ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪ್ರಜಾತಂತ್ರದ ಮೌಲ್ಯವೇ ಹರಾಜಿಗೆ, ಚುನಾವಣೆ ಆಯೋಗ ದಂಡ ಬೀಸಲಿ

Last Updated 8 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಮಾರುಕಟ್ಟೆಯಲ್ಲಿ ತರಕಾರಿ ಮೂಟೆಗಳನ್ನು ಹರಾಜಿಗೆ ಹಾಕಿದಂತೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳನ್ನೂ ಹರಾಜಿಗೆ ಹಾಕುವಂತಹ ನಾಚಿಕೆಗೇಡಿನ ವಿದ್ಯಮಾನ ಹಲವು ಗ್ರಾಮಗಳಲ್ಲಿ ನಡೆಯುತ್ತಿರುವ ಕುರಿತು ವರದಿಯಾಗಿದೆ. ಚುನಾವಣಾ ಪ್ರಕ್ರಿಯೆಯನ್ನೇ ಅಣಕಿಸುವ ಈ ಕೃತ್ಯ, ಪ್ರಜಾಪ್ರಭುತ್ವದ ಕತ್ತು ಹಿಸುಕುವ ಪ್ರಯತ್ನವಲ್ಲದೆ ಬೇರೇನಲ್ಲ. ಚುನಾವಣೆಯೇ ನಡೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವಾದರೂ ಎಲ್ಲಿದೆ? ‘ಅವಿರೋಧ ಆಯ್ಕೆ’ಯ ಹೆಸರಿನಲ್ಲಿ ನಡೆಯುವ ಈ ಹರಾಜು ಪ್ರಕ್ರಿಯೆಯು ಪ್ರಜಾತಂತ್ರದ ಮೂಲ ಆಶಯಕ್ಕೇ ಕೊಡಲಿ ಪೆಟ್ಟನ್ನು ಹಾಕುತ್ತದೆ. ಅಧಿಕಾರ ವಿಕೇಂದ್ರೀಕರಣದ ಮೊದಲ ಮೆಟ್ಟಿಲು ಎಂಬ ಹಿರಿಮೆಗೆ ಒಳಗಾದ ಗ್ರಾಮ ಪಂಚಾಯಿತಿಗಳ ಸದಸ್ಯತ್ವವು ಹೀಗೆ ಬಿಕರಿ ಆಗುತ್ತಿರುವುದು ಅಧಿಕಾರ ಕೇಂದ್ರೀಕರಣದ ದ್ಯೋತಕ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾರು ಬೇಕಾದರೂ ಸ್ಪರ್ಧಿಸುವ ಅವಕಾಶವನ್ನು ಪಂಚಾಯತ್‌ ರಾಜ್‌ ವ್ಯವಸ್ಥೆ ಮಾಡಿಕೊಟ್ಟಿದೆ. ಇಲ್ಲಿ ಲಿಂಗ, ಜಾತಿ, ಧರ್ಮ, ಬಡವ ಅಥವಾ ಶ್ರೀಮಂತ ಎನ್ನುವ ಭೇದಭಾವದ ಪ್ರಶ್ನೆಯೇ ಬರುವುದಿಲ್ಲ. ಆದರೆ, ಸದಸ್ಯ ಸ್ಥಾನದ ಹರಾಜು ಪ್ರಕ್ರಿಯೆಯು ಹಣವಿದ್ದವರಿಗೆ ಮಾತ್ರ ಆ ಸ್ಥಾನ ಎನ್ನುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸಬೇಕೆನ್ನುವ ಬಡ ನಾಗರಿಕನ ಹಕ್ಕನ್ನೂ ಯಾರು ತನ್ನ ಪ್ರತಿನಿಧಿ ಆಗಿರಬೇಕು ಎನ್ನುವುದನ್ನು ಆಯ್ಕೆ ಮಾಡುವ ಸಮುದಾಯದ ಹಕ್ಕನ್ನೂ ಇದು ಕಸಿಯುತ್ತದೆ. ಇಂತಹ ಹರಾಜು ಪದ್ಧತಿಗೆ ಒಪ್ಪಿಗೆ ಇಲ್ಲದೆ ನಾಮಪತ್ರ ಸಲ್ಲಿಸಲು ಮುಂದಾಗುವವರಿಗೆ ಸಾಮಾಜಿಕ ಬಹಿಷ್ಕಾರದ ಬೆದರಿಕೆಯನ್ನು ಒಡ್ಡಲಾಗುತ್ತಿದೆ. ಪಕ್ಷ ರಾಜಕೀಯದಿಂದ ಅತೀತವಾದ ಈ ಚುನಾವಣೆಯಲ್ಲೂ ರಾಜಕೀಯ ಪಕ್ಷಗಳು ಸಕ್ರಿಯವಾಗಿರುವುದು, ಗ್ರಾಮಮಟ್ಟದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಸದೃಢಗೊಳಿಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸಬೇಕಾದ ಅಧಿಕಾರಿಗಳೇ ಅದನ್ನು ಅಳ್ಳಕಗೊಳಿಸಲು ಹೊರಟಿರುವುದು ಕೂಡ ಕಳವಳಕಾರಿ. ಅದರಲ್ಲೂ ತಹಶೀಲ್ದಾರರೊಬ್ಬರು ತಮ್ಮ ಪತ್ನಿಗಾಗಿ ಹರಾಜಿನಲ್ಲಿ ₹ 25 ಲಕ್ಷಕ್ಕೆ ಸದಸ್ಯತ್ವವನ್ನು ಖರೀದಿಸಲು ಮುಂದಾಗಿದ್ದರು ಎಂದು ವರದಿಯಾಗಿದೆ. ಇದು, ಲಜ್ಜೆಗೇಡಿತನದ ಸಂಗತಿ.

ಹಾಗೆ ನೋಡಿದರೆ, ರಾಜ್ಯ ಸರ್ಕಾರಕ್ಕೆ ಈಗ ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಡೆಸುವ ಮನಸ್ಸೇ ಇರಲಿಲ್ಲ. ಕೋವಿಡ್‌–19 ಕಾರಣದಿಂದ ಚುನಾವಣೆ ನಡೆಸುವುದು ಸಾಧ್ಯವಿಲ್ಲ ಎನ್ನುವುದು ಅದರ ನಿಲುವಾಗಿತ್ತು. ಹೈಕೋರ್ಟ್‌ನ ಮಧ್ಯಪ್ರವೇಶದಿಂದಾಗಿ ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿದಾಗ ಗ್ರಾಮಗಳಲ್ಲಿ ಪ್ರಜಾತಂತ್ರ ಹಬ್ಬ ಗರಿಗೆದರಿತು. ಆದರೆ, ರಾಜ್ಯದ ಹಲವೆಡೆ ನಡೆದಿರುವ ಸದಸ್ಯ ಸ್ಥಾನದ ಹರಾಜು ಪ್ರಯತ್ನವು ಜನತಂತ್ರದ ಆಶಯಕ್ಕೆ ಮಸಿ ಬಳಿಯುವಂತಹುದು. ಗ್ರಾಮ ಪಂಚಾಯಿತಿಗಳ ಆಡಳಿತವನ್ನು ದುರ್ಬಲಗೊಳಿಸುವ ಹುನ್ನಾರವಿದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ದೊಡ್ಡ ಮೊತ್ತದ ಅನುದಾನ ಹರಿದು ಬರುತ್ತದೆ. ಯೋಜನೆ, ಬಜೆಟ್‌ ಮತ್ತಿತರ ವಿಷಯಗಳಲ್ಲಿ ಗ್ರಾಮಸಭೆಗಳು ತೀರ್ಮಾನ ತೆಗೆದುಕೊಂಡರೆ, ಅಂತಹ ನಿರ್ಣಯಗಳನ್ನು ಅನುಷ್ಠಾನಗೊಳಿಸುವ ಹೊಣೆ ಚುನಾಯಿತ ಸದಸ್ಯರದ್ದಾಗಿದೆ. ಈಗಾಗಲೇ ಗ್ರಾಮಸಭೆಗಳನ್ನು ‘ನಾಮಕಾವಾಸ್ತೆ’ ಮಾಡಿರುವ ರಾಜಕಾರಣಿಗಳು, ಗ್ರಾಮಗಳ ಮೇಲೆ ಪರೋಕ್ಷ ಹಿಡಿತ ಸಾಧಿಸಲು ಸದಸ್ಯತ್ವವನ್ನು ದುಡ್ಡು ಕೊಟ್ಟು ತಮ್ಮ ಹಿಂಬಾಲಕರಿಗಾಗಿ ಖರೀದಿಸುತ್ತಿದ್ದಾರೆ ಎಂಬ ದೂರು ಇದೆ. ಆ ದೂರು ನಿಜವಾಗಿದ್ದರೆ ರಾಜಕಾರಣಿಗಳ ಇಂತಹ ನಡೆ ಅಕ್ಷಮ್ಯ. ಹೀಗೆ ‘ಬಂಡವಾಳ’ ಹೂಡಿದವರು ಆ ಹೂಡಿಕೆಯಿಂದ ಲಾಭ ಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲವೇ? ಭ್ರಷ್ಟಾಚಾರದ ದಾರಿ ತೆರೆದುಕೊಳ್ಳುವುದೇ ಹೀಗೆ. ಪ್ರಜಾತಂತ್ರ ವ್ಯವಸ್ಥೆ ಮೇಲೆ ರಾಜ್ಯ ಸರ್ಕಾರಕ್ಕೆ ಸ್ವಲ್ಪವಾದರೂ ನಂಬಿಕೆಯಿದ್ದರೆ ಸದಸ್ಯತ್ವವನ್ನು ಹರಾಜಿಗಿಡುವ ಪ್ರಯತ್ನಗಳಿಗೆ ತಡೆಹಾಕಲು ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಸದಸ್ಯತ್ವವನ್ನು ಹರಾಜಿನಲ್ಲಿ ಖರೀದಿಸಿರುವುದು ಸಾಬೀತಾದರೆ ಅಂಥವರ ಸದಸ್ಯತ್ವವನ್ನು ಚುನಾವಣಾ ಆಯೋಗವು ಅನೂರ್ಜಿತಗೊಳಿಸಬೇಕು. ನ್ಯಾಯಸಮ್ಮತವಾಗಿ ಚುನಾವಣೆ ನಡೆಯುವಂತೆ ನೋಡಿಕೊಳ್ಳುವ ಹೊಣೆ ಸರ್ಕಾರ ಹಾಗೂ ಚುನಾವಣಾ ಆಯೋಗ ಎರಡರ ಮೇಲೂ ಇದೆ. ಹಾಗೆಯೇ ಪಕ್ಷ ರಾಜಕೀಯದ ರಾಡಿ ಈ ಚುನಾವಣೆಯಲ್ಲಿ ಹರಿಯದಂತೆ ಎಚ್ಚರ ವಹಿಸುವ ಜವಾಬ್ದಾರಿ ಎಲ್ಲ ರಾಜಕೀಯ ಪಕ್ಷಗಳ ಮೇಲಿದೆ. ಇಂತಹ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವವರನ್ನು ಪ್ರಜಾಪ್ರಭುತ್ವದ ಕತ್ತು ಹಿಸುಕುವವರು ಎಂದೇ ಅರ್ಥೈಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT