‘ಕಾಸಿಗಾಗಿ ಸುದ್ದಿ’ಯನ್ನು ಒಂದು ಚುನಾವಣಾ ಅಪರಾಧವೆಂದು ಪರಿಗಣಿಸಬೇಕೆಂಬ ಪ್ರಸ್ತಾಪವೊಂದನ್ನು ಚುನಾವಣಾ ಆಯೋಗ ಕಾನೂನು ಸಚಿವಾಲಯದ ಮುಂದಿಟ್ಟಿದೆ. ಈ ಪ್ರಸ್ತಾಪವನ್ನು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ದೃಷ್ಟಿಯಲ್ಲಿ ಅರ್ಥೈಸುವುದಕ್ಕಿಂತ ಹೆಚ್ಚಾಗಿ ಮಾಧ್ಯಮಗಳ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ. ರಾಜಕಾರಣ ಯಾವತ್ತೂ ಭ್ರಷ್ಟತೆಯಿಂದ, ಅಕ್ರಮಗಳಿಂದ ಮುಕ್ತವಾಗಿರಲಿಲ್ಲ. ಆದರೆ ಮಾಧ್ಯಮ ತಾನಾಗಿಯೇ ಮುಂದಾಗಿ ಭ್ರಷ್ಟಾಚಾರದ ವ್ಯಾಪ್ತಿಯೊಳಕ್ಕೆ ತನ್ನನ್ನು ಸೇರಿಸಿಕೊಂಡಿರಲಿಲ್ಲ.

2004ರಿಂದ ಈಚೆಗಿನ ಕೆಲವು ವಿದ್ಯಮಾನಗಳು ಮಾಧ್ಯಮಗಳೂ ನಿರ್ದಿಷ್ಟ ‘ಬೆಲೆ’ಯನ್ನು ‘ಪಾವತಿಸುವವರಿಗೆ’ ತಮ್ಮನ್ನು ಮಾರಿಕೊಳ್ಳಲು ಸಿದ್ಧವಾದುದನ್ನು ತೋರಿಸಿಕೊಟ್ಟವು. ಕೆಲವು ಸಂದರ್ಭಗಳಲ್ಲಿ ‘ಕಾಸಿಗಾಗಿ ಸುದ್ದಿ’ ಎಂಬುದು ಪ್ರತ್ಯಕ್ಷವಾಗಿತ್ತು. ಹೆಚ್ಚಿನ ಬಾರಿ ಇದು ಪರೋಕ್ಷವಾಗಿಯಷ್ಟೇ ಕಾಣಿಸುತ್ತಿತ್ತು.

2009ರ ಲೋಕಸಭಾ ಚುನಾವಣೆ ಮತ್ತು ಅದರ ಆಚೀಚಿನ ವರ್ಷಗಳಲ್ಲಿ ನಡೆದ ಅನೇಕ ವಿಧಾನಸಭಾ ಚುನಾವಣೆಗಳಲ್ಲಿ ‘ಕಾಸಿಗಾಗಿ ಸುದ್ದಿ’ ಎಂಬುದು ಮಾಧ್ಯಮ ಕ್ಷೇತ್ರದಲ್ಲಿರುವ ವ್ಯಕ್ತಿಗಳಿಗೆ ಸೀಮಿತವಾಗಿ ಉಳಿಯದೆ ಸಾಂಸ್ಥಿಕ ರೂಪ ಪಡೆದುಕೊಂಡದ್ದನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ವರದಿಯೇ ಗುರುತಿಸಿತು.

ಇದರೊಂದಿಗೆ ಅಸ್ಪಷ್ಟವಾಗಿದ್ದ ‘ಕಾಸಿಗಾಗಿ ಸುದ್ದಿ’ಯ ವಿರಾಟ್ ರೂಪ ಬಹಿರಂಗಕ್ಕೆ ಬರುವುದರೊಂದಿಗೆ ಅದರ ಅಸ್ತಿತ್ವಕ್ಕೆ ಒಂದು ಅಧಿಕೃತ ಸಾಕ್ಷಿಯೂ ದೊರೆತಂತಾಯಿತು. ಅಲ್ಲಿಂದೀಚೆಗೆ ‘ಕಾಸಿಗಾಗಿ ಸುದ್ದಿ’ಯಂಥ ಅಕ್ರಮವನ್ನು ಕಾನೂನಿನ ವ್ಯಾಪ್ತಿಗೆ ತರುವುದು ಹೇಗೆಂಬ ಕುರಿತಂತೆ ಚರ್ಚೆಗಳು ನಡೆದಿವೆ. ಅದರ ಫಲಿತಾಂಶವೆಂಬಂತೆ ಚುನಾವಣಾ ಆಯೋಗ ತನ್ನ ಪ್ರಸ್ತಾಪವನ್ನು ಕಾನೂನು ಸಚಿವಾಲಯದ ಮುಂದಿಟ್ಟಿದೆ.

ಚುನಾವಣಾ ಆಯೋಗದ ಈ ಪ್ರಸ್ತಾಪ ಮಹತ್ವದ್ದೇ. ಆದರೆ ಇದು ‘ಕಾಸಿಗಾಗಿ ಸುದ್ದಿ’ಯೆಂಬುದು ಕೇವಲ ಚುನಾವಣೆ ಮತ್ತು ರಾಜಕಾರಣಕ್ಕೆ ಮಾತ್ರ ಸೀಮಿತವಾದ ಸಮಸ್ಯೆಯೆಂಬಂತೆ ಬಿಂಬಿಸುತ್ತದೆ. ರಾಜಕಾರಣಿಯೊಬ್ಬನ ಮೇಲೆ ಹೊರಿಸಬಹುದಾದ ಚುನಾವಣಾ ಅಕ್ರಮ ಅವನ ರಾಜಕೀಯ ಭವಿಷ್ಯವನ್ನು ಮಂಕಾಗಿಸಬಹುದು. ಆದರೆ ಮಾಧ್ಯಮದ ಮೇಲೆ ಅದು ಯಾವ ಪರಿಣಾಮವನ್ನೂ ಬೀರುವುದಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಈ ‘ಅಕ್ರಮ’ವನ್ನು ಗುರುತಿಸುವ ಪ್ರಶ್ನೆಯೂ ಇಲ್ಲಿದೆ.

ನಿರ್ದಿಷ್ಟ ಚಿಂತನಾಧಾರೆ, ರಾಜಕೀಯ ನಿಲುವುಗಳನ್ನು ಪ್ರತಿಪಾದಿಸುವ ಅನೇಕ ಪತ್ರಿಕೆ ಗಳಿವೆ. ಈ ಕಾರಣದಿಂದಾಗಿಯೇ ಇವು ನಿರ್ದಿಷ್ಟ ಪಕ್ಷಗಳ ಅಭ್ಯರ್ಥಿಗಳ ಪರ ಸುದ್ದಿಗಳನ್ನು ಪ್ರಕಟಿಸುತ್ತವೆ. ಇದು ಚುನಾವಣಾ ಅಕ್ರಮವಾಗುತ್ತದೆಯೇ? ‘ಕಾಸಿಗಾಗಿ ಸುದ್ದಿ’ಯ ಸ್ವರೂಪವೇ ಸಂಕೀರ್ಣವಾದುದು. ಇದನ್ನು ನಿರ್ದಿಷ್ಟ ಮಾನದಂಡಗಳಲ್ಲಿ ಕಂಡುಕೊಳ್ಳುವುದು ಕಷ್ಟ. ಒಬ್ಬ ಅಭ್ಯರ್ಥಿ ಅಥವಾ ಪಕ್ಷದಿಂದ ಹಣ ಪಡೆದು ಪರವಾದ ಸುದ್ದಿ, ವಿಶ್ಲೇಷಣೆ, ಸಮೀಕ್ಷೆಗಳನ್ನು ಪ್ರಕಟಿಸುವುದು ಅಥವಾ ಅವರು ಸೂಚಿಸಿದವರ ವಿರುದ್ಧ ಇದೇ ಕೆಲಸವನ್ನು ಮಾಡುವುದನ್ನು ಪತ್ತೆ ಮಾಡುವುದು ಸುಲಭದ ವಿಚಾರವೇನೂ ಅಲ್ಲ. ಇಲ್ಲಿ ಮುಖ್ಯವಾಗುವುದು ನೈತಿಕತೆ.

ಇದನ್ನು ಕಾನೂನಿನ ಮೂಲಕವಷ್ಟೇ ತರುವುದು ಅಸಾಧ್ಯ. ‘ಕಾಸಿಗಾಗಿ ಸುದ್ದಿ’ಯ ನಿಯಂತ್ರಣಕ್ಕೆ ಇರುವ ಏಕೈಕ ಪರಿಣಾಮಕಾರಿ ಸಾಧ್ಯತೆಯೆಂದರೆ ಮಾಧ್ಯಮ ಸಂಸ್ಥೆಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯೊಂದಕ್ಕೆ ಅಗತ್ಯವಿರುವ ನೈತಿಕತೆಯನ್ನು ಪ್ರದರ್ಶಿಸುವುದು. ‘ಪ್ರಜಾವಾಣಿ’ಯೂ ಒಳಗೊಂಡಂತೆ ಕೆಲವು ಮಾಧ್ಯಮ ಸಂಸ್ಥೆಗಳು ‘ಕಾಸಿಗಾಗಿ ಸುದ್ದಿ’ಗೆ ಸಂಬಂಧಿಸಿದ ತಮ್ಮ ನಿಲುವನ್ನು ಬಹಿರಂಗವಾಗಿ ಘೋಷಿಸಿಕೊಂಡು ಅದಕ್ಕೆ ಬದ್ಧವಾಗಿ ವರ್ತಿಸುತ್ತಿವೆ. ಈ ಬಗೆಯ ಸ್ವಯಂ ನಿಯಂತ್ರಣದ ನೈತಿಕತೆಯನ್ನು ಮಾಧ್ಯಮ ಕ್ಷೇತ್ರ ಅಳವಡಿಸಿಕೊಳ್ಳುವುದರಿಂದ ಮಾತ್ರ ‘ಕಾಸಿಗಾಗಿ ಸುದ್ದಿ’ಯನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.