ಬುಧವಾರ, ಡಿಸೆಂಬರ್ 7, 2022
23 °C

ಸಂಪಾದಕೀಯ: ರಾಜೀವ್‌ ಹಂತಕರ ಬಿಡುಗಡೆ ಸಹಜ ನ್ಯಾಯಕ್ಕೆ ಪೂರಕ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜೀವ್‌ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ನಳಿನಿ ಶ್ರೀಹರನ್‌ ಸೇರಿದಂತೆ ಆರು ಮಂದಿ ಅಪರಾಧಿಗಳ ಬಿಡುಗಡೆಗೆ ಕಳೆದ ವಾರ ಸುಪ್ರೀಂ ಕೋರ್ಟ್‌ ಹೊರಡಿಸಿದ ಆದೇಶವು ಸಹಜ ನ್ಯಾಯವನ್ನು ಎತ್ತಿ ಹಿಡಿಯುವಂಥದ್ದು. ಈ ಅಪರಾಧಿಗಳ ಬಿಡುಗಡೆಗೆ ಕೇಂದ್ರ ಸರ್ಕಾರ ಮಾತ್ರವಲ್ಲದೆ ಹಲವು ಕಡೆಗಳಿಂದ ತೀವ್ರ ವಿರೋಧವಿತ್ತು ಎನ್ನುವುದು ಇಲ್ಲಿ ಗಮನಾರ್ಹ. ಬಿಡುಗಡೆಯ ಆದೇಶವನ್ನು ಹೊರಡಿಸುವ ಮುನ್ನ ತನ್ನ ವಾದ ಮಂಡನೆಗೆ ಸಮರ್ಪಕ ಕಾಲಾವಕಾಶವನ್ನೇ (ಕೋರ್ಟ್‌) ನೀಡಲಿಲ್ಲ ಎಂದು ಹೇಳಿರುವ ಸರ್ಕಾರ, ಈಗ ಆದೇಶದ ಕುರಿತು ಮರುಪರಿಶೀಲಿಸುವಂತೆ ಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಿದೆ. ಅಲ್ಲದೆ, ಈ ಪ್ರಕರಣದ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ ಸಹಜ ನ್ಯಾಯದ ತತ್ವಗಳು ಪಾಲನೆಯಾಗಿಲ್ಲ ಎಂದೂ ದೂರಿದೆ. ಕೋರ್ಟ್‌ನ ನಿರ್ಧಾರವನ್ನು ಕಾಂಗ್ರೆಸ್‌ ಪಕ್ಷ ಕೂಡ ಟೀಕಿಸಿದೆ. ಅಪರಾಧಿಗಳ ಬಿಡುಗಡೆಯ ಪರವಾಗಿದ್ದ ಗಾಂಧಿ ಕುಟುಂಬದ ನಿಲುವಿಗೂ ಆ ಪಕ್ಷವು ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸಿದೆ. ರಾಜೀವ್‌ ಹತ್ಯೆಯಲ್ಲಿ ಭಾಗಿಯಾದ ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಸರ್ಕಾರವು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದುದು ಮತ್ತು ಇನ್ನೊಬ್ಬ ಅಪರಾಧಿ ಎ.ಜಿ. ಪೇರ್‌ ಅರಿವಾಳನ್‌ನನ್ನು
ಈಗಾಗಲೇ ಬಿಡುಗಡೆ ಮಾಡಿರುವುದು– ಈ ಎರಡೂ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡ
ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಬಿ.ವಿ. ನಾಗರತ್ನ ಅವರಿದ್ದ ಪೀಠ ಬಿಡುಗಡೆಯ ಆದೇಶವನ್ನು ಹೊರಡಿಸಿದೆ. 

ಅಪರಾಧಿಗಳ ನಡತೆಯಲ್ಲಿ ಆಗಿರುವ ಸುಧಾರಣೆಯ ದೃಷ್ಟಿಕೋನದಿಂದ ಈ ಬಿಡುಗಡೆಯನ್ನು ನೋಡಬೇಕೇ ವಿನಾ ಪ್ರತೀಕಾರದ ಮನೋಭಾವದಿಂದಲ್ಲ. ಅಪರಾಧ ನ್ಯಾಯ ವ್ಯವಸ್ಥೆ ಕೂಡ ಇದನ್ನೇ ಹೇಳುತ್ತದೆ. ಇಂತಹ ಸನ್ನಿವೇಶಗಳಲ್ಲಿ ಇಡೀ ವ್ಯವಸ್ಥೆಯು ಮಾನವೀಯತೆಯಿಂದ ನಡೆದು ಕೊಳ್ಳಬೇಕಿರುವುದು ಅಪೇಕ್ಷಣೀಯ. ಅಪರಾಧಿಗಳು ಈಗಾಗಲೇ 30 ವರ್ಷಗಳವರೆಗೆ ಜೈಲಿನಲ್ಲೇ ಕಾಲ ಕಳೆದಿದ್ದಾರೆ ಮತ್ತು ಬಂದಿಯಾಗಿದ್ದಾಗ, ಸ್ವತಃ ಕೋರ್ಟ್‌ ಗಮನಿಸಿರುವಂತೆ, ಅವರೆಲ್ಲತೃಪ್ತಿಕರವಾದಂತಹ ಸನ್ನಡತೆಯನ್ನೇ ತೋರಿದ್ದಾರೆ. ಜೈಲಿನಲ್ಲಿ ಇದ್ದುಕೊಂಡೇ ಅವರು ಸ್ನಾತಕೋತ್ತರ ಮತ್ತು ಡಿಪ್ಲೊಮಾ ಪದವಿಗಳನ್ನೂ ಪಡೆದಿದ್ದಾರೆ. ಜೈಲುವಾಸ ಅವರ ಜೀವನದಲ್ಲಿ ಸುಧಾರಣೆಯನ್ನು ತಂದು, ಸಮಾಜದ ಇತರ ನಾಗರಿಕರಂತೆ ಬದುಕುವ ಮನೋಭಾವವನ್ನು ಅವರೂ ಬೆಳೆಸಿಕೊಂಡಿದ್ದಾರೆ ಎಂದಾದರೆ ಅವರಿಗೆ ಅಂತಹ ಅವಕಾಶವು ಸಿಗಲೇಬೇಕು. ನ್ಯಾಯವ್ಯವಸ್ಥೆಯ ಒಟ್ಟು ಉದ್ದೇಶವೇ ಇದಾಗಿದೆ. ಹಲವಾರು ಆರೋಪಿಗಳನ್ನು ಖುಲಾಸೆಗೊಳಿಸಿರುವುದು, ಮರಣದಂಡನೆಯನ್ನು ಪರಿವರ್ತಿಸಿರುವುದು ಮತ್ತು ಈಗ ಈ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದು ಎಲ್ಲವೂ ಕಾನೂನು ಬದ್ಧವಾದ ಹಾಗೂ ಈ ಹಿಂದೆ ಅನುಸರಿಸಿದ ಪ್ರಕ್ರಿಯೆಗಳಿಗೆ ಪೂರಕವಾಗಿಯೇ ನಡೆದಂಥವು. ಅಪರಾಧಿಗಳ ಬಿಡುಗಡೆಯ ಈ ಆದೇಶವು ಮುಂದೆ ಕೆಟ್ಟ ನಿದರ್ಶನವಾಗಿ ಉಳಿಯಲಿದೆ ಎಂಬ ಕಳವಳವೂ ವ್ಯಕ್ತವಾಗಿದೆ. ಆದರೆ, ವಾಸ್ತವವಾಗಿ ಇದನ್ನೊಂದು ಒಳ್ಳೆಯ ನಿದರ್ಶನವಾಗಿ ಕಾಣುವ ಅಗತ್ಯ ಹೆಚ್ಚಿದೆ. ಏಕೆಂದರೆ, ಇಲ್ಲಿ ಪರಿಗಣಿಸಿದ ಸುಧಾರಣೆ ಮತ್ತು ಸನ್ನಡತೆ ಎರಡೂ ನ್ಯಾಯವ್ಯವಸ್ಥೆಯ ಉತ್ಕೃಷ್ಟ ಅಳತೆಗೋಲುಗಳೇ ಆಗಿವೆ. ಆದರೆ, ಬಿಡುಗಡೆಯ ಇಂತಹ ನಿದರ್ಶನ ಮುಂದೆ ದುರ್ಬಳಕೆಗೆ ಬಳಕೆಯಾಗಬಾರದು ಎಂಬುದರಲ್ಲಿ ಎರಡು ಮಾತಿಲ್ಲ.

ಪ್ರಕರಣದ ವಿಚಾರಣೆಯಲ್ಲಿ ತನ್ನನ್ನೂ ಒಬ್ಬ ಕಕ್ಷಿದಾರನನ್ನಾಗಿ ಪರಿಗಣಿಸಿಲ್ಲ ಎನ್ನುವ ಕೇಂದ್ರ ಸರ್ಕಾರದ ವಾದದಲ್ಲಿ ಯಾವುದೇ ಹುರುಳಿಲ್ಲ. ಏಕೆಂದರೆ, ತಮಿಳುನಾಡು ಸರ್ಕಾರದಿಂದ ಶಿಫಾರಸು ಬಂದಾಗ ರಾಜ್ಯಪಾಲರು ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಅದನ್ನು ರಾಷ್ಟ್ರಪತಿ ಪರಿಶೀಲನೆಗೆ ಕಳಿಸಿದರು. ಈ ಶಿಫಾರಸಿಗೆ ಸಂಬಂಧಿಸಿದಂತೆ ರಾಷ್ಟ್ರಪತಿ ಸಹ ಯಾವುದೇ ನಿರ್ಧಾರ ಕೈಗೊಳ್ಳದೆ ಸುಮ್ಮನೆ ಕುಳಿತರು. ಈ ಕಾಲಹರಣಕ್ಕೆ ಕೇಂದ್ರ ಸರ್ಕಾರವೇ ಕಾರಣವಾಗಿದ್ದು, ರಾಜ್ಯಪಾಲರ ಧೋರಣೆಯನ್ನು ಕೂಡ ಅದು ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ. ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿಯೇ ಕೋರ್ಟ್‌ ತೀರ್ಪು ನೀಡಿದೆ. ಹೀಗಾಗಿ ತನ್ನನ್ನು ಕಕ್ಷಿದಾರನನ್ನಾಗಿ ಪರಿಗಣಿಸಿಲ್ಲ ಎನ್ನುವ ಕೇಂದ್ರದ ವಾದವು ಅರ್ಥ ಕಳೆದುಕೊಂಡಿದೆ. ‘ಭಯೋತ್ಪಾದನೆಯನ್ನು ಕಾಂಗ್ರೆಸ್‌ ಸಮರ್ಥಿಸುತ್ತಿದೆ’ ಎಂಬ ಟೀಕೆ ಬಿಜೆಪಿಯಿಂದ ಬಂದೀತು ಎನ್ನುವ ಭಯದಿಂದ ಕಾಂಗ್ರೆಸ್‌ನ ಪ್ರತಿಕ್ರಿಯೆ ಬಂದಂತಿದೆ. ಆದರೆ ಕೋರ್ಟ್‌ ಮಾತ್ರ ಮಾನವೀಯ ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು