ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಗ್ಗಟ್ಟಿನಿಂದ ಎದುರಿಸಬೇಕಾದ ಸವಾಲು ಮತ ಗಳಿಕೆ ತಂತ್ರವಾಗದಿರಲಿ

Last Updated 28 ಫೆಬ್ರುವರಿ 2019, 20:19 IST
ಅಕ್ಷರ ಗಾತ್ರ

ರಾಷ್ಟ್ರೀಯ ಸುರಕ್ಷೆಯನ್ನು ಸಂಕುಚಿತ ರಾಜಕೀಯ ಲಾಭಕ್ಕೆ ಬಳಸಿಕೊಂಡಿದೆ ಎಂದು ಆಡಳಿತಾರೂಢ ಬಿಜೆಪಿಯನ್ನು ದೇಶದ 21 ವಿರೋಧ ಪಕ್ಷಗಳು ಕಟಕಟೆಯಲ್ಲಿ ನಿಲ್ಲಿಸಿವೆ. ಭಯೋತ್ಪಾದನೆ ಘಟನೆಯೊಂದು ನಡೆದ ನಂತರ ದೇಶದಲ್ಲಿ ಸಾಮಾನ್ಯವಾಗಿ ಪ್ರಹಸನವೊಂದು ನಡೆಯುತ್ತದೆ.ಅದರ ಭಾಗವಾಗಿ ಎಲ್ಲ ರಾಜಕೀಯ ಪಕ್ಷಗಳೂ ದಾಳಿಯನ್ನು ಉಗ್ರವಾಗಿ ಖಂಡಿಸುತ್ತವೆ. ರಾಷ್ಟ್ರೀಯ ಏಕತೆಗೆ ಬದ್ಧವೆಂದು ಪಣ ತೊಡುತ್ತವೆ. ರಾಜಕಾರಣ ಮಾಡಕೂಡದೆಂದು ಪರಸ್ಪರರಿಗೆ ತಾಕೀತು ಮಾಡುತ್ತವೆ. ಆದರೆ ರಾಜಕಾರಣ ಮಾಡಬಾರದೆಂಬ ಸಂಯಮ ಬಹುಕಾಲ ಬಾಳುವುದಿಲ್ಲ. ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ವಾಯುಸೇನೆಯು ಪಾಕಿಸ್ತಾನದ ಸೀಮೆಯೊಳಕ್ಕೆ ನುಗ್ಗಿ ನಡೆಸಿದ ನಿರ್ದಿಷ್ಟ ದಾಳಿಯು ಇದರಿಂದಾಗಿಯೇ ರಾಜಕೀಯ ಮೇಲಾಟಕ್ಕೆ ಬಳಕೆಯಾಗುತ್ತಿದೆ. ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಬಾರದು ಎಂಬುದಾಗಿ ಖುದ್ದು ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಸೂಚಿಸಿದರು. ಆದರೆ ಅವರೇ ಆ ಸೂಚನೆಯನ್ನು ನೇರಾ ನೇರ ಮುರಿದರು. ಬಿಜೆಪಿಯ ಈ ನಡೆಯನ್ನು ಗಮನಿಸಿದ ಕಾಂಗ್ರೆಸ್ ಪಕ್ಷ ತಾನು ಪಾಲಿಸಿಕೊಂಡು ಬಂದಿದ್ದ ಸಂಯಮಕ್ಕೆ ಎಳ್ಳು ನೀರು ಬಿಟ್ಟಿತು. ಭಯೋತ್ಪಾದನೆಯನ್ನು ಮೆಟ್ಟುವಲ್ಲಿ ಮೋದಿ ನೇತೃತ್ವದ ಸರ್ಕಾರದ ವೈಫಲ್ಯಕ್ಕೆ ಪುಲ್ವಾಮಾ ಕನ್ನಡಿ ಹಿಡಿದಿರುವುದೇ ಅಲ್ಲದೆ ಬೇಹುಗಾರಿಕೆ ವೈಫಲ್ಯವನ್ನು ಎತ್ತಿ ತೋರಿದೆ ಎಂದು ಟೀಕಿಸಿತು.ಪ್ರತಿಪಕ್ಷಗಳ ಟೀಕೆಯ ವಿರುದ್ಧ ಬಿಜೆಪಿ ಪ್ರತಿದಾಳಿ ನಡೆಸಿತು. ಪಾಕಿಸ್ತಾನಕ್ಕೆ ಸಂತೋಷ ತರುವ ಮಾತುಗಳಿವು ಎಂದಿತು. ಎರಡು ದೇಶಗಳ ನಡುವೆ ನಡೆಯುವ ಮಿಲಿಟರಿ ಘರ್ಷಣೆಗೆ ಜೀವಹಾನಿಯ ದುಬಾರಿ ಬೆಲೆ ತೆರಬೇಕಾಗುತ್ತದೆ. ಹೀಗಾಗಿ ಸರ್ಕಾರ, ರಾಜಕೀಯ ಪಕ್ಷಗಳು, ನೇತಾರರು, ಸಮೂಹ ಮಾಧ್ಯಮಗಳು ಹಾಗೂ ನಾಗರಿಕ ಸಮಾಜವು ಸಂಯಮದಿಂದ ಅಳೆದೂ-ತೂಗಿ ಮಾತಾಡ ಬೇಕಾಗುತ್ತದೆ. ಪ್ರಬುದ್ಧತೆ ಪ್ರದರ್ಶಿಸಬೇಕಾಗುತ್ತದೆ. ಇರಿಸುವ ಪ್ರತಿ ಹೆಜ್ಜೆಗೂ ಸಾಧಕ- ಬಾಧಕಗಳಿರುತ್ತವೆ ಎಂಬುದನ್ನು ಮರೆಯಕೂಡದು. ಆದರೆ ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಈ ಎಚ್ಚರಿಕೆಯನ್ನು ಆಳುವ ಪಕ್ಷ ಬಹುತೇಕ ಗಾಳಿಗೆ ತೂರಿದೆ. ನೋಡುಗರನ್ನು ಪ್ರಚೋದಿಸಿ ಜನಪ್ರಿಯತೆ ಗಳಿಸುವ ತಂತ್ರಕ್ಕೆ ಶರಣಾಗಿರುವ ಕೆಲವು ಟಿ.ವಿ. ಸ್ಟುಡಿಯೊಗಳು ‘ವಾರ್ ರೂಮ್’ಗಳಾಗಿಬಿಟ್ಟಿವೆ. ಸಮೂಹ ಮಾಧ್ಯಮವು ಆಳುವ ಪಕ್ಷದ ಮರ್ಜಿ ಅನುಸರಿಸಿ ಯುದ್ಧೋನ್ಮಾದ ಪ್ರದರ್ಶನದಲ್ಲಿ ತೊಡಗುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ.

ಪುಲ್ವಾಮಾ ದುರಂತ ಮತ್ತು ಪಾಕ್ ಜೊತೆ ಘರ್ಷಣೆಯ ಇಂತಹ ದಿನಗಳಲ್ಲೂ ಅಮಿತ್ ಶಾ- ಮೋದಿಯವರು ಪಕ್ಷ ರಾಜಕಾರಣವನ್ನು ನಿಲ್ಲಿಸಿಲ್ಲ. ಸದ್ಯದಲ್ಲೇ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂಬ ಗುರಿ ಸಾಧನೆಗೆ ಅಮಿತ್ ಶಾ ಅವರು ವಾಯುದಾಳಿಯನ್ನು ಎಗ್ಗಿಲ್ಲದೆ ಬಳಸತೊಡಗಿದ್ದಾರೆ. ಮೋದಿಯವರು ಗುರುವಾರ ಮಧ್ಯಾಹ್ನ ತಮ್ಮ ಪಕ್ಷದ ಕಾರ್ಯಕರ್ತರು, ಸಮಾಜದ ನಾನಾ ವರ್ಗಗಳ ಮತದಾರರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮಹಾಸಂವಾದ ನಡೆಸಿದರು. ‘ಮೇರಾ ಬೂತ್ ಸಬ್ ಸೇ ಮಜಬೂತ್’ (ನನ್ನ ಮತಗಟ್ಟೆ, ಉಳಿದೆಲ್ಲರಿಗಿಂತ ಗಟ್ಟಿ ಮತಗಟ್ಟೆ) ಎಂಬುದು ಈ ಸಂವಾದದ ವಿಷಯವಸ್ತು ಆಗಿತ್ತು. ಸಂಜೆ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ವಿತರಣೆ ಸಮಾರಂಭದಲ್ಲೂ ರಾಜಕಾರಣವನ್ನು ಬೆರೆಸಿದರು. ಬಿಜೆಪಿಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಅವರ ಮಾತುಗಳನ್ನೂ ‘ಯುದ್ಧ ರಾಜಕಾರಣ’ದ ಪರಿಭಾಷೆಯಲ್ಲೇ ಅರ್ಥ ಮಾಡಿಕೊಳ್ಳಬೇಕು. ವಾಯುಸೇನೆಯ ದಾಳಿಯು ಕರ್ನಾಟಕದಲ್ಲಿ ತಮ್ಮ ಪಕ್ಷಕ್ಕೆ 22 ಲೋಕಸಭಾ ಸೀಟುಗಳನ್ನು ಗೆಲ್ಲಿಸಿಕೊಡಲಿದೆ ಎಂದು ಯಡಿಯೂರಪ್ಪ ಹೇಳಿದ ಮಾತುಗಳನ್ನು ಪಾಕಿಸ್ತಾನದ ಆಳುವ ಪಕ್ಷ ಬಳಸಿಕೊಂಡಿದೆ. ವಿಶ್ವ ಸಮುದಾಯದಲ್ಲಿ ಭಾರತಕ್ಕೊಂದು ಘನತೆ ಇದೆ. ಇದು, ಏಳು ದಶಕಗಳ ಅವಧಿಯ ಸಂಯಮ ಮತ್ತು ಪ್ರಬುದ್ಧ ರಾಜತಂತ್ರದ ಫಲ. ಬಾಯಿಹರಕು ರಾಜಕಾರಣಿಗಳಿಗೆ ಈ ರಾಜತಾಂತ್ರಿಕ ಪರಂಪರೆ ನೆನಪಿರಬೇಕು. ರಾಷ್ಟ್ರ ಒಟ್ಟಾಗಿ ನಿಂತು ಎದುರಿಸಬೇಕಾದ ಸವಾಲನ್ನು ಯಾವುದೇ ಪಕ್ಷ, ಮತ ಗಳಿಕೆ ರಾಜಕೀಯಕ್ಕೆ ಬಳಸುವುದು ಖಂಡನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT