ಶುಕ್ರವಾರ, ಅಕ್ಟೋಬರ್ 30, 2020
27 °C

ಸಂಪಾದಕೀಯ | ಪ್ರವಾಸೋದ್ಯಮ ನೀತಿ: ಉದ್ಯೋಗದ ಕನಸೇನೋ ಚೆನ್ನಾಗಿದೆ; ಅನುಷ್ಠಾನ?

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಯ ಜತೆಗೆ ಉದ್ಯೋಗ ಸೃಷ್ಟಿಗೂ ಅವಕಾಶ ಮಾಡಿಕೊಡುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ‘ಪ್ರವಾಸೋದ್ಯಮ ನೀತಿ: 2020–25’ ಅನ್ನು ಜಾರಿಗೆ ತಂದಿದೆ. ಹೂಡಿಕೆದಾರರಿಗೆ ಗುತ್ತಿಗೆ ಆಧಾರದಲ್ಲಿ ಜಮೀನು ನೀಡಲು ‘ಪ್ರವಾಸೋದ್ಯಮ ಭೂಬ್ಯಾಂಕ್‌’ ಸ್ಥಾಪನೆ ಮಾಡುವುದಾಗಿ ಆ ನೀತಿಯಲ್ಲಿ ಘೋಷಣೆ ಮಾಡಲಾಗಿದೆ. ಶುಲ್ಕ ವಿನಾಯಿತಿ, ಪ್ರೋತ್ಸಾಹ ಧನದಂತಹ ಸೌಲಭ್ಯಗಳನ್ನು ಸಹ ಧಾರಾಳವಾಗಿ ಪ್ರಕಟಿಸಲಾಗಿದೆ. ಪ್ರವಾಸೋದ್ಯಮಕ್ಕೆ ಎಲ್ಲ ರೀತಿಯ ಉತ್ತೇಜನ ನೀಡುವ ಮೂಲಕ ಹತ್ತು ಲಕ್ಷ ಉದ್ಯೋಗ ಸೃಷ್ಟಿಸುವುದಾಗಿಯೂ ನೀತಿ ಹೇಳುತ್ತದೆ. ಆರ್ಥಿಕ ಸಂಕಷ್ಟದಿಂದ ಎಲ್ಲ ವಲಯಗಳು ನಲುಗಿ, ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತ ಆಗುತ್ತಿರುವ ಈ ಹೊತ್ತಿನಲ್ಲಿ ಹೊಸ ಉದ್ಯೋಗಾವಕಾಶಗಳು ಎಲ್ಲಿ, ಹೇಗೆ ಸೃಷ್ಟಿಯಾದರೂ ಸ್ವಾಗತಾರ್ಹವೇ. ಆದರೆ,
ಇಂತಹ ಘೋಷಣೆಗಳು ಕನ್ನಡಿಯೊಳಗಿನ ಗಂಟಿನಂತೆ ಆಗಬಾರದಷ್ಟೆ. ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಬೆಳೆಸಲು ಅವಕಾಶಗಳು ಹೇರಳವಾಗಿವೆ.

ಹಂಪಿ, ಬಾದಾಮಿ, ಪಟ್ಟದಕಲ್ಲು, ಐಹೊಳೆಯಂಥ ಪಾರಂಪರಿಕ ತಾಣಗಳು ಮಾತ್ರವಲ್ಲದೆ ಸುಮಾರು 300ರಷ್ಟು ಪ್ರವಾಸಿ ತಾಣಗಳು ನಮ್ಮಲ್ಲಿವೆ. ಈ ತಾಣಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಿ, ಅವುಗಳ ಕುರಿತು ಜಾಗತಿಕ ಮಟ್ಟದಲ್ಲಿ ಪ್ರಚಾರದ ವ್ಯವಸ್ಥೆಯನ್ನು ಮಾಡಿದರೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೇಶದಲ್ಲಿ ಮುಂಚೂಣಿ ಸ್ಥಾನಕ್ಕೇರುವ ಶಕ್ತಿ ರಾಜ್ಯಕ್ಕಿದೆ. ಆದರೆ, ಇಲ್ಲಿನ ಶಕ್ತಿ ಹಾಗೂ ಸಾಧ್ಯತೆಗಳು ಆಡಳಿತದ ಹೊಣೆ ಹೊತ್ತವರಿಗೆ ಸರಿಯಾಗಿ ಅರ್ಥವಾದಂತಿಲ್ಲ. ಆದ್ದರಿಂದಲೇ ಸರ್ಕಾರ ಬದಲಾದಂತೆ ನೀತಿಯೂ ಬದಲಾಗಿ, ಪ್ರವಾಸಿ ತಾಣದ ಅಭಿವೃದ್ಧಿ ಯೋಜನೆಗಳೆಲ್ಲ ಹಳ್ಳ ಹಿಡಿಯುತ್ತಿವೆ. 2009ರಲ್ಲೂ ಬಿಜೆಪಿ ನೇತೃತ್ವದ ಸರ್ಕಾರವೇ ಅಸ್ತಿತ್ವದಲ್ಲಿತ್ತು. ಆ ಸರ್ಕಾರ ಸಹ ಪ್ರವಾಸೋದ್ಯಮ ನೀತಿಯನ್ನು ರೂಪಿಸಿ, ಜಾರಿಗೆ ತಂದಿತ್ತು. ಪ್ರವಾಸಿ ತಾಣಗಳಲ್ಲಿ ವಸ್ತುಪ್ರದರ್ಶನ ಕೇಂದ್ರ, ಪ್ರವಾಸಿ ಸೌಲಭ್ಯಗಳ ಸಂಕೀರ್ಣ ಹಾಗೂ ಹೆದ್ದಾರಿಯಲ್ಲಿ ಪ್ರತೀ 150 ಕಿಲೊಮೀಟರ್‌ಗೆ ಒಂದರಂತೆ ಪ್ರವಾಸಿ ಕೇಂದ್ರದ ನಿರ್ಮಾಣದಂತಹ ಕನಸುಗಳನ್ನು ಆಗ ತೇಲಿ ಬಿಡಲಾಗಿತ್ತು. ಆ ನೀತಿ ಜಾರಿಗೆ ಬಂದು ಹತ್ತು ವರ್ಷಗಳ ಮೇಲಾಗಿದ್ದರೂ ಘೋಷಣೆ ಮಾಡಲಾಗಿದ್ದ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿಯೇ ಉಳಿದಿವೆ. ಸರ್ಕಾರದ ಬಹುತೇಕ ನೀತಿಗಳು ಹೇಗೆ ಅನುಷ್ಠಾನಗೊಳ್ಳುತ್ತವೆ ಎನ್ನುವುದಕ್ಕೆ ಇದೊಂದು ಉದಾಹರಣೆ.  

ಪಕ್ಕದ ಕೇರಳದಲ್ಲಿ ಪ್ರವಾಸೋದ್ಯಮ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಿದೆ. ನಮ್ಮಲ್ಲಿ ಇಲ್ಲದ ಅಪರೂಪದ ತಾಣಗಳೇನೂ ಅಲ್ಲಿಲ್ಲ ಎನ್ನುವುದು ಈ ಕ್ಷೇತ್ರದ ತಜ್ಞರೇ ಹೇಳುವ ಮಾತು. ಕೇರಳದಲ್ಲಿ ಇರುವುದಕ್ಕಿಂತ ಉದ್ದವಾದ ಕರಾವಳಿ ತೀರ ನಮ್ಮ ರಾಜ್ಯದಲ್ಲಿ ಇದೆ. ಇಲ್ಲಿ ಇರುವಷ್ಟು ಪಾರಂಪರಿಕ ತಾಣಗಳು ಸಹ ಅಲ್ಲಿಲ್ಲ. ಆದರೆ, ಅಲ್ಲಿನ ಆಡಳಿತವು ಪ್ರವಾಸೋದ್ಯಮವನ್ನು ಬೆಳೆಸುವಲ್ಲಿ ತುಂಬಾ ಬದ್ಧತೆಯಿಂದ ಕೆಲಸ ಮಾಡುತ್ತದೆ. ತನ್ನ ನೀತಿಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ.

ಅಂತಹ ಕಾಳಜಿ ನಮ್ಮಲ್ಲಿ ಕಾಣುವುದಿಲ್ಲ. ಜಗತ್ತಿನ ಪ್ರಮುಖ ನಗರಗಳಲ್ಲಿ ಪ್ರವಾಸೋದ್ಯಮ ಮೇಳಗಳು ಪ್ರತೀವರ್ಷ ನಡೆಯುತ್ತವೆ. ಅಂತರರಾಷ್ಟ್ರೀಯ ಮಟ್ಟದ ಟ್ರಾವೆಲ್ ಏಜೆನ್ಸಿಗಳು, ಮೂಲ ಸೌಕರ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಆಸಕ್ತಿ ಇರುವ ಕಂಪನಿಗಳು ಅಂತಹ ಮೇಳಗಳಲ್ಲಿ ಸೇರುತ್ತವೆ. ಅವುಗಳನ್ನು ಸಂಪರ್ಕಿಸಲು ಸಚಿವರ ನೇತೃತ್ವದಲ್ಲಿ ತಂಡಗಳು ಹೋದರೂ ಆ ಯಾತ್ರೆ ಮೋಜಿನ ಪ್ರವಾಸಕ್ಕೆ ಸೀಮಿತವಾಗಿ ಸರ್ಕಾರ ಖರ್ಚು ಮಾಡಿದ ಉದ್ದೇಶ ಈಡೇರುತ್ತಿಲ್ಲ. ಪಾರಂಪರಿಕ ತಾಣಗಳೇ ಇಲ್ಲದಿದ್ದರೂ ಪ್ರವಾಸೋದ್ಯಮದಲ್ಲಿ ದೈತ್ಯವಾಗಿ ಬೆಳೆದು ನಿಂತ ಸಿಂಗಪುರದಂತಹ ಪುಟ್ಟ ದೇಶಗಳಿಂದ ಈ ವಿಷಯದಲ್ಲಿ ನಾವು ಕಲಿಯುವುದು ಬೇಕಾದಷ್ಟಿದೆ. ಪ್ರವಾಸಿ ತಾಣದಲ್ಲಿ ಮೂಲ ಸೌಕರ್ಯಗಳು ಉತ್ಕೃಷ್ಟವಾಗಿರಬೇಕು. ಇದಕ್ಕೆ ಹಲವು ಇಲಾಖೆಗಳ ಸಹಕಾರವೂ ಬೇಕು. ಅಂತಹ ಸಹಕಾರದ ಕೊರತೆಯೂ ಕಾಡುತ್ತಿದೆ. ಆ ಕೊರತೆಯನ್ನು ನೀಗಿಸಿಕೊಳ್ಳುವ ಕೆಲಸ ಮೊದಲು ಆಗಬೇಕು. ‘ಪ್ರವಾಸೋದ್ಯಮ ಭೂಬ್ಯಾಂಕ್‌’ ಸುತ್ತ ಭೂಮಾಫಿಯಾ ತಲೆ ಎತ್ತದಂತೆಯೂ ನೋಡಿಕೊಳ್ಳಬೇಕು. ಹಾಗೆಯೇ ಪ್ರವಾಸಿ ತಾಣಗಳನ್ನು ಅವುಗಳ ಪರಿಸರಕ್ಕೆ ಯಾವ ರೀತಿಯಲ್ಲೂ ಧಕ್ಕೆಯಾಗದಂತೆ ಅಭಿವೃದ್ಧಿಪಡಿಸಬೇಕು. ಆಗ ರಾಜ್ಯದಲ್ಲಿ ಪ್ರವಾಸೋದ್ಯಮ ಗರಿಗೆದರುತ್ತದೆ. ಪೂರಕವಾಗಿ ಉದ್ಯೋಗ ಸೃಷ್ಟಿಯೂ ಆಗುತ್ತದೆ. ಇಲ್ಲದಿದ್ದರೆ ಇಂತಹ ನೀತಿಯು ಕಾಗದದಲ್ಲಿ ಮಾತ್ರ ಉಳಿಯುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು