈಗೊಂಡಿರುವ ತೀರ್ಮಾನವು ಅನಿವಾರ್ಯವೂ ಹೌದು ಸ್ವಾಗತಾರ್ಹವೂ ಹೌದು. ನಾಲ್ಕು ವರ್ಷಗಳ ಕಾಲಾವಕಾಶ ಪೂರ್ಣಗೊಂಡ ನಂತರದಲ್ಲಿಯೂ ಎಜಿಆರ್ ಬಾಕಿ ಉಳಿದುಕೊಂಡಿದ್ದರೆ, ಬಾಕಿ ಮೊತ್ತವನ್ನು ಷೇರುಗಳಾಗಿ ಪರಿವರ್ತನೆ ಮಾಡಿಕೊಳ್ಳುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಬಹುದು. ದೇಶದ ದೂರಸಂಪರ್ಕ ವಲಯದಲ್ಲಿ ಶೇಕಡ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಕೂಡ ಕೇಂದ್ರವು ಒಪ್ಪಿಗೆ ನೀಡಿದೆ. ಈ ಹೂಡಿಕೆಗೆ ಕಂಪನಿಗಳು ಪೂರ್ವಾನುಮತಿ ಪಡೆಯುವ ಅಗತ್ಯ ಇರುವುದಿಲ್ಲ. ಇದರಿಂದಾಗಿ ಕಂಪನಿಗಳಿಗೆ ಹೊಸ ಹೂಡಿಕೆದಾರರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ದೂರಸಂಪರ್ಕ ಉದ್ಯಮ ವಲಯಕ್ಕೆ ನೆರವಾಗುವ ಗಂಭೀರ ಪ್ರಯತ್ನ ತನ್ನದು ಎಂಬುದನ್ನು ಕೇಂದ್ರವು ಈ ಎಲ್ಲ ಕ್ರಮಗಳ ಮೂಲಕ ಸ್ಪಷ್ಟವಾಗಿ ತೋರಿಸಿದೆ. ಈ ವಲಯಕ್ಕೆ ಬ್ಯಾಂಕ್‌ಗಳಿಂದ ಕೋಟ್ಯಂತರ ರೂಪಾಯಿ ಸಾಲ ನೀಡಲಾಗಿದೆ. ಕಂಪನಿಗಳು ನಷ್ಟದ ಸುಳಿಗೆ ಸಿಲುಕಿದಾಗ ಅದರ ಪರಿಣಾಮವು ಬ್ಯಾಂಕ್‌ಗಳ ಮೇಲೆ ನೇರವಾಗಿ ಆಗುತ್ತದೆ. ಕೇಂದ್ರದ ನೆರವು ಪರೋಕ್ಷವಾಗಿ ದೇಶದ ಹಲವು ಬ್ಯಾಂಕ್‌ಗಳಿಗೆ ಸಮಾಧಾನ ತಂದಿರಬಹುದು. ಆ ಬ್ಯಾಂಕ್‌ಗಳು ಹಾಗೂ ದೂರಸಂಪರ್ಕ ಕಂಪನಿಗಳಲ್ಲಿನ ಹೂಡಿಕೆದಾರರಲ್ಲಿಯೂ ಸಮಾಧಾನ ಮೂಡಿಸಿರಬಹುದು.

ದೂರಸಂಪರ್ಕ ಉದ್ಯಮ ವಲಯವು ಇಂದು ಸರ್ಕಾರದ ನೆರವು ಬೇಕೇಬೇಕು ಎಂಬ ಸ್ಥಿತಿಗೆ ತಲುಪಿದ್ದು ಏಕೆ ಎಂಬುದರ ಬಗ್ಗೆಯೂ ಈ ಸಂದರ್ಭದಲ್ಲಿ ಅವಲೋಕನ ನಡೆಸಬಹುದು. ಅತಿಯಾದ ದರ ಸಮರದ ಕಾರಣದಿಂದಾಗಿ ಕಂಪನಿಗಳು ಇಂದು ನಷ್ಟ ಅನುಭವಿಸುತ್ತಿವೆ ಅಥವಾ ಬಹಳ ಕಡಿಮೆ ಪ್ರಮಾಣದ ಲಾಭ ಕಾಣುತ್ತಿವೆ. ದರ ಸಮರದಿಂದಾಗಿ ಆರಂಭದಲ್ಲಿ ಗ್ರಾಹಕರಿಗೆ ಒಳ್ಳೆಯದಾಗುವಂತೆ ಕಂಡರೂ, ದೀರ್ಘಾವಧಿಯಲ್ಲಿ ನಷ್ಟವೇ ಹೆಚ್ಚು. ಕಂಪನಿಗಳಿಗೆ ಹೊಸ ತಂತ್ರಜ್ಞಾನದ ಮೇಲೆ ಹೆಚ್ಚುವರಿ ಹೂಡಿಕೆ ಮಾಡಲು ಆಗುವುದಿಲ್ಲ, ಗ್ರಾಹಕರಿಗೆ ಹೊಸ ತಂತ್ರಜ್ಞಾನದ ಪ್ರಯೋಜನ ಸಿಗುವುದಿಲ್ಲ. ಕೋವಿಡ್‌ ಕಾರಣದಿಂದಾಗಿ ಕೆಲಸ ಮಾಡುವ, ಶಿಕ್ಷಣ ಪಡೆಯುವ ಬಗೆ ಬದಲಾಗಿದೆ. ಹಳ್ಳಿಗಳ ಲ್ಲಿಯೂ ಅತಿವೇಗದ ಇಂಟರ್ನೆಟ್ ಸಂಪರ್ಕ ಅಗತ್ಯವಿದೆ. ಆದರೆ ಅದಕ್ಕೆ ಅಗತ್ಯವಿರುವ ಮೂಲಸೌಕರ್ಯ ವನ್ನು ತ್ವರಿತಗತಿಯಲ್ಲಿ ಅಳವಡಿಸುವ ಸಾಮರ್ಥ್ಯ ಎಲ್ಲ ಕಂಪನಿಗಳಿಗೂ ಇದೆ ಎನ್ನಲಾಗದು. ಈ ಸ್ಥಿತಿಗೆ ಕಾರಣ ದರಸಮರ ಹಾಗೂ ಅದರಿಂದ ಸೃಷ್ಟಿಯಾದ ಹಣಕಾಸಿನ ಸಂಪನ್ಮೂಲದ ಕೊರತೆ. ಪ್ರತೀ ಗ್ರಾಹಕನಿಂದ ಬರುವ ಆದಾಯ (ಎಆರ್‌ಪಿಯು) ಕಡಿಮೆ ಇದೆ ಎಂದು ಕೆಲವು ಕಂಪನಿಗಳು ಹೇಳುತ್ತಿವೆ ಯಾದರೂ, ದರ ಹೆಚ್ಚಳದ ವಿಚಾರದಲ್ಲಿ ಧೈರ್ಯವಾಗಿ ಮುಂದಡಿ ಇರಿಸುತ್ತಿಲ್ಲ. ಕನಿಷ್ಠ ಸೇವಾ ಶುಲ್ಕವನ್ನು ನಿಗದಿ ಮಾಡಬೇಕು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವನ್ನು (ಟ್ರಾಯ್) ಒತ್ತಾಯಿಸುವ ಬದಲು ಕಂಪನಿಗಳು ತಾವೇ ಮುಂದಾಗಿ ದರ ಸಮರಕ್ಕೆ ಅಂತ್ಯ ಹೇಳಬೇಕು. ಸೇವಾ ಗುಣಮಟ್ಟದ ಮೂಲಕ ಪೈಪೋಟಿ ನೀಡಬೇಕು; ಉಚಿತ ಕೊಡುಗೆಗಳ ಮೂಲಕ ಅಲ್ಲ. ಹಾಗೆ ಆದಾಗ ಮಾತ್ರ ಉದ್ದಿಮೆಯೂ ಬೆಳೆಯುತ್ತದೆ, ಜನರಿಗೆ ಒಳ್ಳೆಯ ಸೇವೆಗಳೂ ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT