ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಆರ್‌ಸಿಬಿಗೆ ಒಲಿದ ಕಪ್‌: ಮಹಿಳಾ ಕ್ರಿಕೆಟ್‌ಗೆ ಹೊಸ ಮೆರುಗು

Published 18 ಮಾರ್ಚ್ 2024, 23:30 IST
Last Updated 18 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಸ್ಮೃತಿ ಮಂದಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ಷಾಂತರ ಅಭಿಮಾನಿಗಳು ಸಂತಸದ ಹೊಳೆಯಲ್ಲಿ ಮಿಂದೇಳುವಂತಹ ಸಾಧನೆ ಮಾಡಿದೆ. ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಕಪ್ ಗೆದ್ದು ಅಮೋಘ ಸಾಧನೆ ಮಾಡಿದೆ. 16 ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪುರುಷರ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಮಾಡಲಾಗದ್ದನ್ನು ಮಹಿಳಾ ತಂಡ ಮಾಡಿ ತೋರಿಸಿದೆ. ಪುರುಷರ ಕ್ರಿಕೆಟ್‌ ವೈಭವಕ್ಕೆ ಸರಿಸಾಟಿಯಾಗಿ ಬೆಳೆಯುವ ವನಿತೆಯರ ಛಲದ ಹೋರಾಟಕ್ಕೆ ಈ ಗೆಲುವು ನೂರಾನೆ ಬಲ ತುಂಬುವುದರಲ್ಲಿ ಅನುಮಾನವಿಲ್ಲ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಸ್ಮೃತಿ ಮಂದಾನ ದಿಟ್ಟ ನಾಯಕತ್ವ, ಆಸ್ಟ್ರೇಲಿಯಾದ ಸೋಫಿ ಮಾಲಿನೆ ಹಾಗೂ ಕರ್ನಾಟಕದ ಹುಡುಗಿ ಶ್ರೇಯಾಂಕ ಪಾಟೀಲ ಅವರ ಸ್ಪಿನ್ ಮೋಡಿಯಿಂದಾಗಿ ಆರ್‌ಸಿಬಿಗೆ ಜಯ ಒಲಿಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜರುಗಿದ ಟೂರ್ನಿಯ ಮೊದಲ ಹಾಗೂ ದೆಹಲಿಯಲ್ಲಿ ಜರುಗಿದ ಎರಡನೇ ಹಂತದ ಪಂದ್ಯಗಳಲ್ಲಿ ಏಳುಬೀಳುಗಳನ್ನು ಕಂಡರೂ ಪ್ಲೇ ಆಫ್‌ ಪ್ರವೇಶಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿತ್ತು. ಹೋದ ವರ್ಷ ಚಾಂಪಿಯನ್ ಆಗಿದ್ದ ಮುಂಬೈ ಇಂಡಿಯನ್ಸ್ ತಂಡವನ್ನು ಈ ಸಲದ ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿಯು ಸೋಲಿಸಿತ್ತು. ಅಂತಿಮ ಪಂದ್ಯದಲ್ಲಿಯೂ ಛಲ ಮತ್ತು ಯೋಜನಾಬದ್ಧ ಆಟದ ಮೂಲಕ ರೋಚಕ ಜಯ ಸಾಧಿಸಿತು. ಆಸ್ಟ್ರೇಲಿಯಾದ ತಾರಾ ಆಟಗಾರ್ತಿ ಎಲಿಸ್ ಪೆರಿ, ಸ್ಪಿನ್ನರ್ ಆಶಾ ಶೋಭನಾ, ವಿಕೆಟ್‌ಕೀಪರ್ ರಿಚಾ ಘೋಷ್, ಬೌಲರ್‌ ರೇಣುಕಾ ಸಿಂಗ್ ಅವರ ಕಾಣಿಕೆಯೂ ಮಹತ್ವದ್ದು. ಆರಂಭದ ಕೆಲವು ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಪಡೆಯದ ಕನ್ನಡತಿ ಶ್ರೇಯಾಂಕ ಅವರ ಮೇಲೆ ನಾಯಕಿ ಇಟ್ಟ ವಿಶ್ವಾಸ ಹುಸಿಯಾಗಲಿಲ್ಲ. ತಮ್ಮ ಕೌಶಲ ಸುಧಾರಿಸಿಕೊಂಡ ಆಫ್‌ಸ್ಪಿನ್ನರ್ ಶ್ರೇಯಾಂಕ ಟೂರ್ನಿಯಲ್ಲಿಯೇ ಅತಿ ಹೆಚ್ಚು ವಿಕೆಟ್ ಗಳಿಸಿದರು. ಅದರಲ್ಲೂ ಎಲಿಮಿನೇಟರ್ ಮತ್ತು ಫೈನಲ್‌ನಲ್ಲಿ ಅವರ ಆಟ ಮಹತ್ವದ್ದಾಗಿತ್ತು.
ಕರ್ನಾಟಕದಲ್ಲಿ ಅವರ ಮೂಲಕ ತಂಡದ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ.

ಆರ್‌ಸಿಬಿ ಜಯ ಇಡೀ ಟೂರ್ನಿಯನ್ನು ಇನ್ನಷ್ಟು ಉನ್ನತ ಹಂತಕ್ಕೆ ಕೊಂಡೊಯ್ಯುವ ಆಶಾವಾದ ಮೂಡಿಸಿದೆ. ಬೆಂಗಳೂರಿನಲ್ಲಿ ಈ ಸಲ ನಡೆದ ಡಬ್ಲ್ಯುಪಿಎಲ್ ಟೂರ್ನಿಯ ಎಲ್ಲ ಪಂದ್ಯಗಳಿಗೂ ಕ್ರೀಡಾಂಗಣದಲ್ಲಿ ಜನ ಸೇರಿದ್ದರು. ಅದರಲ್ಲೂ ಆರ್‌ಸಿಬಿ ಪಂದ್ಯ ಇದ್ದಾಗಲಂತೂ 28 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದರು. ಇದರ ಪ್ರಭಾವದಿಂದಾಗಿ ದೆಹಲಿಯಲ್ಲಿ ನಡೆದ ಪಂದ್ಯಗಳಿಗೂ ಜನ ಸೇರಿದರು. ಇದರಿಂದಾಗಿ ಮುಂದಿನ ವರ್ಷಗಳಲ್ಲಿ ಟೂರ್ನಿಯನ್ನು ಬರೀ ಒಂದು ಅಥವಾ ಎರಡು ನಗರಗಳಲ್ಲಿ ಆಯೋಜಿಸುವ ಬದಲು ಫ್ರ್ಯಾಂಚೈಸಿಗಳ ತವರು ನಗರಿಗಳಿಗೂ ವಿಸ್ತರಿಸುವತ್ತ ಬಿಸಿಸಿಐ ಚಿಂತನೆ ನಡೆಸಿದೆ. ತಂಡಗಳ ಸಂಖ್ಯೆಯನ್ನೂ ಹೆಚ್ಚಿಸಬಹುದು. ಸದ್ಯ ಐದು ತಂಡಗಳು ಟೂರ್ನಿಯಲ್ಲಿವೆ. ಈ ಟೂರ್ನಿಗೆ ಜನಾಕರ್ಷಣೆ ಹೆಚ್ಚಲು ಆಟಗಾರ್ತಿಯರ ಕೌಶಲ ಸುಧಾರಿಸಿದ್ದು ಕೂಡ ಕಾರಣ. ಸಿಕ್ಸರ್‌ಗಳನ್ನು ಹೊಡೆಯುವ ಸಾಮರ್ಥ್ಯ, ಸ್ಪಿನ್ ಮತ್ತು ಸ್ವಿಂಗ್ ಬೌಲಿಂಗ್‌ನಲ್ಲಿ ಪರಿಣತಿ ಹಾಗೂ ಫೀಲ್ಡಿಂಗ್‌ನಲ್ಲಿ ಚಾಕಚಕ್ಯತೆ ಗಮನ ಸೆಳೆದಿವೆ. ವೃತ್ತಿಪರತೆ ಎದ್ದು ಕಂಡಿದೆ. ಇದರಿಂದಾಗಿ, ಮಹಿಳಾ ಕ್ರಿಕೆಟ್ ಎಂದರೆ ಮೂಗು ಮುರಿಯುತ್ತಿದ್ದವರೂ ಈಗ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ದಶಕದ ಹಿಂದೆ ಮಹಿಳೆಯರಿಗೂ ಐಪಿಎಲ್‌ ಮಾದರಿಯ ಟೂರ್ನಿ ಮಾಡಬೇಕು ಎಂಬ ಪ್ರಸ್ತಾಪ ಬಂದಾಗ ಕೆಲವರು, ಇಡೀ ಭಾರತದಲ್ಲಿ ಐದು ತಂಡಗಳಿಗೆ ಆಗುವಷ್ಟು ಆಟಗಾರ್ತಿಯರೇ ಇಲ್ಲ, ಹುಡುಗಿಯರ ಕ್ರಿಕೆಟ್ ಯಾರು ನೋಡುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಆದರೆ ಮಹಿಳಾ ಕ್ರಿಕೆಟ್‌ಗೆ ಘನತೆ, ವೃತ್ತಿಪರತೆ ಮತ್ತು ಮಾನ್ಯತೆ ತಂದುಕೊಡಲು ಸತತವಾಗಿ ಹೋರಾಟ ಮಾಡಿದ ಶ್ರೇಯ ಭಾರತ ಮಹಿಳಾ ತಂಡದ ಮಾಜಿ ನಾಯಕಿ, ಕರ್ನಾಟಕದ ಶಾಂತಾ ರಂಗಸ್ವಾಮಿ ಅವರಿಗೆ ಸಲ್ಲಬೇಕು. ಅವರೊಂದಿಗೆ ಡಯಾನಾ ಎಡುಲ್ಜಿ, ವಿ.ಕಲ್ಪನಾ, ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ, ಅಂಜುಮ್ ಚೋಪ್ರಾ ಅವರ ಪ್ರಯತ್ನಗಳೂ ಇಲ್ಲಿ ಸ್ಮರಣಾರ್ಹ. ಕೋವಿಡ್ ಕಾಲಘಟ್ಟಕ್ಕಿಂತ ಮೊದಲು ಐಪಿಎಲ್ ಸಂದರ್ಭದಲ್ಲಿ ಮೂರು ಮಹಿಳಾ ತಂಡಗಳ ಟಿ20 ಚಾಲೆಂಜರ್ಸ್‌ ಟೂರ್ನಿ ಆರಂಭಿಸಲಾಗಿತ್ತು. ಹೋದ ವರ್ಷವಷ್ಟೇ ಪೂರ್ಣಪ್ರಮಾಣದ ಡಬ್ಲ್ಯುಪಿಎಲ್ ಆರಂಭವಾಗಿತ್ತು. ಫ್ರ್ಯಾಂಚೈಸಿ ಹಾಗೂ ಮಾಧ್ಯಮ ಹಕ್ಕುಗಳ ಹರಾಜಿನಿಂದ ಮಂಡಳಿಗೆ ಉತ್ತಮ ಆದಾಯವೂ ಬಂದಿತ್ತು. ಒಲಿಂಪಿಕ್ ಕೂಟದಲ್ಲಿ ಸೇರ್ಪಡೆಯಾಗಿರುವ ಮಹಿಳಾ ಟಿ20 ಕ್ರಿಕೆಟ್‌ ಮಾದರಿಯನ್ನು ಭಾರತದಲ್ಲಿ ಬೆಳೆಸಲು ಡಬ್ಲ್ಯುಪಿಎಲ್ ಕೂಡ ನೆರವಾಗಲಿದೆ. ಟೂರ್ನಿಯ ಎರಡೂ ಆವೃತ್ತಿಗಳ ಯಶಸ್ಸು ಮತ್ತು ಆಟಗಾರ್ತಿಯರ ಯಶೋಗಾಥೆಗಳು ಮತ್ತಷ್ಟು ಹೆಣ್ಣುಮಕ್ಕಳನ್ನು ಕ್ರಿಕೆಟ್‌ನತ್ತ ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಇದರಿಂದ ಮಹಿಳಾ ಕ್ರಿಕೆಟ್ ಕೂಡ ದೊಡ್ಡಮಟ್ಟದಲ್ಲಿ ಬೆಳೆಯುವ ಸಾಧ್ಯತೆಗಳು ಹೆಚ್ಚಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT