ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಸ್ನೇಹಿ ಶ್ರೇಯಾಂಕದಲ್ಲಿ ಬಡ್ತಿ: ವಿಶ್ವಬ್ಯಾಂಕ್‌ ವರದಿ ಸ್ಫೂರ್ತಿದಾಯಕ

‘ಉದ್ದಿಮೆಸ್ನೇಹಿ’ ಉಪಕ್ರಮಗಳ ಮಾನದಂಡದಲ್ಲಿ ಭಾರತ ಬಡ್ತಿ ಪಡೆದಿರುವುದು, ಆರ್ಥಿಕತೆಯ ಪಾಲಿಗೆ ಸಿಹಿಸುದ್ದಿ
Last Updated 26 ಅಕ್ಟೋಬರ್ 2019, 2:53 IST
ಅಕ್ಷರ ಗಾತ್ರ

ವಿಶ್ವಬ್ಯಾಂಕ್‌ ‍ಪ್ರಕಟಿಸಿರುವ ಉದ್ಯಮಸ್ನೇಹಿ ಉಪಕ್ರಮಗಳ ಜಾಗತಿಕ ಶ್ರೇಯಾಂಕದಲ್ಲಿ ಭಾರತ 63ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ದೇಶಿ ಅರ್ಥವ್ಯವಸ್ಥೆಯ ಪ್ರಗತಿ ದರ ಕುಸಿದಿರುವ ಈ ಸಂದರ್ಭದಲ್ಲಿ ಇದೊಂದು ಸ್ಫೂರ್ತಿದಾಯಕ ಬೆಳ್ಳಿಕಿರಣವಾಗಿದೆ. ಸತತ ಮೂರನೇ ವರ್ಷವೂ ಸುಧಾರಣೆ ದಾಖಲಿಸಿದ ಮುಂಚೂಣಿ 10 ದೇಶಗಳ ಸಾಲಿನಲ್ಲಿ ಭಾರತ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಆರ್ಥಿಕತೆಯನ್ನು ಹಲವಾರು ಸಂಕೋಲೆಗಳಿಂದ ಮುಕ್ತಗೊಳಿಸುವ ಕೇಂದ್ರ ಸರ್ಕಾರದ ದೃಢ ಪ್ರಯತ್ನಗಳಿಗೆ ಸಿಕ್ಕಿರುವ ಪ್ರತಿಫಲವೂ ಇದಾಗಿದೆ. ಭಾರತ ಈಗ, ಐರೋಪ್ಯ ದೇಶಗಳ ಸಾಲಿಗೆ ಸೇರ್ಪಡೆಯಾಗಿರುವುದು ಚೇತೋಹಾರಿ ವಿದ್ಯಮಾನ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಅವಧಿಯಲ್ಲಿ ಕೈಗೊಂಡಿದ್ದ ಸುಧಾರಣಾ ಕ್ರಮಗಳು ಈಗ ಫಲ ನೀಡುತ್ತಿವೆ. ಐದು ವರ್ಷಗಳಲ್ಲಿ (2014ರಿಂದ 2019) ಭಾರತವು 142ನೇ ಸ್ಥಾನದಿಂದ 63ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಿ ಆರ್ಥಿಕತೆಯ ಅತಿದೊಡ್ಡ ಸಾಧನೆ ಇದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚಿನ ವರ್ಷಗಳಲ್ಲಿ ಸರಣಿ
ಯೋಪಾದಿಯಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಂಡಿವೆ. ಇದರಿಂದ, ಭಾರತದ ಶ್ರೇಯಾಂಕದಲ್ಲಿ ಇನ್ನಷ್ಟು ಸುಧಾರಣೆ ಸಾಧ್ಯವಾಗಲಿದೆ. ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಲು, ಹೊಸ ಉದ್ದಿಮೆ ವಹಿವಾಟು ಆರಂಭಿಸುವ ಅವಕಾಶ ಹೆಚ್ಚಿಸಲು, ಉದ್ಯೋಗ ಸೃಷ್ಟಿಗೆ ವೇಗೋತ್ಕರ್ಷ ನೀಡಲು ಇದು ಉತ್ತೇಜನ ನೀಡಲಿದೆ. ಇದೇ ವೇಗದಲ್ಲಿ ಮುನ್ನಡೆದರೆ ಮುಂಚೂಣಿ 50 ದೇಶಗಳ ಸಾಲಿನಲ್ಲಿ ಭಾರತ ಸೇರ್ಪಡೆಯಾಗುವ ದಿನಗಳು ದೂರವಿಲ್ಲ.

ಭಾರತದ ಶ್ರೇಯಾಂಕದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿರುವುದಕ್ಕೆ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆಯನ್ನು (ಐಬಿಸಿ) ಯಶಸ್ವಿಯಾಗಿ ಜಾರಿಗೊಳಿಸಿದ್ದೇ ಮುಖ್ಯ ಕಾರಣ. ಸಾಲ ವಸೂಲಾತಿ ಪ್ರಮಾಣವು ಶೇ 26.5ರಿಂದ ಶೇ 71.6ಕ್ಕೆ ಹೆಚ್ಚಿದೆ. ವಿಶ್ವ ವ್ಯಾಪಾರ ಸಂಘಟನೆಯಲ್ಲಿ (ಡಬ್ಲ್ಯುಟಿಒ) ವ್ಯಾಪಾರ ಸೌಲಭ್ಯ ಒಪ್ಪಂದಕ್ಕೆ ಭಾರತ ಸಹಿ ಹಾಕಿರುವುದೂ ಈಗ ಫಲ ನೀಡುತ್ತಿದೆ. ಉದ್ದಿಮೆ– ವಹಿವಾಟು ಆರಂಭಿಸಲು ವಿವಿಧ ನಿಯಮಗಳನ್ನು ಸಡಿಲಗೊಳಿಸುವ, ವಿಳಂಬದ ಕೆಂಪುಪಟ್ಟಿ ನಿವಾರಿಸುವ, ವಿವಿಧ ಬಗೆಯ ಅನುಮತಿ
ಗಳನ್ನು ಸುಲಭವಾಗಿ ನೀಡುವ ಉದ್ಯಮಸ್ನೇಹಿ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಜಾರಿಗೆ ತರಬೇಕಾದ ಅಗತ್ಯ ಈಗಲೂ ಇದೆ. ಶ್ರೇಯಾಂಕದ ಸಮಗ್ರ ಚಿತ್ರಣ ಪಡೆದುಕೊಳ್ಳಲು ಮುಂದಿನ ವರ್ಷದಿಂದ ಬೆಂಗಳೂರು ಮತ್ತು ಕೋಲ್ಕತ್ತ ಮಹಾನಗರಗಳನ್ನೂ ಪರಿಗಣಿಸಲು ವಿಶ್ವಬ್ಯಾಂಕ್‌ ನಿರ್ಧರಿಸಿದೆ. ಹೀಗಾಗಿ, ಕರ್ನಾಟಕ ಸರ್ಕಾರದ ಜವಾಬ್ದಾರಿಯೂ ಹೆಚ್ಚಲಿದೆ. ಜಾಗತಿಕ ಶ್ರೇಯಾಂಕದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದರೂ, ಭಾರತ ತನ್ನ ಪ್ರತಿಸ್ಪರ್ಧಿಗಳಿಗಿಂತ ತುಂಬಾ ಹಿಂದೆ ಇದೆ. ಹೊಸ ಉದ್ದಿಮೆ ಆರಂಭ, ಒಪ್ಪಂದಗಳ ಜಾರಿ ಮತ್ತು ಆಸ್ತಿ ನೋಂದಣಿ ಮಾನದಂಡಗಳಲ್ಲಿ ಭಾರತದ ಸಾಧನೆ ಕಳಪೆಯಾಗಿದೆ. ಈ ಕೊರತೆ ನಿವಾರಿಸಿ ಮೈಕೊಡವಿ ಎದ್ದುನಿಲ್ಲಬೇಕಾಗಿದೆ. ದಿಟ್ಟ ಸ್ವರೂಪದ ಹೊಸ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ದೃಢ ಸಂಕಲ್ಪ ಮಾಡುವ ಅನಿವಾರ್ಯ ಇದೆ. ಕೇಂದ್ರದ ಜತೆ ರಾಜ್ಯ ಸರ್ಕಾರಗಳೂ ಕೈಜೋಡಿಸಬೇಕಾಗಿದೆ. ಕಟ್ಟಡ ನಿರ್ಮಾಣ ಅನುಮತಿ, ಭೂಸ್ವಾಧೀನ, ವಿದ್ಯುತ್‌ ಸಂಪರ್ಕ ಮತ್ತಿತರ ವಿಷಯಗಳಲ್ಲಿ ರಾಜ್ಯ ಸರ್ಕಾರಗಳು ಹೆಚ್ಚು ಹೊಣೆಗಾರಿಕೆಯಿಂದ ವರ್ತಿಸಬೇಕಾಗಿದೆ. ಉದ್ದಿಮೆಗಳಿಗೆ ಅನ್ವಯಿಸುವ ನಿಬಂಧನೆಗಳು ಸಡಿಲಗೊಂಡು ಹೆಚ್ಚು ಮುಕ್ತವಾದಷ್ಟೂ ಶ್ರೇಯಾಂಕದಲ್ಲಿ ಬಡ್ತಿ ಪಡೆಯುವುದೂ ಸುಲಲಿತವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT