ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ‘ರಾಜಕೀಯ ಕೆಲಸ’ಕ್ಕೆ ಐಎಎಸ್‌ ಬಳಕೆ; ಸರ್ಕಾರ ಎಡವಿರುವುದು ಸ್ಪಷ್ಟ

Published 23 ಜುಲೈ 2023, 19:14 IST
Last Updated 23 ಜುಲೈ 2023, 19:14 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಈಚೆಗೆ ನಡೆದ ವಿರೋಧ ಪಕ್ಷಗಳ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ರಾಜಕೀಯ ಪ್ರಮುಖರನ್ನು ಬರಮಾಡಿಕೊಳ್ಳಲು ರಾಜ್ಯ ಸರ್ಕಾರವು ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಿದ ಕ್ರಮವು ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ವಿರೋಧಕ್ಕೆ ಕಾರಣವಾಗಿದೆ.

2024ರ ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಲು ಒಂದು ಮೈತ್ರಿಕೂಟವನ್ನು ರಚಿಸಿಕೊಳ್ಳುವ ಉದ್ದೇಶದಿಂದ ಈ ರಾಜಕೀಯ ಪ್ರಮುಖರು ಬೆಂಗಳೂರಿಗೆ ಬಂದಿದ್ದರು. ಅಧಿಕಾರಿಗಳ ನಿಯೋಜನೆ ವಿಚಾರವಾಗಿ ವಿಧಾನ ಸಭೆಯಲ್ಲಿ ಗದ್ದಲ ಸೃಷ್ಟಿಯಾಗಿತ್ತು. ಗದ್ದಲ ಎಬ್ಬಿಸಿದ ಕಾರಣಕ್ಕಾಗಿ ಬಿಜೆಪಿಯ 10 ಮಂದಿ ಶಾಸಕರನ್ನು ಈ ಬಜೆಟ್ ಅಧಿವೇಶನ ಮುಗಿಯುವವರೆಗೆ ಸ್ಪೀಕರ್ ಯು.ಟಿ. ಖಾದರ್ ಅವರು ಅಮಾನತು ಮಾಡಿದ್ದರು.ರಾಜಕೀಯ ಮುಖಂಡರನ್ನು ಬರಮಾಡಿಕೊಳ್ಳಲು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂಬ ವಿಚಾರವನ್ನು ಮೊದಲು ಪ್ರಸ್ತಾಪಿಸಿದ್ದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ. 29 ಅಧಿಕಾರಿಗಳನ್ನು ಈ ಕೆಲಸಕ್ಕೆ ಬಳಸಿಕೊಳ್ಳುವ ಮೂಲಕ ಸರ್ಕಾರವು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಅವರು ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜಕೀಯ ಪ್ರಮುಖರು ಬಂದಿದ್ದು ಸರ್ಕಾರದ ಯಾವುದೇ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಲ್ಲ; ಅವರು ಬಂದಿದ್ದು ರಾಜಕೀಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿಕ್ಕೆ ಎಂದು ಕುಮಾರಸ್ವಾಮಿ ಹೇಳಿದ್ದರು. ಇಂತಹ ರಾಜಕೀಯ ಸಭೆಗಳು ರಾಜ್ಯದ ಪಾಲಿಗೆ ಹೊಸವಲ್ಲವಾದರೂ, ಈ ಸಭೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ಬರುವ ನಾಯಕರನ್ನು ಪಕ್ಷದ ಪದಾಧಿಕಾರಿಗಳೇ ಸ್ವಾಗತಿಸುತ್ತಾರೆ, ಸರ್ಕಾರದ ಹಿರಿಯ ಅಧಿಕಾರಿಗಳು ಆ ಕೆಲಸ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ನೆನಪಿಸಿದರು.

ಆದರೆ, ಅಧಿಕಾರಿಗಳನ್ನು ನೇಮಕ ಮಾಡಿದ್ದು ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳನ್ನು ಸ್ವಾಗತಿಸುವುದಕ್ಕೆ ಮಾತ್ರ; ಹೀಗೆ ನಿಯೋಜನೆ ಮಾಡಲು ಶಿಷ್ಟಾಚಾರದ ಪ್ರಕಾರ ಅವಕಾಶ ಇದೆ ಎಂದು ರಾಜ್ಯ ಸರ್ಕಾರವು ಹೇಳಿದೆ. ಇಷ್ಟನ್ನು ಹೊರತುಪಡಿಸಿದರೆ, ಈ ಸಭೆಯ ವಿಚಾರದಲ್ಲಿ ಸರ್ಕಾರವು ಯಾವ ಪಾತ್ರವನ್ನೂ ವಹಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥನೆ ನೀಡಿದ್ದಾರೆ. ಆದರೆ ಅವರ ಸಮರ್ಥನೆಯನ್ನು ವಿರೋಧ ಪಕ್ಷಗಳು ಒಪ್ಪಿಲ್ಲ. ಹೆಚ್ಚಿನವರಿಗೆ ಗೊತ್ತೇ ಇಲ್ಲದ, ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿಲ್ಲದ ಹಾಗೂ ಸರ್ಕಾರದ ಕಡೆಯಿಂದ ಸ್ವಾಗತ ಪಡೆಯಲು ಅರ್ಹರಲ್ಲದ ರಾಜಕೀಯ ಪ್ರಮುಖರನ್ನು ಸ್ವಾಗತಿಸಲಿಕ್ಕೂ ಸರ್ಕಾರದ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ಅವು ಆರೋಪಿಸಿವೆ. ರಾಜ್ಯಕ್ಕೆ ಬಂದ ಅತಿಥಿಗಳನ್ನು ಗೌರವದಿಂದ ನಡೆಸಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿರುವ ಸಿದ್ದರಾಮಯ್ಯ ಅವರು, ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ, ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳಲು ಬಂದವರನ್ನು ಕೂಡ ಸರ್ಕಾರದ ಅತಿಥಿಗಳು ಎಂಬಂತೆ ನೋಡಿಕೊಂಡಿತ್ತು ಎಂದು ಹೇಳಿದ್ದಾರೆ.

ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ವ್ಯಕ್ತಿಗಳ ವಿಚಾರದಲ್ಲಿ ಕೆಲವು ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತ್ತದೆ ಎಂಬುದು ನಿಜ. ಇಂತಹ ಹುದ್ದೆಗಳಲ್ಲಿ ಇರುವವರು ಖಾಸಗಿ ಭೇಟಿ ನೀಡುವ ಸಂದರ್ಭದಲ್ಲಿಯೂ ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸರ್ಕಾರಕ್ಕೆ ಯಾವ ರೀತಿಯಲ್ಲಿಯೂ ಸಂಬಂಧಪಡದ, ಯಾವುದೇ ಕ್ಷೇತ್ರದ ಪ್ರಮುಖ ವ್ಯಕ್ತಿ ರಾಜ್ಯಕ್ಕೆ ಭೇಟಿ ನೀಡಿದಾಗ ಅವರನ್ನು ಸರ್ಕಾರದ ಅತಿಥಿ ಎಂದು ಕಾಣಲು ಅವಕಾಶ ಇದೆ. ಅವರು ಸರ್ಕಾರದಲ್ಲಿ ಯಾವುದೇ ಹುದ್ದೆಯನ್ನು ಹೊಂದದೆ ಇದ್ದರೂ, ಅವರನ್ನು ಸರ್ಕಾರದ ವತಿಯಿಂದ ಬರಮಾಡಿಕೊಳ್ಳಲು, ಅವರಿಗೆ ಆತಿಥ್ಯ ನೀಡಲು ಅವಕಾಶ ಇದೆ. ಆದರೆ, ಶುದ್ಧ ರಾಜಕೀಯ ಸಭೆಯೊಂದರಲ್ಲಿ ಭಾಗವಹಿಸಲು ಬಂದ, ಹೆಚ್ಚು ಜನಪ್ರಿಯರಲ್ಲದ ನಾಯಕರನ್ನು ಬರಮಾಡಿಕೊಳ್ಳಲಿಕ್ಕೂ ಐಎಎಸ್‌ ಅಧಿಕಾರಿಗಳನ್ನು ನಿಯೋಜಿಸಿದ್ದು ಒಪ್ಪಬಹುದಾದ ಕೆಲಸ ಅಲ್ಲ. ಈ ಹಿಂದೆ ಬಿಜೆಪಿ ಅಥವಾ ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದಾಗ ಇದೇ ರೀತಿ ಆಗಿದೆ ಎಂಬುದು ಈಗ ಮಾಡಿರುವುದಕ್ಕೆ ಸಮರ್ಥನೆ ಆಗುವುದಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ತಮ್ಮ ಅಧಿಕಾರವನ್ನು ಬಳಸಿ, ಹಿರಿಯ ಐಎಎಸ್‌ ಅಧಿಕಾರಿಗಳನ್ನು ಈ ಕೆಲಸಕ್ಕೆ ನಿಯೋಜನೆ ಮಾಡದಂತೆ ನೋಡಿಕೊಳ್ಳಬಹುದಿತ್ತು. ಅವರನ್ನು ನಿಯೋಜಿಸಿದ್ದುದು ಒಂದು ಬಗೆಯಲ್ಲಿ ‘ರಾಜಕೀಯ ಕೆಲಸ’ಗಳಿಗೆ. ಇಲ್ಲಿ ರಾಜ್ಯ ಸರ್ಕಾರ ತಪ್ಪು ಮಾಡಿರುವುದು ಸ್ಪಷ್ಟ.

ಅಧಿಕಾರಿಗಳನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುವುದು ಪುನರಾವರ್ತನೆ ಆಗದಂತೆ ಸರ್ಕಾರ ಎಚ್ಚರ ವಹಿಸಬೇಕು. ಐಎಎಸ್‌ ಅಧಿಕಾರಿಗಳು ಮಾಡುವುದಕ್ಕೆ, ಬೇರೆ ಬೇರೆ ಪಕ್ಷಗಳ ಮುಖಂಡರು ಬರುವುದನ್ನು ಕಾಯುತ್ತ ಇರುವುದಕ್ಕಿಂತ ಹೆಚ್ಚು ಪ್ರಮುಖವಾದ ಇತರ ಕೆಲಸಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT