ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಬೆಂಗಳೂರಿನಲ್ಲಿ ನೀರಿನ ಬವಣೆ ಉಲ್ಬಣಿಸದಂತೆ ನೋಡಿಕೊಳ್ಳಿ

Published 25 ಏಪ್ರಿಲ್ 2023, 1:00 IST
Last Updated 25 ಏಪ್ರಿಲ್ 2023, 1:00 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಆಗಾಗ ಮಹಾಪೂರ ಉಂಟಾಗುವಷ್ಟು ಮಳೆ ಬಂದರೂ ಕುಡಿಯುವ ನೀರಿನ ಕೊರತೆ ಯನ್ನೂ ಈ ನಗರ ಎದುರಿಸಬೇಕಾದುದು ಒಂದು ವೈರುಧ್ಯ. ಈ ಬಾರಿಯ ಬೇಸಿಗೆ ಹಿಂದೆಂದಿಗಿಂತಲೂ ಪ್ರಖರವಾಗಿದ್ದು, ಅಕ್ಷರಶಃ ಬೆಂಕಿಯನ್ನೇ ಸುರಿಯುತ್ತಿದೆ. ಸಹಜವಾಗಿಯೇ ಈ ದಿನಗಳಲ್ಲಿ ನೀರಿನ ದಾಹ ಹೆಚ್ಚಾಗಿದೆ. ಆದರೆ, ಬೇಸಿಗೆಯಲ್ಲಿ ಸೃಷ್ಟಿಯಾಗುವ ನೀರಿನ ಬೇಡಿಕೆಗೆ ತಕ್ಕಂತೆ ಮೊದಲೇ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕಿದ್ದ ಜಲಮಂಡಳಿಯು ಅದನ್ನು ಸಮರ್ಪಕವಾಗಿ ಮಾಡಿಕೊಂಡಂತಿಲ್ಲ. ಹೀಗಾಗಿ ನಗರದ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗಿದೆ. ನೂರು ಕಿ.ಮೀ.ಗಿಂತಲೂ ಹೆಚ್ಚು ದೂರದ ಕಾವೇರಿ ನದಿಯಿಂದ ಪಂಪ್‌ ಮಾಡಿ ತರುವ ನೀರನ್ನೇ ಬೆಂಗಳೂರು ಬಹುವಾಗಿ ಆಶ್ರಯಿಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಸಲ ಕಡಿಮೆ ಮಳೆಯಾಗಿದ್ದು, ನೀರಿನ ಹರಿವು ಸಹ ಕಡಿಮೆ ಇದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ನೀರಿನ ಬಳಕೆ ಶೇ 5ರಷ್ಟು ಹೆಚ್ಚಾಗುತ್ತದೆ. ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಜಲಮಂಡಳಿಯೇನೋ ಹೇಳುತ್ತಿದೆ. ಹೀಗಿದ್ದೂ ನೀರು ಪೂರೈಕೆ ವ್ಯತ್ಯಯವಾಗಿದೆ ಎಂದರೆ ನಿರ್ವಹಣೆಯ ವೈಫಲ್ಯವೇ ಇದಕ್ಕೆ ಕಾರಣ ಎಂದು ಅರ್ಥೈಸಬೇಕಾಗುತ್ತದೆ. ಬೆಂಗಳೂರಿನ ಪೂರ್ವ ಭಾಗದ ಒಎಂಬಿಆರ್‌ ಬಡಾವಣೆಯಲ್ಲಿ ಒಂದು ವಾರ ನೀರು ಪೂರೈಕೆಯಾಗಿಲ್ಲ ಎಂದು ವರದಿಯಾಗಿದೆ. ಮುಖ್ಯ ಜಲ ಸಂಗ್ರಹಾಗಾರದಿಂದ ನೀರು ಪೂರೈಕೆ ಆಗದಿರುವುದು, ವಿದ್ಯುತ್‌ ಸರಬರಾಜಿನಲ್ಲಿ ಪದೇ ಪದೇ ಅಡಚಣೆ ಆಗುತ್ತಿರುವುದು ಮತ್ತು ಪಂಪ್‌ ಮಾಡುವ ಮೋಟಾರ್‌ ದುರಸ್ತಿ ಮಾಡಬೇಕಾದುದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲು ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾರಣಗಳು ಏನೇ ಇರಲಿ, ವಾರಗಟ್ಟಲೆ ನೀರು ಪೂರೈಕೆ ಆಗದಿರುವುದಂತೂ ಸಮರ್ಥನೀಯವಲ್ಲ. ಸಮಸ್ಯೆಗಳ ಕುರಿತು ಹೇಳಿ ಕೊಂಡರೆ ಜಲಮಂಡಳಿಯಿಂದ ಸೂಕ್ತ ಸ್ಪಂದನ ಸಿಗುತ್ತಿಲ್ಲವೆಂದೂ ನಾಗರಿಕರು ದೂರಿದ್ದಾರೆ. ಟ್ಯಾಂಕ್‌ ಮೂಲಕ ನೀರು ಪೂರೈಸುವವರ ಜತೆ ಅನೈತಿಕ ಮೈತ್ರಿ ಹೊಂದಿರುವ ಮಂಡಳಿಯ ಕೆಲವು ಅಧಿಕಾರಿಗಳು ಕೃತಕವಾಗಿ ನೀರಿನ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ದಶಕಗಳ ಅವಧಿಯಲ್ಲಿ ಬೆಂಗಳೂರಿನ ನೀರಿನ ಬೇಡಿಕೆಗೂ ಪೂರೈಕೆಗೂ ಕಂದರ ಸೃಷ್ಟಿಯಾಗುತ್ತಾ ಬಂದಿರುವುದು ಎದ್ದು ಕಾಣುವ ಅಂಶ. ಸೋರಿಕೆ, ಅಪವ್ಯಯ ಮತ್ತು ಅಕ್ರಮ ಸಂಪರ್ಕಗಳು ಸಮಸ್ಯೆಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿವೆ. ನಗರದಲ್ಲಿ ಒಂದಾಗಿ ಹೋಗಿರುವ ಹಳ್ಳಿಗಳಿಗೆ ಒಂದೊಮ್ಮೆ ನೀರು ಪೂರೈಸುತ್ತಿದ್ದ ಜಲಮೂಲಗಳೆಲ್ಲ ಈಗ ಜೀವ ಕಳೆದುಕೊಂಡಿವೆ. ಮಳೆ ನೀರಿನ ಸಂಗ್ರಹದ ಕಡೆಗೆ ಏಕೋ ಸರ್ಕಾರ, ಸಮುದಾಯ ಎರಡಕ್ಕೂ ನಿರ್ಲಕ್ಷ್ಯ. ಕಾವೇರಿ ನೀರಿನ ಅಪವ್ಯಯವನ್ನು ತಪ್ಪಿಸಬೇಕು, ಶೌಚಾಲಯಗಳು, ಉದ್ಯಾನಗಳಲ್ಲಿ ಮಾತ್ರವಲ್ಲದೆ ವಾಹನಗಳನ್ನು ತೊಳೆಯಲು ಸಹ ಸಂಸ್ಕರಿಸಿದ ನೀರನ್ನೇ ಬಳಕೆ ಮಾಡಬೇಕು ಎಂದು ಜಲಮಂಡಳಿಯು ನಾಗರಿಕರಿಗೆ ಸಲಹೆ ನೀಡುತ್ತಲೇ ಬಂದಿದೆ. ಆದರೆ, ನಿತ್ಯ 144 ಕೋಟಿ ಲೀಟರ್‌ಗಳಷ್ಟು ತ್ಯಾಜ್ಯ ನೀರು ಉತ್ಪಾದನೆಯಾದರೆ 42.75 ಕೋಟಿ ಲೀಟರ್‌ ನೀರನ್ನು ಮಾತ್ರ ಸಂಸ್ಕರಿಸಿ ಮರುಬಳಕೆ ಮಾಡಲಾಗುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಚಿಸಿದ್ದ ಕೇಂದ್ರ ಮೇಲ್ವಿಚಾರಣಾ ಸಮಿತಿಯ ವರದಿಯಲ್ಲಿ ಹೇಳಲಾಗಿದೆ. ಸಂಸ್ಕರಿಸಿದ ನೀರಿನ ಬಳಕೆಗೆ ಜನ ಸಿದ್ಧವಿದ್ದರೂ ಪೂರೈಕೆ ಇಲ್ಲವಾಗಿದೆ. ಬೆಂಗಳೂರಿನಲ್ಲಿ ಸೇರ್ಪಡೆಯಾಗಿರುವ 110 ಹಳ್ಳಿಗಳ ಸ್ಥಿತಿಯಂತೂ ಇನ್ನೂ ಚಿಂತಾಜನಕವಾಗಿದೆ. ಈ ಪ್ರದೇಶಗಳ ಜನ, ಕೊಳವೆಬಾವಿ ಹಾಗೂ ಟ್ಯಾಂಕರ್‌ ಮೂಲಕ ಪೂರೈಕೆಯಾಗುತ್ತಿರುವ ನೀರನ್ನೇ ಹೆಚ್ಚಾಗಿ ಅವಲಂಬಿಸಬೇಕಾಗಿದೆ.

ಮಳೆ ನೀರು ಸಂಗ್ರಹದ ಪರಿಪಾಟ ನಗರದಾದ್ಯಂತ ಹೆಚ್ಚಿದರೆ ಮತ್ತು ಕೆರೆಗಳನ್ನು ಪುನರುಜ್ಜೀವನಗೊಳಿಸಿ ಶುದ್ಧ ನೀರು ಅಲ್ಲಿ ಸಂಗ್ರಹವಾಗುವಂತೆ ಮಾಡಿದರೆ ನೀರಿನ ವಿಷಯದಲ್ಲಿ ಬೆಂಗಳೂರು ಸ್ವಾವಲಂಬಿಯಾಗಬಹುದು ಎಂಬ ಸಲಹೆ ಪದೇ ಪದೇ  ಕೇಳಿಬಂದಿದೆ. ಒಂದೊಮ್ಮೆ ಸಾವಿರಕ್ಕೂ ಅಧಿಕ ಕೆರೆಗಳಿದ್ದ ನಗರದಲ್ಲಿ ಈಗ ಕೇವಲ 200 ಕೆರೆಗಳು ಉಳಿದಿರುವುದು ಮತ್ತು ಅವುಗಳು ಕೂಡ ಮಾಲಿನ್ಯದ ಆಗರವಾಗಿರುವುದು ಕಳವಳಕಾರಿ. ನಗರದ ಬೇಡಿಕೆಯ ಶೇ 70ರಷ್ಟು ಪ್ರಮಾಣದ ನೀರನ್ನು ಮಳೆ ನೀರಿನ ಸಂಗ್ರಹದಿಂದಲೇ ಪಡೆಯಬಹುದು ಎನ್ನುವುದು ತಜ್ಞರ ಲೆಕ್ಕಾಚಾರ. ಅದಕ್ಕೆ ತಕ್ಕ ಪ್ರಯತ್ನಗಳು ಕಾಣುತ್ತಿಲ್ಲ. ಮಳೆ ನೀರು ಸಂಗ್ರಹಕ್ಕೆ ಜಲಮಂಡಳಿಯು ನಿಯಮ ಮಾಡಿ ಸುಮ್ಮನೆ ಕುಳಿತರೆ ಏನೂ ಪ್ರಯೋಜನವಿಲ್ಲ. ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಅದು ಮಾಡಬೇಕು. ಅಲ್ಲದೆ, ಇಂತಹ ಕೆಲಸಗಳೆಲ್ಲ ದೀರ್ಘಾವಧಿಯಲ್ಲಿ ಪರಿಹಾರ ಒದಗಿಸಬಲ್ಲಂಥವು. ತಕ್ಷಣಕ್ಕೆ ಮಾಡಬೇಕಾದ ಕೆಲಸವೆಂದರೆ ನಗರದ ಪ್ರತಿಯೊಂದು ಮನೆಗೂ ಸಮರ್ಪಕವಾಗಿ ನೀರು ಪೂರೈಸುವುದು. ತನ್ನ ಹೊಣೆಗಾರಿಕೆಯನ್ನು ನಿರ್ವಹಣೆ ಮಾಡುವಲ್ಲಿ ವಿಫಲವಾಗಿರುವುದಕ್ಕೆ ಕುಂಟು ನೆಪವನ್ನು ಮುಂದೆಮಾಡಿ ಕಾಲಹರಣ ಮಾಡಲು ಅವಕಾಶವಿಲ್ಲ. ನೀರಿನ ಕೊರತೆಯನ್ನು ನೀಗಿಸುವುದಕ್ಕಿಂತ ಬೇರೆ ಯಾವ ಮಹತ್ವದ ಕೆಲಸವೂ ಅದಕ್ಕಿಲ್ಲ. ಜಲಮಂಡಳಿ ಎಚ್ಚೆತ್ತುಕೊಳ್ಳಲು ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT